ಶಿವಮೊಗ್ಗ: ಸೆ.30ರಂದು ಬಿಕೆಎಚ್ ನೇತೃತ್ವದಲ್ಲಿ 'ಭಾರತ್ ಜೋಡೋ 2.0' ಪಾದಯಾತ್ರೆ: ಮಧು ಬಂಗಾರಪ್ಪ
ಶಿಕಾರಿಪುರ: ನಾಲ್ಕು ವರ್ಷಗಳ ಹಿಂದೆ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ನಡೆದ 'ಭಾರತ್ ಜೋಡೋ' ಪಾದಯಾತ್ರೆ ಒಂದು ಪುಣ್ಯದ ಪಾದಯಾತ್ರೆ. ದ್ವೇಷದ ರಾಜಕೀಯಕ್ಕೆ ಸೆಡ್ಡು ಹೊಡೆದು ಭಾರತವನ್ನು ಒಗ್ಗೂಡಿಸಲು ನಡೆದಿದ್ದ ಈ ಪಾದಯಾತ್ರೆ ಕರ್ನಾಟಕಕ್ಕೆ ಕಾಲಿಟ್ಟು 4 ವರ್ಷಗಳಾದ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 30ರಂದು ಶಿಕಾರಿಪುರದಲ್ಲಿ ರಾಜ್ಯಮಟ್ಟದ 'ಭಾರತ್ ಜೋಡೋ 2.0' ಪಾದಯಾತ್ರೆ ಆಯೋಜಿಸಲಾಗಿದೆ ಎಂದು ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಹೇಳಿದರು. ಇದೇ ವೇಳೆ ಅವರು ಬಿ.ವೈ. ವಿಜಯೇಂದ್ರ ಅವರ ಪಾದಾಯಾತ್ರೆಯನ್ನು ಟೀಕಿಸಿದರು.
ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಪಾದಯಾತ್ರೆಯನ್ನು ಸ್ಮರಿಸುವ ಹಿನ್ನೆಲೆಈ ಪಾದಯಾತ್ರೆ ನಡೆಸಲಾಗುತ್ತಿದೆ. ಕಿಟ್ಟದಹಳ್ಳಿಯಿಂದ ಪಾದಯಾತ್ರೆ ಆರಂಭವಾಗಲಿದೆ. ಶಿಕಾರಿಪುರದಲ್ಲಿ ಮೈದಾನದಲ್ಲಿ ಬೃಹತ್ ಸಮಾವೇಶ ನಡೆಯಲಿದೆ. ಕೆಪಿಸಿಸಿಯ ಅಧ್ಯಕ್ಷ ಶ್ರೀ ಬಿ.ಕೆ. ಹರಿಪ್ರಸಾದ್ ಅವರ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದರು.

ಬೃಹತ್ ಸಮಾವೇಶ ನಡೆಯುವ ಸಂತೆ ಮೈದಾನದಲ್ಲಿನ ಸಿದ್ಧತೆಗಳನ್ನು ಪರಿಶೀಲಿಸಿ, ಹೊಸ ಸಂತೆ ಮೈದಾನದಲ್ಲಿ ಸುದ್ದಿಗೋಷ್ಠಿಯಲ್ಲಿ ಮತನಾಡಿದ ಅವರು, 2022ರ ಸೆಪ್ಟೆಂಬರ್ 30ರಂದು ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಕರ್ನಾಟಕವನ್ನು ಗುಂಡ್ಲುಪೇಟೆ ಮೂಲಕ ಪ್ರವೇಶಿಸಿತ್ತು. ಇದು ಕೇವಲ ಪಾದಯಾತ್ರೆಯಾಗಿರಲಿಲ್ಲ, ಜಾತಿ, ಧರ್ಮದ ಹೆಸರಲ್ಲಿ ಛಿದ್ರಗೊಂಡಿರುವ ಹೃದಯಗಳನ್ನು ಮತ್ತೆ ಬೆಸೆಯಲು ನಡೆಸಿದ್ದ ಪ್ರೀತಿಯ, ಸಾಮರಸ್ಯದ ಯಾತ್ರೆಯಾಗಿತ್ತು.
'ಭಾರತ್ ಜೋಡೊ ನಮ್ಮ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮ. ಪಕ್ಷದ ಅಧ್ಯಕ್ಷರಾದ ಬಿ.ಕೆ. ಹರಿಪ್ರಸಾದ್ ಅವರ ನೇತೃತ್ವದಲ್ಲಿ ಪಾದಯಾತ್ರೆ ನಡೆಯಲಿದೆ. ನಾನೂ ಪಾದಯಾತ್ರೆಯಲ್ಲಿ ಭಾಗವಹಿಸುತ್ತೇನೆ. ಶಿವಮೊಗ್ಗ ಜಿಲ್ಲೆಯ ಕಾಂಗ್ರೆಸ್‌ನ ಎಲ್ಲ ನಾಯಕರು ಸಹ ಭಾಗವಹಿಸಲಿದ್ದಾರೆ," ಎಂದು ಮಧು ಬಂಗಾರಪ್ಪ ತಿಳಿಸಿದರು.
10 ಕಿ.ಮೀ. ಪಾದಯಾತ್ರೆ
ಸೆಪ್ಟೆಂಬರ್ 30ರಂದು ಬೆಳಗ್ಗೆ 10 ಗಂಟೆಗೆ ಪಾದಯಾತ್ರೆ ಆರಂಭವಾಗಲಿದೆ. ಕಿಟ್ಟದಹಳ್ಳಿಯಿಂದ ಆರಂಭವಾಗಿ ಮಡ್ಡಿ ಕೋಟೆ ಕ್ರಾಸ್, ಹೊಸನಗರ ಕ್ರಾಸ್, ನೆಲವಾಗಿಲು ಕ್ರಾಸ್ ಮೂಲಕ ಸುಮಾರು 10 ಕಿ.ಮೀ. ಕ್ರಮಿಸಿ ಶಿಕಾರಿಪುರ ನಗರವನ್ನು ಪ್ರವೇಶಿಸಲಿದೆ ಎಂದು ಸಚಿವರು ವಿವರಿಸಿದರು.
2022ರ ಸೆಪ್ಟೆಂಬರ್ 30ರಂದು ರಾಹುಲ್ ಗಾಂಧಿ ಅವರು ಕರ್ನಾಟಕದ ಗುಂಡ್ಲುಪೇಟೆಗೆ ಪಾದಯಾತ್ರೆ ಮೂಲಕ ಪಾದಾರ್ಪಣೆ ಮಾಡಿದ ದಿನ. ಅದನ್ನು ದೊಡ್ಡ ಮಟ್ಟದಲ್ಲಿ ಸಂಭ್ರಮಿಸಬೇಕು. ಹೀಗಾಗಿ ರಾಜ್ಯಮಟ್ಟದ ಕಾರ್ಯಕ್ರಮವನ್ನು ಶಿಕಾರಿಪುರದಿಂದಲೇ ಆರಂಭಿಸುತ್ತಿದ್ದೇವೆ. ಇದೊಂದು ರಾಜಕೀಯ ಸಂದೇಶ ಸಾರುವ ಕಾರ್ಯಕ್ರಮ. ರಾಜ್ಯದಲ್ಲಿ ಮರಳಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವ ಸಂಕಲ್ಪ ಮಾಡುವ ದಿನ ಎಂದು ಹೇಳಿದರು.
ಶಿಕಾರಿಪುರದಿಂದಲೇ 'ರಣಕಹಳೆ'
ಶಿಕಾರಿಪುರದಲ್ಲೇ ಪಾದಯಾತ್ರೆ ಆಯೋಜಿಸಿರುವ ಕುರಿತು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಭಾರತ್ ಜೋಡೋ ಪಾದಯಾತ್ರೆ ಸಂಬಂಧ ಪಕ್ಷದೊಳಗೆ ಕಾರ್ಯಕಾರಿ ಸಮಿತಿ ಸಭೆ ನಡೆದಿದೆ. ರಾಜ್ಯದಲ್ಲಿ ಎರಡು ಕಡೆ ರಾಜ್ಯಮಟ್ಟದ ಕಾರ್ಯಕ್ರಮಗಳನ್ನು ನಡೆಸುವ ಕುರಿತು ಚರ್ಚೆಯಾಗಿತ್ತು. ಶಿಕಾರಿಪುರ ನಮಗೆ ಮುಖ್ಯವಾಗಿದ್ದು, ಇಲ್ಲಿಂದಲೇ ರಣಕಹಳೆ ಮೊಳಗಿಸೋಣ ಎಂದು ನಿರ್ಧರಿಸಲಾಗಿದೆ ಎಂದರು.
ವಿಜಯೇಂದ್ರ ಪಾದಯಾತ್ರೆ: ಮಧು ಬಂಗಾರಪ್ಪ ತಿರುಗೇಟು
ತಮ್ಮ ಕಾರ್ಯಕ್ರಮದ ದಿನವೇ ಬಿ.ವೈ. ವಿಜಯೇಂದ್ರ ಅವರು ಪಾದಯಾತ್ರೆ ನಡೆಸಲಿದ್ದಾರೆ ಎಂಬ ಮಾಹಿತಿ ಇದೆ ಎಂದು ಹೇಳಿದ ಮಧು ಬಂಗಾರಪ್ಪ, ಅವರು ಭ್ರಷ್ಟಾಚಾರದ ವಿರುದ್ಧ ಪಾದಯಾತ್ರೆ ಮಾಡಬೇಕು. ಅವರ ತಂದೆ ಬಿ.ಎಸ್. ಯಡಿಯೂರಪ್ಪ ಅವರು ಯಾವ ಕಾರಣಕ್ಕೆ ಜೈಲಿಗೆ ಹೋಗಿ ಬಂದಿದ್ದಾರೆ ಎಂಬುದು ರಾಜ್ಯಕ್ಕೆ ಗೊತ್ತಿದೆ. ಅವರದ್ದೇ ಪಕ್ಷದ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಯಡಿಯೂರಪ್ಪ ಕುಟುಂಬದ ಭ್ರಷ್ಟಾಚಾರದ ಬಗ್ಗೆ ಮಾತನಾಡಿದ್ದು ಸಾಕಾಗಿಲ್ಲವೇ? ಎಂದು ಪ್ರಶ್ನಿಸಿದರು.
ಜಿಲ್ಲೆಯಲ್ಲಿ 500 ಎಕರೆ ಲೂಟಿ ಕತೆ ಬಿಚ್ಚಿಡಬೇಕಾ? ನಮ್ಮ ತಂಟೆಗೆ ಬಂದರೆ ನಾವು ಸುಮ್ಮನೆ ಬಿಡುವುದಿಲ್ಲ. ತಂದೆ ಎಸ್. ಬಂಗಾರಪ್ಪ ಅವರು ಯಡಿಯೂರಪ್ಪ ಅವರನ್ನು ಹೇಗೆ ಸೋಲಿಸಿದರು ಗೊತ್ತಿಲ್ಲವೇ? ಸೊರಬದಲ್ಲಿ ನಾನು ಎಷ್ಟು ಅಂತರದಿಂದ ಗೆದ್ದಿದ್ದೇನೆ ಎಂಬುದನ್ನು ನೋಡಲಿ. ವಿಜಯೇಂದ್ರ ಕೊನೆಯ ಕ್ಷಣದಲ್ಲಿ ಹೇಗೋ ಬಚಾವಾಗಿದ್ದಾರೆ. ಈ ಸಲ ಅವರನ್ನು ಸೋಲಿಸುವುದೇ ನಮ್ಮ ಗುರಿ ಎಂದು ತಿಳಿಸಿದರು.
ಸೊರಬದಲ್ಲಿ ಗೆದ್ದು ಬನ್ನಿ ಎಂದು ಅವರ ಸಹೋದರ ರಾಘವೇಂದ್ರ ಹೇಳುತ್ತಾರೆ. ತಾವು ಹೇಗೆ ಗೆದ್ದು ಬಂದಿದ್ದೀರಿ? ಚುನಾವಣೆಯಲ್ಲಿ ಪೊಲೀಸ್ ವಾಹನಗಳನ್ನು ಹೇಗೆ ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂಬುದು ನಮಗೆ ಗೊತ್ತಿಲ್ಲವೇ? ಎಂದು ಬಿ.ವೈ.ರಾಘವೇಂದ್ರ ವಿರುದ್ಧವೂ ವಾಗ್ದಾಳಿ ನೀಡಿದರು.
ಪ್ರಜಾಸೇವೆ ಕುರಿತು ಟೀಕಿಸಿದ್ದ ಬಿ.ವೈ. ರಾಘವೇಂದ್ರ ಅವರು ಇತ್ತೀಚೆಗೆ ಶಿಕಾರಿಪುರದಲ್ಲಿ ನಡೆದ ಕಾರ್ಯಕ್ರಮಕ್ಕೆ ಬಂದು ಹೋಗಿದ್ದಾರೆ ಎಂದು ಹೇಳಿದ ಸಚಿವರು, ಅವರನ್ನು 'ಒಂದು ತರಹ ಶಕುನಿ' ಎಂದು ಟೀಕಿಸಿದರು.


Click it and Unblock the Notifications
