ಎಂಪಿ ರೇಣುಕಾಚಾರ್ಯಗೆ ಬಿಜೆಪಿ ಶಿಸ್ತು ಸಮಿತಿಯಿಂದ ನೋಟಿಸ್!
ಬೆಂಗಳೂರು, ಜೂನ್ 30; ಕರ್ನಾಟಕ ವಿಧಾನಸಭಾ ಚುನಾವಣೆ 2023ರಲ್ಲಿ ಹೀನಾಯ ಸೋಲು ಕಂಡಿರುವ ಬಿಜೆಪಿಯಲ್ಲಿ ಆಂತಕರಿಕ ಕಲಹ ಜೋರಾಗಿದೆ. ಸೋಲಿಗೆ ಯಾರು ಹೊಣೆ? ಎಂಬುದು ಎಲ್ಲರ ಚರ್ಚೆಯ ಪ್ರಮುಖ ವಿಚಾರ ರಾಷ್ಟ್ರೀಯ ನಾಯಕರು, ರಾಜ್ಯ ನಾಯಕರು ಕಾರಣ ಹೀಗೆ ಚರ್ಚೆ, ವಾಗ್ದಾಳಿ, ಟೀಕೆಗಳು ಮುಂದುವರೆದಿವೆ.
ಹೊನ್ನಾಳಿ ಕ್ಷೇತ್ರದ ಮಾಜಿ ಶಾಸಕ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯಾಗಿದ್ದ ಎಂಪಿ ರೇಣುಕಾಚಾರ್ಯ ಈ ಬಾರಿಯ ಚುನಾವಣೆಯಲ್ಲಿ ಸೋಲು ಕಂಡಿದ್ದಾರೆ. 74832 ಮತಗಳನ್ನು ಪಡೆದ ಅವರು, ಕಾಂಗ್ರೆಸ್‌ನ ಶಾಂತನಗೌಡ ಡಿ. ಜಿ. (92392) ವಿರುದ್ಧ ಸೋತರು. ಆದರೆ ಸೋತ ಮೇಲೆ ಸುಮ್ಮನೆ ಕುಳಿತಿಲ್ಲ.

ಕ್ಷೇತ್ರದಲ್ಲಿ ನನ್ನ ಅವಧಿಯಲ್ಲಿ ಆದ ಅಭಿವೃದ್ಧಿ ಕೆಲಸಗಳು ಎಂದು ದಿನಕ್ಕೆ ಹತ್ತಾರು ಫೇಸ್‌ಬುಕ್ ಪೋಸ್ಟ್ ಹಾಕುವ ರೇಣುಕಾಚಾರ್ಯ ಈಗ ಬಿಜೆಪಿ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಅದಕ್ಕೆ ಕಾರಣ ಅವರ ಮಾತುಗಳು. ರಾಷ್ಟ್ರೀಯ ಮತ್ತು ರಾಜ್ಯ ನಾಯಕರ ವಿರುದ್ಧ ಅವರು ವಾಗ್ದಾಳಿ ನಡೆಸುತ್ತಿದ್ದು, ಬಿಜೆಪಿ ಶಿಸ್ತು ಸಮಿತಿ ನೋಟಿಸ್ ಕಳಿಸಿದೆ.
ರೇಣುಕಾಚಾರ್ಯಗೆ ನೋಟಿಸ್; ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಚಿವರ ಡಾ. ಕೆ. ಸುಧಾಕರ್, ಕರ್ನಾಟಕ ಚುನಾವಣೆ ಸಹ ಉಸ್ತುವಾರಿಯಾಗಿದ್ದ ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ. ಅಣ್ಣಾಮಲೈ ಹೀಗೆ ವಿವಿಧ ನಾಯಕರ ವಿರುದ್ಧ ಟೀಕೆ ಮಾಡಿದ ರೇಣುಕಾಚಾರ್ಯಗೆ ಬಿಜೆಪಿ ಶಿಸ್ತು ಸಮಿತಿ ನೋಟಿಸ್ ನೀಡಿದ್ದು, 7 ದಿನಗಳಲ್ಲಿ ಉತ್ತರ ನೀಡಿದೆ ಎಂದು ಸೂಚಿಸಿದೆ.
ನಿಮ್ಮ ಹೇಳಿಕೆಗಳನ್ನು ಪಕ್ಷ ಗಂಭೀರವಾಗಿ ಪರಿಗಣಿಸಿದೆ. ರಾಜ್ಯ ಮತ್ತು ರಾಷ್ಟ್ರೀಯ ನಾಯಕರ ವಿರುದ್ಧ ಹೇಳಿಕೆಗಳನ್ನು ನೀಡುತ್ತಿದ್ದೀರಿ. ಪದೇ ಪದೇ ನಿಮಗೆ ಎಚ್ಚರಿಕೆ ನೀಡಿದ ಬಳಿಕವೂ ನೀವು ಅದನ್ನು ಮುಂದುವರೆಸಿದ್ದೀರಿ. ನಿಮ್ಮ ವಿರುದ್ಧ ಏಕೆ ಕ್ರಮ ಕೈಗೊಳ್ಳಬಾರದು? ಎಂದು ನೋಟಿಸ್‌ನಲ್ಲಿ ಪ್ರಶ್ನೆ ಮಾಡಿದೆ.
ರಾಜ್ಯ ಮತ್ತು ರಾಷ್ಟ್ರ ನಾಯಕರ ವಿರುದ್ಧ, ಪಕ್ಷದ ವಿರುದ್ಧ ನೀವು ನೀಡುತ್ತಿರುವ ಹೇಳಿಕೆಗಳಿಗೆ 7 ದಿನದಲ್ಲಿ ಉತ್ತರ ನೀಡಿ. ಇಲ್ಲವಾದಲ್ಲಿ ನಿಮ್ಮ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ನೋಟಿಸ್‌ನಲ್ಲಿ ಎಂಪಿ ರೇಣುಕಾಚಾರ್ಯಗೆ ಶಿಸ್ತು ಸಮಿತಿ ನೋಟಿಸ್ ಜಾರಿಗೊಳಿಸಿದೆ. ಈ ಮೂಲಕ ರಾಜ್ಯ ನಾಯಕರ ಮಾತಿನ ಸಮರಕ್ಕೆ ಕಡಿವಾಣ ಹಾಕಲು ಪಕ್ಷ ಮುಂದಾಗಿದೆ.
ರೇಣುಕಾಚಾರ್ಯ ಹೇಳಿಕೆಗಳು; ದಾವಣಗೆರೆ ಮತ್ತು ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ರೇಣುಕಾಚಾರ್ಯ ಪಕ್ಷದ ನಾಯಕರ ವಿರುದ್ಧ ಹೇಳಿಕೆಗಳನ್ನು ನೀಡಿದ್ದರು. ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಕಡೆಗಣಿಸಿದ್ದು ಚುನಾವಣೆಯಲ್ಲಿ ಪಕ್ಷದ ಸೋಲಿಗೆ ಪ್ರಮುಖ ಕಾರಣ ಎಂದು ಹೇಳಿದ್ದರು. ಉಳಿದಂತೆ ವಿವಿಧ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದರು.
* ಗ್ರಾಮ ಪಂಚಾಯಿತಿ ಚುನಾವಣೆ ಗೆಲ್ಲದವರು ನಮಗೆ ಪಾಠ ಮಾಡುತ್ತಾರೆ. ತಮಿಳುನಾಡಿನಿಂದ ಬಂದ ಅಣ್ಣಾಮಲೈ ಬಂದು ನಮಗೆ ಮಾರ್ಗದರ್ಶನ ಕೊಡುತ್ತಾರೆ. ಏನು ಅಣ್ಣಾಮಲೈ ದೊಡ್ಡ ಹೀರೋನಾ?.
* ಪ್ರಧಾನಿ ನರೇಂದ್ರ ಮೋದಿ ಅವರನ್ನು ಕರೆಸಿ ಬೀದಿ ಬೀದಿ ಸುತ್ತಿಸಿ ಚುನಾವಣಾ ಪ್ರಚಾರ ಮಾಡಿಸಿದಿರಿ. ಏಕೆ ನಿಮಗೆ ರಾಜ್ಯ ನಾಯಕರ ಮೇಲೆ ನಂಬಿಕೆ ಇರಲಿಲ್ಲವೇ?. ಆಯನೂರಿನಲ್ಲಿ ಸಮಾವೇಶಕ್ಕೆ 25 ಸಾವಿರ ಜನ ಸೇರಿಸಲು ನನಗೆ ಹೇಳಿದ್ದರು.
* ಚುನಾವಣೆಯಲ್ಲಿ ಸೋತ ಸಚಿವ ಡಾ. ಕೆ. ಸುಧಾಕರ್ ಮನೆಗೆ ಬಸವರಾಜ ಬೊಮ್ಮಾಯಿ ಹೋಗಿ ಸಮಾಧಾನ ಹೇಳುತ್ತಾರೆ. ಯಾಕೆ ಸುಧಾಕರ್ ಅವರೊಬ್ಬರೇ ಚುನಾವಣೆ ಸೋತಿರುವುದೇ?, ನಾವ್ಯಾರೂ ಸೋತಿಲ್ಲವೇ?.
* ಅನ್ನಭಾಗ್ಯ ಯೋಜನೆಯ ಅಕ್ಕಿ ಏಕೆ ಕಡಿತ ಮಾಡಿದಿರಿ?, ಚುನಾವಣೆಗೆ ನೀವು ಕೊಟ್ಟ ಭರವಸೆಗಳು ಏನು?. ಎಂತಹವರನ್ನು ಇಟ್ಟುಕೊಂಡು ಕರ್ನಾಟಕ ವಿಧಾನಸಭೆ ಚುನಾವಣೆ ಪ್ರಣಾಳಿಕೆಯನ್ನು ಸಿದ್ಧಪಡಿಸಿದಿರಿ? ಎಂದು ರೇಣುಕಾಚಾರ್ಯ ವಾಗ್ದಾಳಿ ನಡೆಸಿದ್ದರು.
* ಸತಾಯಿಸಿ, ಓಡಾಡಿಸಿ ಬಿಜೆಪಿ ಅಭ್ಯರ್ಥಿಗಳಿಗೆ ಟಿಕೆಟ್ ಕೊಟ್ಟರು. ಪಕ್ಷದ ಹಾಲಿ ಶಾಸಕರು ತಮ್ಮ ಅಭಿಪ್ರಾಯವನ್ನು ಹೇಳಿಕೊಳ್ಳಲು ಅವಕಾಶವನ್ನೇ ನೀಡಲಿಲ್ಲ.
* ಬಿಜೆಪಿ ರಾಜ್ಯಾಧ್ಯಕ್ಷರ ಮೇಲೆ ಗೌರವ ಇದೆ. ಅವರು ರಾಜ್ಯ ಪ್ರವಾಸ ಮಾಡಿದ್ದಾರೆ. ಆದರೆ ಅದು ಮತವಾಗಿ ಬದಲಾವಣೆ ಆಗಲಿಲ್ಲ. ಚುನಾವಣೆ ಸೋಲಿನ ಬಳಿಕ ನೈತಿಕ ಹೊಣೆ ಹೊತ್ತು ಅವರು ರಾಜೀನಾಮೆ ನೀಡಬೇಕಿತ್ತು. ಕಾರ್ಯಕರ್ತರನ್ನು ಬೆದರಿಸುವ ಕೆಲಸ ಮಾಡಬೇಡಿ ಎಂದು ರೇಣುಕಾಚಾರ್ಯ ಹೇಳಿಕೆಗಳನ್ನು ನೀಡಿದ್ದರು.












Click it and Unblock the Notifications