Anna Bhagya: ಕಮಿಷನ್ ಸಿಗದಿದ್ದಕ್ಕೆ ರೇಷನ್ ವಿತರಣೆ ಸ್ಥಗಿತ! ಬಿಜೆಪಿ ಅಸಮಾಧಾನ
ಬೆಂಗಳೂರು, ನವೆಂಬರ್ 09: ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರದ ಐದು ಯೋಜನೆಗಳನ್ನು ಅನ್ನ ಭಾಗ್ಯ ಯೋಜನೆ ಸಹ ಒಂದು. ಇದರಡಿ ರಾಜ್ಯದ ಜನರಿಗೆ ಐದು ಕೆ.ಜಿ. ಅಕ್ಕಿಗೆ ಬದಲಾಗಿ, ಒಟ್ಟು 10 ಕೆಜಿ ಅಕ್ಕಿ ನೀಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಅವರು ಭರವಸೆ ನೀಡಿದ್ದರು. ಇದೀಗ ಮೊದಲು ಸಿಗುತ್ತಿದ್ದ ಐದು ಕೆ.ಜಿ ಅಕ್ಕಿಗೂ ಮುಖ್ಯಮಂತ್ರಿಗಳು ಕಲ್ಲು ಹಾಕಿದ್ದಾರೆ ಎಂದು ಕರ್ನಾಟಕ ಬಿಜೆಪಿ ಆರೋಪಿಸಿದೆ.
ಈ ಬಗ್ಗೆ ಎಕ್ಸ್ ಪೋಸ್ಟ್ ಮಾಡಿರುವ ಬಿಜೆಪಿಯು, ಅನ್ನಭಾಗ್ಯ ಯೋಜನೆಯಡಿ ನೀಡಲಾಗುತ್ತಿದ್ದ ಐದು ಕೆಜಿ ಅಕ್ಕಿ ವಿತರಣೆಗೆ ತೊಂದರೆ ಆಗುವ ಸಾಧ್ಯತೆ ಎದುರಾಗಿದೆ ಎಂದು ರಾಜ್ಯ ಕಾಂಗ್ರೆಸ್ ಮೇಲೆ ಮುಗಿಬಿದ್ದಿದೆ. ಚುನಾವಣೆಗೂ ಮುನ್ನ 10 ಕೆಜಿ ಅಕ್ಕಿ ವಿತರಿಸುವ ಅಸೆ ತೋರಿಸಿತ್ತು. ಕಳೆದ 6 ತಿಂಗಳಿಂದ ಪಡಿತರ ವಿತರಕರಿಗೆ ರಾಜ್ಯ ಸರ್ಕಾರದಿಂದ ಸಿಗಬೇಕಾದ ಕಮಿಷನ್ ಬಂದಿಲ್ಲ. ಹೀಗಾಗಿ ಸಗಟು ಮಳಿಗೆಗಳಿಂದ ನವೆಂಬರ್ ತಿಂಗಳ ಪಡಿತರ ಸ್ವೀಕರಿಸದೆ, ರಾಜ್ಯದಾದ್ಯಂತ ಪಡಿತರ ವಿತರಿಸದಿರಲು ಪಡಿತರ ವಿತರಕರ ಸಂಘ ನಿರ್ಧರಿಸಿದೆ.

ರಾಜ್ಯದಲ್ಲಿ ಇರುವ ರೇಷನ್ ಕಾರ್ಡ್‌ದಾರರಿಗೆ ಅಕ್ಕಿ ನೀಡಲು ಯೋಗ್ಯತೆ ಇಲ್ಲದ ಕಾಂಗ್ರೆಸ್ ಸರ್ಕಾರ ಇದ್ದರೇನು, ಬಿದ್ದರೇನು? ಎಂದು ಬಿಜೆಪಿ ವ್ಯಂಗ್ಯವಾಡಿದೆ. ಹಿಂದಿನಿಂದಲೂ ಬಿಜೆಪಿಯು ಸರ್ಕಾರದ ಐದು ಕೆಜಿ ಹೆಚ್ಚುವರಿ ಅಕ್ಕಿ ವಿತರಣೆ ಬಗ್ಗೆ ಪ್ರಶ್ನಿಸುತ್ತಲೇ ಬಂದಿದೆ. ಆಗ ಕೇಂದ್ರ ಸರ್ಕಾರ ಅಕ್ಕಿ ವಿತರಿಸುತ್ತಿಲ್ಲ ಎಂದಿದ್ದ ರಾಜ್ಯ ಸರ್ಕಾರ ಐದು ಕೆಜಿ ಅಕ್ಕಿಗೆ ಬದಲಾಗಿ ಅರ್ಹ ಪಡಿತರ ಖಾತೆಗೆ ನಗದು ಹಣ ಹಾಕುತ್ತಿತ್ತು.
ಇಂದಿರಾ ಕಿಟ್ ವಿತರಣೆ ನಿರ್ಧಾರ ಬೆನ್ನಲ್ಲೆ ಅಕ್ಕಿ ಸ್ಥಗಿತ?
ಇತ್ತೀಚೆಗೆ ಹೆಚ್ಚುವರಿ ಐದು ಕೆಜಿ ಅಕ್ಕಿಗೆ ಬದಲಾಗಿ ಇಂದಿರಾ ಕಿಟ್ ನೀಡಲು ರಾಜ್ಯ ಸಚಿವ ಸಂಪುಟ ಒಪ್ಪಿತ್ತು. ಪೌಷ್ಟಿಕ ಆಹಾರ ಪದಾರ್ಥಗಳ ಕಿಟ್ ಇದಾಗಿದೆ. ತಲಾ 1 ಕೆಜಿ ತೊಗರಿ ಬೇಳೆ, ಸಕ್ಕರೆ, ಉಪ್ಪು ಮತ್ತು 1 ಲೀಟರ್ ಅಡುಗೆ ಎಣ್ಣೆ ಇರುವ ಪ್ಯಾಕೇಟ್ ಅನ್ನು ನೀಡಲಾಗುತ್ತದೆ ಎಂದು ಸರ್ಕಾರ ತಿಳಿಸಿತ್ತು. ಅದರ ಬೆನ್ನಲ್ಲೆ ಅಕ್ಕಿ ವಿತರಣೆ ಸಗಟು ವ್ಯಾಪಾರಿಗಳಿಗೆ ಸಿಗಬೇಕಿದ್ದ ಕಮಿಷನ್ ಸಿಕ್ಕಿಲ್ಲ. ಹೀಗಾಗಿ ಪಡಿತರ ವಿತರಣೆ ನಿಲ್ಲಲಿದೆ ಎಂದು ಹೇಳಲಾಗುತ್ತಿದೆ. ಈ ವಿಚಾರ ತಿಳಿಯುತ್ತಿದ್ದಂತೆ ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.
ಈ ಸುದ್ದಿ ತಿಳಿಯುತ್ತಿದ್ದಂತೆ ಪಡಿತರ ಗ್ರಾಹಕರು ಆತಂಕದಲ್ಲಿದ್ದಾರೆ. ಈ ತಿಂಗಳಿನಿಂದ ರೇಷನ್ ಬರುವುದಿಲ್ಲವೇ ಎಂದು ಚಿಂತಿಗೀಡಾಗಿದ್ದಾರೆ. ಈ ಬಗ್ಗೆ ರಾಜ್ಯ ಸರ್ಕಾರ, ಸಿಎಂ ಸಿದ್ದರಾಮಯ್ಯ ಇಲ್ಲವೇ ಆಹಾರ ಖಾತೆ ಸಚಿವ ಕೆ.ಎಚ್.ಮುನಿಯಪ್ಪ ಅವರು ಸ್ಪಷ್ಟನೆ ನೀಡಿ ಆತಂಕ ದೂರ ಮಾಡಬೇಕು ಎಂಬುದು ನಾಗರಿಕರ ಆಗ್ರಹವಾಗಿದೆ..












Click it and Unblock the Notifications