"ಪ್ರಿಯಾಂಕ್ ಖರ್ಗೆ ಅವರೇ ನಿಮ್ಮ ಅಲ್ಪಜ್ಞಾನಕ್ಕೆ ಏನು ಹೇಳಬೇಕು"
ಸಚಿವ ಪ್ರಿಯಾಂಕ್ ಖರ್ಗೆ ಅವರೇ ನಿಮ್ಮ ಅಲ್ಪಜ್ಞಾನಕ್ಕೆ ಏನು ಹೇಳಬೇಕು ಎಂಬುದೇ ನನಗೆ ತೋಚುತ್ತಿಲ್ಲ ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ಹೇಳಿದ್ದಾರೆ. RSS ಬಗ್ಗೆ ಮಾತನಾಡಿದರೆ ನನಗೆ ಪುಕ್ಕಟೆ ಪ್ರಚಾರ ಸಿಗುತ್ತದೆ ಎಂಬ ಕಾರಣಕ್ಕೆ ಈ ರೀತಿ ಅಸಂಬದ್ದವಾಗಿ ಹೇಳಿಕೆ ನೀಡುತ್ತಿದ್ದೀರೋ ಅಥವಾ ನಿಮಗೆ ಜ್ಞಾನ ಇರುವುದೇ ಇಷ್ಟೇ ಎಂಬುದು ಗೊತ್ತಾಗುತ್ತಿಲ್ಲ ಎಂದು ಟೀಕೆ ಮಾಡಿದ್ದಾರೆ.
ಆರ್‌ಎಸ್‌ಎಸ್ (ರಾಷ್ಟ್ರೀಯ ಸ್ವಯಂ ಸೇವಾ ಸಂಘ)ದ ಪ್ರತಿನಿತ್ಯ ಚಟುವಟಿಕೆ ಆರಂಭವಾಗುವುದೇ ರಾಷ್ಟ್ರಭಕ್ತಿ ಗೀತೆ ಹಾಡುವುದರಿಂದ. ನಮಸ್ತೇ ಸದಾ ವತ್ಸಲೇ ಮಾತೃಭೂಮಿ.. ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಾರ್ಥನಾಗೀತೆ. ಮಾತೃಭೂಮಿಗೆ ಧನ್ಯತೆ ಸಮರ್ಪಿಸುವ ಸಂಕೇತವನ್ನು ರವಾನಿಸುತ್ತದೆ, ರಾಷ್ಟ್ರಭಕ್ತಿ ಪ್ರೇರೇಪಿಸುತ್ತದೆ, ಇದು ಸಂಘಟನೆಯ ಗೀತೆಯಷ್ಟೇ ಅಲ್ಲ ದೇಶಭಕ್ತಿಯ ಬದ್ಧತೆಯನ್ನು ಜಗತ್ತಿಗೇ ಸಾರಿ ಹೇಳುವ ಗೀತೆ. ಇಂತಹ ದೇಶಭಕ್ತ ಸಂಘಟನೆಯ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕೆಂದು ನೀವು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪತ್ರ ಬರೆದಿದ್ದೀರಿ ಎಂಬುದನ್ನು ಕೇಳಿ ನನಗೆ ಆಶ್ಚರ್ಯವಾಗಲಿಲ್ಲ. ಏಕೆಂದರೆ, ನಿಮ್ಮ ಮನಸ್ಥಿತಿಯೇ ಅಂತಹದ್ದು ಎಂದಿದ್ದಾರೆ.

ಆರ್ ಎಸ್ ಎಸ್ ಸಮಾಜದಲ್ಲಿ ಕೋಮು ಸೌಹಾರ್ದತೆಗೆ ಧಕ್ಕೆ ತರುತ್ತದೆ, ಜನರಲ್ಲಿ ದ್ವೇಷದ ವಿಷ ಬೀಜ ಬಿತ್ತುತ್ತದೆ ಎಂಬ ಅಣಿಮುತ್ತನ್ನು ಯಾವ ಬಾಯಲ್ಲಿ ಹೇಳಿದ್ದಿರೋ ಆ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮಾತ್ರ ಗೊತ್ತು. ಪ್ರಿಯಾಂಕ ಖರ್ಗೆ ಅವರೇ ನಿಮಗೆ ಒಂದು ಮಾತನ್ನು ನೆನಪಿಸುತ್ತೇನೆ. ದೇಶದ ಪ್ರಥಮ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು, ಸ್ವಯಂಘೋಷಿತ ಉಕ್ಕಿನ ಮಹಿಳೆ ಇಂದಿರಾಗಾಂಧಿ, ಅವರ ಪುತ್ರ ರಾಜೀವ್ ಗಾಂಧಿ ಅಂಥವರಿಂದಲೇ ಆರ್ ಎಸ್ ಎಸ್ ನಿಷೇಧ ಮಾಡಲು ಸಾಧ್ಯವಾಗಲಿಲ್ಲ ಎಂಬುದನ್ನು ಇತಿಹಾಸದಿಂದ ತಿಳಿಯಿರಿ.
ಇನ್ನು ಗಾಂಧಿ ಕುಟುಂಬದ ಕೃಪಾಕಟಾಕ್ಷದಲ್ಲಿರುವ ಮಲ್ಲಿಕಾರ್ಜುನ ಖರ್ಗೆ ಅವರ ಮಗ ನಿಮ್ಮಿಂದ ಸಾಧ್ಯವಾಗುತ್ತದೆಯೇ? ಎಂಬುದು ಕನಸಿನ ಮಾತು. ವಿಶ್ವದಲ್ಲೇ ಅತ್ಯಂತ ದೊಡ್ಡ ಕಾರ್ಯಕರ್ತರನ್ನು ಹೊಂದಿರುವ ಆರ್‌ಎಸ್‌ಎಸ್ ಬೆಳವಣಿಗೆ ಕುರಿತು ಕಣ್ಣು ಕುಕ್ಕುತ್ತಿರುವುದು ನಿಮಗೆ ಮಾತ್ರವಲ್ಲ. ಕಷ್ಟವನ್ನು ಪಡದೆ, ಅಪ್ಪ ನೆಟ್ಟ ಆಲದ ಮರದಲ್ಲಿ ಬೆಳೆದಿರುವ ನಿಮ್ಮಂತಹ ಸಾವಿರಾರು ಮಂದಿಗೆ ಆರ್‌ಎಸ್‌ಎಸ್ ಒಂದು ರೀತಿ ಮೂಲಭೂತ ಸಂಘಟನೆಯಾಗಿ ಕಾಣುತ್ತಿದ್ದರೆ ಅದು ನಿಮ್ಮ ಅಲ್ಪಜ್ಞಾನಕ್ಕೆ ಹಿಡಿದ ಕೈಗನ್ನಡಿ.
ಆಕಾಶದ ಎತ್ತರಕ್ಕೆ ಬೆಳೆದು ನಿಂತಿರುವ ಆರ್‌ಎಸ್‌ಎಸ್ ಸ್ಥಾಪನೆಯಾಗಿ 100 ವರ್ಷವಾದರೂ ಅದರ ಮೇಲೆ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲ ಅಂದರೆ ಅಷ್ಟರಮಟ್ಟಿಗೆ ಆಕಾಶದಲ್ಲಿ ಹೊಳೆಯುವ ನಕ್ಷತ್ರದಂತೆ ಬೆಳೆದು ಬಂದಿದೆ. ಮುಂದೆಯೂ ಬೆಳೆಯುತ್ತದೆ. ಆರ್‌ಎಸ್‌ಎಸ್ ಅನ್ನು ಮೂರು ಬಾರಿ ನಿಷೇಧ ಮಾಡಿ ನ್ಯಾಯಾಲಯದಲ್ಲಿ ಕಪಾಳಮೋಕ್ಷ ಮಾಡಿಸಿಕೊಂಡಿದ್ದು ಇದೇ ನಿಮ್ಮ ಕಾಂಗ್ರೆಸ್ ಪಕ್ಷ ಎಂಬುದನ್ನು ಮರೆಯಬೇಡಿ.
ದೇಶದ ಯಾವುದೇ ಭಾಗದಲ್ಲಿ ಭೂಕಂಪ, ಸುನಾಮಿ, ನೆರೆಹಾವಳಿ, ಸೇರಿದಂತೆ ಪ್ರಕೃತಿ ವಿಕೋಪ ಸಂಭವಿಸಿದಾಗ ನೀವು ಮತ್ತು ನಿಮ್ಮ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹವಾನಿಯಂತ್ರಿತ ಕೋಣೆಯಲ್ಲಿ ಬೆಚ್ಚಗೆ ಮಲಗಿರುತ್ತೀರಿ. ಆದರೆ ಇದ್ಯಾವುದನ್ನು ಲೆಕ್ಕಿಸದೆ ಆರ್ ಎಸ್ ಎಸ್ ನ ಸಾವಿರಾರು ಕಾರ್ಯಕರ್ತರು ರಾಷ್ಟ್ರ ರಕ್ಷಣೆಯಲ್ಲಿ ತೊಡಗಿಸಿಕೊಳ್ಳುತ್ತಾರೆ. ಗುಜರಾತ್ ನ ಕಚ್, ಮಹಾರಾಷ್ಟ್ರದ ಲಾತೂರ್ ಶ್ರೀನಗರದಲ್ಲಿ ಉಂಟಾದ ಪ್ರವಾಹದ ವೇಳೆ ಆರ್ ಎಸ್ ಎಸ್ ಕಾರ್ಯಕರ್ತರು ಸಂತ್ರಸ್ತರ ನೆರವಿಗೆ ಧಾವಿಸಿದ್ದು ಇದೇ ಆರ್‌ಎಸ್‌ಎಸ್ ಕಾರ್ಯಕರ್ತರು ಎಂದಿದ್ದಾರೆ.
ನಿಜವಾಗಿಯೂ ನಿಮಗೆ ಧಮ್ಮು , ತಾಕತ್ತು ಇದ್ದರೆ ರಾಜ್ಯದಲ್ಲಿ RSS ಬೆಂಬಲಿತ ಚಟುವಟಿಕೆಗಳನ್ನು ನಿಷೇಧ ಮಾಡಿ, ನಾವು ನೋಡಿಯೇ ಬಿಡುತ್ತೇವೆ. ನಿಮ್ಮಂತಹ ನೂರು ಪ್ರಿಯಾಂಕ ಖರ್ಗೆ ಅವರು ಹುಟ್ಟಿ ಬಂದರೂ ಆರ್ ಎಸ್ ಎಸ್ ನಿಷೇಧ ಮಾಡುವುದಿರಲಿ, ಅದನ್ನು ಮುಟ್ಟುವುದಕ್ಕೂ ಸಾಧ್ಯವಿಲ್ಲ ಜೋಕೆ.ಅಂದಹಾಗೆ ಆಕಾಶಕ್ಕೆ ನೋಡಿ ಉಗುಳುವ ಪ್ರಯತ್ನ ಮಾಡಬೇಡಿ ಏಕೆಂದರೆ ಅದು ನಮ್ಮ ಮುಖದ ಮೇಲೆ ಬೀಳುತ್ತದೆ ಎಂಬುದನ್ನು ಮರೆಯಬೇಡಿ ಎಂದು ಹೇಳಿದ್ದಾರೆ.












Click it and Unblock the Notifications