ನಾಳೆ ಬಿಜೆಪಿ ಶಾಸಕಾಂಗ ಸಭೆ; ಯಾರಾಗ್ತಾರೆ ವಿಪಕ್ಷ ನಾಯಕ?
ಬೆಂಗಳೂರು, ನವೆಂಬರ್ 11: ಬಿಜೆಪಿ ಕರ್ನಾಟಕ ರಾಜ್ಯಾಧ್ಯಕ್ಷರಾಗಿ ಶಿಕಾರಿಪುರ ಶಾಸಕರಾದ ಬಿ ವೈ ವಿಜಯೇಂದ್ರ ಅವರನ್ನು ಶುಕ್ರವಾರ ಬಿಜೆಪಿ ಹೈಕಮಾಂಡ್ ಆಯ್ಕೆ ಮಾಡಿದ್ದು, ಇದೀಗ ಬಿಜೆಪಿ ಹೈಕಮಾಂಡ್ ಗೆ ವಿಪಕ್ಷ ನಾಯಕನ ಆಯ್ಕೆಗೆ ದೊಡ್ಡ ತಲೆನೋವಾಗಿದೆ.
ಸುಮಾರು ಆರು ತಿಂಗಳಿಂದ ಪ್ರತಿಪಕ್ಷದ ನಾಯಕನ ಆಯ್ಕೆ ಕುರಿತು ಬಿಜೆಪಿ ಪಾಳಯದಲ್ಲಿ ಚರ್ಚೆಯಾಗುತ್ತಿದ್ದು, ಶುಕ್ರವಾರ ಸಂಜೆ 6 ಗಂಟೆಗೆ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ. ಈಗಾಗಲೇ ವಿಪಕ್ಷ ನಾಯಕನ ಆಯ್ಕೆ ಕುರಿತು ಬಿಜೆಪಿಯ ಕೇಂದ್ರ ಘಟಕದಿಂದ ವೀಕ್ಷಕರು ಆಗಮಿಸಲಿದ್ದಾರೆ.

ಅವರು ಶಾಸಕರೊಂದಿಗೆ ಸಮಾಲೋಚನೆ ನಡೆಸಿ ವಿಧಾನಸಭೆಯ ಪ್ರತಿಪಕ್ಷದ ನಾಯಕನ ಜವಾಬ್ದಾರಿ ಹೊರುವ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಬಗ್ಗೆ ಅಭಿಪ್ರಾಯ ಸಂಗ್ರಹಿಸಿ, ಹೈಕಮಾಂಡ್ ಮಾಹಿತಿ ನೀಡಲಿದ್ದಾರೆ.
ವೀಕ್ಷಕರು ಶಾಸಕರ ಅಭಿಪ್ರಾಯ ಸಂಗಹಿಸಿ ದೆಹಲಿಗೆ ತೆರಳಿದ ಬಳಿಕ ವರಿಷ್ಠರೊಂದಿಗೆ ಚರ್ಚಿಸಿ ನಂತರ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ. ಅಲ್ಲದೇ ಮುಂದಿನ ವಾರ ನೂತನ ರಾಜ್ಯಾಧ್ಯಕ್ಷರಾಗಿರುವ ಬಿ ವೈ ವಿಜಯೇಂದ್ರ ಅವರು ದೆಹಲಿಗೆ ತೆರಳಲಿದ್ದು, ವಿರೋಧ ಪಕ್ಷದ ನಾಯಕನ ಆಯ್ಕೆ ಕುರಿತು ಹೈಕಮಾಂಡ್ ನಾಯಕರ ಜೊತೆಗೆ ಚರ್ಚೆ ನಡೆಸಲಿದ್ದಾರೆ.
ಇನ್ನೂ ಮುಂದಿನ ಲೋಕಸಭಾ ಚುನಾವಣೆ ಹಾಗೂ ಡಿಸೆಂಬರ್ 4 ರಂದು ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯಲಿದ್ದು, ಅಧಿವೇಶನದ ಒಳಗೆ ಬಿಜೆಪಿ ಹೈಕಮಾಂಡ್ ವಿರೋಧ ಪಕ್ಷದ ಆಯ್ಕೆಗೆ ಮುಂದಾಗಿದೆ. ಬಿಜೆಪಿ ಯಾವುದೇ ಹುದ್ದೆಗಳಿಗೆ ನೇಮಕ ಮಾಡುವ ಮೊದಲು ಜಾತಿ ಸಮೀಕರಣವನ್ನು ಗಮನದಲ್ಲಿಟ್ಟುಕೊಳ್ಳುತ್ತದೆ.
ಈಗಾಗಲೇ ಲಿಂಗಾಯತ ಸಮುದಾಯವನ್ನ ಗಮನದಲ್ಲಿಟ್ಟುಕೊಂಡು ಲಿಂಗಾಯತ ಹಿರಿಯ ನಾಯಕ ಬಿ ಎಸ್ ಯಡಿಯೂರಪ್ಪ ಅವರ ಪುತ್ರ ಬಿ ವೈ ವಿಜಯೇಂದ್ರ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟವನ್ನ ಹೈಕಮಾಂಡ್ ನೀಡಿದ್ದು, ಇದೀಗ ಯಾವ ಸಮುದಾಯದ ನಾಯಕನಿಗೆ ವಿಪಕ್ಷ ಸ್ಥಾನವನ್ನ ಹೈಕಮಾಂಡ್ ನೀಡುತ್ತೇ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

ವಿರೋಧ ಪಕ್ಷ ನಾಯಕ ಹುದ್ದೆಗೆ ಒಕ್ಕಲಿಗರು ಮತ್ತು ಒಬಿಸಿ ನಾಯಕರಿಗೆ ಪ್ರಾತಿನಿಧ್ಯವನ್ನು ನೀಡುವ ನಿರೀಕ್ಷೆಯಿದೆ. ಪಕ್ಷವು ಒಕ್ಕಲಿಗ ಅಥವಾ ಇತರ ಹಿಂದುಳಿದ ವರ್ಗಗಳ (ಒಬಿಸಿ) ನಾಯಕನನ್ನು ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಆಯ್ಕೆ ಮಾಡಬಹುದು ಎನ್ನಲಾಗಿದ್ದು, ವಿಧಾನಸಭೆ ಮತ್ತು ಪರಿಷತ್ತಿನಲ್ಲಿ ವಿವಿಧ ಸಮುದಾಯಗಳ ಪ್ರತಿಪಕ್ಷ ನಾಯಕರನ್ನು ನೇಮಿಸುವ ಸಾಧ್ಯತೆ ಇದೆ.
ಪ್ರತಿಪಕ್ಷ ನಾಯಕ ಸ್ಥಾನವನ್ನು ಒಕ್ಕಲಿಗ ಸಮುದಾಯಕ್ಕೆ ನೀಡಲು ಹೈಕಮಾಂಡ್ ನಿರ್ಧರಿಸಿದರೆ, ಮಾಜಿ ಸಚಿವರಾದ ಡಾ.ಅಶ್ವಥ್ ನಾರಾಯಣ್, ಆರ್.ಅಶೋಕ ಮತ್ತು ಆರಗ ಜ್ಞಾನೇಂದ್ರ ಅವರು ರೇಸ್ ನಲ್ಲಿದ್ದಾರೆ. ಇನ್ನೂ ಒಬಿಸಿ ನಾಯಕರಿಗೆ ಪ್ರಾತಿನಿಧ್ಯ ನೀಡಲು ಪಕ್ಷ ನಿರ್ಧರಿಸಿದರೆ, ಕಾರ್ಕಳ ಶಾಸಕ ವಿ ಸುನಿಲ್ ಕುಮಾರ್ ಅವರು ಪ್ರಮುಖ ಆಯ್ಕೆಯಾಗಬಹುದು ಎಂಬ ಮಾತುಗಳು ಕೇಳಿ ಬಂದಿವೆ. ಅಲ್ಲದೇ ಲಿಂಗಾಯತ ನಾಯಕರಾಗಿರುವ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಸಹ ರೇಸ್ ನಲ್ಲಿದ್ದಾರೆ.
ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕನ ವಿಷಯಕ್ಕೆ ಬಂದರೆ, ಒಬಿಸಿ ನಾಯಕನನ್ನು ಆಯ್ಕೆ ಮಾಡಲು ಪಕ್ಷ ನಿರ್ಧರಿಸಿದರೆ, ಕೋಟಾ ಶ್ರೀನಿವಾಸ ಪೂಜಾರಿಗೆ ಮತ್ತೊಮ್ಮೆ ಅವಕಾಶ ಸಿಗಬಹುದು ಎಂದು ಹೇಳಲಾಗಿದೆ.












Click it and Unblock the Notifications