'ಗೋವಿನ ಬಗ್ಗೆ ಬಿಜೆಪಿ ಹಗಲೊಂದು, ರಾತ್ರಿಯೊಂದು ಹೇಳೋದು ನಿಲ್ಲಿಸಲಿ'
ಬೆಂಗಳೂರು, ಜೂನ್ 5: ಗೋ ಹತ್ಯೆ ನಿಷೇಧದ ಬಗ್ಗೆ ಕರುಳು ಇರಿಯುವಂತೆ ಭಾಷಣ ಕುಟ್ಟುವ ಬಿಜೆಪಿಯಲ್ಲೇ ಎರಡೆರಡು ಅಭಿಪ್ರಾಯ ಇದೆಯಾ ಎಂಬ ಅನುಮಾನ ವಾಮನಾಚಾರ್ಯ ಅವರ ಹೇಳಿಕೆಯಿಂದ ಬಯಲಾಗಿದೆ. ಹೊಸದಾಗಿ ಜಾರಿಗೆ ತರಲಿ ನಿರ್ಧರಿಸಿರುವ ಪ್ರಾಣಿಗಳ ಮೇಲಿನ ಕ್ರೌರ್ಯ ನಿಷೇಧ ಅಧಿಸೂಚನೆ ಅಷ್ಟು ಹಾಸ್ಯಾಸ್ಪದವಾಗಿದೆ.
ಹಸುವನ್ನು ಸಾಕಣೆ ಮಾಡುವುದಕ್ಕೆ ಆಗುವ ಖರ್ಚು, ಇರುವ ಸವಾಲುಗಳ ಬಗ್ಗೆ ನಯಾಪೈಸೆ ಯೋಚನೆ ಮಾಡದೆ ಅಧಿಸೂಚನೆ ತರಲಾಗಿದೆ. ಗೋವಿನ ವಿಚಾರದಲ್ಲಿ ವಾಮನಾಚಾರ್ಯ ಅವರು ಖಡಾಖಡಿ ಮಾತನಾಡುತ್ತಿದ್ದ ಹಾಗೆ ಬಿಜೆಪಿಯ ಶಾಸಕ- ಮಾಜಿ ಸಚಿವ ಸುರೇಶ್ ಕುಮಾರ್, ಇದು ಅವರ ವೈಯಕ್ತಿಕ ಅಭಿಪ್ರಾಯ- ಅದು ಬಿಜೆಪಿ ನಿಲುವಲ್ಲ ಎಂದಿದ್ದಾರೆ.[ವಾಮನ್ ರನ್ನು ಹುದ್ದೆಯಿಂದ ಕಿತ್ತು ಹಾಕಲು ಆಗ್ರಹಿಸಿ ಮೋದಿಗೆ ಪತ್ರ]

ಈಶಾನ್ಯ ರಾಜ್ಯಗಳಲ್ಲಿ, ಕೇರಳ ಇನ್ನೂ ಕೆಲವೆಡೆ ಇಂಥ ಅಧಿಸೂಚನೆಗೆ ಬಿಜೆಪಿಯವರೇ ವಿರೋಧ ವ್ಯಕ್ತಪಡಿಸುತ್ತಾರೆ. ಅಷ್ಟೇ ಏಕೆ, ಮೈಸೂರು ಮೃಗಾಲಯದಲ್ಲಿ ಪರಿಸ್ಥಿತಿ ಏನು ಅಂತ ಬಿಜೆಪಿಯವರು ಯಾರಾದರೊಬ್ಬರು ಹೋಗಿ ವಿಚಾರಿಸಿ ನೋಡಲಿ. ಗೋ ಮಾಂಸ ಸಿಗದಿದ್ದರೆ ಮಾಂಸಾಹಾರಿ ಪ್ರಾಣಿಗಳನ್ನು ಸಾಕುವುದಕ್ಕೆ ಅದ್ಯಾವ ಪರಿ ಖರ್ಚು ಬರುತ್ತದೆ ಎಂಬುದು ತಿಳಿಯುತ್ತದೆ.
ಇನ್ನು ಈ ಅಧಿಸೂಚನೆ ಜಾರಿಗೆ ಬಂದ ಮೇಲೆ ಗೋವುಗಳನ್ನು ರಾತ್ರೋರಾತ್ರಿ ಮಾರೋ ಹಾಗಿಲ್ಲ, ಅವುಗಳು ಮೃತಪಟ್ಟರೆ ವೈದ್ಯಕೀಯ ಪ್ರಮಾಣ ಪತ್ರ ಇಲ್ಲದೆ ಹೂಳುವ ಹಾಗಿಲ್ಲ, ಅವುಗಳನ್ನು ಉದ್ದೇಶಪೂರ್ವಕವಾಗಿ ತೊಲಗಿಸಿ ಕೊಳ್ಳುವ ಹಾಗಿಲ್ಲ ಎಂದೆಲ್ಲ ನಿಯಮ ಮಾಡಬೇಕಾಗುತ್ತದೆ.[ಗೋಮಾಂಸ ಸೇವನೆ ಬಗ್ಗೆ ಬಿಜೆಪಿ ವಕ್ತಾರ ವಾಮನ್ ನೀಡಿದ ವಿವಾದಿತ ಹೇಳಿಕೆ]
ಬಿಡಿ, ಇದೆಲ್ಲ ಇರಲಿ. ಗೋವು ಮಾರಾಟಕ್ಕೆ ನಿಯಮ ಅಂತ ಮಾಡಿದರೆ ಇಡೀ ದೇಶದಲ್ಲಿ ಒಂದೇ ನಿಯಮ ಮಾಡಲಿ. ಮೇಘಾಲಯ, ಕೇರಳ, ಪಶ್ಚಿಮ ಬಂಗಾಲಕ್ಕೆ ಇಲ್ಲಿಗೆ ಅನ್ವಯಿಸಲ್ಲ ಅನ್ನೋದೆಲ್ಲ ಬೇಡ. ಮಾಂಸಾಹಾರ ಸೇವಿಸುವವರು ಅದರಲ್ಲೂ ಬಡ ಮುಸ್ಲಿಮರ ಪಾಲಿಗೆ ಗೋ ಮಾಂಸ ಕಡಿಮೆ ದರಕ್ಕೆ ಸಿಗುವಂಥದ್ದು. ಆ ಕಾರಣಕ್ಕೆ ಗೋ ಹತ್ಯೆ ನಿಷೇಧಕ್ಕೆ ಬಿಜೆಪಿ ಇಷ್ಟೆಲ್ಲ ಉತ್ಸುಕವಾಗಿದೆಯಾ ಎಂಬ ಪ್ರಶ್ನೆ ಎದ್ದಿದೆ.
ಹೀಗಂದರೆ ಯಥಾಪ್ರಕಾರ ವಿರೋಧ ಪಕ್ಷಗಳ ಕಡೆಗೆ ಬೊಟ್ಟು ಮಾಡುವ ಸಾಧ್ಯತೆ ಇದೆ ಬಿಜೆಪಿ. ಆದ್ದರಿಂದ ಲೋಕಪಾಲ ಕಾಯ್ದೆ ಏನಾಯಿತು ಅಂತ ಗಮನ ಕೊಡಲಿ. ಅದನ್ನು ಮತ್ತು ಅಂಥ ಕಾಯ್ದೆಯನ್ನು ಜಾರಿಗೆ ತರಲಿ. ಗೋವಿನ ಮಾರಾಟದ ಬಗ್ಗೆ ಹೊರಡಿಸಿದ ಅಧಿಸೂಚನೆ ವಿಚಾರದಲ್ಲಿ ಅಭಿಪ್ರಾಯ ಮಂಡನೆ ಮಾಡುವವರಿಗೆ ಸ್ವಾಗತ.[ಬಿಜೆಪಿ ಸೋಲಿಸೋದಕ್ಕೆ ರಾಹುಲ್ ಗಾಂಧಿ ಭಗವದ್ಗೀತೆ ಓದ್ತಿದ್ದಾರಂತೆ!]
ಗೋವು, ಗೋವಿನ ಮಾರಾಟ-ಹತ್ಯೆ ಮತ್ತಿತರ ವಿಚಾರವಾಗಿ ವಾಸ್ತವ ಹಾಗೂ ತಲಸ್ಪರ್ಶಿಯಾದ ಚರ್ಚೆಯಾಗಬೇಕು. ಅದಕ್ಕೆ ಮುಂಚೆ ಈಗ ಹೊರಡಿಸಿದ ಅಧಿಸೂಚನೆಯನ್ನು ಜಾರಿಗೆ ತರಬಾರದು.












Click it and Unblock the Notifications