ಜುಲೈನಿಂದ ಸಾಹಸಸಿಂಹ ಡಾ.ವಿಷ್ಣುವರ್ಧನ್ ಕ್ರಿಕೆಟ್ ಕಪ್
ಈಗ ಎಲ್ಲೆಲ್ಲೂ ಕ್ರಿಕೆಟ್ ಆಟದ್ದೇ ಧ್ಯಾನ. ವಿಶ್ವಕಪ್ ಕ್ರಿಕೆಟ್ ಜ್ವರ ತಣ್ಣಾಗಾಗುತ್ತಿದ್ದಂತೆ ಐಪಿಎಲ್ ಜ್ವರ ಜರ್ರನೆ ಕಾವೇರುತ್ತಿದೆ. ಈ ಮಧ್ಯೆ ಸೆಲೆಬ್ರಿಟಿ ಕ್ರಿಕೆಟ್ ಲೀಗ್(ಸಿಸಿಎಲ್) ಕಣ್ಣಿಗೆ ಹಬ್ಬವನ್ನುಂಟು ಮಾಡಲು ಸಿದ್ಧತೆ ನಡೆಸುತ್ತಿದೆ. ಈ ಸಡಗರ, ಸಂಭ್ರಮದಲ್ಲೇ ಕನ್ನಡ ಚಿತ್ರರಂಗದ ಅಭಿನೇತ್ರಿ ಭಾರತಿ ವಿಷ್ಣುವರ್ಧನ್ ಹೊಸ ಕ್ರಿಕೆಟ್ ಕಪ್ ಪ್ರಕಟಿಸಿ ಅಭಿಮಾನಿಗಳ ಸಡಗರವನ್ನು ಇಮ್ಮಡಿಸಿದ್ದಾರೆ.
ಜುಲೈತಿಂಗಳಲ್ಲಿ ಡಾ.ವಿಷ್ಣುವರ್ಧನ್ ಕ್ರಿಕೆಟ್ ಕಪ್ ಶುರುವಾಗಲಿದೆ. ಸಾಹಸಸಿಂಹ ವಿಷ್ಣುವರ್ಧನ್ ಅವರ ಹುಟ್ಟುಹಬ್ಬವಾದ ಸೆಪ್ಟೆಂಬರ್ 18ರಂದು ವಿಷ್ಣು ಕಪ್ ಫೈನಲ್ಸ್ ನಡೆಯಲಿವೆ. ಅಂದೇ ವಿಷ್ಣುವರ್ಧನ್ ಕಪ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ವರ್ಣರಂಜಿತವಾಗಿ ನಡೆಯಲಿದೆ ಎಂದು ಭಾರತಿ ಪ್ರಸ್ ಕ್ಲಬ್‌ನಲ್ಲಿ ಇತ್ತೀಚೆಗೆ ತಿಳಿಸಿದರು.
ಜುಲೈ ತಿಂಗಳಿಂದ ಸೆಪ್ಟೆಂಬರ್‌ವರೆಗೆ ಭಾನುವಾರಗಳಂದು ಜಯನಗರ ನ್ಯಾಶನಲ್ ಕಾಲೇಜು ಮೈದಾನದಲ್ಲಿ ಪಂದ್ಯಾವಳಿ ನಡೆಯಲಿದೆ. ಅತ್ಯುತ್ತಮ ಬೌಲರ್, ಬ್ಯಾಟ್ಸ್ ಮನ್, ಫೀಲ್ಡರ್ ಹಾಗೂ ಅಂಫೈಲ್ ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಸೆಪ್ಟೆಂಬರ್ 18ರಂದು ನಡೆಯುವ ಫೈನಲ್ ಪಂದ್ಯದಲ್ಲಿ ಈ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದು ಎಂದು ಭಾರತಿ ವಿವರ ನೀಡಿದರು.
ನೀವೂ ಡಾ.ವಿಷ್ಣುವರ್ಧನ್ ಕಪ್‌ನಲ್ಲಿ ಪಾಲ್ಗೊಳ್ಳಬೇಕು ಎಂಬ ಆಸೆ ಇದೆಯೇ. ಹಾಗಿದ್ದರೆ ತಕ್ಷಣ ನಿಮ್ಮ ಮೊಬೈಲ್ ಫೋನನ್ನು ತೆಗೆದು ಈ ಸಂಖ್ಯೆಗೆ ಕರೆ ಮಾಡಿ. ಸಂಪರ್ಕಿಸಬೇಕಾದ ಮೊಬೈಲ್ ಸಂಖ್ಯೆಗಳು 9900325990, 9845971004. ಹಿರಿಯ ಕಲಾವಿದ ಶಿವರಾಮ್ ಹಾಗೂ ಅನಿರುದ್ಧ ಕೂಡ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.












Click it and Unblock the Notifications