ಸಿದ್ದರಾಮಯ್ಯ ಚಪ್ಪಾಳೆ ಗಿಟ್ಟಿಸಲು ಕಾಮಿಡಿಯನ್ ಆಗಿದ್ದಾರೆ ಎಂದ ಬಿಜೆಪಿ
ಬೆಂಗಳೂರು,ನ.3: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಲಿತರ ಕುರಿತು ಆಕ್ಷೇಪಕಾರಿ ಹೇಳಿಕೆ ನೀಡಿರುವುದನ್ನು ಖಂಡಿಸಿ ಬಿಜೆಪಿ ಎಸ್.ಸಿ. ಮೋರ್ಚಾ ರಾಜ್ಯ ಘಟಕದ ವತಿಯಿಂದ ಬುಧವಾರ ಇಂದು ಬೆಂಗಳೂರಿನ "ಮೌರ್ಯ ವೃತ್ತ"ದ ಬಳಿ ಪ್ರತಿಭಟನೆ ನಡೆಸಲಾಯಿತು.
"ದಲಿತರು ಬಿಜೆಪಿಗೆ ಹೊಟ್ಟೆಪಾಡಿಗಾಗಿ ಹೋಗಿದ್ದಾರೆ" ಎನ್ನುವ ಹೇಳಿಕೆಯನ್ನು ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಸಿದ್ದರಾಮಯ್ಯ ಅವರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಲಾಯಿತು.
ಸಿಂದಗಿ ಉಪಚುನಾವಣಾ ಬಹಿರಂಗ ಪ್ರಚಾರದ ಸಂದರ್ಭದಲ್ಲಿ ಎಡಗೈ ಸಮಾವೇಶಲ್ಲಿ ಮಾತನಾಡಿದ ಸಿದ್ದರಾಮಯ್ಯ ಅವರು ದಲಿತರು ಬಿಜೆಪಿಗೆ ಹೊಟ್ಟೆಪಾಡಿಗಾಗಿ ಹೋಗಿದ್ದಾರೆ ಎಂಬ ಹೇಳಿಕೆಯನ್ನು ನೀಡಿದ್ದರು. ಇದು ದಲಿತರಿಗೆ ಮಾಡಿದ ಅವಮಾನ. ಸಿದ್ದರಾಮಯ್ಯ ಕೂಡಲೇ ಕ್ಷಮೆಯಾಚಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಈ ಸಂಬಂಧ ರಾಜ್ಯದ ಹಲವು ಜಿಲ್ಲೆಗಳಲ್ಲಿ ಸಿದ್ದರಾಮಯ್ಯ ವಿರುದ್ಧ ಪ್ರತಿಭಟನೆ ಮಾಡಲಾಗಿದೆ.
ಚಪ್ಪಾಳೆ ಗಿಟ್ಟಿಸಲು ಕಾಮಿಡಿಯನ್ ಆಗಿದ್ದಾರೆ
ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಎಸ್‌ಸಿ ಮೋರ್ಚಾ ಪ್ರಭಾರಿ ಮತ್ತು ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು, "ಸಿದ್ದರಾಮಯ್ಯ ಅವರ ಹೇಳಿಕೆ ಅಕ್ಷಮ್ಯ. ಅವರು ಕೂಡಲೇ ಬಿಜೆಪಿ ಮತ್ತು ದಲಿತ ಸಮಾಜದ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು. ಸಿದ್ದರಾಮಯ್ಯ ಅವರು ಚಪ್ಪಾಳೆ ಗಿಟ್ಟಿಸಲು ಕಾಮೆಡಿಯನ್ ಆಗಿ ವರ್ತಿಸುತ್ತಿದ್ದಾರೆ" ಎಂದು ಗೇಲಿ ಮಾಡಿದರು.
ರಾಜ್ಯ ಎಸ್‌ಸಿ ಮೋರ್ಚಾ ಅಧ್ಯಕ್ಷರಾದ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, "ಕಾಂಗ್ರೆಸ್ ಅಂದರೆ ದಲಿತರು, ದಲಿತರು ಅಂದ್ರೆ ಕಾಂಗ್ರೆಸ್ ಅನ್ನೋ ಸಂದರ್ಭ ಇತ್ತು. ದಲಿತರನ್ನೇ ಮತ ಬ್ಯಾಂಕ್ ಮಾಡಿಕೊಂಡು ದೇಶವನ್ನು ಕಾಂಗ್ರೆಸ್ ಆಳುತ್ತಾ ಬಂದಿತ್ತು. ಆದರೆ ಈಗ ಒಬ್ಬೊಬ್ಬ ದಲಿತರೂ ಕಾಂಗ್ರೆಸ್ ತೊರೆಯುತ್ತಿದ್ದಾರೆ. ಈಗ ಕಾಂಗ್ರೆಸ್ ದಲಿತರನ್ನು ಕಳೆದುಕೊಂಡು ಸೋಲುತ್ತಾ ಬಂದಿದೆ. ಸಿದ್ದರಾಮಯ್ಯರಿಗೆ ಭವಿಷ್ಯದಲ್ಲಿ ಇನ್ನಷ್ಟು ಸೋಲು ಕಾದಿದೆ'' ಎಂದರು.

ಕಾಂಗ್ರೆಸ್ ನಾಯಕರುಗಳಿಗೆ ಬೆನ್ನುಮೂಳೆಯೇ ಇಲ್ಲ ಎಂದ ಅವರು, ಸಿದ್ದರಾಮಯ್ಯ ಬೇರೆ ಪಕ್ಷದಿಂದ 2006ರಲ್ಲಿ ಕಾಂಗ್ರೆಸ್‌ಗೆ ಹೋದವರು. ಅವರು ಹೊಟ್ಟೆಪಾಡಿಗಾಗಿ ಹೋಗಿರೋದು ಎಂದು ಮರೆತರೇ ಎಂದು ಪ್ರಶ್ನಿಸಿದರು. ಕಾಂಗ್ರೆಸ್‌ನ ಎಲ್ಲ ನಾಯಕರಿಗೆ ಸಿದ್ದರಾಮಯ್ಯ ದ್ರೋಹ ಎಸಗಿದ್ದಾರೆ ಎಂದು ಟೀಕಿಸಿದರು.
ಶಾಸಕ ಪಿ.ರಾಜೀವ್ ಮತ್ತು ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಅಶ್ವತ್ಥನಾರಾಯಣ್ ಅವರು ಮಾತನಾಡಿ, ದಲಿತರ ಕುರಿತು ಆಕ್ಷೇಪಕಾರಿ ಹೇಳಿಕೆ ನೀಡಿದ ಸಿದ್ದರಾಮಯ್ಯರವರು ಸಾರ್ವಜನಿಕರ ಮತ್ತು ಬಿಜೆಪಿಯ ಕ್ಷಮೆ ಕೇಳಬೇಕು. ಮುಂದಿನ ಚುನಾವಣೆಯಲ್ಲಿ ಸಿದ್ದರಾಮಯ್ಯ ಸೋಲು ಖಚಿತ ಎಂದೂ ಅವರು ತಿಳಿಸಿದರು.
ದಲಿತ ಪದ ಬಳಸಿಲ್ಲ: ಸಿದ್ದರಾಮಯ್ಯ
"ಚನಾವಣಾ ಪ್ರಚಾರ ಸಂದರ್ಭದಲ್ಲಿ ನಾನು ಎಲ್ಲಿಯೂ ದಲಿತ ಎಂಬ ಪದ ಬಳಸಿಲ್ಲ" ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ಗೋವಿಂದ ಕಾರಜೋಳ, ನಾರಾಯಣಸ್ವಾಮಿ, ರಮೇಶ್ ಜಿಗಜಿಣಗಿ ಇವರುಗಳು ಸ್ವಾರ್ಥಕ್ಕಾಗಿ, ಹೊಟ್ಟೆಪಾಡಿಗಾಗಿ ಬಿಜೆಪಿಗೆ ಹೋಗಿದ್ದಾರೆ ಎಂದು ಹೇಳಿದ್ದೇನೆ. ಆದರೆ, ಎಲ್ಲಿಯೂ ದಲಿತರು ಹೊಟ್ಟೆಪಾಡಿಗೆ ಬಿಜೆಪಿಗೆ ಹೋಗಿದ್ದಾರೆ ಎಂಬ ಪದಬಳಕೆ ಮಾಡಿಲ್ಲ. ದಲಿತರಿಗೆ ನನ್ನ ಮಾತುಗಳನ್ನು ಅರ್ಥ ಮಾಡಿಕೊಳ್ಳುವ ಶಕ್ತಿ ಇದೆ. ನನ್ನ ವಿರುದ್ಧ ನಡೆದ ಪ್ರತಿಭಟನೆ ಕೇವಲ ರಾಜಕೀಯ ಪ್ರೇರಿತ ಎಂದು ಅವರು ಬುಧವಾರ ಮಾಧ್ಯಮದವರಿಗೆ ಸ್ಪಷ್ಟನೆ ನೀಡಿದರು.