Bengaluru-Mysuru Expressway : ಶೀಘ್ರವೇ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ಆಟೋ, ಬೈಕ್ ನಿಷೇಧ
ಬೆಂಗಳೂರು, ಏಪ್ರಿಲ್. 27: ಮಹತ್ವಾಕಾಂಕ್ಷೆಯ ಬೆಂಗಳೂರು - ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ ದ್ವಿಚಕ್ರ ವಾಹನಗಳು, ಆಟೋ ರಿಕ್ಷಾಗಳು ಮತ್ತು ನಿಧಾನವಾಗಿ ಚಲಿಸುವ ಇತರ ವಾಹನಗಳನ್ನು ಶೀಘ್ರದಲ್ಲೇ ನಿಷೇಧಿಸಲಾಗುವುದು ಎಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತಿಳಿಸಿದೆ.
ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ದ ಅಧಿಕಾರಿಯೊಬ್ಬರು ಈ ವಿಷಯದಲ್ಲಿ ಶೀಘ್ರದಲ್ಲೇ ಗೆಜೆಟ್ ಅಧಿಸೂಚನೆಯನ್ನು ಹೊರಡಿಸುವ ನಿರೀಕ್ಷೆಯಿದೆ ಎಂದು ಟೈಮ್ಸ್ ನೌ ವರದಿ ಮಾಡಿದೆ. ಹೈಸ್ಪೀಡ್ ಕಮ್ಯುಟ್ ಕಾರಿಡಾರ್‌ನಲ್ಲಿ ನಿಧಾನವಾಗಿ ಚಲಿಸುವ ವಾಹನಗಳು ಅಪಾಯವನ್ನು ಉಂಟುಮಾಡುತ್ತವೆ ಎಂಬ ಕಾರಣದಿಂದ ಅಪಘಾತಗಳನ್ನು ತಪ್ಪಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

"ಬೈಕುಗಳು, ಆಟೋಗಳು ಮತ್ತು ಕೃಷಿ ಟ್ರಾಕ್ಟರುಗಳಂತಹ ಇತರ ನಿಧಾನವಾಗಿ ಚಲಿಸುವ ವಾಹನಗಳನ್ನು ಸಾಮಾನ್ಯವಾಗಿ ಪ್ರವೇಶ ನಿಯಂತ್ರಿತ ಹೆದ್ದಾರಿಗಳಲ್ಲಿ ಅನುಮತಿಸಲಾಗುವುದಿಲ್ಲ. ಹೆಚ್ಚಿನ ವೇಗದ ಪ್ರಯಾಣದ ಉದ್ದೇಶದಿಂದ ಎಕ್ಸ್‌ಪ್ರೆಸ್‌ವೇಗಳನ್ನು ನಿರ್ಮಿಸಲಾಗುತ್ತದೆ. ಈ ನಿಯಮವೇ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಗೂ ಅನ್ವಯವಾಗುತ್ತದೆ" ಎಂದಿದ್ದಾರೆ.
ಈಗಾಗಲೇ ಕೆಲವು ತಿಂಗಳ ಹಿಂದೆ ಇದೇ ವಿಷಯಕ್ಕೆ ರಾಜ್ಯಲ್ಲಿ ಭಾರೀ ವಿವಾದ ಉಂಟಾಗಿತ್ತು. ಆದರೂ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಕೇರ್ ಮಾಡದೇ ನಿಯಮ ಜಾರಿಗೊಳಿಸಲು ಹೊರಟಿದ್ದಾರೆ. ಇನ್ನೂ, ಈ ಕುರಿತು ಶೀಘ್ರದಲ್ಲೇ ಗೆಜೆಟ್ ಅಧಿಸೂಚನೆಯನ್ನು ಹೊರಡಿಸುವ ಸಾಧ್ಯತೆಯಿದೆ ಎಂದು ಎನ್‌ಎಚ್‌ಎಐ ಅಧಿಕಾರಿ ಮಾಹಿತಿ ನೀಡಿದ್ದಾರೆ.

ಆರು ಪಥಗಳ ಎಕ್ಸ್‌ಪ್ರೆಸ್‌ವೇ ಈ ವರ್ಷದ ಮಾರ್ಚ್ ಮಧ್ಯದಲ್ಲಿ ಟೋಲ್ ಸಂಗ್ರಹವನ್ನು ಪ್ರಾರಂಭಿಸಿ ಹಲವು ವಿವಾದಗಳಲ್ಲಿ ಸಿಲುಕಿಕೊಂಡಿತ್ತು. ಹೆಚ್ಚಿನ ಟೋಲ್ ಶುಲ್ಕ, ಸರ್ವಿಸ್ ರಸ್ತೆಗಳು ಇಲ್ಲದೇ ಟೋಲ್ ಆರಂಭ ಸೇರಿದಂತೆ ಹಲವು ಕಾರಣಕ್ಕೆ ಸುದ್ದಿಯಾಗಿಯತ್ತು. ಕಾಂಗ್ರೆಸ್ ಮತ್ತು ಜಾತ್ಯತೀತ ಜನತಾ ದಳ ದಂತಹ ರಾಜಕೀಯ ಪಕ್ಷಗಳು, ವಾಹನ ಚಾಲಕರು, ಕನ್ನಡ ಪರ ಸಂಘಟನೆಗಳು ಭಾರೀ ಪ್ರತಿಭಟನೆ ನಡೆಸಿದ್ದವು.
ಈ ಎಲ್ಲದರ ನಡುವೆ, ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಏಪ್ರಿಲ್ ಆರಂಭದಲ್ಲಿ ಬೆಂಗಳೂರಿನಿಂದ ನಿಡಘಟ್ಟದವರೆಗಿನ ಪೂರ್ಣಗೊಂಡ ಟೋಲ್ ಶುಲ್ಕವನ್ನು 22 ರಿಂದ 23% ರಷ್ಟು ಹೆಚ್ಚಿಸಿದೆ. ಪರಿಷ್ಕರಣೆಯು ಸಗಟು ಬೆಲೆ ಸೂಚ್ಯಂಕ (WPI) ಆಧರಿಸಿ ನಡೆಸಲಾಗುವ ವಾರ್ಷಿಕ ನಿಯಮವಿದು ಎಂದು ಸಮಜಾಯಿಷಿ ನೀಡಿದೆ.
ಕಳೆದ ತಿಂಗಳು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿದ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ 118 ಕಿಲೋಮೀಟರ್ ಉದ್ದವಿದ್ದು, 8,408 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಇದು ಬೆಂಗಳೂರು ಮತ್ತು ಮೈಸೂರು ನಡುವಿನ ಪ್ರಯಾಣದ ಸಮಯವನ್ನು 3.5 ಗಂಟೆಗಳಿಂದ ಸುಮಾರು 1.5 ಗಂಟೆಗಳಿಗೆ ಇಳಿಸಲಿದೆ.












Click it and Unblock the Notifications