ಲೋಕಸಭಾ ಚುನಾವಣಾ ಹೊಸ್ತಿಲಲ್ಲಿ ಎಡವಿತಾ ಕಾಂಗ್ರೆಸ್, ಬಿಜೆಪಿಗೆ ಸಿಕ್ಕಿತಾ ಬ್ರಹ್ಮಾಸ್ತ್ರ?
ಬೆಂಗಳೂರು, ಜನವರಿ 04: ಅಯೋಧ್ಯೆಯಲ್ಲಿ ರಾಮಲಲ್ಲಾನ ವಿಗ್ರಹ ಪ್ರತಿಷ್ಠಾಪನೆಯೊಂದಿಗೆ ಶ್ರೀರಾಮಮಂದಿರ ಉದ್ಘಾಟನೆಯತ್ತ ಹೆಚ್ಚಿನ ಆಸೆ ವಹಿಸಿರುವ ಬಿಜೆಪಿ ನಾಯಕರು ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ಮುಗಿಸಿದ ಬಳಿಕ ಲೋಕಾ ಖಾಡಕ್ಕಿಳಿಯಲಿದ್ದು, ಸದ್ಯಕ್ಕೆ ರಾಮಮಂದಿರ ಉದ್ಘಾಟನೆಯಷ್ಟೇ ಬಿಜೆಪಿ ಮುಂದಿರುವುದರಿಂದ ನಾಯಕರೆಲ್ಲರೂ ಅತ್ತ ಮುಖಮಾಡಿದ್ದಾರೆ.
ಆದರೆ ಇಂಥ ಸಮಯದಲ್ಲಿ ಕೇಂದ್ರದ ಕಾಂಗ್ರೆಸ್ ನಾಯಕರು ವಿವದಾತ್ಮಕ ಹೇಳಿಕೆ ನೀಡುತ್ತಿದ್ದರೆ, ಇತ್ತ ರಾಜ್ಯದಲ್ಲಿ ಮೂವತ್ತೊಂದು ವರ್ಷದ ಹಿಂದಿನ ಪ್ರಕರಣಕ್ಕೆ ಮರುಜೀವ ನೀಡಿ ಕರಸೇವಕರ ಬಂಧನ ಮಾಡಿರುವುದು ಬಿಜೆಪಿ ಕೈಗೆ ಬರೀ ಅಸ್ತ್ರವಲ್ಲ ಬ್ರಹ್ಮಾಸ್ತ್ರವನ್ನೇ ಕೊಟ್ಟಂತಾಗಿದೆ.

ಮೊದಲಿನಿಂದಲೂ ಬಿಜೆಪಿಯವರು ಭಾವನಾತ್ಮಕ ವಿಚಾರವನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡುತ್ತಿದ್ದಾರೆ ಎಂಬ ಆರೋಪವನ್ನು ಕಾಂಗ್ರೆಸ್ ನಾಯಕರು ಮಾಡುತ್ತಲೇ ಬಂದಿದ್ದಾರೆ. ಹೀಗಿರುವಾಗ ಕರಸೇವಕನ ಬಂಧನ ವಿಚಾರವನ್ನು ಬಿಜೆಪಿ ರಾಜಕೀಯಕ್ಕೆ ಸಮರ್ಥವಾಗಿ ಬಳಸುಕೊಳ್ಳುತ್ತದೆ ಎಂಬುದನ್ನು ಕೈ ನಾಯಕರು ಅರ್ಥ ಮಾಡಿಕೊಂಡಿದ್ದರೆ, ಇವತ್ತು, ರಾಜ್ಯದ ಹುಬ್ಬಳಿಯಲ್ಲಿ ಕರಸೇವಕನ ಬಂಧನ ವಿಚಾರ ದೇಶದ ಮಟ್ಟದಲ್ಲಿ ದೊಡ್ಡ ಸುದ್ದಿಯಾಗುತ್ತಿರಲಿಲ್ಲ.
ಈ ನೆಲದ ಕಾನೂನನ್ನು ಎಲ್ಲರೂ ಗೌರವಿಸಬೇಕು. ಅಷ್ಟೇ ಅಲ್ಲದೆ ಪ್ರಕರಣದಲ್ಲಿ ಭಾಗಿಯಾದವರು ಯಾರೇ ಆಗಲಿ ಅವರ ವಿರುದ್ಧ ಕಾನೂನು ಕ್ರಮ ಆಗಲೇ ಬೇಕು. 1992ರಲ್ಲಿ ನಡೆದ ರಾಮಜನ್ಮ ಭೂಮಿ ವಿಚಾರಕ್ಕೆ ನಡೆದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಕಾಕತಾಳಿಯವೋ ಅಥವಾ ಉದ್ದೇಶ ಪೂರ್ವಕವೋ ಗೊತ್ತಿಲ್ಲ ಪೊಲೀಸರು ಅವತ್ತಿನ ಆರೋಪಿಗಳನ್ನು ಬಂಧಿಸಿದ್ದಾರೆ. ಇಡೀ ದೇಶ ರಾಮಮಂದಿರ ಉದ್ಘಾಟನೆಯ ಗುಂಗಿನಲ್ಲಿದೆ. ಅಷ್ಟೇ ಅಲ್ಲದೆ ಅದನ್ನು ಹಬ್ಬದಂತೆ ಆಚರಿಸಲು ಸಿದ್ಧತೆ ನಡೆಸಿದೆ. ಇಂಥ ಸಂದರ್ಭದಲ್ಲಿ ಕರಸೇವಕನ ಬಂಧನ ವಿಚಾರ ಸಂಚಲನವನ್ನುಂಟು ಮಾಡಿದೆ.

ಎಡವಿದರಾ ಕಾಂಗ್ರೆಸ್ ನಾಯಕರು?
ಈ ಹಿಂದೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗಲೂ ಬಿಜೆಪಿ ನಾಯಕರು ಕೆಲವೊಂದು ಘಟನೆಗಳನ್ನು ಮುಂದಿಟ್ಟುಕೊಂಡು ಹಿಂದೂ ವಿರೋಧಿ ಸರ್ಕಾರವೆಂದು ಬಿಂಬಿಸುವಲ್ಲಿ ಯಶಸ್ವಿಯಾಗಿದ್ದರು. ಅದರ ಪರಿಣಾಮವನ್ನು ಎದುರಿಸಿ ಸೋಲು ಕಾಣುವಂತಾಯಿತು. ಅದು ಕಾಂಗ್ರೆಸ್ ನಾಯಕರಿಗೆ ಗೊತ್ತಿಲ್ಲದ ವಿಚಾರವೇನಲ್ಲ. ಜೊತೆಗೆ ಕಾಂಗ್ರೆಸ್ ನಾಯಕರು ಈ ವಿಚಾರವನ್ನು ಜನತೆಗೆ ತಿಳಿಸುವಲ್ಲಿಯೂ ಎಡವಿದರಲ್ಲದೆ, ಬಾಯಿಗೆ ಬಂದಂತೆ ಹೇಳಿಕೆಗಳನ್ನು ನೀಡುತ್ತಾ ಸಮರ್ಥನೆ ಮಾಡಿಕೊಳ್ಳುವ ಮೂಲಕ ಎಡವಟ್ಟು ಮಾಡಿಕೊಳ್ಳುತ್ತಿದ್ದಾರೆ.
ಚುನಾವಣೆ ಸಂದರ್ಭ ಸಣ್ಣಪುಟ್ಟ ವಿಚಾರಗಳು ಕೂಡ ರಾಜಕೀಯವಾಗಿ ದೊಡ್ಡ ಸುದ್ದಿಗಳಾಗಿ ಮಾರ್ಪಡುತ್ತವೆ. ರಾಜಕೀಯವಾಗಿ ಲಾಭವಾಗುವ ವಿಚಾರಗಳನ್ನು ಯಾವ ಪಕ್ಷವೂ ಬಿಡುವುದಿಲ್ಲ. ಹುಬ್ಬಳ್ಳಿಯ ಕರಸೇವಕರ ಬಂಧನ ವಿಚಾರದಲ್ಲಿ ಬಿಜೆಪಿಯಷ್ಟೇ ಕಾಂಗ್ರೆಸ್ ಕೂಡ ರಾಜಕೀಯವಾಗಿ ಲಾಭ ಮಾಡಿಕೊಳ್ಳುತ್ತಿದೆ ಎಂಬ ಆರೋಪವಿದೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರ ವಹಿಸಿಕೊಂಡ ದಿನದಿಂದಲೂ ಅಲ್ಪಸಂಖ್ಯಾತರ ತುಷ್ಠೀಕರಣ ಮಾಡುತ್ತಿದೆ ಎಂಬ ಆರೋಪವನ್ನು ಬಿಜೆಪಿ ಮಾಡುತ್ತಲೇ ಬರುತ್ತಿದೆ.

ರಾಮಮಂದಿರ ನಿರ್ಮಾಣ ಸಂಭ್ರಮದಲ್ಲಿ ಬಿಜೆಪಿ
ಇಂಥ ಸಂದರ್ಭದಲ್ಲಿ 31ವರ್ಷದ ಹಿಂದಿನ ಪ್ರಕರಣದಲ್ಲಿ ಕರಸೇವಕರ ಬಂಧನ ವಿಚಾರವನ್ನು ಬಿಜೆಪಿ ಸುಮ್ಮನೆ ಬಿಟ್ಟು ಬಿಡುತ್ತಾ? ರಾಜಕೀಯವನ್ನು ಬಿಜೆಪಿ ಆರಂಭಿಸಿದ್ದೇ ಹಿಂದುತ್ವದ ತಳಹದಿ ಮೇಲೆ. ರಾಮಮಂದಿರ ನಿರ್ಮಾಣದ ಅಜೆಂಡಾವನ್ನು ಮುಂದಿಟ್ಟುಕೊಂಡು ನಿರಂತರ ಹೋರಾಟ ಮಾಡಿಕೊಂಡು ಬಂದಿರುವ ಬಿಜೆಪಿ ಇವತ್ತು ತಮ್ಮ ಶಪಥ ಈಡೇರುತ್ತಿರುವ ಖುಷಿಯಲ್ಲ. ಜತೆಗೆ ರಾಜಕೀಯವನ್ನು ಬದಿಗಿಟ್ಟು ನೋಡಿದರೂ ರಾಮ ಮತ್ತು ರಾಮಮಂದಿರ ವಿಚಾರದಲ್ಲಿ ಪ್ರತಿಯೊಬ್ಬ ಹಿಂದೂಗಳಿಗೂ ಭಾವನಾತ್ಮಕ ಸಂಬಂಧವಿದೆ. ರಾಮಮಂದಿರ ನಿರ್ಮಾಣವಾಗುತ್ತಿರುವುದನ್ನು ಹಬ್ಬದಂತೆ ಸಂಭ್ರಮಿಸುತ್ತಿದ್ದಾರೆ.
ರಾಮ ಎನ್ನುವುದು ಯಾವುದೋ ಒಂದು ಪಕ್ಷದ ಸ್ವತ್ತಲ್ಲ ಸಮಸ್ತ ಹಿಂದೂಗಳ ಆರಾಧ್ಯ ದೈವ. ಮತ್ತು ಅಯೋಧ್ಯೆ ಪವಿತ್ರ ಯಾತ್ರಾ ತಾಣ ಹೀಗಾಗಿಯೇ ಅಲ್ಲಿ ರಾಮಮಂದಿರ ನಿರ್ಮಾಣವಾಗುತ್ತಿರುವುದು ಹಿಂದೂಗಳಲ್ಲಿ ಹರ್ಷ ತಂದಿದೆ. ರಾಮಮಂದಿರ ಹೋರಾಟದ ಮೂಲಕವೇ ದೇಶದಲ್ಲಿ ಎರಡು ಸ್ಥಾನಗಳನ್ನು ಗೆದ್ದಿದ್ದ ಬಿಜೆಪಿ ಇವತ್ತು ಬಹುಮತದೊಂದಿಗೆ ಅಧಿಕಾರ ಹಿಡಿದು ಎರಡು ಅವಧಿಯ ಅಧಿಕಾರವನ್ನು ಮುಗಿಸುವ ಹಂತದಲ್ಲಿದೆ. ಅಷ್ಟೇ ಅಲ್ಲದೆ ರಾಮಮಂದಿರದ ನಿರ್ಮಾಣದ ಸಂಕಲ್ಪ ತೊಟ್ಟಿದ್ದ ಪಕ್ಷ ಅದು ಈಡೇರುತ್ತಿರುವ ಸಂಭ್ರಮದಲ್ಲಿದೆ.
ಕೈ ನಾಯಕರು ಹೇಗೆ ನಿಭಾಯಿಸುತ್ತಾರೆ?
ಕರಸೇವಕರ ಬಂಧನ ಪ್ರಕರಣಗಳ ಕುರಿತಂತೆ ಸರ್ಕಾರದ ಜವಬ್ದಾರಿಯುತ ನಾಯಕರು ರಾಜಕೀಯ ಬದಿಗಿಟ್ಟು ರಾಜ್ಯದ ಜನತೆಗೆ ಮಾಹಿತಿ ನೀಡಿ ಮನದಟ್ಟು ಮಾಡಬೇಕಿತ್ತು. ಆದರೆ ಎಲ್ಲೋ ಒಂದು ಕಡೆ ಸರ್ಕಾರದ ಜವಬ್ದಾರಿಯುತ ಸ್ಥಾನದಲ್ಲಿರುವ ಮುಖ್ಯಮಂತ್ರಿಗಳಾಗಲೀ, ಗೃಹಸಚಿವರಾಗಲೀ ವಿರೋಧ ಪಕ್ಷ ಬಿಜೆಪಿಗೆ ತಿರುಗೇಟು ನೀಡುವ ಪ್ರಯತ್ನ ಮಾಡಿದರೇ ವಿನಃ ಮತ್ತೇನು ಮಾಡಲೇ ಇಲ್ಲ. ಈ ವಿಚಾರ ರಾಜಕೀಯವಾಗಿ ವಾಕ್ಸಮರಕ್ಕೆ ಕಾರಣವಾಗುತ್ತಿದೆಯೇ ಹೊರತು ಇನ್ನೇನು ನಡೆಯುತ್ತಿಲ್ಲ.
ಲೋಕಸಭಾ ಚುನಾವಣೆ ಹೊಸ್ತಿಲಲ್ಲಿರುವಾಗ ಬಿಜೆಪಿ ಇದನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಮುಂದಾಗಿದೆ. ಈಗಾಗಲೇ ಸರ್ಕಾರದ ವಿರುದ್ಧ ಬಿಜೆಪಿ ಬೀದಿಗಿಳಿದು ಹೋರಾಟ ಆರಂಭಿಸಿದೆ. ಅಷ್ಟೇ ಅಲ್ಲದೆ ಕೇವಲ ಇದನ್ನು ರಾಜ್ಯಮಟ್ಟಕ್ಕೆ ಮಾತ್ರವಲ್ಲದೆ ದೇಶ ಮಟ್ಟಕ್ಕೂ ಕೊಂಡೊಯ್ಯುವ ಕೆಲಸ ಮಾಡಲಿದ್ದು, ಲೋಕಸಭಾ ಚುನಾವಣೆ ತನಕವೂ ಇದೆಲ್ಲವನ್ನು ಎಳೆದುಕೊಂಡು ಹೋಗುವ ಸಾಧ್ಯತೆಯಿದೆ.ಆ ಮೂಲಕ ಕಾಂಗ್ರೆಸ್ ವಿರುದ್ಧದ ಹೋರಾಟಕ್ಕೆ ಬಳಸಿಕೊಳ್ಳಲಿದೆ. ಆದರೆ ಇದನ್ನು ಕಾಂಗ್ರೆಸ್ ನಾಯಕರು ಹೇಗೆ ನಿಭಾಯಿಸುತ್ತಾರೆ ಎಂಬುದೇ ಈಗಿರುವ ಪ್ರಶ್ನೆಯಾಗಿದೆ.












Click it and Unblock the Notifications