ಡಿ.ಕೆ.ಶಿವಕುಮಾರ್‌ಗೆ ಇನ್ನು ಆರು ತಿಂಗಳಲ್ಲಿ ಮುಖ್ಯಮಂತ್ರಿ ಪಟ್ಟ: ಭವಿಷ್ಯ ನುಡಿದಿದ್ದು ಯಾರು?
ರಾಜ್ಯ ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಬದಲಾವಣೆ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಹಾಗೂ ಸಚಿವ ಸಂಪುಟ ವಿಸ್ತರಣೆಯ ಚರ್ಚೆಗಳು ತ್ರಿಕೋನವಾಗಿ ನಡೆಯುತ್ತಿವೆ. ಇತ್ತೀಚೆಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಅನುಪಸ್ಥಿತಿಯಲ್ಲಿ ಸಚಿವ ಸತೀಶ್ ಜಾರಕಿಹೊಳಿ ಅವರ ನಿವಾಸದಲ್ಲಿ ಸಿಎಂ ಸಿದ್ದರಾಮಯ್ಯ ಸಹಿತ ನಡೆದ ಡಿನ್ನರ್ ಪಾರ್ಟಿ ಮಹತ್ವ ಪಡೆದುಕೊಂಡಿದೆ. ಇದರ ನಡುವೆ ಡಿ.ಕೆ.ಶಿವಕುಮಾರ್ ಅವರು ಮುಂದಿನ ಆರು ತಿಂಗಳಲ್ಲಿ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಖುದ್ದು ಬಿಜೆಪಿ ನಾಯಕ ಭವಿಷ್ಯ ನುಡಿದಿದ್ದಾರೆ.
ಹೌದು, ಇನ್ನು ಆರು ತಿಂಗಳಲ್ಲಿ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿ ಆಗುವ ಪರಿಸ್ಥಿತಿ ಇದೆ ಎಂದು ಬಿಜೆಪಿ ಸಂಸದ ಡಾ.ಕೆ.ಸುಧಾಕರ್ ಭವಿಷ್ಯ ನುಡಿದಿದ್ದಾರೆ. ಬಿಜೆಪಿಯಲ್ಲಿ ಗುಂಪುಗಾರಿಕೆ ಇದೆ ಅಂತಾರಲ್ಲ? ಯಾಕೆ ಕಾಂಗ್ರೆಸ್‌ನಲ್ಲಿ ಗುಂಪುಗಾರಿಕೆ ಇಲ್ವಾ? ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ವಿದೇಶ ಪ್ರವಾಸದಲ್ಲಿರಬೇಕಾದ್ರೆ ಕಾಂಗ್ರೆಸ್‌ನ 35 ಮಂದಿ ನ್ಯೂ ಇಯರ್ ಪಾರ್ಟಿ ಹಾಗು ಡಿನ್ನರ್ ಮೀಟಿಂಗ್ ಮಾಡಿದ್ದಾರೆ. ಇದೆಲ್ಲ ಗುಂಪುಗಾರಿಕೆ ಅಲ್ವಾ? ಎಂದು ಟಾಂಗ್ ನೀಡಿದ್ದಾರೆ.

ಡಿ.ಕೆ.ಶಿವಕುಮಾರ್ ಅವರು 6 ತಿಂಗಳಲ್ಲಿ ಮುಖ್ಯಮಂತ್ರಿಯಾಗುವ ಪರಿಸ್ಥಿತಿ ಇದೆ. ಈ ಕಾರಣದಿಂದಲೇ ಸಿಎಂ ಸಿದ್ದರಾಮಯ್ಯ ಅವರು ಡಿನ್ನರ್ ಮೀಟಿಂಗ್ ಮಾಡಿದ್ದಾರೆ ಎಂದು ಸುಧಾಕರ್ ಹೇಳಿದ್ದಾರೆ. ಡಿನ್ನರ್ ಮೀಟಿಂಗ್ ಬಗ್ಗೆ ವಿಪಕ್ಷ ನಾಯಕ ಆರ್.ಅಶೋಕ್ ಕೂಡ ವ್ಯಂಗ್ಯ ಮಾಡಿದ್ದಾರೆ.
ಅತ್ತ ಡಿಸಿಎಂ ಡಿಕೆ ಶಿವಕುಮಾರ್ ಅವರು ವಿದೇಶ ಪ್ರವಾಸಕ್ಕೆ ಹೋಗುವುದನ್ನೇ ಕಾಯುತ್ತಿದ್ದ ಸಿಎಂ ಸಿದ್ದರಾಮಯ್ಯ ಬಣ, ಇತ್ತ ಸಚಿವ ಸತೀಶ್ ಜಾರಕಿಹೊಳಿ ಅವರ ನಿವಾಸದಲ್ಲಿ 35 ಶಾಸಕರ ಡಿನ್ನರ್ ಮೀಟಿಂಗ್ ನಡೆಸಿ ಶಕ್ತಿ ಪ್ರದರ್ಶನ ಮಾಡಿದೆ. ಡಿ.ಕೆ.ಶಿವಕುಮಾರ್ ಅವರೇ, ಅಧಿಕಾರವನ್ನ ಒದ್ದು ಕಿತ್ತುಕೊಳ್ಳುತ್ತೇನೆ ಎಂದು ಸದನದಲ್ಲಿ ಅಬ್ಬರಿಸದ್ದನ್ನು ಕಾರ್ಯಗತ ಮಾಡುವ ಸಮಯ ಬಂದಿದೆ ಎಂದಿದ್ದಾರೆ.
ತಮ್ಮ ಅನುಪಸ್ಥಿತಿಯಲ್ಲಿ ಸಂಪುಟ ಸಭೆ ನಡೆಯುತ್ತದೆ. ಬಸ್ ಟಿಕೆಟ್ ದರ 15%ರಷ್ಟು ಹೆಚ್ಚಿಸುವಂತಹ ಪ್ರಮುಖ ನಿರ್ಧಾರವಾಗಿದೆ. ಒಬ್ಬ ಉಪಮುಖ್ಯಮಂತ್ರಿ ಹಾಗೂ ಪಕ್ಷದ ರಾಜ್ಯಾಧ್ಯಕ್ಷರ ಅನುಪಸ್ಥಿತಿಯಲ್ಲಿ ಇಂತಹ ನಿರ್ಧಾರಗಳು ಆಗುತ್ತೆ ಎಂದರೆ ಏನರ್ಥ? ಕಾಂಗ್ರೆಸ್ ಪಕ್ಷದಲ್ಲಿ ತಾವು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದೆಯೇ? ಅಥವಾ ತಮ್ಮ ಅಬ್ಬರ ಏನಿದ್ದರೂ ಮಾಧ್ಯಮಗಳ ಮುಂದೆ ಮಾತ್ರವೇ? ಹೀಗೆ ಮುಂದುವರೆದರೆ ತಮ್ಮ ಕನಸು ಕನಸಾಗಿಯೇ ಉಳಿಯುವುದು ಗ್ಯಾರಂಟಿ ಎಂದು ಅಶೋಕ್ ಕಾಲೆಳೆದಿದ್ದಾರೆ.

ಸದ್ಯ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ವಿದೇಶದಲ್ಲಿದ್ದು, ಇತ್ತ ಸಿಎಂ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನಾಯಕರ ಡಿನ್ನರ್ ಮೀಟಿಂಗ್ ನಡೆದಿದೆ. ಸಚಿವ ಸತೀಶ್ ಜಾರಕಿಹೊಳಿ ಅವರ ನಿವಾಸದಲ್ಲಿ ಡಿನ್ನರ್ ಪಾರ್ಟಿ ನಡೆದಿರುವುದು ಹಲವು ಕುತೂಹಲಗಳಿಗೆ ಕಾರಣವಾಗಿದೆ. ಈ ಮೀಟಿಂಗ್‌ನಲ್ಲಿ ಸಿದ್ದರಾಮಯ್ಯ ಬಣದ ಶಾಸಕರೇ ಇರುವುದು ಕೂಡ ಭಾರಿ ಚರ್ಚೆ ಹುಟ್ಟುಹಾಕಿದೆ. ಡಿ.ಕೆ.ಶಿವಕುಮಾರ್ ಅವರ ಅನುಪಸ್ಥಿತಿಯಲ್ಲಿ ನಡೆದಿರುವ ಈ ಸಭೆ ಭಾರಿ ಮಹತ್ವ ಪಡೆದುಕೊಂಡಿದ್ದು, ಸಚಿವ ಸಂಪುಟ ಸಭೆ ಬಳಿಕ ಸಿಎಂ ಸಿದ್ದರಾಮಯ್ಯ ಅವರೂ ಸೇರಿದಂತೆ 30ಕ್ಕೂ ಹೆಚ್ಚು ಕಾಂಗ್ರೆಸ್ ಶಾಸಕರು ಡಿನ್ನರ್ ಪಾರ್ಟಿಯಲ್ಲಿ ಸೇರಿದ್ದರು.
ಈ ಸಭೆಯಲ್ಲಿ ಮುಖ್ಯವಾಗಿ ಸಚಿವ ಸಂಪುಟ ಪುನರ್ ರಚನೆ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಸೇರಿದಂತೆ ಅಧಿಕಾರ ಹಂಚಿಕೆ ವಿಚಾರಗಳ ಬಗ್ಗೆಯೂ ಸಿದ್ದರಾಮಯ್ಯ ಅವರ ಬಣದ ನಾಯಕರು ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಈ ಸಭೆಯಲ್ಲಿ ಸಿದ್ದರಾಮಯ್ಯ ಬಣದ ಜಿ.ಪರಮೇಶ್ವರ್, ಎಚ್.ಸಿ.ಮಹದೇವಪ್ಪ, ಕೆ.ಎನ್.ರಾಜಣ್ಣ ಸೇರಿದಂತೆ ಪ್ರಮುಖರು ಭಾಗಿಯಾಗಿದ್ದರು. ಆದರೆ ಅನೌಪಚಾರಿಕವಾಗಿ ಊಟಕ್ಕೆ ಸೇರಿದ್ದೆವು ಎಂದು ಕಾಂಗ್ರೆಸ್ ನಾಯಕರು ಗುಟ್ಟು ಕಾಯ್ದುಕೊಂಡಿದ್ದಾರೆ.












Click it and Unblock the Notifications