ಬೈಎಲೆಕ್ಷನ್ ಕಣಕ್ಕೆ ಬಿಜೆಪಿಯಿಂದ 40 ಸ್ಟಾರ್ ಪ್ರಚಾರಕರು, ಯಾರಿಗೆಲ್ಲ ಸ್ಥಾನ?
ಕರ್ನಾಟಕದಲ್ಲಿ ಮೂರು ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆಯಾಗಿರುವ ಹಿನ್ನೆಲೆ ಬಿಜೆಪಿ ಭರ್ಜರಿ ಪ್ರಚಾರಕ್ಕೆ ಸಜ್ಜಾಗಿದೆ. ಅಲ್ಲದೆ ಬೈಎಲೆಕ್ಷನ್ ಕಣಕ್ಕೆ ಸ್ಟಾರ್ ಪ್ರಚಾರಕರ ಪಟ್ಟಿಯನ್ನೂ ರಿಲೀಸ್ ಮಾಡಿದೆ. ಬಿಜೆಪಿ ಹಿರಿಯ ನಾಯಕರು ಸೇರಿದಂತೆ 40 ಮಂದಿ ಅಬ್ಬರದ ಪ್ರಚಾರಕ್ಕೆ ಬರಲಿದ್ದಾರೆ.
ಬಿಜೆಪಿಯಿಂದ ಸ್ಟಾರ್ ಪ್ರಚಾರಕರ ಪಟ್ಟಿ ಪ್ರಕಟವಾಗಿದ್ದು, ಇದರಲ್ಲಿ ಬಿಜೆಪಿಯ 40 ಮಂದಿಯನ್ನು ಆಯ್ಕೆ ಮಾಡಲಾಗಿದೆ. ಬಹುತೇಕ ಕರ್ನಾಟಕದ ಬಿಜೆಪಿ ನಾಯಕರೇ ಸ್ಟಾರ್ ಪ್ರಚಾರಕರಾಗಿದ್ದಾರೆ.

ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ರಾಧಾ ಮೋಹನ್ ದಾಸ್ ಅಗರ್ವಾಲ್, ಸುಧಾಕರ್ ರೆಡ್ಡಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಪಕ್ಷ ನಾಯಕ ಆರ್.ಅಶೋಕ್, ಛಲವಾದಿ ನಾರಾಯಣಸ್ವಾಮಿ, ಡಿ.ವಿ.ಸದಾನಂದಗೌಡ, ಬಸವರಾಜ ಬೊಮ್ಮಾಯಿ, ಪ್ರಹ್ಲಾದ್ ಜೋಶಿ, ನಳಿನ್ ಕುಮಾರ್ ಕಟೀಲ್, ಗೋವಿಂದ ಕಾರಜೋಳ, ಸಿ.ಎನ್.ಅಶ್ವತ್ಥ ನಾರಾಯಣ, ಸಿ.ಟಿ.ರವಿ, ಬಿ.ಶ್ರೀರಾಮುಲು, ಜಗದೀಶ್ ಶೆಟ್ಟರ್ ಈ ಪಟ್ಟಿಯಲ್ಲಿರುವ ಪ್ರಮುಖ ನಾಯಕರು.
ಶೋಭಾ ಕರಂದ್ಲಾಜೆ, ವಿ.ಸೋಮಣ್ಣ, ವಿ.ಸುನಿಲ್ ಕುಮಾರ್, ಕೋಟಾ ಶ್ರೀನಿವಾಸ್ ಪೂಜಾರಿ, ಸಿ.ಎನ್.ಮಂಜುನಾಥ್, ಜಗ್ಗೇಶ್, ಬೈರತಿ ಬಸವರಾಜ್, ಗಾಲಿ ಜನಾರ್ದನ ರೆಡ್ಡಿ, ಅರವಿಂದ್ ಬೆಲ್ಲದ್, ಮಹೇಶ್ ಟೆಂಗಿನಕಾಯಿ, ಎಂ.ಆರ್.ಪಾಟೀಲ್, ಕೃಷ್ಣ ನಾಯಕ್, ಎನ್.ರವಿಕುಮಾರ್, ಹೇಮಲತಾ ನಾಯಕ್, ಪಿ.ರಾಜೀವ್, ಬಿ.ಸಿ.ಪಾಟೀಲ್, ಮುರುಗೇಶ್ ನಿರಾಣಿ, ಶಂಕರ್ ಪಾಟೀಲ್ ಮುನೇನಕೊಪ್ಪ, ರಾಜುಗೌಡ, ತಾರಾ ಅನುರಾಧಾ, ಸೋಮಶೇಖರ್ ರೆಡ್ಡಿ, ಶಿವನಗೌಡ ನಾಯಕ್, ಸೋಮಲಿಂಗಪ್ಪ, ವಿರೂಪಾಕ್ಷಪ್ಪ ಹಾಗೂ ಶ್ರುತಿ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿದ್ದಾರೆ.

ಹಲವರನ್ನು ಕೈಬಿಟ್ಟ ಹೈಕಮಾಂಡ್!
ಇನ್ನು ಈ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಇನ್ನೂ ಹಲವು ಬಿಜೆಪಿ ನಾಯಕರ ಹೆಸರು ಕೈತಪ್ಪಿರುವುದು ಗಮನ ಸೆಳೆದಿದೆ. ಮುಖ್ಯವಾಗಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಮಾಜಿ ಸಂಸದ ಪ್ರತಾಪ್ ಸಿಂಹ, ಕುಮಾರ್ ಬಂಗಾರಪ್ಪ, ರಮೇಶ್ ಜಾರಕಿಹೊಳಿ, ಅರವಿಂದ ಲಿಂಬಾವಳಿ, ಸಂಸದ ಜಿ.ಎಂ.ಸಿದ್ದೇಶ್ವರ ಅವರ ಹೆಸರು ಸ್ಟಾರ್ ಪ್ರಚಾರ ಪಟ್ಟಿಯಿಂದ ಹೊರಗಿಡಲಾಗಿದೆ.
ಯತ್ನಾಳ್ ಇತ್ತೀಚೆಗೆ ಬಿಜೆಪಿಯಲ್ಲಿ ಒಂದು ರೀತಿ ಬಂಡಾಯ ಎದ್ದಿದ್ದಾರೆ ಎನ್ನುವ ಮಾತಿದೆ. ಅಲ್ಲದೆ, ಪ್ರತ್ಯೇಕ ಸಭೆಗಳನ್ನು ನಡೆಸುವ ಮೂಲಕ ರಾಜ್ಯ ಬಿಜೆಪಿಯನ್ನು ನಡುಗಿಸಿದ್ದರು. ಈ ಸಭೆಗಳಲ್ಲಿ ಪ್ರತಾಪ್ ಸಿಂಹ ಸೇರಿದಂತೆ ಹಲವು ನಾಯಕರು ಗುಂಪುಗೂಡಿದ್ದರು. ಈ ಕಾರಣಕ್ಕೆ ಅವರು ಹೈಕಮಾಂಡ್ ಕೆಂಗಣ್ಣಿಗೆ ಗುರಿಯಾಗಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿಯೇ ಬೈಎಲೆಕ್ಷನ್ ಚುನಾವಣಾ ಪ್ರಚಾರಕ್ಕೆ ಅವರನ್ನು ದೂರವಿಟ್ಟಿದೆಯಾ ಎನ್ನುವ ಪ್ರಶ್ನೆಯೂ ಉದ್ಭವಿಸಿದೆ.

ಮೈಸೂರು ಸಂಸದ ಯದುವೀರ್ ಒಡೆಯರ್, ಮಂಡ್ಯ ಮಾಜಿ ಸಂಸದೆ ಸುಮಲತಾ ಅಂಬರೀಷ್ ಅವರ ಹೆಸರುಳನ್ನು ಸಹ ಹೈಕಮಾಂಡ್ ಕೈಬಿಟ್ಟಿರುವುದು ಅಚ್ಚರಿ ಮೂಡಿಸಿದೆ. ಇನ್ನು ಯದುವೀರ್ ಅವರು ಚನ್ನಪಟ್ಟಣದಲ್ಲಿ ಕುಮಾರಸ್ವಾಮಿ ಪುತ್ರ ನಿಖಿಲ್ ಪರ ಭರ್ಜರಿ ಪ್ರಚಾರ ನಡೆಸಿದ್ದರು. ಆದರೆ, ಸುಮಲತಾ ಅಂಬರೀಷ್ ಅವರು ಇತ್ತೀಚೆಗೆ ಪಕ್ಷದಲ್ಲಿ ಸೈಲೆಂಟ್ ಆಗಿರುವುದರಿಂದ ಅವರನ್ನು ಈ ಪಟ್ಟಿಗೆ ಹೈಕಮಾಂಡ್ ಸೇರಿಸಿಲ್ಲ ಎಂದು ಹೇಳಲಾಗುತ್ತಿದೆ.












Click it and Unblock the Notifications