ವಾಷಿಂಗ್ಟನ್ ಡಿಸಿಯಲ್ಲಿ ಟಿಪ್ಪು ಸುಲ್ತಾನ್ ಪ್ರತಿಮೆ ಸ್ಥಾಪಿಸಿ: ಖೇಣಿ
ಬೆಂಗಳೂರು, ನ.27: 'ಮೈಸೂರು ಹುಲಿ' ಟಿಪ್ಪುಸುಲ್ತಾನ್ ಅವರು ಬ್ರಿಟಿಷರ ವಿರುದ್ಧ ಭಾರತ ಸ್ವಾತಂತ್ರ್ಯ ಸಂಗ್ರಾಮ ಮಾತ್ರವಲ್ಲ ಅಮೆರಿಕದ ಸ್ವಾತಂತ್ರ್ಯ ಕ್ರಾಂತಿಗೂ ನೆರವಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರತಿಷ್ಠಿತ ವಾಷಿಂಗ್ಟನ್ ಡಿಸಿ ಎದುರು ಟಿಪ್ಪುಸುಲ್ತಾನ್ ಪ್ರತಿಮೆ ಸ್ಥಾಪನೆ ಮಾಡುವ ಕುರಿತು ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಅಮೆರಿಕದಲ್ಲಿ ನಡೆದ ಸ್ವಾತಂತ್ರ ಕ್ರಾಂತಿಗೂ ನೆರವು ನೀಡಿದ್ದ ಟಿಪ್ಪು ಅವರು ಹಲವು ಹಡಗುಗಳನ್ನು ದಾನ ಮಾಡಿದ್ದರು. ಈ ಐತಿಹಾಸಿಕ ಸತ್ಯ ಎಲ್ಲರಿಗೂ ತಿಳಿಯಬೇಕಿದೆ ಎಂದು ಕನ್ನಡ ಮಕ್ಕಳ ಪಕ್ಷದ ಅಧ್ಯಕ್ಷ ಅಶೋಕ್ ಖೇಣಿ ಹೇಳಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಅಮೆರಿಕನ್ನರು ಅನುಭವಿಸುತ್ತಿರುವ ಸ್ವಾತಂತ್ರಕ್ಕೆ ನಮ್ಮ ದೇಶದ ಅರಸ ಟಿಪ್ಪುಸುಲ್ತಾನ್ ನೀಡಿರುವ ನೆರವು ಕುರಿತು ಪರಿಚಯಿಸಬೇಕು ಎಂದರು.

ಬ್ರಿಟಿಷರು ತಮ್ಮ ಪಾಲಿಗೆ ಸಿಂಹ ಸ್ವಪ್ನವಾಗಿದ್ದ ಟಿಪ್ಪುವನ್ನು ನೇರವಾಗಿ ಯುದ್ಧದಲ್ಲಿ ಸೋಲಿಸಲು ಸಾಧ್ಯವಾಗದೆ, ಧಾರ್ಮಿಕ ವಿರೋಧಿ, ಕನ್ನಡ ವಿರೋಧಿ ಎಂಬ ಹಣೆಪಟ್ಟಿ ಕಟ್ಟಿ ಅವರನ್ನು ತೇಜೋವಧೆ ಮಾಡುವ ವ್ಯವಸ್ಥಿತ ಷಡ್ಯಂತ್ರ ನಡೆಸಿದರು. ಅದನ್ನು ಈಗ ಬಿಜೆಪಿಯವರು ಮುಂದುವರಿಸುತ್ತಿದ್ದಾರೆ ಎಂದು ಅಶೋಕ್ ಕಿಡಿಕಾರಿದರು.
ಟಿಪ್ಪುಸುಲ್ತಾನ್ ಅವರು ವಿಶ್ವಕ್ಕೆ ರಾಕೆಟ್ ತಂತ್ರಜ್ಞಾನ, ವಿದೇಶಗಳೊಂದಿಗೆ ರಾಜಕೀಯ ಹಾಗೂ ಆರ್ಥಿಕ ಸಂಬಂಧಗಳನ್ನು ಮೊಟ್ಟ ಮೊದಲಿಗೆ ಪರಿಚಯಿಸಿಕೊಟ್ಟರು. ಅವರ ಜೀವನ ಹಾಗೂ ಇತಿಹಾಸಕ್ಕೆ ಸಂಬಂಧಿಸಿದಂತೆ ಮತ್ತಷ್ಟು ಸಂಶೋಧನೆ ನಡೆಸಲಾಗುತ್ತಿದ್ದು, ಶೀಘ್ರದಲ್ಲೇ ಚಲನಚಿತ್ರವನ್ನು ನಿರ್ಮಿಸುವ ಉದ್ದೇಶವಿದೆ ಎಂದು ಖೇಣಿ ತಿಳಿಸಿದರು.
ಬಹುಭಾಷೆಗಳಲ್ಲಿ ತಯಾರಾಗುವ ಈ ಚಿತ್ರದಲ್ಲಿ ಟಿಪ್ಪುಸುಲ್ತಾನ್ ಪಾತ್ರವನ್ನು ನಿರ್ವಹಿಸುವಂತೆ ಹಿರಿಯ ನಟ ರಜನಿಕಾಂತ್‌ರನ್ನು ಕೋರಲಾಗಿದೆ. ಅಲ್ಲದೆ, ಟಿಪ್ಪುಸುಲ್ತಾನ್ ಬಗ್ಗೆ ಧಾರಾವಾಹಿ ನಿರ್ಮಿಸಿದ್ದ ಸಂಜಯ್‌ಖಾನ್‌ರ ನೆರವನ್ನು ಪಡೆಯಲಾಗುವುದು ಎಂದು ಅವರು ಹೇಳಿದರು.
ಒಂದು ವೇಳೆ ರಜನಿಕಾಂತ್ ಒಪ್ಪದಿದ್ದರೆ ಸಲ್ಮಾನ್‌ಖಾನ್, ಅರ್ಜುನ್ ಸರ್ಜಾ, ಸುದೀಪ್ ಅಥವಾ ದರ್ಶನ್‌ರನ್ನು ಒಪ್ಪಿಸಿ ಈ ಚಲನಚಿತ್ರವನ್ನು ಸಿದ್ಧಪಡಿಸಲಾಗುವುದು. ನಮ್ಮ ದೇಶದಲ್ಲಿ ಜನ್ಮ ತಾಳಿದ ಒಬ್ಬ ಮಹಾನ್ ಯೋಧನ ಬಗ್ಗೆ ವಿಶ್ವಕ್ಕೆ ಪರಿಚಯಿಸುವುದು ತಮ್ಮ ಉದ್ದೇಶ ಎಂದು ಅಶೋಕ್ ಖೇಣಿ ತಿಳಿಸಿದರು.(ಒನ್ ಇಂಡಿಯಾ ಸುದ್ದಿ)












Click it and Unblock the Notifications