Election Commission : ಶಿಗ್ಗಾವಿ ಕಾಂಗ್ರೆಸ್ ಅಭ್ಯರ್ಥಿ ಪಠಾಣ್ ವಿರುದ್ದ ಕೇಂದ್ರ ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು
ಹಾವೇರಿ, ನವೆಂಬರ್ 13: ಶಿಗ್ಗಾವಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಯಾಸೀರ್ ಖಾನ್ ಪಠಾಣ್ ವಿರುದ್ದ ಬಿಜೆಪಿ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು ನೀಡಿದೆ. ಬಿಜೆಪಿ ಚುನಾವಣಾ ಏಜೆಂಟ್ ಆಗಿರುವ ಎಸ್ ಕೆ ಅಕ್ಕಿ ಇ - ಮೇಲ್ ಮೂಲಕ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು ನೀಡಿದ್ದಾರೆ.
ಹಾವೇರಿ ಎಸ್ ಪಿ ಆಂಶುಕುಮಾರ್ ಅವರು ಕಾಂಗ್ರೆಸ್ ಅಭ್ಯರ್ಥಿ ಯಾಸೀರ್ ಖಾನ್ ಪಠಾಣ್ ಮೇಲೆ ರೌಡಿ ಶೀಟರ್ ಸ್ಟೇಟಸ್ ಇದೆ ಎಂದು ಹೇಳಿಕೆ ನೀಡಿದ್ದಾರೆ. ಆದರೆ, ಯಾಸಿರ್ ಖಾನ್ ಪಠಾಣ್ ಚುನಾವಣಾ ಅಫಡವಿಟ್ ನಲ್ಲಿ ತಮ್ಮ ವಿರುದ್ಧ ಯಾವುದೇ ಪ್ರಕರಣಗಳಿಲ್ಲ ಎಂದು ಘೋಷಿಸಿಕೊಂಡಿದ್ದಾರೆ.

ಕಳೆದ 2023 ರ ವಿಧಾನಸಭೆ ಚುನಾವಣೆ ವೇಳೆ ಅವರ ಮೇಲೆ ಹಲವು ಕೇಸ್ ಗಳು ಇವೆ ಎಂದು ಘೋಷಿಸಿಕೊಂಡಿದ್ದರು. ಆದರೆ ಆಶ್ಚರ್ಯ ಅಂದರೆ ಉಪ ಚುನಾವಣೆಗೆ ಸಲ್ಲಿಸಿರುವ ಅಪಡವಿಟ್ ನಲ್ಲಿ ಕೇಸ್ ಗಳು ಇಲ್ಲ ಎಂದಿದ್ದಾರೆ.
ಒಂದೇ ವರ್ಷದಲ್ಲಿ ಅವರ ತಮ್ಮ ವಿರುದ್ದ ಯಾವುದೇ ಪ್ರಕರಣ ಇಲ್ಲ ಎಂದು ಅಫಿಡವಿಟ್ ಸಲ್ಲಿಸಿದ್ದಾರೆ. ಚುನಾವಣಾಧಿಕಾರಿಗಳು ಅವರ ನಾಮಪತ್ರವನ್ನು ಯಾವುದೇ ಪರಿಶೀಲನೆ ಮಾಡದೇ ಅಂಗೀಕರಿಸಿದ್ದಾರೆ. ಹಾವೇರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಾಸಿರ್ ಖಾನ್ ಪಠಾಣ್ ವಿರುದ್ದದ ಪ್ರಕರಣಗಳು ಕ್ಲೋಸ್ ಆಗಿಲ್ಲ ಎಂದು ಹೇಳಿದ್ದಾರೆ. ನಂತರ ಅವರು ಒತ್ತಡಕ್ಕೆ ಮಣಿದು ಎಲ್ಲ ಪ್ರಕರಣಗಳು ಮುಕ್ತಾಯವಾಗಿವೆ ಎಂದು ಹೇಳಿದ್ದಾರೆ.
ಹಾವೇರಿ ಎಸ್ಪಿ ಹೇಳಿಕೆ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಕಾಂಗ್ರೆಸ್ ಅಭ್ಯರ್ಥಿ ಸುಳ್ಳು ದಾಖಲೆ ನೀಡಿ ನಾಮಪತ್ರ ಸಲ್ಲಿಸಿದ್ದು, ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆಗಿದ್ದು, ಶಿಗ್ಗಾವಿ ಸವಣೂರು ಕ್ಷೇತ್ರದ ಮತದಾರರಿಗೆ ದಾರಿ ತಪ್ಪಿಸುವ ಕೆಲಸ ಮಾಡಿದ್ದಾರೆ. ಹೀಗಾಗಿ ಈ ಬಗ್ಗೆ ವಿಸ್ತೃತ ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳಬೇಕು, ಶಿಗ್ಗಾವಿ ಸವಣೂರು ಕ್ಷೇತ್ರದಲ್ಲಿ ಮುಕ್ತ ಮತ್ತು ನ್ಯಾಯ ಸಮ್ಮತ ಚುನಾವಣೆ ನಡೆಸಬೇಕೆಂದು ಮನವಿ ಮಾಡಿದ್ದಾರೆ.
ದೂರಿನ ಪ್ರತಿಯೊಂದಿಗೆ ಯಾಸಿರ್ ಖಾನ್ ಪಠಾಣ್ 2023 ರಲ್ಲಿ ಹಾಗೂ ಈ ಬಾರಿ ಶಿಗ್ಗಾವಿ ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಚುನಾವಣಾಧಿಕಾರಿಗಳಿಗೆ ಸಲ್ಲಿಸಿದ್ದ ಅಫಡವಿಟ್ ಹಾಗೂ ಹಾವೇರಿ ಎಸ್ ಪಿ ಅಂಶುಕುಮಾರ್ ಸುದ್ದಿ ಗೋಷ್ಟಿಯಲ್ಲಿ ಯಾಸಿರ್ ಖಾನ್ ಪಠಾಣ್ ಮೇಲೆ ರೌಡಿ ಶೀಟರ್ ಇನ್ನೂ ಇದೆ ಎಂಬ ಹೇಳಿಕೆಯ ವಿಡಿಯೋ ಕ್ಲಿಪ್ಪಿಂಗ್ಸ್ ಲಗತ್ತಿಸಿದ್ದಾರೆ.












Click it and Unblock the Notifications