ಬಿಡದಿ ಟೌನ್ ಶಿಪ್ ಸಮರ: ರೈತರಿಗಾಗಿ ಕೊನೆಯ ಉಸಿರಿನವರೆಗೂ ಹೋರಾಟ: ಹೆಚ್ ಡಿ ಕುಮಾರಸ್ವಾಮಿ ಘರ್ಜನೆ
ಬೆಂಗಳೂರು: ನನ್ನ ಪ್ರಾಣ ಇರುವವರೆಗೂ ಬಿಡದಿ ರೈತರನ್ನು ಬಿಡುವ ಪ್ರಶ್ನೆಯೇ ಇಲ್ಲ. ಅವರ ಪರವಾಗಿ ಎಷ್ಟು ದೂರ ಬೇಕಾದರೂ ಹೋಗುತ್ತೇನೆ. ಯಾರನ್ನು ಬೇಕಾದರೂ ಎದುರು ಹಾಕಿಕೊಳ್ಳುತ್ತೇನೆ. ನಿಮಗೆ ಒಳ್ಳೆಯ ರೀತಿಯಲ್ಲಿ ಎಚ್ಚರಿಕೆ ನೀಡುತ್ತಿದ್ದೇನೆ. ಅವರ ಭೂಮಿಯನ್ನು ಅವರಿಗೆ ಬಿಟ್ಟುಬಿಡಿ ಎಂದು ರಾಜ್ಯ ಸರ್ಕಾರದ ವಿರುದ್ಧ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಗುಡುಗಿದರು.
ಟೌನ್ ಶಿಪ್ ಮಾಡಬೇಕಾದರೆ ಬೇರೆ ಬೇರೆ ಭಾಗಗಳಲ್ಲಿ ಬೇಕಾದಷ್ಟು ಬರಡು ಭೂಮಿಗಳಿವೆ. ಯಾವುದೇ ಕಾರಣಕ್ಕೂ ಬಿಡದಿ ರೈತರಿಗೆ ಅನ್ಯಾಯ ಆಗಲು ಬಿಡುವುದಿಲ್ಲ ಎಂದು ಹೇಳಿದರು. ಬನ್ನಿ ಚರ್ಚೆಗೆ ಸಿದ್ದ ಬನ್ನಿ ಮಾತಾಡೋಣ. ಬೆಂಗಳೂರು ನಗರವನ್ನು ನೀವು ನಗರಾಭಿವೃದ್ಧಿ ಸಚಿವರಾಗಿ ಸಿಂಗಾಪುರ ಮಾಡಿದ್ದನ್ನು ನೋಡಿದ್ದೇನೆ. ಹಾಗೆಯೇ ಈಗ ಬ್ರಾಂಡ್ ಬೆಂಗಳೂರು ಮಾಡಲು ಹೊರಟಿದ್ದೀರಿ. ಆದರೆ ಅದನ್ನು ಹೇಗೆಲ್ಲಾ ದುರ್ಬಳಿಕೆ ಮಾಡಿಕೊಂಡು ಆಸ್ತಿ ಲೂಟಿ ಹೊಡೆಯುತ್ತಿದ್ದೀರಿ ಎಂಬುದನ್ನು ಎಲ್ಲರೂ ನೋಡುತ್ತಿದ್ದಾರೆ.

ಬೆಂಗಳೂರು ಸುತ್ತಮುತ್ತ ಎಷ್ಟು ಜಮೀನು ಲೂಟಿ ಹೊಡೆದಿದ್ದೀರಿ ಎಂಬ ಬಗ್ಗೆ ಚರ್ಚೆ ಮಾಡೋಣ ಬನ್ನಿ. ದೇವೇಗೌಡರು ರಾಜಕೀಯಕ್ಕೆ ಬಂದಾಗ ನೀವು ಎಲ್ಲಿದ್ದೀರಿ? ದೇವೇಗೌಡ್ರು ಮನಸ್ಸು ಮಾಡಿದಿದ್ದರೆ ಅರ್ಧ ಬೆಂಗಳೂರು ನಗರವನ್ನೇ ಖರೀದಿ ಮಾಡಬಹುದಿತ್ತು. ಆದರೆ ಅವರ ರಾಜಕೀಯ ದಾರಿಯ ಬೇರೆಯಾಗಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜೆಡಿಎಸ್ ರೈತರ ಪಕ್ಷ. ರಿಯಲ್ ಎಸ್ಟೇಟ್, ದಂಧಕೋರರು, ಬ್ರೋಕರ್, ದಳ್ಳಾಳಿ, ಭೂಕಳ್ಳರಿಂದ ಕಟ್ಟಿದ ಪಕ್ಷ ಅಲ್ಲ. ನನ್ನನ್ನು ಕರೆಂಟ್ ಕಳ್ಳ ಎಂದು ಹೇಳುತ್ತೀರಿ. ಲುಲು ಮಾಲ್ ಕಟ್ಟಿದೆಯಲ್ಲಪ್ಪ! ಅದರ ಕೆಳಗಡೆ ಹೈಟೆನ್ಶನ್ ವೈರ್ ಹೋಗಿದೆಯಲ್ಲ.. ಅದನ್ನು ಭೂಮಿಯಲ್ಲಿ ಹೂತು ಹಾಕಲು ಎಷ್ಟು ಅಕ್ರಮ ಮಾಡಿದ್ದೀರಿ ಎಂಬುದನ್ನು ಸ್ವಲ್ಪ ಹೇಳುವಿರಾ? ನನ್ನ ಪೋಸ್ಟರ್ ಅಂಟಿಸುವುದಕ್ಕೆ ಚಿಂತಾಮಣಿ ಮಾಡುತ್ತೀರಿ, ಇಂತಹ ಮಹಾನ್ ಅಕ್ರಮಗಳನ್ನು ಎಸಗಿರುವ ನಿಮ್ಮ ವಿರುದ್ಧ ಏನೇನೋ ಅಂಟಿಸಬೇಕು ಎಂದು ಸ್ವಲ್ಪ ಹೇಳುತ್ತೀರಾ? ಎಂದು ಕುಮಾರಸ್ವಾಮಿ ಗುಡುಗಿದರು.
ನೈಸ್ ಬಗ್ಗೆ ಹೈಕೋರ್ಟ್ ಕಟುವಾದ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದೆಯಲ್ಲ, ಇದರ ಬಗ್ಗೆ ನಿಮ್ಮ ಮಂತ್ರಿಗಳು ನಿಮಗೆ ಹೇಳಿಲ್ಲವಾ ಮಿಸ್ಟರ್ ಡಿ.ಕೆ. ಶಿವಕುಮಾರ್.. ಪ್ರತಿಯೊಂದುಕ್ಕೂ ನಾ ಮುಂದು ತಾ ಮುಂದು ಹೇಳಿಕೆ ಕೊಡುವ ಪ್ರಿಯಾಂಕ ಖರ್ಗೆ, ಆಮೇಲೆ ಕೃಷ್ಣಬೈರೇಗೌಡರು ಈ ಬಗ್ಗೆ ಮಾತನಾಡದೆ ಮೌನ ವಹಿಸಿದ್ದಾರೆ? ಎಂದು ಪ್ರಶ್ನಿಸಿದರು. ಯೋಜನೆಗೆ ನೈಸ್ ಕಂಪನಿ ಒಂದು ರೂಪಾಯಿ ಹಣವನ್ನು ಹೂಡಿಕೆ ಮಾಡಿಲ್ಲ. ಜನರಿಂದ ಕಸಿದುಕೊಂಡ ಭೂಮಿಯನ್ನು ಐಸಿಐಸಿಐ ಬ್ಯಾಂಕ್ ನಲ್ಲಿ ಒತ್ತೆ ಇಟ್ಟು ಹಣ ಪಡೆದು ಅರೆಬರೆ ಕೆಲಸ ಮಾಡಿದೆ. ಇದು ಇಡೀ ಭಾರತವೇ ಕಂಡು ಕೇಳರಿಯದ ಮಹಾನ್ ಅಕ್ರಮ ಎಂದು ಹೇಳಿದರು.
ನೈಸ್ ಭೂಮಿಯನ್ನು ಅನ್ಯ ಉದ್ದೇಶಕ್ಕೆ ಬಳಸುವ ಹಾಗೆಯೇ ಇಲ್ಲ. ಆದರೆ ಶೋಭಾ ಡೆವಲಪರ್ಸ್ ಅಪಾರ್ಟ್ಮೆಂಟ್ ಹೇಗೆ ಬಂತು ಎಂಬುದನ್ನು ಸ್ವಲ್ಪ ಹೇಳುವಿರಾ ಡಿ.ಕೆ.ಶಿವಕುಮಾರ್? ಇದು ಯಾರಪ್ಪನ ಆಸ್ತಿ? ಇದೇನು ನಿಮ್ಮಪ್ಪ ಕೆಂಪೇಗೌಡರು ಮಾಡಿದ್ದ ಆಸ್ತಿನಾ? ಇದಕ್ಕೆ NOC ಕೊಟ್ಟಿದ್ದು ಯಾರು? ಆ ಗೌರಮ್ಮ ಮತ್ತು ಡಿ.ಕೆ. ಸುರೇಶ್ ಅನ್ನುವವರು ಯಾರಪ್ಪ? ಆ ನೈಸ್ ನವನು ಅವರಿಬ್ಬರಿಗೆ ಅದು ಹೇಗೆ NOC ಕೊಡಲು ಸಾಧ್ಯ? ನಿಮ್ಮ ಯೋಗ್ಯತೆ ಎಲ್ಲರಿಗೂ ಗೊತ್ತಿದೆ. ಮುಖ್ಯಮಂತ್ರಿ ಆಗಿದ್ದೀರಿ, ಕೊನೆಪಕ್ಷ ಒಳ್ಳೆಯ ಕೆಲಸಗಳನ್ನು ಮಾಡಿ ಎಂದು ಡಿಕೆಶಿ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ನಾನು ಈಗಲೂ ಹೇಳುತ್ತಿದ್ದೇನೆ. ಬಿಡದಿ ವಿಷಯವನ್ನು ಭೈರಮಂಗಲದಲ್ಲಿ ರೈತರ ಮುಂದೆ ಕೂತು ಚರ್ಚೆ ಮಾಡೋಣ ಬನ್ನಿ. 2006-07ರಲ್ಲಿ ಬಿಡದಿ ವಿಚಾರದಲ್ಲಿ ನೀವು ಏನು ಭಾಷಣ ಮಾಡಿದ್ದೀರಿ ಎಂಬುದನ್ನು ಒಮ್ಮೆ ನೆನಪು ಮಾಡಿಕೊಳ್ಳಿ. ನಿಮ್ಮ ಪಕ್ಷದ ಮಾಜಿ ಮಂತ್ರಿ ಕಾಗೋಡು ತಿಮ್ಮಪ್ಪ ಅವರ ನೇತೃತ್ವದಲ್ಲಿ ರಚಿಸಲಾಗಿದ್ದ ಸತ್ಯಶೋಧನಾ ಸಮಿತಿ ಏನು ವರದಿ ನೀಡಿದೆ ಎಂಬುದನ್ನು ದಯವಿಟ್ಟು ಓದಿಕೊಳ್ಳಿ. ಅದನ್ನು ಟ್ರೀಟ್ ಮಾಡಿ, ಬೇಕಾದರೆ ಅದನ್ನೇ ಪೋಸ್ಟರ್ಗಳಲ್ಲಿ ಮುದ್ರಿಸಿ, ಗೋಡೆಗೆ ಅಂಟಿಸಿ. ಬೇಡ ಎಂದವರು ಯಾರು? ಎಂದು ಕುಮಾರಸ್ವಾಮಿ ಅವರು ಡಿಕೆಶಿಗೆ ಟಾಂಗ್ ಕೊಟ್ಟರು.


Click it and Unblock the Notifications
