ಮೋದಿ ಸಾಧನೆ ಜನರಿಗೆ ತಲುಪಿಸಲು ಡಿಜಿಟಲ್ ಗಾಡಿ!
ಬೆಂಗಳೂರು, ಮಾ.29 : ಕರ್ನಾಟಕ ಬಿಜೆಪಿ ಚುನಾವಣಾ ಪ್ರಚಾರಕ್ಕೆ ಡಿಜಿಟಲ್ ಟಜ್ ನೀಡಿದೆ. ಪಕ್ಷದ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಕುರಿತು ಸಾಕ್ಷ್ಯಚಿತ್ರ ಇರುವ ಡಿಜಿಟಲ್ ಪ್ರಚಾರದ ವಾಹನಗಳಿಗೆ ಚಾಲನೆ ನೀಡಿದ್ದು, ಪ್ರತಿ ಜಿಲ್ಲೆಗೊಂದರಂತೆ 28 ವಾಹನಗಳು ರಾಜ್ಯಾದ್ಯಂತ ಪ್ರಚಾರ ಕಾರ್ಯ ಕೈಗೊಳ್ಳಲಿವೆ.
ಬೆಂಗಳೂರಿನಲ್ಲಿ ಶುಕ್ರವಾರ ಬೆಂಗಳೂರು ದಕ್ಷಿಣ ಕ್ಷೇತ್ರದ ಅಭ್ಯರ್ಥಿ ಅನಂತ್ ಕುಮಾರ್ ಚಾಲನೆ ನೀಡಿದ್ದಾರೆ. ಬೆಂಗಳೂರು ಉತ್ತರ ಕ್ಷೇತ್ರದ ಅಭ್ಯರ್ಥಿ ಡಿ.ವಿ.ಸದಾನಂದಗೌಡ, ಮಾಜಿ ಸಚಿವ ವಿ.ಸೋಮಣ್ಣ, ವಿಧಾನಪರಿಷತ್ ಸದಸ್ಯರಾದ ಅಶ್ವಥ್ ನಾರಾಯಣ, ವೈ.ಎ.ನಾರಾಯಣ ಸ್ವಾಮಿ ಸೇರಿದಂತೆ ಹಲವಾರು ಮುಖಂಡರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. [ಮೋದಿ ಮಾತನ್ನು ಕನ್ನಡಲ್ಲಿ ಕೇಳಿರಿ]
ಬೆಂಗಳೂರಿನಲ್ಲಿ ನಾಲ್ಕು ವಾಹನಗಳನ್ನು ಬಿಡುಗಡೆ ಮಾಡಲಾಗಿದ್ದು, ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ 28 ಎಲ್‌ಇಡಿ ಪ್ರಚಾರದ ವಾಹನಗಳು ಸಂಚರಿಸಲಿವೆ. ನರೇಂದ್ರ ಮೋದಿ ಕುರಿತ ಸಾಕ್ಷ್ಯಚಿತ್ರದ ಜತೆಗೆ ಗುಜರಾತ್ ಅಭಿವೃದ್ಧಿ ಬಗ್ಗೆಯೂ ಡಿಜಿಟಲ್ ಚಿತ್ರಯಾತ್ರೆ ಮೂಲಕ ಪ್ರಚಾರ ಮಾಡಲಾಗುತ್ತದೆ. ಹೀಗಿದೆ ನೋಡಿ ಡಿಜಿಟಲ್ ಪ್ರಚಾರದ ಗಾಡಿ

ಪ್ರಚಾರಕ್ಕಾಗಿ ಎಲ್ಇಡಿ ವಾಹನ
ಚುನಾವಣೆಯಲ್ಲಿ ತನ್ನ ವಿಚಾರಗಳನ್ನು ಮತ್ತು ನರೇಂದ್ರ ಮೋದಿ ನೇತೃತ್ವದ ಭಾರತ ಅಭಿವೃದ್ಧಿಯನ್ನು ಬಿಂಬಿಸಲು ಬಿಜೆಪಿ ಎಲ್‌ಇಡಿ ವ್ಯಾನ್‌ಗಳನ್ನು ಬಳಸುತ್ತಿದೆ. ಈ ವಾಹನಗಳು ರಾಜ್ಯದ ಎಲ್ಲಾ 28 ಲೋಕಸಭಾ ಕ್ಷೇತ್ರಗಳಿಗೆ ಒಂದರಂತೆ ಸಂಚರಿಸಿ ಪ್ರಚಾರ ನಡೆಸಲಿವೆ.

ವಾಹನದಲ್ಲಿ ಏನಿದೆ?
ಡಿಜಿಟಲ್ ವಾಹನ 15*7 ಅಡಿ ವಿಸ್ತೀರ್ಣ ಹೊಂದಿದೆ. ನರೇಂದ್ರ ಮೋದಿ ಅವರ ಕುರಿತ ಸಾಕ್ಷ್ಯಚಿತ್ರವನ್ನು ಈ ಎಲ್ಇಡಿ ಪರದೆಯಲ್ಲಿ ಪ್ರದರ್ಶಿಸಲಾಗುತ್ತದೆ. ಯುಪಿಎ ಸರ್ಕಾರದ ವೈಫಲ್ಯಗಳು ಮತ್ತು ಕಳೆದ 10 ವರ್ಷಗಳಲ್ಲಿ ನಡೆಸಿರುವ ಹಗರಣಗಳ ಮಾಹಿತಿಯನ್ನು ಪ್ರದರ್ಶಿಸಲಿದೆ.

ರಾಜ್ಯ ಬಿಜೆಪಿ ಘಟಕದ ವಿಡಿಯೋ
ಗುಜರಾತ್ ಅಭಿವೃದ್ಧಿ, ನರೇಂದ್ರ ಮೋದಿ ಅವರ ಸಾಕ್ಷ್ಯಚಿತ್ರದ ಜೊತೆಗೆ ರಾಜ್ಯ ಬಿಜೆಪಿ ಘಟಕ ತಯಾರು ಮಾಡಿರುವ ಒಂದು ನಿಮಿಷದ 10 ವಿಡಿಯೋಗಳನ್ನು ಪ್ರದರ್ಶಿಸಲಾತ್ತದೆ. ಶುಕ್ರವಾರದಿಂದ ಆರಂಭವಾಗಿರುವ ಈ ಪ್ರಚಾರ 20 ದಿನಗಳ ಕಾಲ ರಾಜ್ಯದಲ್ಲಿ ನಡೆಯಲಿದೆ.

ಭಾನುವಾರ ಮೋದಿ ಆಗಮನ
ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಮಾ.30ರ ಭಾನುವಾರ ಬೆಳಗಾವಿಗೆ ಆಗಮಿಸಲಿದ್ದಾರೆ. ನಗರದ ಸಿಪಿಎಡ್ ಮೈದಾನದಲ್ಲಿ ಸಂಜೆ 4 ಗಂಟೆಗೆ ನರೇಂದ್ರ ಮೋದಿ ಸಮಾವೇಶ ನಡೆಯಲಿದೆ.












Click it and Unblock the Notifications