ಬೆಳಗಾವಿ ಅಧಿವೇಶನ; ಸರ್ಕಾರದ ವಿರುದ್ದ ಕಮಲ-ದಳ ಅಸ್ತ್ರ ಪ್ರಯೋಗ: ಸಮನ್ವಯ ಸಭೆಯಲ್ಲಿ ಚರ್ಚೆಯಾಗಿದ್ದೇನು?
ಬೆಂಗಳೂರು, ನವೆಂಬರ್ 29: ಬೆಳಗಾವಿಯಲ್ಲಿ ಡಿಸೆಂಬರ್ 8 ರಿಂದ ಚಳಿಗಾಲದ ಅಧಿವೇಶನ ಆರಂಭಗೊಳ್ಳಲಿದೆ. ಆದರೆ ವಿಧಾನಸಭೆಯಲ್ಲಿ ಆಡಳಿತ ಪಕ್ಷವನ್ನು ಕಟ್ಟಿಹಾಕಲು ಬಿಜೆಪಿ ಹಾಗೂ ಜೆಡಿಎಸ್ ಬಳಿ ಹಲವು ಅಸ್ತ್ರಗಳ ಪ್ರಯೋಗಕ್ಕೆ ಮುಂದಾಗಿದ್ದು, ಇಂದು ರಾಡಿಸನ್ ಬ್ಲೂ ಹೋಟೆಲ್ ನಲ್ಲಿ ಬಿಜೆಪಿ ಮತ್ತು ಜೆಡಿಎಸ್ ಸಮನ್ವಯ ಸಭೆಯಲ್ಲಿ ಕಮಲ-ದಳ ನಾಯಕರು ಸರ್ಕಾರದ ವಿರುದ್ದ ಹಲವು ಅಸ್ತ್ರಗಳ ಪ್ರಯೋಗದ ಕುರಿತು ಚರ್ಚೆ ನಡೆಸಿದರು.
ಬಿಜೆಪಿ ಮತ್ತು ಜೆಡಿಎಸ್ ಸಮನ್ವಯ ಸಭೆಯ ಬಳಿಕ ಮಾಧ್ಯಮಗಳ ಜೊತೆಗೆ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಆರ್ ಅಶೋಕ್ ಅವರು ಮಾತನಾಡಿ, ರಾಜ್ಯ ಸರಕಾರ ಕಾಟಾಚಾರಕ್ಕೆ ಬೆಳಗಾವಿ ಅಧಿವೇಶನ ನಡೆಸುತ್ತಿದೆ. ಅದು 8 ದಿನಕ್ಕಿಂತ ಹೆಚ್ಚು ಕಾಲ ನಡೆಯಲಾರದು. ಹಾಲಿ ಶಾಸಕರು ಮೃತಪಟ್ಟ ಕಾರಣ ಒಂದು ದಿನ ನಡೆಯಲಾರದು, ಆಡಳಿತ ಪಕ್ಷ ಕಾಂಗ್ರೆಸ್ ತನ್ನ ಮರ್ಜಿಗೋಸ್ಕರ, ಮಸೂದೆ ಅಂಗೀಕಾರಕ್ಕೆ ಈ ಅಧಿವೇಶನವನ್ನು ಬಳಸಿಕೊಳ್ಳುತ್ತಿದೆ ಎಂದು ಟೀಕಿಸಿದರು. ಬೆಂಗಳೂರು ಅಭಿವೃದ್ಧಿ, ಬೆಂಗಳೂರು ಪಾಲಿಕೆ- ಈ ಥರದ ವಿಚಾರಗಳನ್ನು ತಂದಿದ್ದಾರೆ ಎಂದರು.

ಬೆಂಗಳೂರಿನ ವಿಚಾರಗಳನ್ನೇ ಕೈಗೆತ್ತಿಕೊಳ್ಳುವುದಾದರೆ ಉತ್ತರ ಕರ್ನಾಟಕದಲ್ಲಿ ಅಧಿವೇಶನ ನಡೆಸುವ ಔಚಿತ್ಯ ಏನು ಎಂದು ಕೇಳಿದರು. ಹಿಂದೆ ಕುಮಾರಸ್ವಾಮಿ, ಯಡಿಯೂರಪ್ಪ ಅವರಿದ್ದಾಗ ಅಲ್ಲೊಂದು ಭವನ ಆಗಬೇಕು, ಉತ್ತರ ಕರ್ನಾಟಕದ ಚರ್ಚೆ ಆಗಬೇಕೆಂದು ಅಧಿವೇಶನ ಮಾಡುತ್ತಿದ್ದರು. 20 ದಿನವಾದರೂ ಬೆಳಗಾವಿಯಲ್ಲಿ ಅಧಿವೇಶನ ನಡೆಸಿ, ಅಲ್ಲಿನ ಸಮಸ್ಯೆಗಳನ್ನು ಚರ್ಚಿಸಿ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಆಗ್ರಹಿಸಿದರು.
ಉತ್ತರ ಕರ್ನಾಟಕದ ವಿಚಾರವನ್ನು ಕೊನೆಗೆ ಪರಿಗಣಿಸುತ್ತಾರೆ. ಕೊನೆಯಲ್ಲಿ ಮುಖ್ಯಮಂತ್ರಿ ತಿಪ್ಪೆಸಾರಿಸಿ ಭಾಷಣ ಮಾಡಿ ಹೋಗಿದ್ದರು. ಕೈಗಾರಿಕೆ ಸ್ಥಾಪನೆ, ಶಾಲಾರಂಭ, ನೀರಾವರಿ ಯೋಜನೆಗೆ ಹಣದ ವಿಚಾರದಲ್ಲಿ ಮೋಸ ಮಾಡಿದ್ದಾರೆ ಎಂದು ದೂರಿದರು. ತುಂಗಭದ್ರಾ ಡ್ಯಾಂ ಗೇಟ್ ಕಿತ್ತುಹೋಗಿ ಒಂದು ವರ್ಷವಾಗಿದೆ ಎಂದು ಟೀಕಿಸಿದರು. 12 ಕೋಟಿ ಕೊಡಬೇಕಿದ್ದು, ಅದನ್ನು ಕೊಡುವ ಯೋಗ್ಯತೆ ಇಲ್ಲ ಎಂದು ಆಕ್ಷೇಪಿಸಿದರು.
ಎನ್‍ಡಿಎ ಅಂಗ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಈ ಹಿಂದಿನ ಅಧಿವೇಶನಗಳಲ್ಲೂ ಜೊತೆಯಾಗಿ ಕೆಲಸ ಮಾಡಿವೆ. ಮುಡಾ ಹಗರಣ, ನಿವೇಶನ ವಾಪಸಾತಿ, ವಾಲ್ಮೀಕಿ ನಿಗಮದ ಹಗರಣದಲ್ಲಿ ಮಂತ್ರಿ ರಾಜೀನಾಮೆ ವಿಚಾರ, ಕ್ರಿಕೆಟ್ ಸ್ಟೇಡಿಯಂನಲ್ಲಿ ಅಮಾಯಕ 11 ವಿದ್ಯಾರ್ಥಿಗಳ ದುರ್ಮರಣ- ಇವೆಲ್ಲ ವಿಚಾರಗಳಲ್ಲಿ ನಮ್ಮೆಲ್ಲ ಶಾಸಕರು, ಮೇಲ್ಮನೆ ಸದಸ್ಯರು ಪರಿಣಾಮಕಾರಿಯಾಗಿ ಕೆಲಸ ಮಾಡಿದ್ದಾರೆ. ಸರಕಾರ ತಪ್ಪು ಹಾದಿಯಲ್ಲಿದೆ. ಜನರಿಗೆ ನೀಡಿದ ಭರವಸೆಗೆ ವಿರುದ್ಧವಾಗಿ ನಡೆಯುತ್ತಿದೆ. ಕಾಂಗ್ರೆಸ್ ಸರಕಾರ ಶೇ 60 ಕಮಿಷನ್ ಸರಕಾರವಾಗಿ ಮಾರ್ಪಟ್ಟಿದೆ. ಕರ್ನಾಟಕವನ್ನು ಎಟಿಎಂ ಮಾಡಿಕೊಂಡು ಕಾಂಗ್ರೆಸ್ಸಿನ ಕೇಂದ್ರ ಹೈಕಮಾಂಡಿಗೆ ಹಣ ಕಳಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರ ವಿರುದ್ಧ ಹೋರಾಟ ಮಾಡಲಿದ್ದೇವೆ ಎಂದು ತಿಳಿಸಿದರು.
ವಿಧಾನಸಭೆಗೆ ಸಂಬಂಧಿಸಿದ 10-12 ವಿಚಾರಗಳನ್ನು ಸಮನ್ವಯ ಸಮಿತಿ ಸಭೆಯಲ್ಲಿ ಚರ್ಚಿಸಿದ್ದೇವೆ. ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಈ ಸಭೆಗೆ ಬಂದು ಮಾರ್ಗದರ್ಶನ ಮಾಡಿದ್ದಾರೆ. ಅದೇರೀತಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಫೋನ್ ಕರೆ ಮಾಡಿ ಸಲಹೆಗಳನ್ನು ನೀಡಿದ್ದಾರೆ. ಅವೆಲ್ಲವುಗಳನ್ನು ಪರಿಗಣಿಸಲಿದ್ದೇವೆ ಎಂದರು.
ಉತ್ತರ ಕರ್ನಾಟಕ ಭಾಗದ ಸಮಸ್ಯೆ ತೆಗೆದುಕೊಳ್ಳಿ- ಎಚ್.ಡಿ.ಕುಮಾರಸ್ವಾಮಿ
ಹೆಚ್.ಡಿ. ಕುಮಾರಸ್ವಾಮಿ ಅವರು ಮಾತನಾಡಿ, ಕಾಟಾಚಾರದ ಅಧಿವೇಶನ ಎಂಬ ಭಾವನೆ ದೂರ ಮಾಡುವ ದೃಷ್ಟಿಯಿಂದ ಮೊದಲ ದಿನದಿಂದ ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳನ್ನೇ ಪ್ರಮುಖವಾಗಿ ತೆಗೆದುಕೊಳ್ಳಬೇಕೆಂದು ಇವತ್ತಿನ ಸಭೆಯಲ್ಲಿ ತೀರ್ಮಾನವಾಗಿದೆ ಎಂದು ತಿಳಿಸಿದರು. ಯಾದಗಿರಿ, ಕಲ್ಬುರ್ಗಿ, ಬೀದರ್, ಬಾಗಲಕೋಟೆ, ಬಿಜಾಪುರ, ಬೆಳಗಾವಿ ರಾಯಚೂರಿನಲ್ಲಿ ಪ್ರವಾಹ ಪರಿಸ್ಥಿತಿ ಇತ್ತು. ಸರಕಾರ ಈ ವಿಷಯದಲ್ಲಿ ಮೂರ್ನಾಲ್ಕು ತಿಂಗಳಾದ ಬಳಿಕ ನಿದ್ದೆಯಿಂದ ಎದ್ದೇಳುತ್ತಿದೆ ಎಂದು ದೂರಿದರು.












Click it and Unblock the Notifications