Munirathna: ಏಡ್ಸ್ ರಕ್ತ ಇಂಜೆಕ್ಟ್, ಇಡೀ ವಂಶವೇ ಸರ್ವನಾಶ: ದೇಶ ಬಿಡಲು ನಿರ್ಧರಿಸಿದ್ದ ಆರ್.ಅಶೋಕ್!
ಬೆಂಗಳೂರು, ನವೆಂಬರ್ 11: ರಾಜ್ಯ ರಾಜಕಾರಣದಲ್ಲಿ ತಲ್ಲಣ ಸೃಷ್ಟಿಸಿದ್ದ ಏಡ್ಸ್ ರೋಗಿಯ ರಕ್ತವನ್ನು ಒಕ್ಕಲಿಗ ನಾಯಕನಿಗೆ ಇಂಜೆಕ್ಟ್ ಮಾಡುವ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಪ್ರಕರಣ ದಾಖಲಾದ ಬಳಿಕ ರಕ್ತ ಕೊಟ್ಟ ಏಡ್ಸ್ ರೋಗಿ, ಇಂಜೆಕ್ಟ್ ಮಾಡಲು ಮುಂದಾಗಿದ್ದವರ ವಿಚಾರಣೆ ನಡೆದಿದೆ. ಇದೆಲ್ಲ ನೋಡಿ ಸಾಕಾಗಿರುವ ನಾನು ಭಾರತ ಬಿಟ್ಟು ಹೋಗಿಬಿಡುತ್ತೇನೆ ಎಂದು ಬಿಜೆಪಿ ವಿಪಕ್ಷ ನಾಯಕ ಆರ್.ಅಶೋಕ್ ಅವರು ಭೀತಿಯಿಂದಲೇ ಹೇಳಿಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ.
ಹೌದು...ರಾಜ ರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ಅವರು ಏಡ್ಸ್ ರೋಗಿಯ ರಕ್ತವನ್ನು ಆರ್.ಅಶೋಕ್ ಅವರಿಗೆ ಇಂಜೆಕ್ಟ್ ಮಾಡಲು ಪ್ಲಾನ್ ಮಾಡಿಕೊಂಡಿದ್ದರು. ಅದಕ್ಕಾಗಿ ಮೂವರನ್ನು ನೇಮಿಸಿದ್ದರು ಎಂಬ ಎಲ್ಲ ವಿಚಾರಗಳು ವರದಿ ಆಗಿದ್ದವು. ಸದ್ಯ ಮುನಿರತ್ನ ಅವರು ಜಾಮೀನಿನ ಮೇಲೆ ಹೊರಗಿದ್ದಾರೆ.

ಏಡ್ಸ್ ರೋಗಿಯ ರಕ್ತ ತಮಗೆ ಇಂಜೆಕ್ಟ್ ಮಾಡಲು ಪ್ಲಾನ್ ಮಾಡಲಾಗಿತ್ತು ಎಂಬ ವಿಚಾರ ಕೇಳಿಯೇ ನನಗೆ ಮೂರು ದಿನ ನಿದ್ದೆ ಬಂದಿಲ್ಲ ಎಂದು ಘಟನೆಯ ಕುರಿತು ಆರ್.ಅಶೋಕ್, ಕೇಂದ್ರ ಖಾತೆ ರಾಜ್ಯ ರೈಲ್ವೆ ಸಚಿವ ವಿ.ಸೋಮಣ್ಣ ಅವರ ಮುಂದೆ ಹೇಳಿಕೊಳ್ಳುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಹೇಳಿಕೆ ಕೊಡಲು ಒಪ್ಪದ ಆರ್.ಅಶೊಕ್
ಇದೆಲ್ಲ ನೋಡಿ, ಅವರ ಪ್ಲಾನ್ ಕೇಳಿ ನನಗೆ ಮೂರು ದಿನ ನಿದ್ದೆ ಬಂದಿಲ್ಲ ಅಣ್ಣ. ರಕ್ತ ಕೊಟ್ಟ ಏಡ್ಸ್ ರೋಗಿ ಆ ಹೆಣ್ಣುಮಗಳು ಪೊಲೀಸರ ಮುಂದೆ ನಿಜಾ ಒಪ್ಪಿಕೊಂಡಿದ್ದಾಳೆ. ಪೊಲೀಸರು ಇಂಜೆಕ್ಟ್ ಮಾಡಲಿದ್ದ (ಪ್ರಕರಣದಲ್ಲಿ ಭಾಗಿಯಾಗಿದ್ದ) ಕೆಲವರನ್ನು ವಿಚಾರಣೆ ಮಾಡಿದ್ದಾರೆ. ಅವರೆಲ್ಲರು ರಕ್ತ ಇಂಜೆಕ್ಟ್ ಕುರಿತ ಎಲ್ಲ ಪ್ಲಾನ್ ಸಂಗತಿ, ನಡೆದಿದ್ದೇನೆ ಎಂದು ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾರೆ. ನನಗೂ ಹೇಳಿಕೆ ಕೊಡಲು ಪೊಲೀಸರು ಒತ್ತಾಯಿಸಿದ್ದು, ನಾನು ಅವರಿಗೆ ಬರುವುದಿಲ್ಲ ಎಂದು ಬೈದಿದ್ದೇನೆ. ದಾಖಲೆ ತರುವಂತೆ ಹೇಳಿದ್ದೇನೆ ಎಂದು ಸಚಿವರ ಬಳಿ ಆರ್. ಅಶೋಕ್ ಆತಂಕ ವ್ಯಕ್ತಪಡಿಸಿಕೊಂಡಿದ್ದಾರೆ.
ಇಡೀ ವಂಶವೇ ಸರ್ವನಾಶವಾಗುತ್ತದೆ: ಆರ್.ಅಶೋಕ್ ಭೀತಿ
ಒಂದು ಕೊಲೆ ಮಾಡಿದರೆ ಅದು ಬೇರೆ, ಆದರೆ ಇಂತಹ ರಕ್ತ ಇಂಜೆಕ್ಟ್ ಮಾಡಿದರೆ, ಇಡೀ ವಂಶವೇ ಸರ್ವನಾಶವಾಗುತ್ತದೆ. ಮುಂದೆ ಬದುಕಿನ ಗತಿ ಏನಾಗುತ್ತದೆ. ಇದೆಲ್ಲ ನೆನಸಿಕೊಂಡು ಭಯವಾಗುತ್ತದೆ. ಈ ದೇಶವೇ ಬೇಡ ನಾನು ದೇಶ ಬಿಟ್ಟು ಹೋಗಿ ಬಿಡುತ್ತೇನೆ ಎಂದು ನಿರ್ಧರಿಸುವಂತಾಗಿತ್ತು ಎಂದು ಅವರು ನಡೆದ ಬೆಳವಣಿಗೆ ಕುರಿತು ಭೀತಿ ವ್ಯಕ್ತಪಡಿಸಿದ್ದಾರೆ.
ಆರ್.ಅಶೋಕ್ ಮಾತ್ರವಲ್ಲದೇ ಮುನಿರತ್ನ ಅವರು ರಾಜಕೀಯ ವಿರೋಧಿಗಳಿಗೆ ಏಡ್ಸ್ ರೋಗಿ ರಕ್ತ ಇಂಜೆಕ್ಟ್ ಮಾಡಲು ಪ್ಲಾನ್ ಮಾಡಿಕೊಂಡಿದ್ದರು ಎಂದು ತಿಳಿದು ಬಂದಿದೆ. ಇದರ ವಿರುದ್ಧ ಪೊಲೀಸರ ಸಾಕ್ಷ್ಯ ಸಹ ಸಂಗ್ರಹಿಸಿದ್ದಾರೆ. ಇದೊಂದು ಹೇಯ ಕೃತ್ಯವೆಂದು ಪಕ್ಷೇಬೇಧ ಮರೆತು ನಾಯಕರು ಖಂಡಿಸಿದ್ದಾರೆ. ಇದು ಕೆಲವು ರಾಜಕೀಯ ಹೇಳಿಕೆಗಳಿಗೂ ಕಾರಣವಾಯಿತು.












Click it and Unblock the Notifications