ಮೆಜೆಸ್ಟಿಕ್ ರೈಲ್ವೇ ನಿಲ್ದಾಣದಲ್ಲಿ ಕಳ್ಳರ ಮುಖ ಗುರುತು ಹಿಡಿಯುವ 157 ಸಿಸಿಟಿವಿ ಕ್ಯಾಮರ ಕಣ್ಣು!
ಬೆಂಗಳೂರು, ಅ. 07: ರೈಲ್ವೇ ಪ್ರಯಾಣಿಕರಿಗೆ ಸಂತಸದ ಸುದ್ದಿ. ಮೆಜೆಸ್ಟಿಕ್‌ನಲ್ಲಿರುವ ರೈಲ್ವೇ ನಿಲ್ದಾಣದಲ್ಲಿ ಇನ್ಮುಂದೆ ಪಿಕ್‌ಪಾಕೆಟ್, ಮೊಬೈಲ್ ಕಳವು, ಸರ ಕದ್ದು ಓಡಿ ಹೋಗುವ ಕಳ್ಳ- ಕಾಕರ ಬಗ್ಗೆ ಪ್ರಯಾಣಿಕರು ಭಯ ಪಡುವ ಅಗತ್ಯವಿಲ್ಲ. ಕಳ್ಳರು ರೈಲ್ವೇ ನಿಲ್ದಾಣಕ್ಕೆ ಕಾಲಿಟ್ಟ ಕೂಡಲೇ ಅವರನ್ನು ಸೀಕ್ರೇಟ್ ಕ್ಯಾಮರಾಗಳು ಹಿಂಬಾಲಿಸಲಿವೆ! ಕ್ಷಣಾರ್ಧದಲ್ಲಿ ರೈಲ್ವೇ ಪೊಲೀಸರನ್ನು ಅಲರ್ಟ್ ಮಾಡಿ ಕಳ್ಳರನ್ನು ಹಿಡಿದುಕೊಡಲಿವೆ!
ಹೌದು. ಮೆಜೆಸ್ಟಿಕ್‌ನಲ್ಲಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೇ ನಿಲ್ದಾಣಕ್ಕೆ ಕಳ್ಳರ ಮುಖ ಗುರುತು ಹಿಡಿಯುವ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ರೈಲ್ವೇ ನಿಲ್ದಾಣದಲ್ಲಿ ಬರೋಬ್ಬರಿ 157 ಫೇಸ್ ರೆಕಗ್ನೈಸ್ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ರೈಲ್ವೇ ನಿಲ್ದಾಣದಲ್ಲಿ ಇವರೆಗೆ ಅಪರಾಧ ಕೃತ್ಯ ಎಸಗಿರುವ ಪಿಕ್ ಪಾಕೆಟ್, ಬ್ಯಾಗ್ ಕಳ್ಳರು, ಮೊಬೈಲ್ ಕಳ್ಳರು, ರೌಡಿಗಳು, ಗಮನ ಬೇರಡೆ ಸಳೆದು ವಂಚನೆ ಮಾಡುವ ಆಘುಂತಕರ ಎಲ್ಲಾ ವಿವರಗಳನ್ನು ಸಿಸಿಟಿವಿ ಕ್ಯಾಮರಾಗಳಿಗೆ ಆರ್ಟಿಫಿಷಿಯಲ್ ಇಂಟೆಲ್ ಜೆನ್ಸಿ ತಂತ್ರಜ್ಞಾನ ಬಳಸಿ ಅಳವಡಿಸಲಾಗಿದೆ. ಯಾರೇ ಕಳ್ಳ ಮೆಜೆಸ್ಟಿಕ್ ರೈಲ್ವೇ ನಿಲ್ದಾಣಕ್ಕೆ ಎಂಟ್ರಿ ಕೊಟ್ಟ ಕೂಡಲೇ ರೈಲ್ವೇ ಪೊಲೀಸರ ಕಮಾಂಡ್ ಸೆಂಟರ್‌ಗೆ ಸಂದೇಶ ಹೋಗುತ್ತದೆ.

ಕಳ್ಳರನ್ನು ಹಿಂಬಾಲಿಸಿವೆ ಕ್ಯಾಮರಾ
ಸಿಸಿಟಿವಿ ಕ್ಯಾಮರಾದಲ್ಲಿ ಅಳವಡಿಸಿರುವ ಡಾಟಾದಲ್ಲಿರುವ ಯಾವೊಬ್ಬ ಕಳ್ಳ ರೈಲ್ವೇ ನಿಲ್ದಾಣಕ್ಕೆ ಬಂದ ಕೂಡಲೇ ರೈಲ್ವೇ ಪ್ರೊಟಕ್ಷನ್ ಪೋರ್ಸ್ ಕಮಾಂಡ್ ಸೆಂಟರ್‌ಗೆ ಸಂದೇಶ ರವಾನೆಯಾಗಲಿದೆ. ಜತೆಗೆ ಕಳ್ಳನ ಮುಖವನ್ನೇ ಈ ಕ್ಯಾಮರಾಗಳು ಗುರುತು ಮಾಡಲಿವೆ. ಕಳ್ಳ ರೈಲ್ವೇ ನಿಲ್ದಾಣದ ವ್ಯಾಪ್ತಿಯಲ್ಲಿ ಎಲ್ಲೇ ಓಡಾಡಿದರೂ ಅವನ ಮುಖದತ್ತಲೆ ಸಿಸಿಟಿವಿ ಕ್ಯಾಮರಾಗಳು ರೊಟೇಟ್ ಆಗಲಿವೆ. ಇನ್ನು ಅತ ಇರುವ ಜಾಗ, ಕ್ಯಾಮರಾ ಸಂಖ್ಯೆಯ ವಿವರ ಕಮಾಂಡ್ ಸೆಂಟರ್‌ನಲ್ಲಿ ಲಭ್ಯವಾಗಲಿವೆ. ಒಮ್ಮೆ ಕಳ್ಳ ಬಂದಿರುವ ವಿಷಯ ಗೊತ್ತಾದ ಕೂಡಲೇ ರೈಲ್ವೆ ಪೊಲೀಸರು ಕಮಾಂಡ್ ಸೆಂಟರ್ ಮಾಹಿತಿ ಆಧರಿಸಿ ಹಿಂಬಾಲಿಸಿ ಕಳ್ಳನನ್ನು ಸೆರೆ ಹಿಡಿಯಲಿದ್ದಾರೆ.

ದೇಶದಲ್ಲಿ ಮೊದಲ ಪ್ರಯತ್ನ
ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಪ್ರಾಯೋಗಿಕವಾಗಿ ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೇ ನಿಲ್ದಾಣದಲ್ಲಿ ಈ ಫೇಸ್ ರೆಕಗ್ನೈಸ್ ಸಿಸಿಟಿವಿ ಕ್ಯಾಮರಾ ಅಳವಡಿಸಲಾಗಿದೆ. ಇದರ ಅರಿವೇ ಇಲ್ಲದೇ ಪ್ರಯಾಣಿಕರ ಬ್ಯಾಗು, ಪರ್ಸ್ ಕದಿಯಲು ಹೋಗಿ ಅನೇಕ ಕಳ್ಳರು ಲಾಕ್ ಆಗಿದ್ದಾರೆ. ಸುಮಾರು 2.4 ಕೋಟಿ ರೂ. ವೆಚ್ಚದಲ್ಲಿ ಇದೇ ಮೊದಲ ಬಾರಿ ಬೆಂಗಳೂರಿನಲ್ಲಿ ಅಳವಡಿಸಲಾಗಿದೆ. ಕೃತಕ ತಂತ್ರಜ್ಞಾನ ಮೂಲಕ ರೈಲ್ವೇ ನಿಲ್ದಾಣದ ಕಳ್ಳರ ವಿವರಗಳನ್ನು ನೋಂದಣಿ ಮಾಡಿದ್ದು, ಕಳ್ಳರು ರೈಲ್ವೇ ನಿಲ್ದಾಣಕ್ಕೆ ಎಂಟ್ರಿಯಾದ ಕೂಡಲೇ ಸಿಸಿಟಿವಿ ಕ್ಯಾಮರಾಗಳೇ ಅಲರ್ಟ್ ಆಗುತ್ತವೆ. ಮುಖಕ್ಕೆ ಮಾಸ್ಕ್ ಧರಿಸಿದ್ರೂ ಸಿಸಿಟಿವಿ ಕ್ಯಾಮರಾ ಕಣ್ಗಾವಲಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಅಂತಹ ವಿನೂತನ ತಂತ್ರಜ್ಞಾನ ಈ ಕ್ಯಾಮರಾಗಳಲ್ಲಿ ಅಳವಡಿಸಲಾಗಿದೆ ಎಂದು ರೈಲ್ವೇ ಪೊಲೀಸರು ತಿಳಿಸಿದ್ದಾರೆ.

ರೈಲ್ವೇ ಕಳ್ಳರ ಡಾಟಾ ಸಂಗ್ರಹಿಸಿ ಅಳವಡಿಕೆ
ಮೆಜೆಸ್ಟಿಕ್ ಸೇರಿದಂತೆ ಬೆಂಗಳೂರಿನ ರೈಲ್ವೇ ನಿಲ್ದಾಣಗಳಲ್ಲಿ ಕಳ್ಳತನ ಮಾಡುವ, ಮೊಬೈಲ್ ಸುಲಿಗೆ ಮಾಡಿ ಸಿಕ್ಕಿಬಿದ್ದಿರುವ ಸುಮಾರು ನೂರಕ್ಕೂ ಹೆಚ್ಚು ಕಳ್ಳರ ಡಾಟಾ ಎಂಟ್ರಿ ಮಾಡಲಾಗಿದೆ. ಈ ಕಳ್ಳರಲ್ಲಿ ಯಾರೇ ಆಗಲಿ ರೈಲ್ವೇ ನಿಲ್ದಾಣಕ್ಕೆ ಎಂಟ್ರಿ ಕೊಟ್ಟ ಕೂಡಲೇ ಕಮಾಂಡ್ ಸೆಂಟರ್‌ನಲ್ಲಿ ಅಲರ್ಟ್ ಮೆಸೇಜ್ ಬರುತ್ತದೆ. ಕೂಡಲೇ ಆರ್ ಪಿಎಫ್ ಸಿಬ್ಬಂದಿ ಮಫ್ತಿಯಲ್ಲಿ ಕಳ್ಳರನ್ನು ಹಿಂಬಾಲಿಸಲಿದ್ದಾರೆ. ಕೈಚಳಕ ತೋರಿದ ಕೂಡಲೇ ಬಂಧನಕ್ಕೆ ಒಳಗಾಗಿ ಜೈಲು ಸೇರಲಿದ್ದಾರೆ.
Recommended Video

ಹೊಸಬರಿಗೂ ಕಷ್ಟ
ಇನ್ನು ದೇಶದ ಪ್ರಮುಖ ರೈಲ್ವೇ ನಿಲ್ದಾಣಗಳಲ್ಲಿ ಈ ವಿನೂತನ ತಂತ್ರಜ್ಞಾನ ಆಧಾರಿತ ಸಿಸಿಟಿವಿ ಕ್ಯಾಮರಾ ಅಳವಡಿಸಲು ರೈಲ್ವೇ ಇಲಾಖೆ ಚಿಂತನೆ ನಡೆಸಿದೆ. ಆದರೆ, ಪ್ರಾಯೋಗಿಕವಾಗಿ ಬೆಂಗಳೂರಿನಲ್ಲಿ ಅಳವಡಿಸಿದ್ದು, ಈ ವಿಷಯ ಗೊತ್ತಿಲ್ಲದೇ ಕಳ್ಳರು ಕೈಚಳಕ ತೋರಿಸಿ ರೈಲ್ವೇ ಪೊಲೀಸರ ಕೈಗೆ ಸಿಕ್ಕಿ ಬೀಳುತ್ತಿದ್ದಾರೆ. ಬೇರೆ ಯಾವುದೇ ನಿಲ್ದಾಣದಲ್ಲಿ ರೈಲು ಹತ್ತಿ ಕೈಚಳಕ ತೋರಿ ಅರ್ಧ ದಲ್ಲಿ ನಿಂತು ಬಿಟ್ಟರೆ ಈ ಕ್ಯಾಮರಾಗಳಿಂದ ಯಾವುದೇ ಪ್ರಯೋಜನ ಆಗಲ್ಲ. ಇಂತಹ ಕ್ಯಾಮರಾಗಳನ್ನು ಎಲ್ಲಾ ಸಣ್ಣ ಪುಟ್ಟ ರೈಲು ನಿಲ್ದಾಣಗಳಲ್ಲಿ ಹಾಕಬೇಕು. ಇಲ್ಲವೇ ರೈಲುಗಳಲ್ಲಿಯೇ ಅಳವಡಿಸಬೇಕು. ಆಗ ಮಾತ್ರ ಸಾರ್ವಜನಿಕರಿಗೆ ನೆರವಾಗಲಿದೆ ಎಂಬುದು ಸಾರ್ವಜನಿಕರ ಅಭಿಪ್ರಾಯ.












Click it and Unblock the Notifications