ಬಂಧನ ಭೀತಿಯಿಂದ ಪಾರಾದ ಬಿಜೆಪಿ ಶಾಸಕ ನೆಹರೂ ಓಲೇಕಾರ್!
ಹಾವೇರಿಯ ಬಿಜೆಪಿ ಶಾಸಕ ನೆಹರು ಓಲೇಕಾರ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ ಅವರಿಗೆ ವಿಚಾರಣಾಧೀನ ನ್ಯಾಯಾಲಯ ವಿಧಿಸಿದ್ದ ಶಿಕ್ಷೆ ತೀರ್ಪು ಅಮಾನತ್ತಿನಲ್ಲಿಟ್ಟು ಜಾಮೀನು ಮಂಜೂರು ಮಾಡಿದೆ.
ಬೆಂಗಳೂರು, ಮಾರ್ಚ್ 05; ಬಿಜೆಪಿ ಶಾಸಕ ನೆಹರೂ ಓಲೇಕರ್‌ಗೆ ಕರ್ನಾಟಕ ಹೈಕೋರ್ಟ್ ರಿಲೀಫ್ ಕೊಟ್ಟಿದೆ. ಹಾವೇರಿ ನಗರಸಭೆ ಕಾಮಗಾರಿಯಲ್ಲಿ ನಕಲಿ ಬಿಲ್ ಸೃಷ್ಟಿಸಿ ಬೊಕ್ಕಸಕ್ಕೆ ಕೋಟ್ಯಾಂತರ ರೂ. ನಷ್ಟ ಮಾಡಿದ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯದಿಂದ ಎರಡು ವರ್ಷ ಶಿಕ್ಷೆಗೆ ಗುರಿಯಾಗಿದ್ದ ಪ್ರಕರಣದಲ್ಲಿ ಶಿಕ್ಷೆ ಅಮಾನತ್ತಿನಲ್ಲಿ ಇಟ್ಟು, ಜಾಮೀನು ಮಂಜೂರು ಮಾಡಲಾಗಿದೆ. ಸದ್ಯ, ಚುನಾವಣೆ ಇರುವುದರಿಂದ ಈ ಸಮಯದಲ್ಲಿ ಅವರು ಬಂಧನಕ್ಕೆ ಒಳಗಾಗಿದ್ದರೆ ಅವರೂ, ಪಕ್ಷವೂ ಮುಜುಗರ ಅನುಭವಿಸಬೇಕಾಗಿತ್ತು.
ವಿಚಾರಣಾ ನ್ಯಾಯಾಲಯದ ತೀರ್ಪು ರದ್ದು ಕೋರಿ ಹಾವೇರಿಯ ಬಿಜೆಪಿ ಶಾಸಕ ನೆಹರು ಓಲೇಕಾರ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ. ನಟರಾಜನ್ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ಮಾಡಿದೆ. ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ 2023ರ ಫೆಬ್ರವರಿ 13ರಂದು ಓಲೇಕಾರ್‌ಗೆ ಎರಡು ವರ್ಷ ಸಾಧಾರಣಾ ಜೈಲು ಶಿಕ್ಷೆ ಮತ್ತು ಎರಡು ಸಾವಿರ ರೂ. ದಂಡ ವಿಧಿಸಿದ್ದ ಹೊರಡಿಸಿದ್ದ ತೀರ್ಪು ಅಮಾನತ್ತಿನಲ್ಲಿಟ್ಟು ಮತ್ತು ಜಾಮೀನು ಮಂಜೂರು ಮಾಡಿ ಹೈಕೋರ್ಟ್ ಶುಕ್ರವಾರ ಆದೇಶಿಸಿದೆ.

ಪ್ರಕರಣದ ಹಿನ್ನೆಲೆ: 2008-13ರವರೆಗೆ ಶಾಸಕರಾಗಿದ್ದ ಅವಧಿಯಲ್ಲಿ ನೆಹರು ಓಲೇಕಾರ್ ಹಾವೇರಿ ನಗರಸಭೆಯ ಕಾಮಗಾರಿಗಳನ್ನು ತಮ್ಮ ಪುತ್ರರಿಗೆ ಗುತ್ತಿಗೆ ಕೊಡಿಸಿದ್ದರು. 5 ಕಾಮಗಾರಿಗಳನ್ನು ನಡೆಸದಿದ್ದರೂ, ಕಾಮಗಾರಿಗಳು ನಡೆದಿವೆ ಎಂದು ನಕಲಿ ಬಿಲ್ ಸೃಷ್ಟಿಸಿ, ಒಟ್ಟು 5.35 ಕೋಟಿ ರೂ. ಪಡೆದು ವಂಚನೆ ಮಾಡಿದ್ದರು. ಇಬ್ಬರು ಪುತ್ರರಿಗೆ ಗುತ್ತಿಗೆ ಕೊಡಿಸಿ ಸ್ವಜನ ಪಕ್ಷಪಾತ ಮಾಡಿದ್ದಾರೆ. ಪ್ರಕರಣದಲ್ಲಿ ಇತರೆ ಆರೋಪಿಗಳ ಜೊತೆಗೆ ಸೇರಿ ಅಪರಾಧಿಕ ಒಳಸಂಚು ರೂಪಿಸಿದ್ದಾರೆಂದು ಆರೋಪಿಸಿ ಸಾಮಾಜಿಕ ಕಾರ್ಯಕರ್ತ ಶಶಿಧರ್ ಮಹದೇವಪ್ಪ ಹಳ್ಳಿಕೆರೆ ಹಾವೇರಿಯ ಲೋಕಾಯುಕ್ತ ಕೊರ್ಟ್‌ಗೆ ಖಾಸಗಿ ದೂರು ಸಲ್ಲಿಸಿದ್ದಿರು.
ದೂರಿನ ತನಿಖೆ ನಡೆಸಿದ್ದ ಲೋಕಾಯುಕ್ತ ಪೊಲೀಸರು ಆರೋಪ ಪಟ್ಟಿ ಸಲ್ಲಿಸಿದ್ದರು. ನಂತರ ಪ್ರಕರಣವು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ವರ್ಗಾವಣೆಯಾಗಿತ್ತು. ಪ್ರಕರಣ ಸುಧೀರ್ಘ ಕಾಲ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಲಯವೂ ನೆಹರು ಓಲೇಕಾರ್, ಅವರ ಪುತ್ರರಾದ ಮಂಜುನಾಥ್ ಓಲೇಕಾರ್, ದೇವರಾಜ್ ಓಲೇಕಾರ್ ನಿವೃತ್ತ ಅಧಿಕಾರಿಗಳಾದ ಎಚ್. ಕೆ. ರುದ್ರಪ್ಪ ಸೇರಿ ಒಟ್ಟು 9 ಮಂದಿ ಆರೋಪಿಗಳನ್ನು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ-1988ರ ಅಡಿಯಲ್ಲಿ ದೋಷಿಯಾಗಿ ತೀರ್ಮಾನಿಸಿ 2023ರ ಫೆ.13ರಂದು ಆದೇಶಿಸಿತ್ತು. ಅಲ್ಲದೆ, ಎಲ್ಲಾ ಆರೋಪಿಗಳಿಗೂ ತಲಾ ಎರಡು ವರ್ಷ ಸಾಧಾರಣ ಜೈಲು ಶಿಕ್ಷೆ ಮತ್ತು ಎರಡು ಸಾವಿರ ರೂ. ದಂಡ ವಿಧಿಸಿತ್ತು.

ಅರ್ಜಿದಾರರ ವಾದವೇನು?; ಅರ್ಜಿದಾರರ ಪರ ವಾದಿಸಿದ ವಕೀಲರು, ಪ್ರಕರಣ ಸಂಬಂಧ ಅರ್ಜಿದಾರರ ವಿರುದ್ಧ ದೂರು ದಾಖಲಿಸಲು ದೂರುದಾರರು ಸಕ್ಷಮ ಪ್ರಾಧಿಕಾರದಿಂದ ಪೂರ್ವಾನಮತಿಯನ್ನೇ ಪಡೆದಿಲ್ಲ. ಪೂರ್ವಾನುಮತಿ ಪಡೆಯದೇ ಸಲ್ಲಿಸಿದ್ದ ದೂರನ್ನು ವಿಚಾರಣೆ ನಡೆಸಿ ಅರ್ಜಿದಾರರಿಗೆ ಶಿಕ್ಷೆ ಹಾಗೂ ದಂಡ ವಿಧಿಸಿದ ವಿಚಾರಣಾ ನ್ಯಾಯಾಲಯದ ಕ್ರಮ ಕಾನೂನುಬಾಹಿರ ಎಂದರು. ಅಲ್ಲದೆ, ಇನ್ನೂ ಪ್ರಕರಣದ ಇತರೆ ಆರೋಪಗಳ ಜೊತೆಗೆ ಅರ್ಜಿದಾರ ಶಾಸಕರು ಅಪರಾಧಿಕ ಒಳಸಂಚು ರೂಪಿಸಿಲ್ಲ. ಆದ್ದರಿಂದ ಅರ್ಜಿದಾರರನ್ನು ದೋಷಿಯಾಗಿ ತೀರ್ಮಾನಿಸಿ ಮತ್ತು ಶಿಕ್ಷೆ ವಿಧಿಸಿ ವಿಚಾರಣಾ ನ್ಯಾಯಾಲಯದ ಹೊರಡಿಸಿದ ಆದೇಶವನ್ನು ಅಮಾನತ್ತಿನಲ್ಲಿರಿಸಬೇಕು. ಅರ್ಜಿದಾರರಿಗೆ ಜಾಮೀನು ಮಂಜೂರು ಮಾಡಬೇಕು ಎಂದು ಕೋರಿದ್ದರು.












Click it and Unblock the Notifications