ನಾಯಕತ್ವ ತಿಕ್ಕಾಟ: ಬಿಜೆಪಿ ರಾಜ್ಯ ಉಸ್ತುವಾರಿ ಸಭೆಯಲ್ಲಿ ಬಂಡಾಯ ಸಚಿವರು ಗಪ್-ಚುಪ್!
ಬೆಂಗಳೂರು, ಜೂನ್ 16: ಕರ್ನಾಟಕದಲ್ಲಿ ನಡೆಯುತ್ತಿರುವ ಇತ್ತೀಚಿನ ರಾಜಕೀಯ ಬೆಳವಣಿಗೆಗಳಿಂದ ಭಾರತೀಯ ಜನತಾ ಪಕ್ಷ ಒಡೆದ ಮನೆ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಬಣ ರಾಜಕಾರಣಕ್ಕೆ ಅಂತ್ಯ ಹಾಡುವ ನಿಟ್ಟಿನಲ್ಲಿ ನಡೆದ ಸಭೆಯಲ್ಲಿ ಆಗಿದ್ದೇನು ಎಂಬ ಕುತೂಹಲಕ್ಕೆ ಉತ್ತರ ಸಿಕ್ಕಿದೆ.
ಬೆಂಗಳೂರಿನಲ್ಲಿ ಬುಧವಾರ ಕರ್ನಾಟಕ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ನೇತೃತ್ವದಲ್ಲಿ ಮಹತ್ವದ ಸಭೆ ನಡೆಸಲಾಗಿತ್ತು. ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಸಚಿವರು ಮತ್ತು ಶಾಸಕರ ಜೊತೆಗೆ ಮಹತ್ವದ ಚರ್ಚೆ ನಡೆಸಲಾಗುತ್ತದೆ ಎಂದೇ ನಿರೀಕ್ಷಿಸಲಾಗಿತ್ತು.
ಪಕ್ಷದಲ್ಲಿ ಭಿನ್ನಾಭಿಪ್ರಾಯವಿಲ್ಲ; ಅರುಣ್ ಸಿಂಗ್
ಬುಧವಾರ ನಡೆದ ಸಭೆಯಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ. ಕೇವಲ ಸರ್ಕಾರಿ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸುವ ಬಗ್ಗೆ ಚರ್ಚೆಯಾಗಿದೆ. ಇದರ ಜೊತೆ ಸರ್ಕಾರದ ಯೋಜನೆಗಳ ಕುರಿತು ಜನರಿಗೆ ಮನವರಿಕೆ ಮಾಡಿಕೊಡುವ ಬಗ್ಗೆ ಮಾತ್ರ ಮಾತುಕತೆ ನಡೆಸಲಾಯಿತು ಎಂದು ರಾಜ್ಯ ಬಿಜೆಪಿ ಉನ್ನತ ಮೂಲಗಳಿಂದ ಮಾಹಿತಿ ನೀಡಿವೆ.

ಬಾಯಿ ಮುಚ್ಚಿಕೊಂಡು ಕುಳಿತಿದ್ದರಾ ಸಚಿವರು?
ಕರ್ನಾಟಕದ ಮುಖ್ಯಮಂತ್ರಿ ಸ್ಥಾನದಲ್ಲಿ ಬಿ ಎಸ್ ಯಡಿಯೂರಪ್ಪ ಬದಲಿಗೆ ಬೇರೊಬ್ಬ ನಾಯಕರನ್ನು ಆಯ್ಕೆ ಮಾಡುವ ಸುತ್ತ ಚರ್ಚೆಗಳು ನಡೆಯುತ್ತವೆ ಅಂದುಕೊಳ್ಳಲಾಗಿತ್ತು. ಆದರೆ ತೀವ್ರ ಕುತೂಹಲ ಕೆರಳಿಸಿದ ಸಭೆಯಲ್ಲಿ ನಡೆದಿದ್ದೇ ಬೇರೆಯಾಗಿದೆ. ಅರುಣ್ ಸಿಂಗ್ ನೇತೃತ್ವದ ಸಭೆಯಲ್ಲಿ ಯಾವುದೇ ಸಚಿವರಿಗೂ ಮಾತನಾಡಲು ಅವಕಾಶವಿರಲಿಲ್ಲ ಎಂದು ಹೇಳಲಾಗುತ್ತಿದೆ.

ಬಂಡಾಯ ಶಮನಕ್ಕೆ ಸಚಿವರ ಜೊತೆ ಪ್ರತ್ಯೇಕ ಮಾತುಕತೆ
ಬುಧವಾರ ನಡೆಸಿದ ಸಭೆಯಲ್ಲಿ ಕೇವಲ ಸಚಿವರಿಗೆ ಸಲಹೆ ನೀಡಿದ್ದಷ್ಟೇ ಅರುಣ್ ಸಿಂಗ್ ಕೆಲಸವಾಗಿತ್ತು. ಗುರುವಾರ ಒನ್ ಟು ಒನ್ ಸಭೆಯಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಚರ್ಚೆ ನಡೆಸುವ ಸಾಧ್ಯತೆಗಳು ಹೆಚ್ಚಾಗಿವೆ. ಎಲ್ಲ ಸಚಿವರು ಮತ್ತು ಶಾಸಕರಿಂದ ನಾಯಕತ್ವ ಬದಲಾವಣೆ ಬಗ್ಗೆ ಅಭಿಪ್ರಾಯ ಸಂಗ್ರಹಿಸಲು ಯೋಜಿಸಲಾಗಿದೆ. ಶಾಸಕರ ಜೊತೆ, ಸಚಿವರಿಗೂ ಅವಕಾಶ ನೀಡಲಾಗಿದ್ದು, ತಮ್ಮ ಅಭಿಪ್ರಾಯ ತಿಳಿಸಲು ಅವಕಾಶ ಕಲ್ಪಿಸಲಾಗಿದೆ.

ಬಂಡಾಯ ಶಾಸಕರಿಂದ ಅರುಣ್ ಸಿಂಗ್ ಭೇಟಿಗೆ ಸಮಯ
ಬೆಂಗಳೂರಿನ ಕುಮಾರಕೃಪಾ ಅತಿಥಿ ಗೃಹದಲ್ಲಿ ಗುರುವಾರ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಜೊತೆ ಚರ್ಚೆಗೆ 30 ಬಿಜೆಪಿ ಶಾಸಕರು ಸಮಯ ಕೋರಿದ್ದಾರೆ. ಬೆಳಗ್ಗೆ 9 ಗಂಟೆಗೆ ಅರುಣ್ ಸಿಂಗ್ ಭೇಟಿ ಮಾಡಿ ಚರ್ಚೆ ನಡೆಸುವುದಕ್ಕೆ ಶಾಸಕರು ಹಾಗೂ ಸಚಿವರು ಮುಂದಾಗಿದ್ದಾರೆ. ಕುಮಾರ್ ಬಂಗಾರಪ್ಪ, ಹರತಾಳು ಹಾಲಪ್ಪ, ಸಿದ್ದು ಸವದಿ, ಸೋಮಶೇಖರ್ ರೆಡ್ಡಿ, ಬಸನಗೌಡ ಪಾಟೀಲ್ ಯತ್ನಾಳ್, ಮಹೇಶ್ ಕುಮಟಳ್ಳಿ, ರಾಜೇಶ್ ಗೌಡ, ಜ್ಯೋತಿ ಗಣೇಶ್, ಪರಣ್ಣ ಮುನವಳ್ಳಿ ಸೇರಿದಂತೆ ಹಲವು ಶಾಸಕರು ಮತ್ತು ಸಚಿವರ ಜೊತೆಗೆ ಅರುಣ್ ಸಿಂಗ್ ಚರ್ಚಿಸಲಿದ್ದಾರೆ ಎಂದು ತಿಳಿದು ಬಂದಿದೆ.

ಶಾಸಕರು, ಸಚಿವರ ಜೊತೆಗೆ ಪ್ರತ್ಯೇಕ ಮಾತುಕತೆ
ಸ್ವತಃ ಸಿಎಂ ಬಿ ಎಸ್ ಯಡಿಯೂರಪ್ಪ ವಿರುದ್ಧವೇ ಒಂದು ಗುಂಪು ಆರೋಪಿಸುತ್ತಿರುವ ಹಿನ್ನೆಲೆ ಶಾಸಕರು ಮತ್ತು ಸಚಿವರ ಜೊತೆಗೆ ಅರುಣ್ ಸಿಂಗ್ ಪ್ರತ್ಯೇಕವಾಗಿ ಚರ್ಚೆ ನಡೆಸಲಿದ್ದಾರೆ. ಅತೃಪ್ತ ಬಣದಲ್ಲಿ ಗುರುತಿಸಿಕೊಂಡಿರುವ ಹಾಗೂ ಸಿಎಂ ವಿರುದ್ಧ ಅಸಮಾಧಾನ ಹೊಂದಿರುವ ಶಾಸಕರು ಮತ್ತು ಸಚಿವರ ಅಭಿಪ್ರಾಯ ಸಂಗ್ರಹಿಸಲಾಗುತ್ತದೆ. ಈ ಸಭೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಗೆ ಅವಕಾಶ ಇರುವುದಿಲ್ಲ ಎಂದು ತಿಳಿದು ಬಂದಿದೆ.

ಹೈಕಮಾಂಡ್ ಮಟ್ಟದಲ್ಲಿ ನಾಯಕರ ಲೆಕ್ಕಾಚಾರ ಏನು?
ರಾಜ್ಯದಲ್ಲಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೆಸರಿನಲ್ಲಿ ಬೇರೊಬ್ಬರು ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಸಚಿವರು ಮೇಲಿಂದ ಮೇಲೆ ಆರೋಪಿಸುತ್ತಿದ್ದಾರೆ. ಸಿಎಂ ಸ್ಥಾನಕ್ಕೆ ಬೇರೊಬ್ಬ ನಾಯಕರ ಆಯ್ಕೆ ಕುರಿತು ಒಂದು ಬಣ ಬಿಜೆಪಿ ಹೈಕಮಾಂಡ್ ನಾಯಕರಿಗೆ ದೂರು ಸಲ್ಲಿಸಿದೆ. ರಾಜ್ಯದಲ್ಲಿ ಬಂಡಾಯವೆದ್ದ ನಾಯಕರು ಆಗಾಗ ದೆಹಲಿ ಟೂರ್ ಹೋದ ಬೆನ್ನಲ್ಲೇ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ರನ್ನು ಹೈಕಮಾಂಡ್ ನಾಯಕರು ಕಳುಹಿಸಿದ್ದಾರೆ. ರಾಜ್ಯ ಬಿಜೆಪಿಯಲ್ಲಿ ಸೃಷ್ಟಿಯಾಗಿರುವ ಬಿಕ್ಕಟ್ಟು ಮತ್ತು ವಾಸ್ತವ ಪರಿಸ್ಥಿತಿಯನ್ನು ಅರಿತುಕೊಂಡು ಮುಂದಿನ ತೀರ್ಮಾನ ತೆಗೆದುಕೊಳ್ಳುವುದಕ್ಕೆ ನಾಯಕರು ಯೋಜನೆ ಹಾಕಿಕೊಂಡಿದ್ದಾರೆ.