ಕೇವಲ ಮಕ್ಕಳು ಎನ್ನುವ ಕಾರಣಕ್ಕೆ ಟಿಕೆಟ್ ಸಿಗಲ್ಲ: ವಿಜಯೇಂದ್ರ ಟಿಕೆಟ್ ನೀಡುವ ಕುರಿತು ಸಿ.ಟಿ ರವಿ ಹೇಳಿದ್ದೇನು?
ಬಿ.ವೈ ವಿಜಯೇಂದ್ರ ಗೆ ಟಿಕೆಟ್ ನೀಡುವ ಕುರಿತು ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಚರ್ಚೆಯಾಗತ್ತಿದ್ದು, ಈ ಕುರಿತು ಸಿ ಟಿ ರವಿ ಕಾಂಗ್ರೆಸ್ ಹಾಗೂ ಜೆಡಿಎಸ್ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರು,ಮಾರ್ಚ್ 14: ರಾಜ್ಯ ಬಿಜೆಪಿಯಲ್ಲಿ ಈ ಬಾರೀ ಚುನಾವಣೆಯಲ್ಲಿ ಹಲವು ಜನ ಶಾಸಕರಿಗೆ ಟಿಕೆಟ್ ಕೈ ತಪ್ಪಲಿದ್ದು, ಹೊಸ ಮುಖಗಳು ಹಾಗೂ ಆರ್ ಎಸ್ ಎಸ್ ಸೂಚಿಸಿದವರಿಗೆ ಟಿಕೆಟ್ ನೀಡಲಾಗುತ್ತದೆ ಎಂಬ ಚರ್ಚೆ ಜೋರಾಗಿದೆ.
ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಈಗಾಗಲೇ ಚುನಾವಣಾ ರಾಜಕೀಯದಿಂದ ದೂರ ಉಳಿದಿದ್ದಾರೆ. ಅಲ್ಲದೇ ಬಿ.ವೈ ವಿಜಯೇಂದ್ರ ಅವರು ಈ ಬಾರೀ ಹೈಕಮಾಂಡ್ ಒಪ್ಪಿಗೆ ಸೂಚಿಸಿದ್ರೆ ಶಿಕಾರಿಪುರದಿಂದ ಸ್ಪರ್ಧಿಸಲಿದ್ದಾರೆ ಎಂದು ಹೇಳಲಾಗಿದ್ದು. ಈ ಕುರಿತು ಕಾಂಗ್ರೆಸ್ ಟ್ವೀಟ್ ಮೂಲಕ ಕಾಲೆಳೆದಿದೆ.

ಈ ಕುರಿತು ಕಾಂಗ್ರೆಸ್ ಟ್ವೀಟ್‌ನಲ್ಲಿ ''ವಯಸ್ಸಿನ ಕಾರಣ ನೀಡಿ 'ಸಿಎಂ' ಹುದ್ದೆಯಿಂದ ಬಿ.ಎಸ್.ಯಡಿಯೂರಪ್ಪ ಅವರನ್ನು ಕೆಳಗಿಳಿಸಿದ್ದಾಯ್ತು. ನಿವೃತ್ತಿಯ ನಂತರವೂ ಬಿಜೆಪಿ ಪಕ್ಷವನ್ನು ಕರ್ನಾಟಕದಲ್ಲಿ ಮತ್ತೆ ಅಧಿಕಾರಕ್ಕೆ ತರಲು ಯಡಿಯೂರಪ್ಪನವರಿಗೆ 'ಟಾರ್ಗೆಟ್' ಕೊಟ್ಟಿದ್ದಾಯ್ತು. ಇದೀಗ ಅವರ ಮಗನಿಗೆ (ಬಿ.ವೈ.ವಿಜಯೇಂದ್ರ) ಚುನಾವಣಾ ಟಿಕೆಟ್ ವಿಚಾರದಲ್ಲಿ 'ಸಿಟಿ ರವಿ'ಯಂತ ಎಳಸುಗಳ ಮಾತು ಕೇಳಬೇಕಾಯ್ತು. ಯಡಿಯೂರಪ್ಪನವರೇ, ಬಿಜೆಪಿಯಲ್ಲಿ ನಿಮ್ಮ ಸ್ಥಿತಿ ಇಷ್ಟು ಹೀನಾಯವಾಯ್ತಲ್ಲ'' ಎಂದು ಬಿಜೆಪಿ ಹಾಗೂ ಬಿ.ಎಸ್.ಯಡಿಯೂರಪ್ಪ ಅವರ ಕಾಲೆಳೆದಿದೆ.
ಈ ಕುರಿತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಮಾತನಾಡಿ, ಕೇವಲ ಮಕ್ಕಳು ಎನ್ನುವ ಕಾರಣಕ್ಕೆ ಟಿಕೆಟ್ ಸಿಗಲ್ಲ. ಟಿಕೆಟ್ ಕೊಡುವ ನಿರ್ಣಯ ಅವರ ಮನೆಯಲ್ಲಿ ನಿರ್ಣಯ ಅಗಲ್ಲ. ಅವರಲ್ಲಿ ಟಿಕೆಟ್ ಕೊಡುವ ನಿರ್ಣಯ ಕಿಚನ್ ನಲ್ಲಿ ನಿರ್ಣಯ ಆಗುತ್ತೆ ನಮ್ಮಲ್ಲಿ ಪಾರ್ಟಿ ಡಿಸೈಡ್ ಮಾಡುತ್ತದೆ ಎಂದು ಕಾಂಗ್ರೆಸ್ ಹಾಗೂ ಜೆಡಿಎಸ್ ವಿರುದ್ದ ವಾಗ್ದಾಳಿ ನಡೆಸಿದರು.

ಯಡಿಯೂರಪ್ಪನವರ ಮಾರ್ಗದರ್ಶನದಲ್ಲಿಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಚುನಾವಣೆ ಎದುರಿಸುತ್ತೇವೆ. ಟಿಕೆಟ್ ಕೊಡುವ ಅಧಿಕಾರ ನಮಗಿಲ್ಲ. ಪಾರ್ಲಿಮೆಂಟರಿ ಬೋರ್ಡ್ ತೆಗೆದುಕೊಳ್ಳುವ ನಿರ್ಣಯಕ್ಕೆ ನಾವೆಲ್ಲರೂ ಬದ್ಧರಾಗಿರುತ್ತೇವೆ. ಕೇಂದ್ರ ಹಾಗೂ ರಾಜ್ಯ ಸರಕಾರಗಳು ಜನಪರ ಆಡಳಿತ ನೀಡಿದ್ದು, ನಾನಾ ಯೋಜನೆಗಳನ್ನು ಜಾರಿ ಮಾಡಿವೆ. ವಿಜಯಪುರ ಜಿಲ್ಲೆಯಲ್ಲಿ ವಿಮಾನ ನಿಲ್ದಾಣ, ಬೂದಿಹಾಳ-ಪೀರಾಪುರ ಏತ ನೀರಾವರಿ, ಮುಳವಾಡ ಮೂರನೇ ಹಂತ, ಹೊರ್ತಿ ಏತ ನೀರಾವರಿ ಸೇರಿದಂತೆ ಬಿಜೆಪಿ ಸರಕಾರ ಸಾಕಷ್ಟು ಅನುದಾನ ನೀಡಿದೆ ಎಂದು ಸಿ.ಟಿ. ರವಿ ಹೇಳಿದರು.
ಇನ್ನೂ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಬಹುಶಃ ಉಲ್ಟಾ ಮಚ್ಚೆ ಇದ್ದಂತೆ ಕಾಣಿಸುತ್ತೆ. ಮೋದಿ ಪ್ರಧಾನಿಯಾಗಲ್ಲ, ಯಡಿಯೂರಪ್ಪ ಸಿಎಂ ಆಗಲ್ಲಅಂದರು. ಆದರೆ, ಅವರು ಹೇಳಿದ್ದು ಉಲ್ಟಾ ಆಯ್ತು. ಅವರು ಹೇಳಿದೆಲ್ಲಉಲ್ಟಾ ಆಗುತ್ತಿರುವುದರಿಂದ ನಿತ್ಯ ಬಿಜೆಪಿನೇ ಅಧಿಕಾರಕ್ಕೆ ಬರುವುದು ಎಂದು ಬೆಳಗ್ಗೆಯಿಂದ ಭಾಷಣ ಮಾಡುತ್ತ ಬಂದರೆ ಉಲ್ಟಾ ಮಚ್ಚೆ ಕೆಲಸ ಮಾಡಬಹುದೇನೋ ಎಂದು ಸಿ.ಟಿ.ರವಿ ವ್ಯಂಗ್ಯವಾಡಿದರು.
ಕಾಂಗ್ರೆಸ್ ಪಕ್ಷದ ವಾರೆಂಟಿ ಪಿರಿಯಡ್ ಮುಗಿದಿದೆ. ಕಾಂಗ್ರೆಸ್‌ನ ಗ್ಯಾರಂಟಿ ಕಾರ್ಡ್ ಒಂದು ಫಾಲ್ಸ್ ಕಾರ್ಡ್ ಆಗಿದೆ. ನಾವು ಕೇಂದ್ರ ಹಾಗೂ ರಾಜ್ಯ ಸರಕಾರದ ಅಭಿವೃದ್ಧಿ ಕುರಿತು ರಿಪೋರ್ಟ್ ಕಾರ್ಡ್ ನೀಡುತ್ತೇವೆ. ಕೆರೆ ತುಂಬುವ ಯೋಜನೆಯನ್ನು ಈ ಹಿಂದೆ ಕಾಂಗ್ರೆಸ್ ಸರಕಾರ ತಿರಸ್ಕಾರ ಮಾಡಿತ್ತು. ಬಿಜೆಪಿ ಸರಕಾರ ಕೆರೆ ತುಂಬುವ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯ ಹೆಸರಿನಲ್ಲಿ, ಆಧುನೀಕ ಭಗೀರಥ ಎಂದು ಎಂ.ಬಿ.ಪಾಟೀಲರು ಫ್ಲೇಕ್ಸ್ ಹಾಕಿಕೊಳ್ಳುತ್ತಿದ್ದಾರೆ ಎಂದು ದೂರಿದರು.












Click it and Unblock the Notifications