ತಮಿಳುನಾಡಿಗೆ ನೀರು ತಕ್ಷಣ ನಿಲ್ಲಿಸದಿದ್ರೆ ಕೆಆರ್‌ಎಸ್‌ಗೆ ಮುತ್ತಿಗೆ: ಅಶೋಕ್ ಎಚ್ಚರಿಕೆ
ರಾಜ್ಯದಲ್ಲಿ ಈ ಬಾರಿ ಜೂನ್ ತಿಂಗಳಲ್ಲೇ ಭರ್ಜರಿ ಮಳೆಯಾಗಿರುವ ಹಿನ್ನೆಲೆ ಬಹುತೇಕ ಡ್ಯಾಂಗಳು ಭರ್ತಿಯಾಗಿವೆ. ಹೀಗಾಗಿ ಇತ್ತೀಚೆಗಷ್ಟೇ ವಿವಿಧೆಡೆ ಬಾಗಿನ ಅರ್ಪಿಸಿದ್ದ ಸಿದ್ದರಾಮಯ್ಯ ಅವರು ನೀರನ್ನು ನಾಲೆಗಳಿಗೆ, ಕೆರೆಗಳಿಗೆ ಹರಿಸುವುದಾಗಿ ಹೇಳಿದ್ದರು. ಈಗ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ವಿಪಕ್ಷ ನಾಯಕ ಆರ್.ಅಶೋಕ್ ತೊಡೆತಟ್ಟಿದ್ದಾರೆ. ನಾವು ಸರ್ಕಾರಕ್ಕೆ 24 ಗಂಟೆ ಸಮಯ ಕೊಡುತ್ತೇವೆ. ನಾಳೆ ಸಂಜೆಯೊಳಗೆ ಕೆಆರ್‌ಎಸ್ ನೀರನ್ನು ತಮಿಳುನಾಡಿಗೆ ಹರಿಸುವುದನ್ನು ನಿಲ್ಲಿಸಬೇಕು. ಇಲ್ಲದಿದ್ದರೆ ನಾಳೆ ರಾತ್ರಿ ಕೆಆರ್ ಎಸ್ ಜಲಾಶಯಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಬೇಕಾಗುತ್ತೆ ಎಂದು ಎಚ್ಚರಿಕೆ ನೀಡಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈಗಾಗಲೇ ಸೂಚನೆ ಕೊಟ್ಟಿರುವಂತೆ ನೀರನ್ನು ನಾಲೆಗಳಿಗೆ ಬಿಡಬೇಕು ಮತ್ತು ಕೆರೆಗಳನ್ನು ತುಂಬಿಸಲು ಬಳಸಬೇಕು ಎಂದು ಆಗ್ರಹಿಸಿದ್ದಾರೆ. ಕೆಆರ್‌ಎಸ್ ಅಣೆಕಟ್ಟೆ ನಿರ್ಮಾಣವಾದ ನಂತರ 94 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಜೂನ್ ತಿಂಗಳಲ್ಲೇ ಡ್ಯಾಂ ಭರ್ತಿಯಾಗುತ್ತಿರುವುದು ಕಾವೇರಿ ಜಲನಯಯ ಪ್ರದೇಶದ ರೈತರಲ್ಲಿ ಸಂತಸ ಮೂಡಿಸಿದೆ ಎಂದು ಅಶೋಕ್ ಹೇಳಿದ್ದಾರೆ.
ದೇವರು ಕೊಟ್ಟರೂ ಪೂಜಾರಿ ಕೊಡ್ತಿಲ್ಲ
ಆದರೆ ದೇವರು ಕೊಟ್ಟರೂ ಪೂಜಾರಿ ಕೊಡಲಿಲ್ಲ ಎಂಬಂತೆ ಸಿಎಂ ಸಿದ್ದರಾಮಯ್ಯ ಅವರು ಬಾಗಿನ ಅರ್ಪಿಸಿ ನಾಲೆಗಳಿಗೆ ನೀರು ಹರಿಸುತ್ತೇವೆ, ಕೆರೆ ತುಂಬಿಸುತ್ತೇವೆ ಎಂದು ರೈತರ ಮೂಗಿಗೆ ತುಪ್ಪ ಸವರಿ, ಎಂದಿನಂತೆ ಇಂಡಿ ಮಿತ್ರಕೂಟದ ಡಿಎಂಕೆ ಸರ್ಕಾರ ಹಾಗೂ ರಾಹುಲ್ ಗಾಂಧಿ ಅವರ ಪರಮಾಪ್ತ ಮಿತ್ರ ಸಿಎಂ ಸ್ಟಾಲಿನ್ ಅವರನ್ನು ಮೆಚ್ಚಿಸಲು ತಮಿಳುನಾಡಿಗೆ ಎಗ್ಗಿಲ್ಲದೆ ನೀರು ಹರಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ತಾವು ಬಾಗಿನ ಅರ್ಪಿಸಿ ನಾಲೆಗಳಿಗೆ ನೀರು ಬಿಡುತ್ತೇವೆ, ಕೆರೆಗಳನ್ನು ತುಂಬಿಸುತ್ತೇವೆ ಎಂದು ಘೋಷಣೆ ಮಾಡಿ ಅಧಿಕಾರಿಗಳಿಗೆ ಸೂಚನೆ ಕೊಟ್ಟು 5 ದಿನಗಳು ಕಳೆದಿದೆ. ಆದರೂ ಅಧಿಕಾರಿಗಳು ತಮ್ಮ ಮಾತಿಗೆ ಕ್ಯಾರೇ ಎನ್ನದೆ ತಮಿಳುನಾಡಿಗೆ ಎಗ್ಗಿಲ್ಲದೆ ಧಾರಾಳವಾಗಿ ನೀರು ಹರಿಬಿಡುತ್ತಿದ್ದಾರೆ. ಅಧಿಕಾರಿಗಳು ತಮ್ಮ ಮಾತಿಗೆ ಕವಡೆ ಕಾಸಿನ ಕಿಮ್ಮತ್ತು ಕೊಡುತ್ತಿಲ್ಲವೋ ಅಥವಾ ಜಲಸಂಪನ್ಮೂಲ ಸಚಿವರೂ ಆಗಿರುವ ಡಿಸಿಎಂ ಡಿಕೆ ಶಿವಕುಮಾರ್ ಅವರು ತಮ್ಮ ಇಲಾಖೆಯ ಅಧಿಕಾರಿಗಳಿಗೆ ತಮ್ಮ ಸೂಚನೆ ಧಿಕ್ಕರಿಸಿ ತಮಿಳುನಾಡಿಗೆ ನೀರು ಹರಿಸುವುದನ್ನು ಮುಂದುವರೆಸಲು ಸೂಚನೆ ಕೊಟ್ಟಿದ್ದಾರೋ? ಎಂದು ಕಿಡಿಕಾರಿದ್ದಾರೆ.
ನಿಮ್ಮ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ನಡುವೆ ನಡೆಯುತ್ತಿರುವ ಶೀತಲ ಸಮರ ಅಧಿಕಾರಿಗಳಲ್ಲಿ ಗೊಂದಲ ಉಂಟು ಮಾಡಿದೆಯೋ? ಉತ್ತಮ ಮಳೆಯಾಗಿರುವಾಗ ಅದನ್ನ ಬಳಿಸಿಕೊಂಡು, ನಾಲೆಗಳಿಗೆ ನೀರು ಹರಿಸಿ, ಕೆರೆ ತುಂಬಿಸಿ ಕರ್ನಾಟಕದ ರೈತರಿಗೆ ಅನುಕೂಲ ಮಾಡಿಕೊಡಬೇಕಾದ ರಾಜ್ಯ ಸರ್ಕಾರ ತಮಿಳುನಾಡಿಗೆ ಬೇಕಾಬಿಟ್ಟಿ ನೀರು ಹರಿಸುವುದು ನಾಡಿನ ಅನ್ನದಾತರಿಗೆ ಮಾಡುತ್ತಿರುವ ಮೋಸ, ನಯವಂಚನೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಕಾವೇರಿ ಜಲಾನಯನ ಪ್ರದೇಶದಲ್ಲಿ ಬಿದ್ದ ಸಮೃದ್ಧ ಮಳೆಯಿಂದಾಗಿ ಕೆಆರ್‌ಎಸ್ ಹಾಗೂ ಕಬಿನಿ ಜಲಾಶಯಗಳು ಭರ್ತಿಯಾಗಿರುವ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಅವರು ಕಾವೇರಿ ತಾಯಿಗೆ ಪೂಜೆ ಸಲ್ಲಿಸಿ, ನಂತರ ಬಾಗಿನ ಅರ್ಪಿಸಿದ್ದರು. ನಾಡಿನಲ್ಲಿ ಸುಖ, ಶಾಂತಿ, ಸಮೃದ್ಧಿ ನೆಲೆಸಲಿ ಎಂದು ಪ್ರಾರ್ಥಿಸಿದ್ದರು.












Click it and Unblock the Notifications