‘3,500 ಕ್ಯುಸೆಕ್ ಹೆಚ್ಚುವರಿ ನೀರನ್ನು ಸ್ಟಾಲಿನ್ ಸರ್ಕಾರ ಮೆಚ್ಚಿಸಲು...’
ಕಾವೇರಿ ವಿವಾದ ಕಾವೇರಿದ ಸಂದರ್ಭದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಮಧ್ಯೆ ಈ ಸಂಬಂಧ ಫೈಟಿಂಗ್ ಜೋರಾಗಿದೆ. ನಿನ್ನೆ ಬೆಂಗಳೂರು ಬಂದ್ ಕಂಡ ಕನ್ನಡಿಗರಿಗೆ, ಈಗ ಕರ್ನಾಟಕ ಬಂದ್ ಬಿಸಿ ಕೂಡ ಕಾದಿದೆ. ಈ ಸಂದರ್ಭದಲ್ಲಿ ಕಾವೇರಿ ಸಮಸ್ಯೆ ಬಗೆಹರಿಸುವ ಬದಲು, ಕರ್ನಾಟಕದಲ್ಲಿ ಕಾವೇರಿ ವಿಚಾರಕ್ಕೆ ಮತ್ತೆ ರಾಜಕೀಯ ಕಿತ್ತಾಟ ಶುರುವಾಗಿದೆ. ಅದರಲ್ಲೂ ಆಡಳಿತ ಪಕ್ಷ ಕಾಂಗ್ರೆಸ್ ವಿರುದ್ಧ ಬಿಜೆಪಿ ದಿನಕ್ಕೊಂದು ಗಂಭೀರ ಆರೋಪ ಮಾಡುತ್ತಿದೆ.
ಕಾವೇರಿ ನದಿ ಭಾಗದಲ್ಲಿ ಈ ಬಾರಿ ತೀವ್ರ ಮಳೆ ಕೊರತೆ ಉಂಟಾಗಿದ್ದು ಕುಡಿಯುವ ನೀರು ಕೂಡ ಸಿಗದ ಪರಿಸ್ಥಿತಿ ಎದುರಾಗಿದೆ. ಮುಂದಿನ ಬೇಸಿಗೆ ಹೊತ್ತಿಗೆ ರಾಜ್ಯದಲ್ಲಿ ನೀರಿಗಾಗಿ ಭಾರಿ ಕೊರತೆ ಎದುರಾಗಲಿದೆ. ಇದೇ ಸಂದರ್ಭದಲ್ಲಿ ತಮಿಳುನಾಡು ನೀರಿನ ವಿಚಾರ ಮುಂದಿಟ್ಟುಕೊಂಡು, ನೀರು ಬಿಡಿ ಅಂತಾ ಟಾರ್ಚರ್ ಮಾಡುತ್ತಿದೆ. ಈ ಕುರಿತು ರಾಜಧಾನಿ ಬೆಂಗಳೂರಿನಲ್ಲೂ ನಿನ್ನೆ ಬೃಹತ್ ಪ್ರತಿಭಟನೆ ನಡೆಸಲಾಗಿದೆ. ಇನ್ನು ಈ ವಿಚಾರವಾಗಿ ಶುಕ್ರವಾರ ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿದೆ. ಇದೇ ವೇಳೆ ರಾಜ್ಯದ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಹೊಸ ಬಾಂಬ್ ಸಿಡಿಸಿದೆ.

ಸ್ಟಾಲಿನ್ ಸರ್ಕಾರ ಮೆಚ್ಚಿಸಲು ಹೆಚ್ಚುವರಿ ನೀರು?
ಕಾವೇರಿ ವಿಚಾರದಲ್ಲಿ ಪದೇ ಪದೆ ಇಂಡಿಯಾ ಮೈತ್ರಿಕೂಟದ ಹೆಸರು ಪ್ರಸ್ತಾಪ ಮಾಡುತ್ತಾ ಬಿಜೆಪಿ ವಾಗ್ದಾಳಿ ನಡೆಸುತ್ತಿದೆ. ಅದೇ ರೀತಿ ಈಗಲೂ ಒಂದು ಗಂಭೀರ ಆರೋಪ ಮಾಡಿದ ಬಿಜೆಪಿ ಟ್ವೀಟ್ ಮೂಲಕ, 'I.N.D.I. ಮೈತ್ರಿಕೂಟದ ಉಳಿವಿಗಾಗಿ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಸ್ಟಾಲಿನ್ ಸರ್ಕಾರಕ್ಕೆ ಕದ್ದು ಮುಚ್ಚಿ ನೀರು ಬಿಡುವುದರ ಜತೆಗೆ ಈಗ ಹೆಚ್ಚುವರಿ ನೀರನ್ನು ಹರಿಸುತ್ತಿದೆ. ಸಿದ್ದರಾಮಯ್ಯ ಅವರ ಸರ್ಕಾರದ ನಾಡದ್ರೋಹಿ ನಿರ್ಧಾರಗಳ ವಿರುದ್ಧ ರಾಜ್ಯದ ಜನರು ಬೀದಿಗಿಳಿದು ಪ್ರತಿಭಟಿಸುತ್ತಿದ್ದರೂ, ಈ ಬಗ್ಗೆ ತಲೆ ಕೆಡಿಸಿಕೊಳ್ಳದ ಕಾಂಗ್ರೆಸ್‌ನ ಲಜ್ಜೆಗೇಡಿ ಸರ್ಕಾರ, ನೆನ್ನೆಯಷ್ಟೇ 3,000 ಕ್ಯುಸೆಕ್ ನೀರನ್ನು ಯಾವುದೇ ಚಕಾರ ಎತ್ತದೆ ತಮಿಳುನಾಡಿಗೆ ಹರಿಸಲು ಒಪ್ಪಿಕೊಂಡಿತ್ತು.' ಎಂದು ಆರೋಪಿಸಿದೆ.
I.N.D.I. ಮೈತ್ರಿಕೂಟದ ಉಳಿವಿಗಾಗಿ @INCKarnataka ಸರ್ಕಾರ ಸ್ಟಾಲಿನ್ ಸರ್ಕಾರಕ್ಕೆ ಕದ್ದು ಮುಚ್ಚಿ ನೀರು ಬಿಡುವುದರ ಜತೆಗೆ ಈಗ ಹೆಚ್ಚುವರಿ ನೀರನ್ನು ಹರಿಸುತ್ತಿದೆ.@siddaramaiah ಅವರ ಸರ್ಕಾರದ ನಾಡದ್ರೋಹಿ ನಿರ್ಧಾರಗಳ ವಿರುದ್ಧ ರಾಜ್ಯದ ಜನರು ಬೀದಿಗಿಳಿದು ಪ್ರತಿಭಟಿಸುತ್ತಿದ್ದರೂ, ಈ ಬಗ್ಗೆ ತಲೆ ಕೆಡಿಸಿಕೊಳ್ಳದ ಕಾಂಗ್ರೆಸ್‌ನ… https://t.co/0eys8T4G2s pic.twitter.com/LfsIEWXk5k
— BJP Karnataka (@BJP4Karnataka) September 27, 2023
ಹಾಗೇ ಈ ಟ್ವೀಟ್‌ನಲ್ಲಿ ಕಾಂಗ್ರೆಸ್ ನಾಯಕರ ವಿರುದ್ಧ ಆರೋಪ ಮುಂದುವರಿಸಿದ ಬಿಜೆಪಿ 'ಈಗ, ಇದರ ನಡುವೆಯೇ ಗಾಯದ ಮೇಲೆ ಬರೆ ಎಳೆಯುವಂತೆ, ಜಲಸಂಪನ್ಮೂಲ ಸಚಿವ @DKShivakumar ಅವರು ಕನ್ನಡಿಗರ ಸ್ವಾಭಿಮಾನವನ್ನು ಬದಿಗಿಟ್ಟು ಆದೇಶಕ್ಕಿಂತಲೂ 3,500 ಕ್ಯುಸೆಕ್ ಹೆಚ್ಚುವರಿ ನೀರನ್ನು ಸ್ಟಾಲಿನ್ ಸರ್ಕಾರವನ್ನು ಮೆಚ್ಚಿಸಲು ಹರಿಸಿದ್ದಾರೆ. ಕನ್ನಡಿಗರ ಸ್ವಾಭಿಮಾನವನ್ನು ಸ್ಟಾಲಿನ್ ಕಾಲಡಿಗಿಟ್ಟು ಕಾಂಗ್ರೆಸ್ ಕರ್ನಾಟಕಕ್ಕೆ, ಕನ್ನಡಿಗರಿಗೆ ಅವಮಾನ ಮಾಡುತ್ತಿದೆ.' ಎಂದು ಗಂಭೀರ ಆರೋಪ ಮಾಡಿದೆ ಕರ್ನಾಟಕ ಬಿಜೆಪಿ ಘಟಕ.
ಒಟ್ನಲ್ಲಿ ಕಾವೇರಿ ಕಾವು ಹೆಚ್ಚಾದ ಸಮಯಕ್ಕೆ ಕರ್ನಾಟಕದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ನ ನಾಯಕರ ಮಧ್ಯೆ ರಾಜಕೀಯ ಕಿತ್ತಾಟ ಹೆಚ್ಚಾಗಿದೆ. ಈ ಬಗ್ಗೆ ಕರ್ನಾಟಕದ ಜನರು ಕೂಡ ಬೇಸರ ವ್ಯಕ್ತಪಡಿಸುತ್ತಿದ್ದು, ತಮಿಳುನಾಡಿನ ರಾಜಕಾರಣಿಗಳ ರೀತಿ ಒಗ್ಗಟ್ಟು ಪ್ರದರ್ಶಿಸಲಿ ಅಂತಾ ಆಗ್ರಹಿಸುತ್ತಿದ್ದಾರೆ. ಆದರೆ ಅದು ಸಾಧ್ಯವಾಗುತ್ತಾ? ಕಾದು ನೋಡಬೇಕಿದೆ.












Click it and Unblock the Notifications