Biporjoy Cyclone: ದೇಶದ ಈ ಭಾಗಗಳಲ್ಲಿ ಬಿಪರ್‌ಜಾಯ್ ಚಂಡಮಾರುತದ ತೀವ್ರತೆ ಕಾಡಲಿದೆ
ಬೆಂಗಳೂರು, ಜೂನ್ 11: ಅರಬ್ಬಿ ಸಮುದ್ರದಲ್ಲಿ ಸೃಷ್ಟಿಯಾಗಿದ್ದ ಬಿಪರ್‌ಜಾಯ್ ಚಂಡಮಾರುತವು ಅತ್ಯಂತ ತೀವ್ರವಾದ ಚಂಡಮಾರುತವಾಗಿ ಬದಲಾಗಿದೆ. ಇದರ ಪ್ರಭಾವ ಉಂಟಾಗುವ ಗುಜರಾತ್, ಕಚ್ ಹಾಗೂ ಪಾಕಿಸ್ತಾನದ ವಿವಿಧ ಪ್ರದೇಶಗಳಲ್ಲಿ ಹೈ ಅಲರ್ಟ್ ನೀಡಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಭಾನುವಾರ ತಿಳಿಸಿದೆ.
ಪೂರ್ವ-ಮಧ್ಯ ಅರೇಬಿಯನ್ ಸಮುದ್ರದ ಮೇಲೆ ತೀವ್ರತೆ ಪಡೆದುಕೊಂಡ ಬಿಪರ್‌ಜಾಯ್ ಚಂಡಮಾರುತದ ಗಾಳಿ ಗರಿಷ್ಠ ವೇಗ ಗಂಟೆಗೆ 150 ಕಿಲೋ ಮೀಟರ್ ನಷ್ಟಿದೆ. ಪೋರ್‌ಬಂದರ್‌ನ ದಕ್ಷಿಣ-ನೈಋತ್ಯಕ್ಕೆ 480 ಕಿಲೋಮೀಟರ್ ದೂರದಲ್ಲಿದೆ. ದ್ವಾರಕಾದಿಂದ 530 ಕಿಲೋ ಮೀಟರ್ ದೂರದಿಂದಲೇ ದಕ್ಷಿಣ-ನೈಋತ್ಯದತ್ತ ಬೀಸುತ್ತಿದೆ. ಇನ್ನು ಗುಜರಾತ್‌ನ ಕಚ್‌ನ ನಿಂದ ನೈಋತ್ಯದೆಡೆಗೆ ನಲಿಯಾದಿಂದ 610 ಕಿಲೋ ಮೀಟರ್ ಹಾಗೂ ಪಾಕಿಸ್ತಾನದ ಕರಾಚಿಯಿಂದ 780 ಕಿಲೋಮೀಟರ್ ದೂರದ ದಕ್ಷಿಣ ದಿಕ್ಕಿನಲ್ಲಿ ಕೇಂದ್ರೀಕೃತವಾಗಿದೆ.
VSCS BIPARJOY intensified into an ESCS at 0530IST today, about 480 km SSW of Porbandar, 530 km SSW of Dwarka and 610 km SSW of Naliya . To cross Saurashtra & Kutch and adj. Pakistan coasts bw Mandvi, Gujarat and Karachi, Pakistan around noon of 15th June as VSCS. pic.twitter.com/AZsK1Wqzqi
— India Meteorological Department (@Indiametdept) June 11, 2023
ಮುಂದಿನ ಜೂನ್ 15ರವೆಗೂ ಇದರ ಪ್ರಭಾವ ಹೆಚ್ಚಿರಲಿದೆ. ಜೂನ್ 14 ರ ಬೆಳಗಿನ ಜಾವದವರೆಗೆ ಉತ್ತರದ ಕಡೆಗೆ ಚಲಿಸಲಿದೆ. ಉತ್ತರದಿಂದ ಈಶಾನ್ಯ ದಿಕ್ಕಿನೆಡೆಗೆ ಸಾಗುತ್ತದೆ. ಜೂನ್ 15ರಂದು ಮಧ್ಯಾಹ್ನದ ಹೊತ್ತಿಗೆ ಸೌರಾಷ್ಟ್ರ ಮತ್ತು ಪಾಕಿಸ್ತಾನದ ಕರಾವಳಿ ಮಾಂಡ್ವಿ (ಗುಜರಾತ್) ಮತ್ತು ಕರಾಚಿ (ಪಾಕಿಸ್ತಾನ) ನಡುವೆ ಹಾದು ಹೋಗಲಿದೆ. ಈ ಭಾಗದ ಪ್ರದೇಶಗಳಲ್ಲಿ ಹೆಚ್ಚು ಹಾನಿಯಾಗುವ ಸಾಧ್ಯತೆ ಇದೆ.

ಈ ವೇಳೆ ಬಿಪರ್‌ಜಾಯ್ ರಣಭೀಕರ ಸ್ವರೂಪ ಪಡೆಯಲಿದೆ. ಚಂಡಮಾರುತವು ಗಂಟೆಗೆ 125-135 ಕಿಲೋ ಮೀಟರ್ ವೇಗ ಇದ್ದದ್ದು, ಜೂನ್ 15ರ ಹೊತ್ತಿಗೆ 150 ಕಿಲೋ ಮೀಟರ್ ತಲುಪಲಿದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.
ವರ್ಷದ ಮೊದಲ ಚಂಡಮಾರುತ 'ಬಿಪರ್‌ಜಾಯ್'
ಭಾನುವಾರ ಹಗಲು ಬಿಪರ್‌ಜಾಯ್ ಗಾಳಿಯ ತೀವ್ರತೆ ಗಂಟೆ 40-50 ಕಿಲೋ ಮೀಟರ್‌ನಷ್ಟಿತ್ತು. ಸೌರಾಷ್ಟ್ರ ಮತ್ತು ಕಚ್ ಕರಾವಳಿಯ ಉದ್ದಕ್ಕೂ ಪ್ರತಿ ಗಂಟೆಗೆ 60 ಕಿಲೋ ಮೀಟರ್ ವೇಗದಲ್ಲಿದೆ. ಹೀಗೆ ತೀವ್ರ ಸ್ವರೂಪ ಪಡೆದು ಮುನ್ನುಗ್ಗುತ್ತಿರುವ ಬಿಪರ್‌ಜಾಯ್ ಚಂಡಮಾರುತವು 2023ರಲ್ಲಿ ಅರಬ್ಬಿ ಸಮುದ್ರದಲ್ಲಿ ಕಾಣಿಸಿಕೊಂಡ ಮೊದಲ ಚಂಡಮಾರುತವಾಗಿದೆ.
ನಾಳೆ ಸೋಮವಾರ ಜೂನ್ 12 ರಂದು ಬಿಪರ್‌ಜಾಯ್ ವೇಗವು ಪ್ರತಿ ಗಂಟೆಗೆ 45-55 ಕಿಲೋ ಮೀಟರ್‌ನಿಂದ 65 ಕಿಲೋ ಮೀಟರ್‌ಗೆ ಹೆಚ್ಚಾಗಲಿದೆ. ಜೂನ್ 13ರಂದು ಮಂಗಳವಾರ ಹಾಗೂ ಜೂನ್ 14 ರಂದು ಬುಧವಾರ ಚಂಡಮಾರುತದ ವೇಗವು ಪ್ರತಿ ಗಂಟೆಗೆ 50-60 ಕಿಲೋ ಮೀಟರ್ ನಿಂದ 70 ಕಿಲೋ ಮೀಟರ್ ವರೆಗೆ ಅಧಿಕಗೊಳ್ಳಲಿದೆ.

ಹವಾಮಾನ ಮುನ್ಸೂಚನೆ ಪ್ರಕಾರ, ಜೂನ್ 15 ರವರೆಗೆ ಸೌರಾಷ್ಟ್ರ ಮತ್ತು ಕಚ್ ಕರಾವಳಿಯ ಉದ್ದಕ್ಕೂ ಸಾಕಷ್ಟು ಮಳೆ ಬೀಳಲಿದೆ. ಇನ್ನೂ ನಾಳೆ ಸೋಮವಾರದಿಂದ ಗುರುವಾರವರೆಗೆ (ಜೂನ್ 12-15) ಮಧ್ಯ ಅರೇಬಿಯನ್ ಸಮುದ್ರ, ಉತ್ತರ ಅರೇಬಿಯನ್ ಸಮುದ್ರ ಮತ್ತು ಸೌರಾಷ್ಟ್ರ-ಕಚ್ ಕರಾವಳಿಯಲ್ಲಿ ಮೀನುಗಾರಿಕೆಗೆ ತೆರಳದಂತೆ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ.
ಕರಾವಳಿ ಪ್ರದೇಶಗಳ ಮೇಲೆ ನಿಗಾ ಇಡಲು ಸಲಹೆ
ಇದಷ್ಟೇ ಅಲ್ಲದೇ ಸಮುದ್ರದಲ್ಲಿರುವವರು ಕರಾವಳಿಗೆ ಆದಷ್ಟು ಶೀಘ್ರವೇ ಮರಳಬೇಕು. ಕಡಲಾಚೆಯ ಮತ್ತು ಕಡಲತೀರದ ಚಟುವಟಿಕೆಗಳನ್ನು ಅತ್ಯಂತ ವಿವೇಚನೆಯಿಂದ ನಿಯಂತ್ರಿಸಬೇಕಿದೆ ಎಂದು ಐಎಂಡಿ ಸಲಹೆ ನೀಡಿದೆ. ಅಲ್ಲದೇ ಆಯಾ ರಾಜ್ಯ ಸರ್ಕಾರಗಳ ಕರಾವಳಿ ಪ್ರದೇಶಗಳ ಮೇಲೆ ನಿಗಾ ಇಡಲು ಸೂಚಿಸಲಾಗಿದೆ. ಚಂಡಮಾರುತದ ಅಬ್ಬರ ಕಡಿಮೆಯಾಗುವವರೆಗೂ ನಿಯಮಿತವಾಗಿ ಆಯಾ ಪ್ರದೇಶಗಳಲ್ಲಿನ ಪರಿಸ್ಥಿತಿಯ ಮೇಲ್ವಿಚಾರಣೆ ಮಾಡಬೇಕು. ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಗುಜರಾತ್ ಮುಂದಿನ ಐದು ದಿನಗಳಲ್ಲಿ ಗುಡುಗು ಸಹಿತ ಅತ್ಯಧಿಕ ಮಳೆಗೆ ಸಾಕ್ಷಿಯಾಗಲಿದೆ. ವಿಶೇಷವಾಗಿ ಪಾಕಿಸ್ತಾನ ಕರಾಚಿ, ಸೌರಾಷ್ಟ್ರ-ಕಚ್ ಪ್ರದೇಶದಲ್ಲಿ ಭಾರೀ ಮಳೆ ಸುರಿಯುವ ನಿರೀಕ್ಷೆ ಇದೆ. ಬಿಪರ್‌ಜಾಯ್ ಚಂಡಮಾರುತದಿಂದಾಗಿ ಕೇವಲ ಪಾಕಿಸ್ತಾನ, ಗುಜರಾತ್ ಗಳಲ್ಲಿ ಅಷ್ಟೇ ಅಲ್ಲದೇ ಅಕ್ಕಪಕ್ಕದ ರಾಜ್ಯಗಳ ಮೇಲೂ ಅಲ್ಪಮಟ್ಟಿನ ಪ್ರಭಾವ ಬೀರಲಿದೆ. ಇದು ಮುಂಗಾರು ಆಗಮನದ ಸಂದರ್ಭವಾಗಿದ್ದರಿಂದ ಕೆಲವು ರಾಜ್ಯಗಳಲ್ಲಿ ವಾಡಿಕೆಯಂತೆ ಮಳೆಯಾಗಲಿದೆ ಎಂದು ಐಎಂಡಿ ತಿಳಿಸಿದೆ.












Click it and Unblock the Notifications