"ಬಿಜೆಪಿಯವರು ಈಗ ಹಿಂದೂ ವಿರೋಧಿಗಳಾಗಿದ್ದಾರೆ"
ಬಿಜೆಪಿ ನಾಯಕರು ಈಗ ಹಿಂದೂ ವಿರೋಧಿಗಳು ಆಗಿದ್ದಾರೆ. ಬಿಜೆಪಿ ಅವರು ಇದೀಗ ಹಿಂದೂ ವಿರೋಧಿಗಳಾಗಿ ಬದಲಾಗಿದ್ದಾರೆ ಎಂದು ಕಾಂಗ್ರೆಸ್ ಹೇಳಿದೆ. ಗಣೇಶ ಮೂರ್ತಿಯನ್ನು ನೀಡುವುದಕ್ಕೆ ವಿರೋಧಿಸುವ ಬಿಜೆಪಿ ಅವರಿಗೆ ಗಣೇಶನೆಂದರೆ ಅಲರ್ಜಿಯೇ ಎಂದು ಕಾಂಗ್ರೆಸ್ ಪ್ರಶ್ನೆ ಮಾಡಿದೆ. ಇತ್ತೀಚಿನ ದಿನಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಹಾಗೂ ಗಣೇಶ ಮೂರ್ತಿ ವಿಸರ್ಜನೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಹಾಗೂ ಬಿಜೆಪಿಯ ನಡುವೆ ವಾಕ್ಸಮರ ಮುಂದುವರಿದಿದೆ.
ಬಿಜೆಪಿ ಯಾವಾಗಲೂ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸುತ್ತಿರುತ್ತದೆ. ಇದೀಗ ಈ ಬೆಳವಣಿಗೆಯಲ್ಲಿ ಬಿಜೆಪಿಯ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ನಡೆಸಿದ್ದು, ಕಾಂಗ್ರೆಸ್ ಸದಸ್ಯತ್ವಕ್ಕೆ ಆಕ್ಷೇಪ ಮಾಡುತ್ತಿರುವ ಬಿಜೆಪಿ ಕರ್ನಾಟಕ ನಾಯಕರು ಚುನಾವಣೆಗಳಲ್ಲಿ ಏನೇನು ಹಂಚಿದ್ದರು ಎನ್ನುವ ಪಟ್ಟಿ ದೊಡ್ಡದಿದೆ ಎಂದು ಕಾಂಗ್ರೆಸ್ ಹೇಳಿದೆ. ಅಲ್ಲದೇ ಹಣ, ದೇವರ ಫೋಟೋ ನೀಡಿ ಪ್ರಮಾಣ ಮಾಡಿಸಿಕೊಂಡು, ದೇವರನ್ನು ಭಯ ತೋರಿಸಿ ಮತ ಹಾಕಿಸಿಕೊಳ್ಳುವ ಪ್ರಯತ್ನ ಮಾಡಿದ್ದು ಬಿಜೆಪಿಯವರೇ ಹೊರತು ನಾವಲ್ಲ. ಭ್ರಷ್ಟಾಚಾರಕ್ಕೆ ದೇವರನ್ನು ಬಳಸಿಕೊಳ್ಳುವುದು ಬಿಜೆಪಿಯ ಸಿದ್ಧ ಸೂತ್ರ, ಅದಕ್ಕೆ ಪರಶುರಾಮನ ಮೂರ್ತಿಯ ಹಗರಣವೇ ಸಾಕ್ಷಿ ಎಂದು ಹೇಳಿದೆ.

ಸದಸ್ಯತ್ವ ಅಭಿಯಾನ ಬಿಜೆಪಿ ಹೇಳಿದ್ದೇನು
ಕಾಂಗ್ರೆಸ್ ರಾಜ್ಯದಲ್ಲಿ ಯುವ ಸದಸ್ಯತ್ವ ನೋಂದಣಿ ಅಭಿಯಾನವನ್ನು ನಡೆಸುತ್ತಿದೆ. ಈ ಸಂದರ್ಭದಲ್ಲಿ ಆಮಿಷವನ್ನು ಒಡ್ಡುವ ಮೂಲಕ ಸದಸ್ಯತ್ವವನ್ನು ಮಾಡಿಸಿಕೊಳ್ಳಲಾಗುತ್ತಿದೆ ಎಂದು ಬಿಜೆಪಿ ಆರೋಪಿಸಿದೆ. ಕಾಂಗ್ರೆಸ್ ಪಕ್ಷ ಎಷ್ಟು ದಿವಾಳಿ ಆಗಿದೆ ಎನ್ನುವುದಕ್ಕೆ ಇದು ಸಾಕ್ಷಿ ಎನ್ನುವಂತಾಗಿದೆ. ಸದಸ್ಯತ್ವಕ್ಕಾಗಿ ಕಾಂಗ್ರೆಸ್ ಬೆಳ್ಳಿ ಗಣೇಶ ಮೂರ್ತಿಯನ್ನು ನೀಡುತ್ತಿದೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ. ಈ ಸಂಬಂಧ ಪತ್ರಿಕಾಗೋಷ್ಠಿಯನ್ನು ನಡೆಸಿದ್ದ ಬೆಂಗಳೂರು ಉತ್ತರದ ಬಿಜೆಪಿಯ ಜಿಲ್ಲಾಧ್ಯಕ್ಷ ಎಸ್. ಹರೀಶ್ ಅವರು ದೂರಿದ್ದಾರೆ.
ಕಾಂಗ್ರೆಸ್ ಪಕ್ಷಕ್ಕೆ ನೂರಾರು ವರ್ಷಗಳ ಇತಿಹಾಸ ಇದೆ ಎಂದು ಹೇಳಿಕೊಳ್ಳುತ್ತಾರೆ. ಆದರೆ, ವಿಪರ್ಯಾಸವೆಂದರೆ, ಕಾಂಗ್ರೆಸ್ ಇದೀಗ ಸಂಪೂರ್ಣ ದಿವಾಳಿಯಾಗಿದೆ. ಆಮಿಷವೊಡ್ಡಿ ಸದಸ್ಯತ್ವವನ್ನು ಪಡೆದುಕೊಳ್ಳುವ ಪರಿಸ್ಥಿತಿ ಅವರಿಗೆ ಬಂದಿದೆ. ಗಣಪತಿ ಮೂರ್ತಿಗಳನ್ನು ವಿಸರ್ಜನೆ ಮಾಡುವಾಗ ಇವರು ಬ್ರದರ್ಸ್‌ಗಳನ್ನು ಮುಂದೆ ಬಿಟ್ಟು ಚಪ್ಪಲಿಯಲ್ಲಿ ಹೊಡೆಸುತ್ತಿದ್ದಾರೆ. ಪೆಟ್ರೋಲ್ ಬಾಂಬ್ ಹಾಕುವುದು ಹಾಗೂ ಕಲ್ಲು ಎಸೆಯುವುದನ್ನು ಮಾಡುತ್ತಾರೆ. ಮತ್ತೊಂದು ಕಡೆ ನೋಡಿದರೆ ಈ ರೀತಿ ಎಂದು ಬಿಜೆಪಿ ವ್ಯಂಗ್ಯವಾಡಿದೆ.
ನಮ್ಮದು ವಿಶ್ವದಲ್ಲೇ ಬಹುದೊಡ್ಡ ಪಕ್ಷವಾಗಿದೆ. ನಮ್ಮ ಪಕ್ಷಕ್ಕೆ ಜನ ಸದಸ್ಯತ್ವ ಪಡೆಯುವುದಕ್ಕೆ ಸ್ವಯಂಪ್ರೇರಣೆಯಿಂದ ಬರುತ್ತಿದ್ದಾರೆ. ಜಗತ್ತಿನಲ್ಲೇ ಹೆಚ್ಚು ಸದಸ್ಯರನ್ನು ಹೊಂದಿರುವ ಏಕೈಕ ಪಕ್ಷ ನಮ್ಮದು. ಆದರೆ, ಕಾಂಗ್ರೆಸ್ ದಯಾನೀಯ ಪರಿಸ್ಥಿತಿಯನ್ನು ತಲುಪಿದೆ. ಸದಸ್ಯತ್ವಕ್ಕಾಗಿ ಕಾಂಗ್ರೆಸ್ ಆಮಿಷವೊಡ್ಡುವ ಹಂತಕ್ಕೆ ಇಳಿದಿದೆ ಎಂದು ಅಪಹಾಸ್ಯ ಮಾಡಿದೆ.
ಬೆಂಗಳೂರಿನಲ್ಲಿ ಸದಸ್ಯತ್ವ ಇಳಿಕೆ
ಬೆಂಗಳೂರಿನಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಬಿಜೆಪಿ ಸದಸ್ಯತ್ವ ನಡೆದಿಲ್ಲ. ಬೆಂಗಳೂರಿನಲ್ಲಿ ಬಿಜೆಪಿ ನಿರೀಕ್ಷೆ ಮಾಡಿದಷ್ಟು ಸದಸ್ಯತ್ವದ ಗುರಿಯನ್ನು ನಾವು ತಲುಪಿಲ್ಲ ಎಂದು ಬಿಜೆಪಿಯ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರೇ ಹೇಳಿದ್ದಾರೆ. ಇದಕ್ಕೆ ಬೆಂಗಳೂರಿನ ಶಾಸಕರೂ ಕಾರಣ. ಬೆಂಗಳೂರಿನಲ್ಲಿ ಸಕಾಲದಲ್ಲಿ ಬಿಬಿಎಂಪಿ ಚುನಾವಣೆ ನಡೆದಿದ್ದಾರೆ ಈ ಪರಿಸ್ಥಿತಿ ಎದುರಾಗುತ್ತಿರಲಿಲ್ಲ. ಆದರೆ, ಬೆಂಗಳೂರಿನಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ ನಡೆಯದೆ ಇರುವುದರಿಂದ ಈ ಸಮಸ್ಯೆ ಎದುರಾಗಿದೆ ಎಂದು ಬಿ.ವೈ ವಿಜಯೇಂದ್ರ ಅವರು ಹೇಳಿದ್ದಾರೆ.












Click it and Unblock the Notifications