ಲೋಕ ಸಮರಕ್ಕೆ ಕಮಲ-ದಳ ದೋಸ್ತಿ!?: ಸಂಪುಟದ ಎಲ್ಲಾ ಸಚಿವರೊಂದಿಗೆ ಖರ್ಗೆ ಮೀಟಿಂಗ್! ಇಲ್ಲಿದೆ ಕೈ ಪಾಳಯದ ಲೆಕ್ಕಾಚಾರ!?
ಬೆಂಗಳೂರು, ಜೂನ್ 17: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯಗಳಿಸಿರುವ ಕಾಂಗ್ರೆಸ್ ಗೆ 2024 ರ ಲೋಕಸಭಾ ಚುನಾವಣೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಇತ್ತ ದಕ್ಷಿಣ ಭಾರತದಲ್ಲಿ ಭದ್ರ ಕೋಟೆ ಕಟ್ಟಿದ್ದ ಬಿಜೆಪಿಗೆ ಈ ಬಾರೀ ಚುನಾವಣೆಯನ್ನ ಹೀನಾಯ ಸೋಲು ಅನುಭವಿಸಿ ಲೋಕಸಮರಕ್ಕೆ ಸಜ್ಜಾಗುತ್ತಿದೆ.
ಈಗಾಗಲೇ ರಾಜ್ಯದಲ್ಲಿ ಮೂರು ವರ್ಷಗಳ ಕಾಲ ಆಡಳಿತ ನಡೆಸಿ ಹೀನಾಯವಾಗಿ ಸೋಲು ಅನುಭವಿಸಿರುವ ಬಿಜೆಪಿ ಹಾಗೂ ದಳಪತಿಗಳ ಭದ್ರಕೋಟೆಯಾಗಿದ್ದ ಹಲವು ಕ್ಷೇತ್ರಗಳನ್ನ ವಿಧಾನಸಭಾ ಚುನಾವಣೆಯಲ್ಲಿ ಕಳೆದುಕೊಂಡಿರುವ ಜೆಡಿಎಸ್ ಲೋಕಸಭಾ ಚುನಾವಣೆಯಲ್ಲಿ ಮೈತ್ರಿಗೆ ಸಿದ್ದತೆ ನಡೆಸಿದೆ ಎಂದು ಹೇಳಲಾಗಿದ್ದು, ಬಿಜೆಪಿ ಹೈಕಮಾಂಡ್ ಹಾಗೂ ದೊಡ್ಡಗೌಡರು ಈ ಬಗ್ಗೆ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.

ಶತ್ರುವಿನ ಶತ್ರು ಮಿತ್ರ ಎಂಬ ಅಸ್ತ್ರ ಪ್ರಯೋಗಕ್ಕೆ ಬಿಜೆಪಿ ಹಾಗೂ ಜೆಡಿಎಸ್ ಮುಂದಾಗಿದ್ದು, ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಠಕ್ಕರ್ ಕೊಡಲು ಜೆಡಿಎಸ್ ಹಾಗೂ ಬಿಜೆಪಿ ದೋಸ್ತಿಗೆ ಮುಂದಾಗಿವೆ ಎಂದು ಹೇಳಲಾಗಿದೆ.
ಸದ್ಯ ಸೋಲಿನಿಂದ ಚೇತರಿಸಿಕೊಂಡಿರುವ ಎರಡೂ ಪಕ್ಷಗಳು 2024 ರ ಲೋಕಸಭಾ ಚುನಾವಣೆ ಮೇಲೆ ಕಣ್ಣಿಟ್ಟಿದ್ದು, ವಿಧಾನಸಭಾ ಚುನಾವಣೆಯ ಸೋಲಿಗೆ ಕಾರಣಗಳನ್ನ ಕಂಡುಕಂಡಿರುವ ಬಿಜೆಪಿ. ಜಾಣ ನಡೆಗೆ ಮುಂದಾಗಿದ್ದು, ಲೋಕಸಭಾ ಚುನಾವಣೆಯಲ್ಲೂ ಈ ರೀತಿಯ ತಪ್ಪು ಮತ್ತೆ ಮರುಕಳಿಸಬಾರದು ಎಂದು ಮೈತ್ರಿಗೆ ಸಿದ್ದವಾಗಿದೆ ಎಂದು ಮೂಲಗಳು ತಿಳಿಸಿವೆ.

ಸಂಪುಟದ ಎಲ್ಲಾ ಸಚಿವರೊಂದಿಗೆ ಖರ್ಗೆ ಮೀಟಿಂಗ್!
ಜೂನ್ 21 ರಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆಯವರು ರಾಜ್ಯ ಸಚಿವರನ್ನ ದೆಹಲಿಗೆ ಕರೆದಿದ್ದು, ಲೋಕಸಭಾ ಚುನಾವಣೆಯ ಸಿದ್ದತೆ ಹಾಗೂ ಚುನಾವಣಾ ತಂತ್ರಗಾರಿಕೆ ಪಾಠ ಮಾಡಲಿದ್ದಾರೆ. ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಹಾಗೂ ಮಾಜಿ ಪ್ರಧಾನಿಗಳಾದ ಹೆಚ್ ಡಿ ದೇವೇಗೌಡು ಲೋಕಸಭಾ ಚುನಾವಣಾ ಕುರಿತು ಪಕ್ಷದೊಳಗೆ ಸಭೆ ನಡೆಸಿದ್ದಾರೆ.
ಇನ್ನೂ ವಿಧಾನಸಭಾ ಚುನಾವಣೆಯಂತೆಯೇ ಲೋಕಸಭಾ ಚುನಾವಣೆಯಲ್ಲಿ ಶ್ರಮವಹಿಸಿ ಪಕ್ಷವನ್ನ ಬಲಪಡಿಸಬೇಕು ಎನ್ನುವ ತಂತ್ರಗಾರಿಕೆಯ ವಿಚಾರವನ್ನ ಮಲ್ಲಿಕಾರ್ಜುನ್ ಖರ್ಗೆ ರಾಜ್ಯ ಸಚಿವರುಗಳ ಜೊತೆಗೆ ಚರ್ಚಿಸಲಿದ್ದಾರೆ. ಈಗಾಗಲೇ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ ಕೆ ಶಿವಕುಮಾರ್ ಅವರಿಗೆ ಲೋಕಸಭಾ ಚುನಾವಣಾ ಸಿದ್ದತೆಯ ಕುರಿತು ಮಲ್ಲಿಕಾರ್ಜುನ್ ಖರ್ಗೆ ಹಾಗೂ ರಾಹುಲ್ ಗಾಂಧಿ ಚರ್ಚಿಸಿದ್ದು, 20 ಕ್ಕಿಂತ ಹೆಚ್ಚಿನ ಸ್ಥಾನಗಳನ್ನ ಗೆಲ್ಲುವ ಟಾರ್ಗೆಟ್ ಹಾಕಿಕೊಂಡಿದ್ದಾರೆ.
ಇನ್ನೂ ಬಿಜೆಪಿಯ ಹಾಲಿ 13 ಜನ ಸಂಸದರಿಗೆ ಈ ಬಾರೀ ಟಿಕೆಟ್ ಮಿಸ್ ಆಗಲಿದ್ದು, ಆ ಲೋಕಸಭಾ ಕ್ಷೇತ್ರಗಳನ್ನ ಹೇಗೆ ಪಡೆಬೇಕು ಎನ್ನುವ ಚರ್ಚೆ ನಡೆಯಲಿದೆ. ಇನ್ನೂ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿಯ ಮೇಲೆ ಇದ್ದ 40% ಕಮಿಷನ್ ಆರೋಪ, ಭಷ್ಟಾಚಾರ ಪ್ರಕರಣಗಳನ್ನ ಬಯಲಿಗೆಳೆಯುವ ತಂತ್ರವನ್ನ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಮುನ್ನಲೆಗೆ ತರುವ ತಯಾರಿಯ ಪಾಠ ನಡೆಯಲಿದೆ ಎಂದು ಹೇಳಲಾಗಿದೆ.
ಇನ್ನೂ ವಿಧಾನಸಭಾ ಚುನಾವಣೆಯ ಗೆಲುವಿಗೆ ಪ್ರಮುಖ ಕಾರಣವಾಗಿದ್ದ ಗ್ಯಾರಂಟಿ ಘೋಷಣೆಗಳಲ್ಲಿ ಹಲವು ಗೊಂದಲಗಳಿದ್ದು, ಸರ್ಕಾರ ರಚನೆಯಾಗಿ ಮೊದಲ ಕ್ಯಾಬಿನೆಟ್ ನಲ್ಲಿ ಎಲ್ಲಾ ಗ್ಯಾರಂಟಿಗಳು ಜಾರಿ ಮಾಡುತ್ತೇವೆ ಎಂದು ಮಾತು ನೀಡಿದ್ದೇವೆ. ಅದರಂತೆ ಗ್ಯಾರಂಟಿಗಳನ್ನ ಅದಷ್ಟು ಬೇಗ ಜಾರಿಗೊಳಿಸಿ, ಪ್ರತಿಯೊಬ್ಬರಿಗೂ ತಲುಪಿಸುವ ಕೆಲಸ ಮಾಡಬೇಕು. ಇದು ಮುಂದೆ ಲೋಕಸಭಾ ಚುನಾವಣೆಗೂ ಸಹಾಯಕವಾಗಲಿದೆ ಎನ್ನುವ ಚರ್ಚೆ ನಡೆಯಲಿದೆ.
ಇನ್ನೂ ವಿಧಾನಸಭಾ ಚುನಾವಣೆಯ ಫಲಿತಾಂಶದ ಬಳಿಕ ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳನ್ನ ಕಳೆದುಕೊಳ್ಳುವ ಆತಂಕದಲ್ಲಿ ಮೈತ್ರಿಗೆ ಸಿದ್ದವಾಗಿರುವ ಬಿಜೆಪಿ ಚುನಾವಣೆಯಲ್ಲಿ ಗೆದ್ದೇ ಗೆಲ್ಲುವ 15 ರಿಂದ 18 ಕ್ಷೇತ್ರಗಳ ಬಗ್ಗೆ ಮಾತ್ರ ಹೆಚ್ಚಿನ ಗಮನ ಹರಿಸಲಿದೆ. ಜೆಡಿಎಸ್ ಗೆದ್ದೇ ಗೆಲ್ಲಬಹುದಾದ 5-6 ಕ್ಷೇತ್ರ ಗಳನ್ನು ಆ ಪಕ್ಷಕ್ಕೆ ಮಡುಗಟ್ಟಿದೆ ಎಂದು ಹೇಳಲಾಗಿದ್ದು, ಈ ಎಲ್ಲಾ ಅಂಶಗಳನ್ನ ಗಮನಿಸಿ ಸೂಕ್ತ ತಯಾರಿ ಹಾಗೂ ಸಮರ್ಥ ಅಭ್ಯರ್ಥಿಯನ್ನ ಕಣಕ್ಕಿಳಿಸುವ ಸಿದ್ದತೆಯ ಬಗ್ಗೆಯೂ ಚರ್ಚೆಯಾಗಲಿದೆ.
ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅತೀ ಹೆಚ್ಚು ಸ್ಥಾನಗಳನ್ನ ಗೆದ್ದು ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವುದರಿಂದ ಅದರ ಪರಿಣಾಮವಾಗಿ ಲೋಕಸಭಾ ಚುನಾವಣೆ ಮೇಲೂ ಆಗಬಹುದು ಎಂಬ ಚರ್ಚೆ ಕಮಲ ಪಾಳಯದಲ್ಲಿ ನಡೆದಿದೆ. ಅಲ್ಲದೇ ಭಾರತ್ ಜೋಡೋ ಯಾತ್ರೆಯೂ ಸಹ ಕರ್ನಾಟಕದ ಮೇಲೆ ಸಾಕಷ್ಟು ಪರಿಣಾಯ ಬೀರಲಿದೆ ಎನ್ನಲಾಗಿದ್ದು, ಪಕ್ಷವನ್ನ ಇನ್ನಷ್ಟು ಬಲಿಷ್ಠಗೊಳಿಸುವತ್ತ ಗಮನ ಹರಿಸುವ ಬಗ್ಗೆ ಚರ್ಚೆ ನಡೆಯಲಿದೆ ಎನ್ನಲಾಗಿದೆ.












Click it and Unblock the Notifications