10 ನಿಮಿಷ ನಡ್ಡಾ ಜೊತೆ ಸಭೆ; ಯಡಿಯೂರಪ್ಪ ಬೆಂಗಳೂರಿಗೆ ವಾಪಸ್!
ಬೆಂಗಳೂರು, ಏಪ್ರಿಲ್ 10; ಕರ್ನಾಟಕದ ವಿಧಾನಸಭೆ ಚುನಾವಣೆಗೆ ಬಿಜೆಪಿ ಪಟ್ಟಿ ಯಾವುದೇ ಕ್ಷಣದಲ್ಲಿ ಬಿಡುಗಡೆಯಾಗುವ ನಿರೀಕ್ಷೆ ಇದೆ. ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ದೆಹಲಿಯಿಂದ ಬೆಂಗಳೂರಿಗೆ ವಾಪಸ್ ಆಗುತ್ತಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ ಜೊತೆ ಅವರು ಕೇವಲ 10 ನಿಮಿಷ ಸಭೆ ನಡೆಸಿದರು ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
ಶುಕ್ರವಾರ ಸಂಜೆಯಿಂದ ದೆಹಲಿಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಅಂತಿಮಗೊಳಿಸಲು ಸರಣಿ ಸಭೆಗಳು ನಡೆಯುತ್ತಿವೆ. ಪಟ್ಟಿ ಅಂತಿಮಗೊಳಿಸುವ ಕಾರ್ಯವನ್ನು ಮುಗಿಸಿ ಸಂಸದೀಯ ಮಂಡಳಿ ಸದಸ್ಯರೂ ಆದ ಯಡಿಯೂರಪ್ಪ ಸೋಮವಾರ ಸಂಜೆ ಬೆಂಗಳೂರು ವಿಮಾನ ಏರಿದ್ದಾರೆ. ಆದರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಉಳಿದ ನಾಯಕರು ದೆಹಲಿಯಲ್ಲಿಯೇ ಇದ್ದಾರೆ.

ಸೋಮವಾರ ತಡರಾತ್ರಿ ಬಿಜೆಪಿ ಪಟ್ಟಿ ಬಿಡುಗಡೆಯಾಗುವ ನಿರೀಕ್ಷೆ ಇದೆ. ಪಕ್ಷದ ಮೂಲಗಳ ಮಾಹಿತಿ ಪ್ರಕಾರ 170 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಮೊದಲ ಪಟ್ಟಿಯಲ್ಲಿ ಘೋಷಣೆ ಮಾಡಲಾಗುತ್ತದೆ. 13 ಹಾಲಿ ಶಾಸಕರಿಗೆ ಟಿಕೆಟ್ ಕೈತಪ್ಪಲಿದೆ ಎಂದು ರಾಷ್ಟ್ರೀಯ ಮಾಧ್ಯಮಗಳ ವರದಿ ಹೇಳಿದೆ. ಸೋಮವಾರ ಸಂಜೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ ನಿವಾಸದಲ್ಲಿ ಹೊಸ ಮುಖಗಳಿಗೆ ಟಿಕೆಟ್ ನೀಡುವ ಕುರಿತು ಪ್ರತ್ಯೇಕ ಸಭೆ ನಡೆಸಲಾಗಿದೆ.
ಬಿ. ಎಸ್. ಯಡಿಯೂರಪ್ಪ ಜೆ. ಪಿ. ನಡ್ಡಾ ಜೊತೆ ಕೇವಲ 10 ನಿಮಿಷ ಅಭ್ಯರ್ಥಿಗಳ ಕುರಿತು ಚರ್ಚೆ ನಡೆಸಿದ್ದಾರೆ. ಬಳಿಕ ಅವರು ಬೆಂಗಳೂರು ವಿಮಾನ ಹತ್ತಿದ್ದಾರೆ. ಟಿಕೆಟ್ ಆಕಾಂಕ್ಷಿಗಳ ಬಗ್ಗೆ ನಡ್ಡಾ ಯಡಿಯೂರಪ್ಪ ಜೊತೆ ಪ್ರತ್ಯೇಕವಾಗಿ ಅಭಿಪ್ರಾಯವನ್ನು ಸಂಗ್ರಹ ಮಾಡಿದ್ದಾರೆ. ಬಸವರಾಜ ಬೊಮ್ಮಾಯಿ, ನಳೀನ್ ಕುಮಾರ್ ಕಟೀಲ್ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ನಿವಾಸದಲ್ಲಿ ಸಭೆ ನಡೆಸುತ್ತಿದ್ದು, ರಾತ್ರಿ ಮತ್ತೊಮ್ಮೆ ಹೈಕಮಾಂಡ್ ನಾಯಕರನ್ನು ಭೇಟಿಯಾಗಲಿದ್ದಾರೆ.

ಯಡಿಯೂರಪ್ಪ ಇರಲಿಲ್ಲ; ಕೇಂದ್ರ ಗೃಹ ಸಚಿವ, ಬಿಜೆಪಿ ವರಿಷ್ಠ ಅಮಿತ್ ಶಾ ಸೋಮವಾರ ಬೆಳಗ್ಗೆ ಬಿ. ಎಸ್. ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಜೊತೆ ಸಭೆ ನಡೆಸಿದರು. ಆದರೆ ಈ ಸಭೆಯಲ್ಲಿ ಬಿ. ಎಸ್. ಯಡಿಯೂರಪ್ಪ ಪಾಲ್ಗೊಂಡಿರಲಿಲ್ಲ. ಈ ಸಭೆಯ ಬಳಿಕ ಜೆ. ಪಿ. ನಡ್ಡಾ ಯಡಿಯೂರಪ್ಪ ಜೊತೆ ಪ್ರತ್ಯೇಕ ಸಭೆ ಮಾಡಿದರು. ಸರಣಿ ಸಭೆಗಳ ಬಳಿಕ 10ಕ್ಕೂ ಹೆಚ್ಚು ಹಾಲಿ ಶಾಸಕರಿಗೆ ಟಿಕೆಟ್ ಕೈ ತಪ್ಪಲಿದೆ ಎಂಬ ಸುದ್ದಿಗಳು ಹರಿದಾಡುತ್ತಿವೆ.
30 ರಿಂದ 40 ಕ್ಷೇತ್ರಗಳಲ್ಲಿ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದೆ. ಆದ್ದರಿಂದ 2ನೇ ಪಟ್ಟಿಯಲ್ಲಿ ಅಭ್ಯರ್ಥಿಗಳನ್ನು ಘೋಷಣೆ ಮಾಡುವ ನಿರೀಕ್ಷೆ ಇದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ನಳಿನ್ ಕುಮಾರ್ ಕಟೀಲ್ 2ನೇ ಪಟ್ಟಿಯನ್ನು ಅಂತಿಮಗೊಳಿಸಿ ದೆಹಲಿಯಿಂದ ವಾಪಸ್ ಆಗುವ ನಿರೀಕ್ಷೆ ಇದೆ. ಏಪ್ರಿಲ್ 13ರಂದು ಚುನಾವಣೆ ಅಧಿಸೂಚನೆ ಪ್ರಕಟವಾಗಲಿದೆ. ಆದ್ದರಿಂದ ಸೋಮವಾರವೇ ಬಿಜೆಪಿ ಪಟ್ಟಿ ಪ್ರಕಟಗೊಳ್ಳುವ ನಿರೀಕ್ಷೆ ಇದೆ.
ವಿಳಂಬಕ್ಕೆ ಕಾರಣವೇನು?; ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ವಿಳಂಬಕ್ಕೆ ಕಾರಣವೇನು? ಎಂಬುದು ಎಲ್ಲರ ಪ್ರಶ್ನೆ. ಕೆಲವು ಶಾಸಕರು ತಮಗೂ ಟಿಕೆಟ್ ನೀಡಿ, ತಮ್ಮ ಮಕ್ಕಳಿಗೂ ಟಿಕೆಟ್ ಬೇಕು ಎಂದು ಪಟ್ಟು ಹಿಡಿದಿದ್ದಾರೆ. ಕೆಲವು ವಿಧಾನ ಪರಿಷತ್ ಸದಸ್ಯರು, ಸಂಸದರು ಸಹ ಟಿಕೆಟ್ ಕೇಳಿದ್ದಾರೆ. ಅಲ್ಲದೇ ಕೆಲವು ಸಮೀಕ್ಷೆಗಳಲ್ಲಿ ಹಲವು ಶಾಸಕರು ಗೆಲ್ಲುವುದಿಲ್ಲ ಎಂಬ ಮಾಹಿತಿ ಇದೆ. ಆದ್ದರಿಂದ ವರಿಷ್ಠರು ಅಳೆದು ತೂಗಿ ಅಭ್ಯರ್ಥಿಗಳನ್ನು ಅಂತಿಮಗೊಳಿಸುತ್ತಿದ್ದಾರೆ.
ಈ ಬಾರಿಯ ಕರ್ನಾಟಕ ಚುನಾವಣೆಗೆ ಕಾಂಗ್ರೆಸ್ 124 ಮತ್ತು 42 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ಜೆಡಿಎಸ್ 93 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದೆ. ಆಮ್ ಆದ್ಮಿ ಪಕ್ಷ 3 ಪಟ್ಟಿಯನ್ನು ಬಿಡುಗಡೆ ಮಾಡಿದೆ.












Click it and Unblock the Notifications