ವಿನಯ್ ಆತ್ಮಹತ್ಯೆ ಕೇಸ್: ಸಿದ್ದರಾಮಯ್ಯ ಸರ್ಕಾರಕ್ಕೆ ಡೆಡ್‌ಲೈನ್ ಕೊಟ್ಟ ವಿಜಯೇಂದ್ರ
ಕೊಡಗಿನ ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಅವರ ಆತ್ಮಹತ್ಯೆ ವಿಚಾರವಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು ಕಾಂಗ್ರೆಸ್ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. ವಿನಯ್ ಸೋಮಯ್ಯ ಅವರ ಪ್ರಕರಣದಲ್ಲಿ ಶಾಸಕರ ಹೆಸರನ್ನು ಸೇರಿಸಲೇಬೇಕು. ಇಲ್ಲದಿದ್ದರೆ ಮುಂದಿನ ಅನಾಹುತಗಳಿಗೆ ಪೊಲೀಸ್ ಇಲಾಖೆ ಮತ್ತು ಸರ್ಕಾರವೇ ಹೊಣೆಯಾಗಲಿದೆ ಎಚ್ಚರಿಕೆ ನೀಡಿದ್ದಾರೆ. ಸರ್ಕಾರದ ವಿರುದ್ಧ ಟೀಕೆ ಮಾಡಿದರೆ ವಾಟ್ಸಪ್ ಗ್ರೂಪ್ ಅಡ್ಮಿನ್‌ಗಳ ಮೇಲೆ ಎಫ್‌ಐಆರ್ ದಾಖಲಿಸುವ, ಬಂಧಿಸುವ ಕೆಟ್ಟ ಸಂಪ್ರದಾಯಕ್ಕೆ ಕಾಂಗ್ರೆಸ್ ಸರ್ಕಾರ ನಾಂದಿ ಹಾಡಿದ್ದು, ರಾಜ್ಯದಲ್ಲಿರುವ ಪೊಲೀಸ್ ಠಾಣೆಗಳು ಕಾಂಗ್ರೆಸ್ ಕಚೇರಿಯಂತಾಗಿವೆ ಎಂದು ಆರೋಪಿಸಿದ್ದಾರೆ.
ವಿನಯ್ ಸೋಮಯ್ಯ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ವಿಜಯೇಂದ್ರ ಅವರು ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದರು. ಕೊಡಗಿನ ಗೋಣಿಮರೂರಿನಲ್ಲಿ ಇಂದು ನಮ್ಮ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿದ್ದ ವಿನಯ್ ಸೋಮಯ್ಯ ಅವರ ನಿವಾಸಕ್ಕೆ ತೆರಳಿ, ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು ಕುಟುಂಬಸ್ಥರಿಗೆ ಸಾಂತ್ವನ ಹೇಳಿದೆ. ನಮ್ಮ ಪಕ್ಷದ ನಿಷ್ಠೆಯ ಹಾಗೂ ಪ್ರಾಮಾಣಿಕ ಕಾರ್ಯಕರ್ತನನ್ನು ಆತ್ಮಹತ್ಯೆ ಮಾಡಿಕೊಳ್ಳುವಷ್ಟರ ಮಟ್ಟಿಗೆ ಬೆದರಿಕೆ ಹಾಗೂ ಒತ್ತಡ ಹೇರಿರುವುದು ಅತ್ಯಂತ ಖಂಡನೀಯ ಎಂದು ವಿಜಯೇಂದ್ರ ಕಿಡಿಕಾರಿದ್ದಾರೆ.

ಸದ್ಯ ಕುಶಾಲನಗರದಲ್ಲಿ ಪಕ್ಷದ ಕಾರ್ಯಕರ್ತರೊಂದಿಗೆ ಬೀಡು ಬಿಟ್ಟಿದ್ದು, ವಿನಯ್ ಸೋಮಯ್ಯ ಅವರು ಆತ್ಮಹತ್ಯೆ ಮಾಡಿಕೊಳ್ಳಲು ಕಾರಣರಾಗಿರುವ ಶಾಸಕರಾದ ಪೊನ್ನಣ್ಣ, ಮಂಥರ್ ಗೌಡ, ಅವರ ಹೆಸರುಗಳನ್ನು ಎಫ್‌ಐಆರ್‌ನಲ್ಲಿ ಸೇರಿಸುವಂತೆ ಹೋರಾಟ ಮುಂದುವರಿಸಲಾಗಿದೆ. ಈ ಸರ್ಕಾರ ನಮ್ಮನ್ನು ಬಂಧಿಸಿದ್ದು, ವಿನಯ್ ಸೋಮಯ್ಯ ಅವರ ಸಾವಿಗೆ ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ಮುಂದುವರೆಯಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಕರ್ನಾಟಕ ಸರ್ಕಾರವು ದ್ವೇಷ, ಬೆದರಿಕೆ ಮತ್ತು ಭಯದಲ್ಲಿ ಬೇರೂರಿರುವ ಅಪಾಯಕಾರಿ ರಾಜಕೀಯವನ್ನು ಮುಂದುವರೆಸಿದೆ. ಈ ಆಡಳಿತದ ವೈಫಲ್ಯಗಳನ್ನು ಪ್ರಶ್ನಿಸಲು ಅಥವಾ ಬಹಿರಂಗಪಡಿಸಲು ಧೈರ್ಯ ಮಾಡುವ ಯಾರನ್ನಾದರೂ ಗುರಿಯಾಗಿಸಿಕೊಂಡು ಮೌನಗೊಳಿಸಲಾಗುತ್ತಿದೆ ಎಂದು ದೂರಿದ್ದಾರೆ.

ಬಿಜೆಪಿಯ ಕಾರ್ಯಕರ್ತ ವಿನಯ್ ಸೋಮಯ್ಯ ಅವರು ಈ ಆಡಳಿತದ ಸೇಡಿನ ಕ್ರಮಗಳಿಗೆ ದುರಂತವಾಗಿ ಬಲಿಯಾಗಿದ್ದಾರೆ. ಸ್ಥಳೀಯ ಕಾಂಗ್ರೆಸ್ ಶಾಸಕರ ತಪ್ಪುಗಳ ವಿರುದ್ಧ ಧ್ವನಿ ಎತ್ತಿದ್ದು ಅವರ ಏಕೈಕ ತಪ್ಪು. ಶಾಸಕ ಮತ್ತು ಸ್ಥಳೀಯ ಪೊಲೀಸರ ನಡುವಿನ ಸ್ಪಷ್ಟ ಸಂಬಂಧದಲ್ಲಿ, ವಿನಯ್ ಅವರನ್ನು ನಿರಂತರವಾಗಿ ಕಿರುಕುಳ ನೀಡಲಾಗಿದೆ. ಆತ್ಮಹತ್ಯೆಯ ಮೂಲಕ ಕಾರ್ಯಕರ್ತನನ್ನು ಸಾವಿನ ಅಂಚಿಗೆ ತಳ್ಳಲಾಗಿದೆ. ಇದು ಕೇವಲ ವೈಯಕ್ತಿಕ ನಷ್ಟವಲ್ಲ, ರಾಜ್ಯದಲ್ಲಿ ಚಾಲ್ತಿಯಲ್ಲಿರುವ ದಬ್ಬಾಳಿಕೆಯ ವಾತಾವರಣದ ಸ್ಪಷ್ಟ ಪ್ರತಿಬಿಂಬ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಿಬಿಐ ತನಿಖೆಗೆ ವಿಜಯೇಂದ್ರ ಒತ್ತಾಯ
ಈ ಹೃದಯ ವಿದ್ರಾವಕ ಘಟನೆಯ ಬಗ್ಗೆ ಸಿಬಿಐ ತನಿಖೆಗೆ ನಾವು ಒತ್ತಾಯಿಸುತ್ತೇವೆ. ಅಪರಾಧಿಗಳು ಅವರ ರಾಜಕೀಯ ಸ್ಥಾನಮಾನವನ್ನು ಲೆಕ್ಕಿಸದೆ, ಕಾನೂನಿನಡಿಯಲ್ಲಿ ಹೊಣೆಗಾರರಾಗಬೇಕು. ಈ ಸರ್ವಾಧಿಕಾರಿ ಮತ್ತು ದಮನಕಾರಿ ಸಿದ್ದರಾಮಯ್ಯ ಸರ್ಕಾರದ ಮೇಲೆ ಆಕ್ರೋಶ ಎದುರಿಸುತ್ತಿರುವ ನಮ್ಮ ಧೈರ್ಯಶಾಲಿ ಕಾರ್ಯಕರ್ತರೊಂದಿಗೆ ನಾವು ಅಚಲವಾಗಿ ಒಗ್ಗಟ್ಟಿನಿಂದ ನಿಲ್ಲುತ್ತೇವೆ. ನಮ್ಮ ಪ್ರತಿಯೊಬ್ಬ ನೆಲದ ಕಾರ್ಯಕರ್ತರಿಗೆ ಸಂಪೂರ್ಣ ಕಾನೂನಿನ ಬೆಂಬಲದ ಭರವಸೆ ನೀಡುತ್ತೇವೆ. ಯಾವುದೇ ಬೆದರಿಕೆ ಅಥವಾ ಒತ್ತಡಕ್ಕೆ ಮಣಿಯಬೇಡಿ, ನಮ್ಮನ್ನು ಸಂಪರ್ಕಿಸಿ, ನಿಮ್ಮ ಧ್ವನಿ ಮುಖ್ಯ, ನಿಮ್ಮ ಜೀವನ ಮುಖ್ಯ ಎಂದು ವಿಜಯೇಂದ್ರ ಅವರು ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.












Click it and Unblock the Notifications