ಶಿವಮೊಗ್ಗದಲ್ಲಿ ಲ್ಯಾಂಡ್ ಆಗಲಿದೆ ಬೆಂಗಳೂರು-ವಿಜಯವಾಡ ವಿಮಾನ, ಶೀಘ್ರವೇ ಇನ್ನಷ್ಟು ಸ್ಥಳಗಳಿಗೆ ಸಂಪರ್ಕ
ಬೆಂಗಳೂರು, ಸೆಪ್ಟಂಬರ್ 07: ಮಲೆನಾಡು ಜಿಲ್ಲೆಯಾದ ಶಿವಮೊಗ್ಗ ವಿಮಾನ ನಿಲ್ದಾಣದ ಕಾರ್ಯಾಚರಣೆ ಕಳೆದ ಆಗಸ್ಟ್ 31ರಿಂದ ಆರಂಭವಾಗಿದೆ. ಬೆಂಗಳೂರಿನಿಂದ ಮೊದಲ ಇಂಡಿಗೋ ವಿಮಾನ ಲ್ಯಾಂಡ್ ಆಯಿತು. ಇದೀಗ ಬೆಂಗಳೂರಿನಿಂದ 'ವಿಜಯವಾಡ' ತಲುಪುವ ವಿಮಾನವು ಸಹ ಶಿವಮೊಗ್ಗ ಏರ್‌ಪೋರ್ಟ್‌ದಲ್ಲಿ ಲ್ಯಾಂಡ್ ಆಗಿ ತೆರಳಲಿದೆ.
ಈ ಮೊದಲು ಬೆಂಗಳೂರು-ವಿಜಯವಾಡ ಇಂಡಿಗೋ ವಿಮಾನವು ನೇರವಾಗಿ ತೆರಳುತ್ತಿತ್ತು. ಇದೀಗ ನೂತನ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಇಳಿದು ಪ್ರಯಾಣಿಕರನ್ನು ಕರೆದೊಯ್ಯಲಿದೆ. ಈ ಕೆಲಸ ಇನ್ನೊಂದು ವಾರದಲ್ಲಿ ಆಗಲಿದೆ. ಅಲ್ಲದೆ ಇನ್ನೊಂದು ತಿಂಗಳಲ್ಲಿ ಶಿವಮೊಗ್ಗದಿಂದ ಬೇರೆ ಬೇರೆ ಸ್ಥಳಗಳಿಗೆ ಸಂಪರ್ಕ ಕಲ್ಪಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಸಂಸದ ಬಿ.ವೈ. ರಾಘವೇಂದ್ರ ಅವರು ಮಾಹಿತಿ ನೀಡಿದ್ದಾರೆ.

ಬೆಂಗಳೂರಿನಿಂದ ಶಿಮವೊಗ್ಗಕ್ಕೆ ಬರುತ್ತಿದ್ದವರ ಜೊತೆಗೆ ವಿಜಯವಾಡಕ್ಕೆ ತೆರಳುವವರು ಬುಕಿಂಗ್ ಮಾಡಲು ಅನುಕೂಲವಾಗುವಂತೆ ಇಂಡಿಗೋ ಸಂಸ್ಥೆ ಈಗಾಗಲೇ ಬುಕ್ಕಿಂಗ್ ಆರಂಭಿಸಿದೆ. ಇನ್ನೇನು ಶೀಘ್ರವೇ ಟಿಕೆಟ್‌ಗಳು ಸಹ ಬುಕ್ ಆಗಲಿವೆ ಎಂದು ಅವರು ತಿಳಿಸಿದರು.
ಆಗಸ್ಟ 31ರಂದೇ ಮೊದಲ ದಿನ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಇಂಡಿಗೋ ವಿಮಾನ ಮೂಲಕ ನಾಯಕರಾದ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಸಂಸದ ಬಿ.ವೈ. ರಾಘವೇಂದ್ರ, ಸಚಿವ ಎಂಬಿ ಪಾಟೀಲ್, ಶಾಸಕ ಆರಗ ಜ್ಞಾನೇಂದ್ರ ಸೇರಿದಂತೆ ಮತ್ತಿತರರು ಮೊದಲ ಪ್ರಯಾಣದ ಅನುಭವ ಪಡೆದರು. ಅವರು ಬಂದಿಳಿಯುತ್ತಿದ್ದಂತೆ ಶಿವಮೊಗ್ಗದಲ್ಲಿ ಭರ್ಜರಿ ಸ್ವಾಗತ ಕೋರಲಾಯಿತು.

ವಿಶಾಲ ಪ್ರದೇಶದಲ್ಲಿ ನಿರ್ಮಾಣವಾದ ಏರ್‌ಪೋರ್ಟ್
ಶಿವಮೊಗ್ಗದಿಂದ ಸುಮಾರು 15 ಕಿಲೋ ಮೀಟರ್ ದೂರವಿರುವ ಸೋಗಾನೆಯಲ್ಲಿ ಮಲೆನಾಡು ಭಾಗದ ಮೊದಲ ವಿಮಾನ ನಿಲ್ದಾಣ ಸುಮಾರು 450 ಕೋಟಿ ರೂಪಾಯಿ ವೆಚ್ಚದಲ್ಲಿ ತಲೆ ಎತ್ತಿದೆ. ಒಟ್ಟು ಸುಮಾರು 700ಕ್ಕೂ ಅಧಿಕ ಎಕರೆಯನ್ನು ಏರ್‌ಪೋರ್ಟ್ ನಿರ್ಮಾಣಕ್ಕೆ ಬಳಸಿಕೊಳ್ಳಲಾಗಿದೆ.
ಬಿಜೆಪಿ ಅಧಿಕಾರದಲ್ಲಿದ್ದಾಗ 2019ರಲ್ಲಿ ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಯೋಜನೆ ಅನುಷ್ಠಾನಕ್ಕೆ ಇದ್ದ ತೊಂದರೆ ನಿವಾರಿಸಿ ಹಣ ಹಂಚಿಕೆ ಮಾಡಿದ್ದಾರೆ. ಬಳಿಕ ನಿರೀಕ್ಷೆಗಿಂತಲು ಉತ್ತಮ ವಾಗಿ, 3200 ಮೀಟರ್ ಹೆಚ್ಚುವರಿ ರನ್‌ವೇ ನಿರ್ಮಾಣ, ನೈಟ್ ಲ್ಯಾಂಡಿಂಗ್ ವ್ಯವಸ್ಥೆ ಮಾಡಲಾಗಿದೆ. ಇದು ಬೋಯಿಂಗ್ ವಿಮಾನಗಳು ಇಳಿಯಲು ನೆರವಾಗಲಿದೆ. ಕರ್ನಾಟಕ ಮಾತ್ರವಲ್ಲದೇ ಬೇರೆ ರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ ಚಿಂತನೆಯಲ್ಲಿರುವ ಕರ್ನಾಟಕ ಸರ್ಕಾರವೇ
ನಿರ್ವಹಿಸುತ್ತಿರುವ ಮೊದಲ ವಿಮಾನ ನಿಲ್ದಾಣ ಇದಾಗಿದೆ.
ಮಲೆನಾಡಿನ ಈ ಏರ್‌ಪೊರ್ಟ್‌ಗೆ 'ರಾಷ್ಟ್ರಕವಿ ಕುವೆಂಪು' ಅವರ ಹೆಸರು ಇಡಲಾಗಿದೆ. ಶಿವಮೊಗ್ಗ ಸುತ್ತಮುತ್ತಲಿನ ಜಿಲ್ಲೆಗಳಾದ ದಾವಣಗೆರೆ, ಹಾವೇರಿ, ಚಿತ್ರದುರ್ಗದ ಭಾಗಗಳ ಜನರಿಗೆ ಹೆಚ್ಚು ಅನುಕೂಲವಾಗಿದೆ.












Click it and Unblock the Notifications