Priyanka Gandhi: ಬಿಜೆಪಿ ಸರ್ಕಾರ 1.50 ಲಕ್ಷ ಕೋಟಿ ಲೂಟಿ ಮಾಡಿದೆ. ಈ ಹಣದಿಂದ...: ಪ್ರಿಯಾಂಕಾ ಗಾಂಧಿ
ಬೆಳಗಾವಿ,ಮೇ1: ಬಿಜೆಪಿ ಸರ್ಕಾರ 1.50 ಲಕ್ಷ ಕೋಟಿ ಲೂಟಿ ಮಾಡಿದೆ. ಇದು ಭ್ರಷ್ಟಾ ಹಾಗೂ ಸುಳ್ಳಿನ ಸರ್ಕಾರ. ಈ ಹಣದಲ್ಲಿ ನೂರಾರು ಏಮ್ಸ್, ಸಾವಿರಾರು ಎಕ್ಸ್ ಪ್ರೆಸ್ ವೇ, 186 ಇಎಸ್ ಐ, 30 ಸಾವಿರ ಸ್ಮಾರ್ಟ್ ತರಗತಿ ನಿರ್ಮಾಣ, 30 ಲಕ್ಷ ಮನೆಗಳು ಮಾಡಬಹುದಿತ್ತು ಎಂದು ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.
ಬಿಜೆಪಿ ಎಂದು ಕೊಟ್ಟ ಮಾತಿಗೆ ತಕ್ಕಂತೆ ನಡೆಯುವುದಿಲ್ಲ. ಕಾಂಗ್ರೆಸ್ ಕೊಟ್ಟ ಭರವಸೆ ಈಡೆರಿಸಿವೆ. ರಾಜಸ್ಥಾನದಲ್ಲಿ ರೈತರ ಸಾಲ ಮನ್ನಾ, ಹಿಮಾಚಲ ಪ್ರದೇಶದಲ್ಲಿ ಹಳೆ ಪಿಂಚಣಿ ವ್ಯವಸ್ಥೆ ಜಾರಿ ಮಾಡಿದ್ದೇವೆ. ಕಾಂಗ್ರೆಸ್ ಸರ್ಕಾರ ಇದ್ದಾಗ ಅನ್ನಭಾಗ್ಯ, ಕೃಷಿ ಭಾಗ್ಯ, ಕ್ಷೀರ ಭಾಗ್ಯ, ವಿದ್ಯಾಸಿರಿ, ಇಂದಿರಾ ಕ್ಯಾಂಟೀನ್ ಯೋಜನೆ ನೀಡಿತ್ತು. ಕಾಂಗ್ರೆಸ್ ಮುಂದೆ ಸರ್ಕಾರ ರಚಿಸಿದರೆ ಜನರಿಗಾಗಿ ಐದು ಗ್ಯಾರಂಟಿ ಯೋಜನೆ ಘೋಷಿಸಿದೆ ಎಂದರು.

ಗೃಹಜ್ಯೋತಿ ಯೋಜನೆ ಮೂಲಕ ಪ್ರತಿ ಮನೆಗೆ 200 ಯೂನಿಟ್ ವಿದ್ಯುತ್ ಉಚಿತ ನೀಡಲಾಗುವುದು. ಆಮೂಲಕ ಪ್ರತಿ ಮನೆಗೆ ಸುಮಾರು 1500 ರೂ. ಉಳಿತಾಯವಾಗಲಿದೆ. ನಾನು ಇಂಧನ ಸಚಿವನಾಗಿದ್ದೆ. ಈ ಭಾಗದಲ್ಲಿ 200 ಕುಟುಂಬ ಹೊರತಾಗಿ ಉಳಿದವರು ಯಾರೂ ಕರೆಂಟ್ ಬಿಲ್ ಕಟ್ಟುವಂತಿಲ್ಲ. ಗೃಹಲಕ್ಷ್ಮಿ ಯೋಜನೆ ಮೂಲಕ ಪ್ರತಿ ಮನೆಯೊಡತಿಗೆ ಪ್ರತಿ ತಿಂಗಳು 2 ಸಾವಿರ ಪ್ರೋತ್ಸಾಹ ಧನ ನೀಡಲು ನಿರ್ಧರಿಸಲಾಗಿದೆ.
ಇನ್ನು ಅನ್ನಭಾಗ್ಯ ಯೋಜನೆ ಮೂಲಕ ಬಡ ಕುಟುಂಬಗಳ ಪ್ರತಿ ಸದಸ್ಯನಿಗೆ ತಿಂಗಳಿಗೆ ತಲಾ 10 ಕೆ.ಜಿ ಅಕ್ಕಿ ಉಚಿತವಾಗಿ ನೀಡಲಾಗುವುದು. ಇನ್ನು ನಿರುದ್ಯೋಗ ಯುವಕರಿಗಾಗಿ ಪದವೀಧರರಿಗೆ ಪ್ರತಿ ತಿಂಗಳು 3000 ಹಾಗೂ ಡಿಪ್ಲೋಮಾ ಪದವೀಧರರಿಗೆ 1500 ರೂ. ನಿರುದ್ಯೋಗ ಭತ್ಯೆ ನೀಡಲಾಗುವುದು. ಇನ್ನು ಸಾರ್ವಜನಿಕ ಬಸ್ ಗಳಲ್ಲಿ ರಾಜ್ಯದ ಮಹಿಳೆಯರಿಗೆ ಉಚಿತ ಪ್ರಯಾಣ ನೀಡುವ ಯೋಜನೆಗಳನ್ನು ಪ್ರಕಟಿಸಲಾಗಿದೆ.
ಜನರು ಆರಿಸಿದ ಸರ್ಕಾರವನ್ನು ಶಾಸಕರ ಖರೀದಿ ಮೂಲಕ ಬೀಳಿಸಿ ಸರ್ಕಾರ ರಚಿಸಿದ್ದಾರೆ. ಇಂತಹ ಸರ್ಕಾರದ ನಿಯತ್ತು ಆರಂಭದಲ್ಲೇ ಹಾಳಾಗಿತ್ತು. ಇದರಿಂದ ಆಡಳಿತ ಕುಸಿಯಿತು. ಇಬ್ಬರು ಮುಖ್ಯಮಂತ್ರಿಗಳು ಬಂದರು. ಪರಿಣಾಮ ಅಭಿವೃದ್ಧಿ ಸ್ಥಗಿತವಾಗಿತ್ತು. ಈ ಸರ್ಕಾರ ಎಲ್ಲ ಹಂತದಲ್ಲಿ ರಾಜ್ಯವನ್ನು ಲೂಟಿ ಮಾಡಿದೆ.

ಈ ಸರ್ಕಾರ 40% ಕಮಿಷನ್ ಸರ್ಕಾರ ಎಂದು ದೇಶಾದ್ಯಂತ ಕುಖ್ಯಾತಿ ಪಡೆದಿದೆ. ಇನ್ನು ದೇಶದಲ್ಲಿ ಬೆಲೆ ಏರಿಕೆ ಎಗ್ಗಿಲ್ಲದೆ ಸಾಗಿದೆ. ಅಡುಗೆ ಸಿಲಿಂಡರ್ 1100 ಆಗಿದೆ. ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಜಿಎಸ್ ಟಿ ಬೆಲೆ ಏರಿಕೆಗೆ ಕಾರಣವಾಗಿದ್ದು, ಸಂಸಾರ ನಿಭಾಯಿಸುವುದು ಬಹಳ ಕಷ್ಟವಾಗಿದೆ. ಇದರಿಂದ ಮಹಿಳೆಯರು ಬಹಳ ಸಂಕಷ್ಟವಾಗಲಿದೆ. ರೈತರಿಗೂ ಬೆಲೆ ಏರಿಕೆ ಬಿಸಿ ತಟ್ಟಿದೆ. ಕೃಷಿಯ ಪ್ರತಿ ಸಲಕರಣೆ ಮೇಲೆ ಜಿಎಸ್ ಟಿ ವಿಧಿಸಲಾಗಿದೆ. ಇದರ ಮಧ್ಯೆ ರೈತ ಶ್ರಮವಹಿಸಿದರೂ ಸೂಕ್ತ ಬೆಲೆ ಸಿಗುತ್ತಿಲ್ಲ.
ಇಲ್ಲಿರುವ ಯುವಕರಿಗೆ ಸರ್ಕಾರ ಉದ್ಯೋಗ ನೀಡಿಲ್ಲ. ಸರ್ಕಾರದ ವಿವಿಧ ಇಲಾಖೆಗಳಲ್ಲಿ 2.50 ಲಕ್ಷ ಹುದ್ದೆಗಳು ಖಾಲಿ ಇವೆ. ಆದರೂ ಯಾವುದನ್ನು ಸರ್ಕಾರ ತುಂಬಿಲ್ಲ. ಎಲ್ಲಾ ನೇಮಕಾತಿಯಲ್ಲಿ ಅಕ್ರಮ ಮಾಡಿ ಯುವಕರ ಭವಿಷ್ಯ ನಾಶ ಮಾಡಲಾಗಿದೆ. ಸಣ್ಣ ಪುಟ್ಟ ವ್ಯಾಪಾರಸ್ಥರಿಗೆ ಅನ್ಯಾಯ ಮಾಡಲಾಗುತ್ತಿದೆ.
ಈ ಸರ್ಕಾರ ಎಲ್ಲ ಹಂತದಲ್ಲೂ ಭ್ರಷ್ಟಾಚಾರ ಮಾಡುತ್ತಿದೆ. ನೇಮಕಾತಿ, ಕೋವಿಡ್, ಗುತ್ತಿಗೆಯಲ್ಲಿ, ಮಕ್ಕಳಿಗೆ ನೀಡುವ ಮೊಟ್ಟೆಯಲ್ಲಿ ಹಗರಣ ಮಾಡಿದ್ದಾರೆ. ಭ್ರಷ್ಟಾಚಾರದಿಂದ ಗುತ್ತಿಗೆದಾರರು ಸತ್ತರೂ ಪ್ರಧಾನಮಂತ್ರಿಗಳಿಂದ ಉತ್ತರ ಇಲ್ಲ. ಈ ಭ್ರಷ್ಟ ಸರ್ಕಾರ ಮುಂದಿನ ಐದು ವರ್ಷಗಳ ಕಾಲ ಆಡಳಿತ ಮಾಡಿದರೆ ನಿಮ್ಮ ಭವಿಷ್ಯದ ಗತಿ ಏನು? ಎಲ್ಲದಕ್ಕೂ ಲಂಚ ನೀಡುವುದಾದರೆ ಪರಿಶ್ರಮಕ್ಕೆ ಬೆಲೆ ಏನು? ಇಂತಹ ಸರ್ಕಾರ ಬೇಕೇ? ಬದಲಾವಣೆ ಬೇಕೇ ಎಂದು ನೀವೇ ಆಲೋಚಿಸಬೇಕು ಎಂದರು.












Click it and Unblock the Notifications