B.S.Yediyurappa: ಬಿಎಸ್‌ವೈ ಹುಟ್ಟುಹಬ್ಬದಂದೇ ಬಣ ರಾಜಕೀಯಕ್ಕೆ ಬ್ರೇಕ್? ಇದರ ಹಿಂದಿದೆ ದೊಡ್ಡ ಪ್ಲ್ಯಾನ್
ಬಿಜೆಪಿಯಲ್ಲಿ ಸದ್ಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಣ ಹಾಗೂ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಬಣ ಇದೆ ಎಂಬ ಮಾತುಗಳು ಆಗಾಗ ಬಹಿರಂಗವಾಗುತ್ತಲೇ ಇವೆ. ಇತ್ತೀಚೆಗೆ ಬಣ ರಾಜಕೀಯದಿಂದಲೇ ಬಿಜೆಪಿಯಲ್ಲಿ ಒಗ್ಗಟ್ಟು ಇಲ್ಲವಾಗಿದೆ ಎಂದು ಹೇಳಲಾಗುತ್ತಿದೆ. ಸದ್ಯ ಈ ಬಣ ರಾಜಕೀಯಕ್ಕೆ ಬ್ರೇಕ್ ಹಾಕಲು ಒಂದು ದೊಡ್ಡ ವೇದಿಕೆಯೇ ಸಿದ್ಧವಾಗುತ್ತಿದೆ ಎಂದು ರಾಜಕೀಯ ವಲಯದಲ್ಲಿ ಚರ್ಚೆ ಜೋರಾಗಿದೆ.
ಯತ್ನಾಳ್ ಅವರು ಒಂದು ಟೀಂ ಕಟ್ಟಿಕೊಂಡು ಬಹಿರಂಗವಾಗಿಯೇ ಬಿಎಸ್ ಯಡಿಯೂರಪ್ಪ ಹಾಗೂ ಅವರ ಪುತ್ರ ವಿಜಯೇಂದ್ರ ಅವರ ಬಗ್ಗೆ ಅಸಮಾಧಾನ ಹೊರಹಾಕುತ್ತಲೇ ಇದ್ದಾರೆ. ಇನ್ನು ಇತ್ತೀಚೆಗೆ ನಡೆದ ಕೋರ್ ಕಮಿಟಿ ಸಭೆಗಳಲ್ಲಿಯೂ ಈ ಬಣ ರಾಜಕೀಯದ ಬಗ್ಗೆ ಜೋರಾದ ಚರ್ಚೆ ನಡೆದಿದೆ. ಇದನ್ನೆಲ್ಲ ಹೈಕಮಾಂಡ್ ನಾಯಕರು ಗಮನಿಸುತ್ತಿದ್ದಾರೆ ಎಂದು ಬಿ.ಎಸ್.ಯಡಿಯೂರಪ್ಪ ಅವರು ಯತ್ನಾಳ್ ಮನವೊಲಿಕೆಗೆ ಯತ್ನಿಸಿದ್ದರು.

ಇದನ್ನೆಲ್ಲ ಮರೆತು ಇಲ್ಲರೂ ಒಗ್ಗಟ್ಟಿನಿಂದ ಪಕ್ಷ ಸಂಘಟನೆ ಮಾಡೋಣ ಎಂದು ಬಿಎಸ್‌ವೈ ಕರೆ ನೀಡಿದ್ದರು. ಆದರೂ ಯತ್ನಾಳ್ ಅವರು ಇದಕ್ಕೆಲ್ಲ ಜಗ್ಗಿಲ್ಲ ಎಂದೇ ಹೇಳಲಾಗುತ್ತಿದೆ. ಕಳೆದ ವಿಧಾನಸಭೆ ಹಾಗೂ ಇತ್ತೀಚಿನ ಬೈಎಲೆಕ್ಷನ್‌ಗಳಲ್ಲಿ ಬಿಜೆಪಿ ಈ ಆಂತರಿಕ ಕಲಹದಿಂದಲೇ ಸೋಲು ಕಂಡಿದೆ ಎನ್ನುವ ಆರೋಪವೂ ಇದೆ. ಹಾಗಾಗಿ ಎಲ್ಲರಿಗೂ ಒಗ್ಗಟ್ಟಿನ ಮಂತ್ರವನ್ನು ಯಡಿಯೂರಪ್ಪ ಅವರು ಪಠಿಸುತ್ತಲೇ ಇದ್ದಾರೆ.
ಇನ್ನು ವಕ್ಫ್ ವಿರೋಧಿಸಿ ವಿಜಯೇಂದ್ರ ಅವರ ಒಂದೆಡೆ ಹೋರಾಟಕ್ಕಿಳಿದರೆ, ಯತ್ನಾಳ್ ಅವರೂ ಬಣದ ಸದಸ್ಯರು ಕೂಡ ಪ್ರತ್ಯೇಕವಾಗಿ ಹೋರಾಟ ಶುರುಮಾಡಿದ್ದರು. ಅಲ್ಲಿಗೆ ಬಿಜೆಪಿಯಲ್ಲಿ ಒಗ್ಗಟ್ಟಿಲ್ಲ ಎನ್ನುವುದು ಕಣ್ಣಿಗೆ ಸ್ಪಷ್ಟವಾಗಿ ಗೋಚರಿಸಿತ್ತು.

ಇದು ಮುಂದೆ ಕರ್ನಾಟಕದಲ್ಲಿ ಬಿಜೆಪಿ ಸಂಘಟನೆಗೆ ದೊಡ್ಡ ಪೆಟ್ಟು ಬೀಳುವ ಸಾಧ್ಯತೆ ಎಂದು ಯಡಿಯೂರಪ್ಪ ಅವರು ಮೊದಲಿನಿಂದಲೂ ಲೆಕ್ಕಾಚಾರ ಹಾಕುತ್ತಲೆ ಬಂದಿದ್ದಾರೆ. ಹಾಗಾಗಿ ಯತ್ನಾಳ್ ಹಾಗೂ ವಿಜಯೇಂದ್ರ ಅವರ ಬಣಗಳನ್ನು ಒಗ್ಗೂಡಿಸುವುದೇ ಅವರಿಗೆ ದೊಡ್ಡ ತಲೆನೋವಾಗಿದೆ.
ಮುಂಬರಲಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಎದುರಿಸಲು ಒಗ್ಗಟ್ಟಿನಿಂದಲೇ ಸಾಧ್ಯ ಎಂದು ಅರಿತುಕೊಂಡಿರುವ ಅವರು ಹೇಗಾದರೂ ಮಾಡಿ ಪಕ್ಷ ಸಂಘಟನೆ ಮಾಡಲು ಟೊಂಕ ಕಟ್ಟಿ ನಿಂತಿದ್ದಾರೆ. ಇನ್ನು ಬಿಎಸ್.ಯಡಿಯೂರಪ್ಪ ಅವರ ಜನ್ಮದಿನದ ಅಂಗವಾಗಿ 20 ಲಕ್ಷ ಜನ ಸೇರಿಸಿ ಬೃಹತ್ ಕಾರ್ಯಕ್ರಮ ಮಾಡ್ತೀವಿ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಕೂಡ ಹೇಳಿದ್ದಾರೆ.

ರಾಜ್ಯದ ಉದ್ದಗಲಕ್ಕೂ ಪ್ರವಾಸ ಮಾಡಿ ಪಕ್ಷ ಸಂಘಟನೆ ಮಾಡುತ್ತೇವೆ. ಯಡಿಯೂರಪ್ಪ ಅವರ ಹುಟ್ಟುಹಬ್ಬದ ಮೂಲಕ ಪಕ್ಷ ಬಲಿಷ್ಠವಾಗಬೇಕು ಎಂಬ ನಿಟ್ಟಿನಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂಬ ಸುಳಿವು ನೀಡಿದ್ದಾರೆ.
ಈ ಕಾರ್ಯಕ್ರಮಕ್ಕೆ ಯತ್ನಾಳ್ ಅವರನ್ನು ಕರೆಯುತ್ತೀರಾ ಎಂಬ ಪ್ರಶ್ನೆಗೆ ಸದ್ಯಕ್ಕೆ ಇದಕ್ಕೆ ನಾನು ಉತ್ತರ ನೀಡಲ್ಲ, ನಾನು ಯಾರ ಹೆಸರನ್ನೂ ಹೇಳುವುದಿಲ್ಲ ಎಂದಿದ್ದಾರೆ. ಒಟ್ಟಾರೆ ಪಕ್ಷ ಸಂಘಟನೆಗೆ ಹೈಕಮಾಂಡ್ ಕೂಡ ಸೂಚನೆ ನೀಡಿದ್ದು, ಬಿ.ಎಸ್.ಯಡಿಯೂರಪ್ಪ ಅವರ ಹುಟ್ಟುಹಬ್ಬದ ಹೆಸರಿನಲ್ಲಿ ಬೃಹತ್ ಸಮಾವೇಶ ಆಯೋಜಿಸಿ, ಪಕ್ಷದಲ್ಲಿನ ಬಣ ರಾಜಕೀಯಕ್ಕೆ ಬ್ರೇಕ್ ಹಾಕುವ ಸಾಧ್ಯತೆ ಇದೆ ಎಂದು ಚರ್ಚೆಗಳು ನಡೆಯುತ್ತಿವೆ.












Click it and Unblock the Notifications