ಮತ ಹಾಕಲು ಬಿಹಾರಿಗಳಿಗೆ ರಜೆ ಕೊಡಿ ಎಂದಿದ್ದಕ್ಕೆ ಡಿಸಿಎಂಗೆ "Thank you DK" ಎಂದ ಬಿಜೆಪಿ
ಬಿಹಾರ ವಿಧಾನಸಭೆ ಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದು, ಬಿಹಾರದಲ್ಲಿ ಎನ್‌ಡಿಎಗೆ ಭಾರೀ ಬಹುಮತ ಸಿಕ್ಕಿದೆ. ಇನ್ನು ಮಹಾಘಟಬಂಧನ್‌ಗೆ ತೀವ್ರ ಹೀನಾಯ ಸೋಲು ಕಾಣುವುದು ಪಕ್ಕಾ ಆಗಿದೆ. ಇತ್ತೀಚೆಗೆ ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಬಿಹಾರ ಚುನಾವಣೆಗೆ ಕಾಂಗ್ರೆಸ್ ಪರ ರಾಜ್ಯದಲ್ಲೇ ಪ್ರಚಾರ ನಡೆಸಿದ್ದರು. ಅಲ್ಲದೆ ಇಲ್ಲಿರುವ ಬಿಹಾರಿಗಳು ಮತದಾನದಲ್ಲಿ ಪಾಲ್ಗೊಳ್ಳಲು ಮೂರು ದಿನಗಳ ಕಾಲ ರಜೆ ನೀಡುವಂತೆ ಕಂಪನಿಗಳಿಗೆ ಮನವಿಯೂ ಮಾಡಿದ್ದರು. ಆದರೆ ಚುನಾವಣಾ ಫಲಿತಾಂಶವು ತಲೆಕೆಳಗಾಗಿದ್ದು, ಕರ್ನಾಟಕ ಬಿಜೆಪಿಯು "Thank you DK" ಎಂದು ಎಕ್ಸ್‌ನಲ್ಲಿ ಗೇಲಿ ಮಾಡಿದೆ.
ಬಿಹಾರದಲ್ಲಿ ಕಾಂಗ್ರೆಸ್ ಒಕ್ಕೂಟ ಹೀನಾಯ ಸೋಲು ಕಾಣುವ ಸುಳಿವು ದಟ್ಟವಾಗಿರುವ ಹಿನ್ನೆಲೆ ಡಿ.ಕೆ.ಶಿವಕುಮಾರ್ ಅವರ ಹಳೆಯ ಪೋಸ್ಟ್‌ಗೆ ಪ್ರತಿಕ್ರಿಯಿಸುವ ಮೂಲಕ ಬಿಜೆಪಿ ಅಣಕಿಸಿದೆ. ಇತರೆ ಪಟ್ಟಿಯಲ್ಲಿ ʼಕೈʼ ಪಕ್ಷ. ದೇಶದಲ್ಲಿ ಅಸ್ತಿತ್ವ ಕಳೆದುಕೊಂಡಿರುವ ಶತಮಾನದ ಕಾಂಗ್ರೆಸ್ ಪಕ್ಷಕ್ಕೆ ಬಿಹಾರದಲ್ಲೂ ನೆಲೆಯಿಲ್ಲ, ಫಲಿತಾಂಶ ಪಟ್ಟಿಯಲ್ಲೂ ಜಾಗವಿಲ್ಲ. ಈಗೇನಿದ್ದರೂ OTHERS ಪಟ್ಟಿಯಲ್ಲಿ ಕಾಂಗ್ರೆಸ್ ಅನ್ನು ದುರ್ಬೀನು ಹಾಕಿ ಹುಡುಕಬೇಕಿದೆ. ಈ ಕ್ರೆಡಿಟ್ ಎಲ್ಲ ಸ್ಟಾರ್ ಕ್ಯಾಂಪೆನೆರ್ ರಾಹುಲ್ ಗಾಂಧಿ ಅವರಿಗೆ ಸಲ್ಲಬೇಕು ಎಂದು ಬಿಜೆಪಿ ತಿರುಗೇಟು ನೀಡಿದೆ.

ವೇತನ ಸಹಿತ ರಜೆ ನೀಡಿ ಎಂದಿದ್ದ ಡಿಕೆಶಿ
ಡಿ.ಕೆ.ಶಿವಕುಮಾರ್ ಅವರು ಎಕ್ಸ್ ಖಾತೆಯಲ್ಲಿ, "2025ರ ನವೆಂಬರ್ 6 ಮತ್ತು 11ರಂದು ನಡೆಯಲಿರುವ ಬಿಹಾರ ರಾಜ್ಯದ ಸಾರ್ವತ್ರಿಕ ಚುನಾವಣೆ ಹಿನ್ನೆಲೆ ಬೆಂಗಳೂರು ಮತ್ತು ಕರ್ನಾಟಕದಾದ್ಯಂತ ಕೆಲಸ ಮಾಡುತ್ತಿರುವ ಬಿಹಾರದ ಮತದಾರರಿಗೆ ಮತ ಚಲಾಯಿಸಲು ಅನುಕೂಲವಾಗುವಂತೆ ಎಲ್ಲ ಕಂಪನಿಗಳು, ಉದ್ಯಮಿದಾರರು, ಹೋಟೆಲ್‌ಗಳು ಮತ್ತು ಗುತ್ತಿಗೆದಾರರು ಕನಿಷ್ಠ ಮೂರು ದಿನಗಳ ವೇತನ ಸಹಿತ ರಜೆ ನೀಡಿ, ಪ್ರಜಾಪ್ರಭುತ್ವ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಸಹಕರಿಸಬೇಕೆಂದು ವಿನಂತಿ ಮಾಡುತ್ತೇನೆ" ಎಂದು ಪೋಸ್ಟ್ ಹಂಚಿಕೊಂಡಿದ್ದರು. ಇದನ್ನು ಟ್ಯಾಗ್ ಮಾಡಿರುವ ಬಿಜೆಪಿ, ಧನ್ಯವಾದಗಳು ಡಿಕೆ ಎಂದು ವ್ಯಂಗ್ಯವಾಡಿದೆ.
ಪ್ರಧಾನಿ ಮೋದಿ ಅಭಿನಂದನೆ
ಬಿಹಾರ ಚುನಾವಣಾ ಫಲಿತಾಂಶದ ಬಗ್ಗೆ ಪ್ರಧಾನಿ ಮೋದಿ ಟ್ವೀಟ್ ಮಾಡಿ ಅಭಿನಂದಿಸಿದ್ದಾರೆ. ಬಿಹಾರಕ್ಕೆ ಎನ್‌ಡಿಎ ಸರ್ವತೋಮುಖ ಅಭಿವೃದ್ಧಿಯನ್ನು ಒದಗಿಸಿದೆ. ನಮ್ಮ ಹಿಂದಿನ ಸಾಧನೆ ಮತ್ತು ರಾಜ್ಯವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ನಮ್ಮ ದೂರದೃಷ್ಟಿಯ ಆಧಾರದ ಮೇಲೆ ಜನರು ನಮಗೆ ಮತ ಹಾಕಿದ್ದಾರೆ. ಈ ಅಪ್ರತಿಮ ವಿಜಯಕ್ಕಾಗಿ ಸಿಎಂ ನಿತೀಶ್ ಕುಮಾರ್ ಜಿ ಮತ್ತು ಎನ್‌ಡಿಎ ಕುಟುಂಬದ ನಮ್ಮ ಮಿತ್ರರಾದ ಚಿರಾಗ್ ಪಾಸ್ವಾನ್ ಜಿ, ಜಿತನ್ ರಾಮ್ ಮಾಂಝಿ ಜಿ ಮತ್ತು ಉಪೇಂದ್ರ ಕುಶ್ವಾಹ ಜಿ ಅವರನ್ನು ನಾನು ಅಭಿನಂದಿಸುತ್ತೇನೆ ಎಂದಿದ್ದಾರೆ.

ಮುಂಬರುವ ದಿನಗಳಲ್ಲಿ, ಬಿಹಾರದ ಪ್ರಗತಿ, ಬಿಹಾರದ ಮೂಲಸೌಕರ್ಯ ಮತ್ತು ಬಿಹಾರದ ಸಂಸ್ಕೃತಿಗಾಗಿ ನಾವು ಇನ್ನೂ ಹೆಚ್ಚಿನದನ್ನು ಮಾಡುತ್ತೇವೆ. ರಾಜ್ಯದ ಯುವಶಕ್ತಿ ಮತ್ತು ನಾರಿಶಕ್ತಿ ಸಮೃದ್ಧ ಜೀವನವನ್ನು ನಡೆಸಲು ಅನೇಕ ಅವಕಾಶಗಳನ್ನು ಪಡೆಯುವುದನ್ನು ನಾವು ಖಚಿತಪಡಿಸಿಕೊಳ್ಳುತ್ತೇವೆ ಎಂದು ಮೋದಿ ಭರವಸೆ ನೀಡಿದ್ದಾರೆ. ಇತ್ತೀಚಿನ ತಿಂಗಳುಗಳಲ್ಲಿ ಪ್ರತಿಯೊಬ್ಬ ಎನ್‌ಡಿಎ ಕಾರ್ಯಕರ್ತರೂ ಮಾಡಿರುವ ಕಠಿಣ ಪರಿಶ್ರಮಕ್ಕೆ ನಾನು ಕೃತಜ್ಞನಾಗಿದ್ದೇನೆ. ಅವರು ಜನರ ನಡುವೆ ಕೆಲಸ ಮಾಡಿದ್ದಾರೆ, ನಮ್ಮ ಅಭಿವೃದ್ಧಿ ಕಾರ್ಯಸೂಚಿಯನ್ನು ವಿವರಿಸಿದ್ದಾರೆ. ವಿರೋಧ ಪಕ್ಷದ ಸುಳ್ಳುಗಳನ್ನು ಸಹ ಎದುರಿಸಿದ್ದಾರೆ. ಅವರ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದಿದ್ದಾರೆ.












Click it and Unblock the Notifications