ಬೆಂಗಳೂರು ತಂದ ಅದೃಷ್ಟ: ಶೋಭಾ ಕರಂದ್ಲಾಜೆಗೆ ಮತ್ತೆ ಕೇಂದ್ರ ಸಚಿವ ಸ್ಥಾನ
ಬೆಂಗಳೂರು, ಜೂನ್ 09: ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಹಾಲಿ ಸಂಸದೆಯಾಗಿರುವ ಶೋಭಾ ಕರಂದ್ಲಾಜೆ ಮತ್ತೆ ಕೇಂದ್ರ ಸಚಿವ ಸಂಪುಟ ಸೇರಿದ್ದಾರೆ. ಈ ಬಾರಿ ರಾಜ್ಯದ ಐವರು ಸಂಸದರಿಗೆ ಸಚಿವ ಸ್ಥಾನ ದೊರಕಿದ್ದು, ಈ ಪೈಕಿ ಕಳೆದ ಬಾರಿ ಕೇಂದ್ರ ಸಚಿವರಾಗಿದ್ದ ಶೋಭಾ ಕರಂದ್ಲಾಜೆಗೆ ಮತ್ತೊಮ್ಮೆ ಸಚಿವ ಸ್ಥಾನ ನೀಡಲಾಗಿದೆ.
ರಾಷ್ಟ್ರೀಯ ಸ್ವಯಂಸೇವಕ ಸಂಘದೊಂದಿಗೂ ಸಕ್ರಿಯವಾಗಿ ಗುರುತಿಸಿಕೊಂಡ ಶೋಭಾ ಕರಂದ್ಲಾಜೆ ಸಂಸದೆ, ಸಚಿವೆ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹೀಗೆ ವಿವಿಧ ಸ್ತರಗಳಲ್ಲಿ ಬಿಜೆಪಿಯ ಪ್ರಮುಖರಾಗಿ ಗುರುತಿಸಿಕೊಂಡು ಕರ್ನಾಟಕದಲ್ಲಿ ಪಕ್ಷವನ್ನು ಸದೃಢಗೊಳಿಸುವಲ್ಲಿ ಪ್ರಮುಖರಾಗಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕು ಚಾರ್ವಾಕದಲ್ಲಿ 23ನೇ ಅಕ್ಟೋಬರ್ 1966ರಲ್ಲಿ ಜನಿಸಿದ ಶೋಭಾ ಕರಂದ್ಲಾಜೆ ಅವರ ಅಮ್ಮ ಪೂವಮ್ಮ, ಅಪ್ಪ ಮೋನಪ್ಪ ಗೌಡ. ಸಮಾಜ ಶಾಸ್ತ್ರ ಮತ್ತು ಸಾಮಾಜಿಕ ಕಾರ್ಯ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
ಚಿಕ್ಕ ವಯಸ್ಸಿನಲ್ಲೇ ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ಸೇರಿದ್ದ ಶೋಭಾ ಕರಂದ್ಲಾಜೆ ಸಂಘ ಪರಿವಾರದ ಪೂರ್ಣಾವಧಿ ಕಾರ್ಯಕರ್ತೆಯಾದರು.

ರಾಜಕೀಯ ಜೀವನ
1994 ರಲ್ಲಿ ಬಂಟ್ವಾಳ ವಿಧಾನಸಭೆಗೆ ಸ್ಪರ್ಧಿಸಿದ್ದ ಶಕುಂತಲಾ ಶೆಟ್ಟಿಯವರ ಒಡನಾಟದಿಂದ ರಾಜಕೀಯ ಪ್ರವೇಶ ಮಾಡಿದ ಶೋಭಾ ಕರಂದ್ಲಾಜೆ , 1997 ರಲ್ಲಿ ಉಡುಪಿ ಜಿಲ್ಲೆ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷರಾಗಿ ಆಯ್ಕೆಯಾದರು. 1997 ರಲ್ಲಿ ಬೆಂಗಳೂರು ರಾಜಕೀಯ ರಂಗ ಪ್ರವೇಶ ಮಾಡಿ 1999 ರಲ್ಲಿ ಬಿ.ಎಸ್.ಯಡಿಯೂರಪ್ಪನವರ ಸಂಕಲ್ಪ ರಥಯಾತ್ರೆಯಲ್ಲಿ ಭಾಗಿಯಾದರು. ನಂತರ ಹಲವು ಹೋರಾಟ, ಪಾದಯಾತ್ರೆ, ಸತ್ಯಾಗ್ರಹ ನಡೆಸಿದರು.
2000ನೇ ಇಸವಿಯಲ್ಲಿ ಬಿಜೆಪಿ ರಾಜ್ಯ ಕಾರ್ಯದರ್ಶಿಯಾಗಿ ಆಯ್ಕೆಯಾಗಿ 2004 ರಲ್ಲಿ ವಿಧಾನ ಪರಿಷತ್ ಸದಸ್ಯೆಯಾದರು. 2008 ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಯಶವಂತಪುರ ಕ್ಷೇತ್ರದಿಂದ ಸ್ಪರ್ಧಿಸಿ ಶಾಸಕಿಯಾಗಿ ಆಯ್ಕೆಯಾದರು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾಗಿ ಕಾರ್ಯನಿರ್ವಹಣೆ. ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿಯೂ ಕೆಲಸ ನಿರ್ವಹಿಸಿದ ಅನುಭವ, ದಸರಾ ಮಹೋತ್ಸವ ನಿಭಾಯಿಸಿದ ಅನುಭವ ಹೊಂದಿದ್ದಾರೆ.

2009 ರಲ್ಲಿ ಕೆಲವು ರಾಜಕೀಯ ಭಿನ್ನಾಭಿಪ್ರಾಯಗಳಿಂದಾಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಬಳಿಕ ಮತ್ತೆ 2010ರಲ್ಲಿ ಕರ್ನಾಟಕ ಸರ್ಕಾರದಲ್ಲಿ ಇಂಧನ ಸಚಿವೆಯಾಗಿ ಅಧಿಕಾರ ಸ್ವೀಕರಿಸಿದರು. 2012 ರಲ್ಲಿ ಬಿಜೆಪಿಯ ಕೆಲವು ನಾಯಕರೊಂದಿಗೆ ಭಿನ್ನಾಭಿಪ್ರಾಯ ಮೂಡಿ, ಬಿ. ಎಸ್ ಯಡಿಯೂರಪ್ಪನವರು ಸ್ಥಾಪಿಸಿದ ಕರ್ನಾಟಕ ಜನತಾ ಪಕ್ಷ(ಕೆಜೆಪಿ)ಕ್ಕೆ ಸೇರ್ಪಡೆಯಾದರು. 2013 ರಲ್ಲಿ ಕೆಜೆಪಿಯಿಂದ ಸ್ಪರ್ಧಿಸಿ ಬಿಜೆಪಿಯ ಸುರೇಶ್ ಕುಮಾರ್ ವಿರುದ್ಧ ಸೋಲು ಕಂಡರು.
2013 ರಲ್ಲಿ ಬಿಜೆಪಿಯೊಂದಿಗೆ ಕೆಜೆಪಿ ವಿಲೀನವಾದ ಬಳಿಕ 2014ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಸ್ಪರ್ಧಿಸಿ ಗರಿಷ್ಠ ಮತಗಳ ಅಂತರದಿಂದ ಗೆಲುವು ಸಾಧಿಸಿದರು. ಬಳಿಕ 2019ರ ಲೋಕಸಭೆ ಚುನಾವಣೆಯಲ್ಲಿಯೂ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿ. 2021ರಲ್ಲಿ ಮೋದಿ ಸರ್ಕಾರ 2.0ರಲ್ಲಿ ಕೇಂದ್ರ ಸಚಿವೆಯಾಗಿ ಕಾರ್ಯ ನಿರ್ವಹಿಸಿದರು.
ಈ ಬಾರಿ ಬೆಂಗಳೂರು ಉತ್ತರದಿಂದ ಸ್ಪರ್ಧಿಸಿ ಭರ್ಜರಿ ಗೆಲುವು ಸಾಧಿಸಿದ ಶೋಭಾ ಕರಂದ್ಲಾಜೆ ಎರಡನೇ ಬಾರಿಗೆ ಕೇಂದ್ರ ಸಚಿವೆ ಸ್ಥಾನಕ್ಕೆ ಆಯ್ಕೆ ಆಗಿದ್ದಾರೆ.












Click it and Unblock the Notifications