"ಸಿದ್ದರಾಮಯ್ಯ ದುರಾಭಿಮಾನಿ ಸಮಾವೇಶ; ಡಿಕೆಶಿ ಸುಡುಗಾಡ ಬಂಡೆ"
ಹಾಸನ ಜಿಲ್ಲೆಯಲ್ಲಿ ಗುರುವಾರ ನಡೆದ ಸಮಾವೇಶವು ರಾಜ್ಯ ರಾಜಕೀಯದಲ್ಲಿ ಹೊಸ ಸಂಚಲವನ್ನೇ ಸೃಷ್ಟಿ ಮಾಡಿದೆ. ಆದರೆ, ಇದೀಗ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ. ಅದು ಸಿದ್ದರಾಮಯ್ಯ ಅವರ ಸ್ವಾಭಿಮಾನಿ ಸಮಾವೇಶ ಅಲ್ಲ, ದುರಾಭಿಮಾನಿ ಸಮಾವೇಶವಾಗಿದೆ ಎಂದಿದ್ದು, ಮುಂದುವರಿದು ಡಿ.ಕೆ ಶಿವಕುಮಾರ್ ಸುಡುಗಾಡ ಬಂಡೆ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಹಾಸನದಲ್ಲಿ ಗುರುವಾರ ನಡೆದ ಸಮಾವೇಶ ಜೆಡಿಎಸ್ ಪಕ್ಷವನ್ನು ಕೊತ ಕೊತ ಎಂದು ಕುದಿಯುವಂತೆ ಮಾಡಿದೆ. ಜೆಡಿಎಸ್ ಪಕ್ಷವು ಈ ಸಮಾವೇಶದಿಂದ ಆಕ್ರೋಶಗೊಂಡಿದೆ. ಒಂದು ತನ್ನ ಭದ್ರಕೋಟೆಯಲ್ಲಿ ಕಾಂಗ್ರೆಸ್ ನಾಯಕರು ಗುಡುಗಿರುವುದು ಇನ್ನೊಂದು ಜೆಡಿಎಸ್‌ನ ಘಟಾನುಘಟಿ ನಾಯಕರ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಗುಡುಗಿರುವುದು. ಕಾಂಗ್ರೆಸ್‌ನ ಎಲ್ಲಾ ನಾಯಕರು ಜೆಡಿಎಸ್ ವಿರುದ್ಧವಾಗಿ ಗುಡುಗಿದ್ದಾರೆ. ಆದರೆ, ಬಿಜೆಪಿಯನ್ನು ಈ ಸಮಾವೇಶದಲ್ಲಿ ಕಾಂಗ್ರೆಸ್ ಟಾರ್ಗೆಟ್ ಮಾಡಿಲ್ಲ. ಇಷ್ಟಾದರೂ, ಬಿಜೆಪಿ ನಾಯಕರು ಸಹ ಈ ಸಮಾವೇಶದ ಬಗ್ಗೆ ರಿಯಾಕ್ಟ್ ಮಾಡುತ್ತಿದ್ದಾರೆ.

ಇದೀಗ ಕಾಂಗ್ರೆಸ್ ಸಮಾವೇಶದ ಬಗ್ಗೆ ಮಾತನಾಡಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ವಿರುದ್ಧ ವಾಗ್ದಾಳಿ ಮಾಡಿದ್ದಾರೆ. ಇನ್ನು ಅಲ್ಪಸಂಖ್ಯಾತ ಶಿಕ್ಷಣ ಕಾಯ್ದೆ ತಿದ್ದುಪಡಿಗೆ ಸಚಿವ ಸಂಪುಟ ಒಪ್ಪಿಗೆ ವಿಚಾರವಾಗಿ ಮಾತನಾಡಿರುವ ಅವರು, ಸಿದ್ದರಾಮಯ್ಯಗೆ ಸಾಬ್ರು ಅಂದರೆ ಬಹಳ ಪ್ರೀತಿ. ಅವರಿಗೆ ಹಿಂದೂಗಳ ಪೇಟ, ಕುಂಕುಮ ಆಗಿಬರೋದಿಲ್ಲ. ಹೀಗಾಗಿ, ಮುಸ್ಲಿಮರಿಗೆ ಕಾಂಟ್ರಾಕ್ಟ್ ಹಾಗೂ ಶಿಕ್ಷಣದಲ್ಲಿ ರಿಸರ್ವೇಶನ್ ಕೊಡ್ತಿದ್ದಾರೆ ಎಂದು ದೂರಿದ್ದಾರೆ.
ಈ ಕಾಂಗ್ರೆಸ್‌ನವರು ಇನ್ನು ಮೂರು ವರ್ಷ ಏನು ಮಾಡ್ತಾರೆ ಮಾಡಲಿ. ಮೂರು ವರ್ಷದ ನಂತರ ನಮ್ಮ ಸರ್ಕಾರ ಬರುತ್ತೆ ಆಗ ಎಲ್ಲವನ್ನೂ ಕಿತ್ತೊಗಿತೇವೆ. ನಮ್ಮ ಸರ್ಕಾರ ಬರೋದು ಗ್ಯಾರಂಟಿ ಆಗೆಲ್ಲವನ್ನೂ ತೆಗೆದು ಹಾಕ್ತೀವಿ. ಆದರೆ, ಇನ್ನು ಮೂರು ವರ್ಷವಾದರೂ ಸರ್ಕಾರ ಇರುತ್ತೋ ಇಲ್ವೋ ನೋಡೋಣ ಎಂದಿದ್ದಾರೆ.

ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಏನು ಮಾಡ್ತಾರೆ ನೋಡೋಣ. ನೆನ್ನೆ ಎಲ್ಲಾ ಕಡೆ ಸಿದ್ದರಾಮಯ್ಯ ಫೋಟೋನೇ ಇತ್ತು. ಡಿ.ಕೆ ಶಿವಕುಮಾರ್ ಅವರ ಫೋಟೋನೇ ಕಾಣಿಸಲಿಲ್ಲ. ಅದನ್ನು ನೋಡಿ ಬಿಟ್ಟರೆ ಅದರಲ್ಲಿ ಸಿದ್ದರಾಮಯ್ಯ ಶಕ್ತಿ ಪ್ರದರ್ಶನ ಇದೆ ಅಂತ ಗೊತ್ತಾಗುತ್ತೆ. ಸಿದ್ದು ಹಿಂದೆ ಡಿಕೆಶಿ ಬಂಡೆಯಾಗಿ ನಿಲ್ತೇನೆ ಎನ್ನುವ ಹೇಳಿಕೆಯ ಬಗ್ಗೆ ಮಾತನಾಡಿದ ಅವರು, ಕನಕಪುರ ಬಂಡೆ ಹೇಗೆ ಹೊಡಿತಿರಿ ಹಾಗೆ ಒಡೆಯುತ್ತೆ. ಆದರೆ ನಮ್ಮ ಉತ್ತರ ಕರ್ನಾಟಕ ಬಂಡೆ ಒಡೆಯುವುದಿಲ್ಲ ಅದು ಸುಡುಗಾಡ ಬಂಡೆ ಎಂದಿದ್ದಾರೆ ಯತ್ನಾಳ್. ಬೆಂಗಳೂರು ಫುಟ್‌ಪಾತ್‌ನ ಮೇಲೆ ಕನಕಪುರ ಬಂಡೆಯನ್ನು ಹಾಕಿರುತ್ತಾರೆ. ಹೆಂಗ್ ಹೊಡಿತೀರಿ ಹಾಗೆ ಹೊಡಿಯುತ್ತೆ ಎಂದು ಮಾರ್ಮಿಕವಾಗಿ ವ್ಯಂಗ್ಯ ಮಾಡಿದ್ದಾರೆ.
ಇನ್ನು ಹಾಸನದಲ್ಲಿ ನಡೆದ ಸಮಾವೇಶದ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ವಿರುದ್ಧ ಜೆಡಿಎಸ್ ಸಹ ತಿರುಗಿ ಬಿದ್ದಿದೆ. ಈ ಸಂಬಂಧ ಜೆಡಿಎಸ್ ಸರಣಿ ಟ್ವೀಟ್ ಮಾಡಿ ಕಾಂಗ್ರೆಸ್‌ನ ಮೇಲೆ ಆಕ್ರೋಶ ಹೊರ ಹಾಕಿದೆ.












Click it and Unblock the Notifications