BJP-JDS alliance: 6 ಲೋಕಸಭಾ ಸ್ಥಾನಗಳಿಗೆ ಬೇಡಿಕೆ- ಅಮಿತ್ ಶಾ, ಜೆಪಿ ನಡ್ಡಾರೊಂದಿಗೆ ಚರ್ಚಿಸಲು ಸಿದ್ದರಾದ ಎಚ್‌ಡಿಕೆ
ಬೆಂಗಳೂರು, ಅಕ್ಟೋಬರ್ 30: ಕರ್ನಾಟಕದಲ್ಲಿ ಲೋಕಸಭೆ ಸೀಟು ಹಂಚಿಕೆ ವಿಚಾರವಾಗಿ ಚರ್ಚಿಸಲು ಜೆಡಿಎಸ್ ನಾಯಕ ಎಚ್‌ಡಿ ಕುಮಾರಸ್ವಾಮಿ ಅವರು ನವೆಂಬರ್ 03 ರಂದು ನವದೆಹಲಿಗೆ ತೆರಳಲಿದ್ದಾರೆ. ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರನ್ನು ಭೇಟಿ ಮಾಡಿದ ಕೆಲವೇ ದಿನಗಳ ನಂತರ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರ ಜೊತೆ ಸಭೆ ನಡೆಸಲಿದ್ದಾರೆ.
ಲೋಕಸಭೆ ಚುನಾವಣೆಗೆ ಸೀಟು ಹಂಚಿಕೆಯನ್ನು ಅಂತಿಮಗೊಳಿಸಲು ಕುಮಾರಸ್ವಾಮಿ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ನವೆಂಬರ್ 3 ರಂದು ಭೇಟಿಯಾಗಲಿದ್ದಾರೆ.

ರಾಜ್ಯ ಬಿಜೆಪಿ ನಾಯಕರಿಗೆ ಈ ಬೆಳವಣಿಗೆಗಳ ಬಗ್ಗೆ ಯಾವುದೇ ಮಾಹಿತಿ ಇಲ್ಲವೆಂಬದು ಕುತೂಹಲಕ್ಕೆ ಕಾರಣವಾಗಿದೆ.
ಕುಮಾರಸ್ವಾಮಿ ಅವರು ತಮ್ಮ ಪುತ್ರ ನಿಖಿಲ್ ಅವರೊಂದಿಗೆ ಅಕ್ಟೋಬರ್ 22 ರಂದು ಗೋವಾ ಸಿಎಂ ಅವರನ್ನು ಭೇಟಿ ಮಾಡಿದ್ದರು. ಈ ವೇಳೆ, ಬಿಜೆಪಿ ಹೈಕಮಾಂಡ್ ಜೊತೆ ಮಾತುಕತೆ ನಡೆಸುವಂತೆ ಮನವಿ ಮಾಡಿದ್ದರು.
ಕರ್ನಾಟಕದಲ್ಲಿ ಸೀಟು ಹಂಚಿಕೆ ಕುರಿತು ಅಂತಿಮ ಸುತ್ತಿನ ಮಾತುಕತೆಗಾಗಿ ನವೆಂಬರ್ 3 ರಂದು ದೆಹಲಿಯಲ್ಲಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಲು ಬಿಜೆಪಿ ಹೈಕಮಾಂಡ್ ಒಪ್ಪಿಗೆ ನೀಡಿದೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ.

ಕುಮಾರಸ್ವಾಮಿ ಅವರು ತಮ್ಮ ಪತ್ನಿಯೊಂದಿಗೆ ಸದ್ಯ ದುಬೈನಲ್ಲಿದ್ದು, ಬಿಜೆಪಿ ಕೇಂದ್ರ ನಾಯಕರನ್ನು ಭೇಟಿ ಮಾಡಲು ನೇರವಾಗಿ ದೆಹಲಿಗೆ ತೆರಳಲಿದ್ದಾರೆ.
ಮೈತ್ರಿ ಕುರಿತು ರಾಜ್ಯ ಬಿಜೆಪಿ ನಾಯಕರ ಜೊತೆ ಯಾವುದೇ ಸಮಾಲೋಚನೆ ಇನ್ನೂ ನಡೆದಿಲ್ಲ.
ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಇನ್ನೂ ಸಮಾಲೋಚನೆ ನಡೆಯದ ಕಾರಣ ರಾಜ್ಯ ಬಿಜೆಪಿ ನಾಯಕರಿಗೆ ಬೆಳವಣಿಗೆಗಳ ಬಗ್ಗೆ ತಿಳಿದಿಲ್ಲ ಎಂದು ಹೇಳಲಾಗುತ್ತಿದೆ.
ಕುಮಾರಸ್ವಾಮಿ ಅವರು ಸೆಪ್ಟೆಂಬರ್ 22 ರಂದು ಅಮಿತ್ ಶಾ ಮತ್ತು ನಡ್ಡಾ ಅವರನ್ನು ಭೇಟಿ ಮಾಡಿದ್ದರು. ಆ ಬಳಿಕ ಬಿಜೆಪಿ ಹೈಕಮಾಂಡ್ ಮಾತುಕತೆಯನ್ನು ಮುಂದಕ್ಕೆ ಕೊಂಡೊಯ್ಯಲು ರಾಜ್ಯದಿಂದ ಯಾವುದೇ ನಾಯಕರನ್ನು ನಿಯೋಜಿಸಿಲ್ಲ. ಇದರಿಂದಾಗಿ ಜೆಡಿಎಸ್ ನಾಯಕರು ಗೋವಾ ಸಿಎಂ ಅವರನ್ನು ಭೇಟಿಯಾಗಬೇಕಾಯಿತು ಎಂದು ತಿಳಿದುಬಂದಿದೆ.

ಸೆಪ್ಟೆಂಬರ್ 22 ರಂದು ದೆಹಲಿಯಲ್ಲಿ ನಡೆದ ಸಭೆಯಲ್ಲೂ ಯಾವುದೇ ರಾಜ್ಯ ನಾಯಕರು ಹಾಜರಾಗಿರಲಿಲ್ಲ. ಈ ಕಾರಣ ಬಿಜೆಪಿ ಕೇಂದ್ರ ನಾಯಕರು ಗೋವಾ ಸಿಎಂ ಸಾವಂತ್ ಅವರಿಗೆ ಜೆಡಿಎಸ್ ನಾಯಕರೊಂದಿಗೆ ಸಂಹವನ ನಡೆಸುವ ಜವಾಬ್ದಾರಿ ನೀಡಿದ್ದರು.
ಎಚ್‌ಡಿ ಕುಮಾರಸ್ವಾಮಿ ಅವರು ಲೋಕಸಭೆ ಚುನಾವಣೆಗೆ ಜೆಡಿಎಸ್ 6 ಸ್ಥಾನಗಳನ್ನು ಕೇಳುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.
ಲೋಕಸಭೆ ಚುನಾವಣೆಗೆ ಐದರಿಂದ ಆರು ಸ್ಥಾನ ಪಡೆಯಲು ಜೆಡಿಎಸ್ ನಾಯಕರು ಮುಂದಾಗಿದ್ದಾರೆ ಎನ್ನಲಾಗಿದೆ. ಆದರೆ, ಜೆಡಿಎಸ್‌ಗೆ ನಾಲ್ಕು ಸ್ಥಾನ ಬಿಟ್ಟುಕೊಡಲು ಬಿಜೆಪಿ ನಾಯಕತ್ವ ಒಪ್ಪಿಗೆ ಸೂಚಿಸಿದೆ ಎನ್ನಲಾಗಿದೆ. ಸೀಟು ಹಂಚಿಕೆ ಸೂತ್ರದ ಕುರಿತು ಈ ವಾರ ಅಂತಿಮ ನಿರ್ಧಾರ ಹೊರಬೀಳುವ ನಿರೀಕ್ಷೆಯಿದೆ.
ಮಂಡ್ಯ, ಹಾಸನ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಕ್ಷೇತ್ರಗಳಿಗೆ ಜೆಡಿಎಸ್ ಬೇಡಿಕೆ ಇಡುವ ಸಾಧ್ಯತೆ ಇದೆ ಎನ್ನಲಾಗಿದೆ. 2019 ರ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದ 28 ಲೋಕಸಭಾ ಸ್ಥಾನಗಳ ಪೈಕಿ ಬಿಜೆಪಿ 25 ಸ್ಥಾನಗಳನ್ನು ಗೆದ್ದಿತ್ತು. ಜೆಡಿಎಸ್ ಒಂದು, ಕಾಂಗ್ರೆಸ್ ಒಂದು, ಪಕ್ಷೇತರರು ಒಂದು ಕ್ಷೇತ್ರದಲ್ಲಿ ಜಯಗಳಿಸಿದ್ದರು.












Click it and Unblock the Notifications