Bengaluru-Mysuru Expressway: ವೇಗದ ಮಿತಿ ಮೀರಿ ಚಾಲನೆ, 15 ದಿನದಲ್ಲಿ ಬರೋಬ್ಬರಿ ₹16 ಲಕ್ಷ ದಂಡ ವಸೂಲಿ
ಬೆಂಗಳೂರು, ಜುಲೈ 21: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ವೇಗದ ಮೀತಿಗೆ ಕಡಿವಾಣ ಹಾಕಲು ಹಲವು ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಈ ಸಂಬಂಧ ಹೊಸ ತಂತ್ರಜ್ಞಾನ ಸಹ ಅಳವಡಿಸಿಕೊಳ್ಳಲಾಗಿತ್ತು. ಈ ಮೂಲಕ ಅಪಘಾತಗಳಿಗೆ ಬ್ರೇಕ್ ಹಾಕಲು ಮುಂದಾಗಿರುವ ಪೊಲೀಸರು, ವೇಗದ ನಿಯಮ ಉಲ್ಲಂಘಿಸಿದವರಿಂದ ಭರ್ಜರಿ ದಂಡ ವಸೂಲಿ ಮಾಡಿದ್ದಾರೆ.
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ವೇಗ ಮಿತಿಯನ್ನು 100 kmplh ಗೆ ಇಳಿಸಲಾಗಿದೆ. ಇದು ಸೇರಿ ಕೆಲವು ಸಂಚಾರ ನಿಯಮ ಉಲ್ಲಂಘಿಸಿದ್ದಕ್ಕಾಗಿ ಕೇವಲ 15 ದಿನಗಳಲ್ಲಿ ₹16 ಲಕ್ಷ ರೂಪಾಯಿ ದಂಡ ವಸೂಲಿ ಮಾಡಲಾಗಿದೆ.

ವೇಗದ ಮಿತಿ ಮೀರಿ ವಾಹನ ಚಾಲನೆ, ಲೇನ್ ಡಿಸಿಪ್ಲೀನ್, ಸೀಟ್ ಬೆಲ್ಟ್, ಹೆಲ್ಮೆಟ್‌ಗೆ ಧರಿಸದೇ ಸಂಚಾರ ಹೀಗೆ ನಿಯಮ ಉಲ್ಲಂಘಿಸಿದ್ದಂತೆ 16 ಲಕ್ಷ ರೂಪಾಯಿಗೂ ಹೆಚ್ಚು ದಂಡ ಸಂಗ್ರಹವಾಗಿದೆ. ರಾಮನಗರ ಜಿಲ್ಲಾ ಪೊಲೀಸರು ಈ ದಂಡ ಸಂಗ್ರಹ ಮಾಡಿದ್ದಾರೆ. ಈ ಮೂಲಕ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ಸಂಚಾರ ಮತ್ತಷ್ಟು ದುಬಾರಿ ಅನ್ನಿಸಿಕೊಂಡಿದೆ.
ಅಪಘಾತ ಹೆಚ್ಚಳ ಹಿನ್ನೆಲೆ ವೇಗಕ್ಕೆ ಬ್ರೇಕ್
ಆರು ಲೇನ್ ಇರುವ ಎಕ್ಸ್‌ಪ್ರೆಸ್ ವೇ ನಲ್ಲಿ 100KM ಗೆ ಸ್ಪೀಡ್ ಲಿಮಿಟ್ ಮಾಡಲಾಗಿದೆ. ಕಳೆದ ನಾಲ್ಕೈದು ತಿಂಗಳಿನಲ್ಲಿ ಬರೋಬ್ಬರಿ 20ಕ್ಕೂ ಹೆಚ್ಚು ಜನರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಹೆದ್ದಾರಿ ಉದ್ಘಾಟನೆಗೊಂಡ ಬಳಿಕ ಈ ವರೆಗೆ ಸುಮಾರು 160ಕ್ಕೂ ಅಧಿಕ ಅಪಘಾತಗಳು ಸಂಭವಿಸಿವೆ. 55ಕ್ಕೂ ಅಧಿಕ ಜೀವಗಳು ಬಲಿಯಾಗಿವೆ.

ಈ ಹೆದ್ದಾರಿಯಲ್ಲಿ ರೋಡ್ ಗ್ರಿಪ್ ಜೊತೆಗೆ ಸುರಕ್ಷತೆ ಕಡಿಮೆ ಎಂಬ ಆರೋಪ ಕೇಳಿ ಬಂದಿತ್ತು. ರಸ್ತೆ ಸುರಕ್ಷತಾ ಎಡಿಜಿಪಿ ಅಲೋಕ್ ಕುಮಾರ್ ಪರಿಶೀಲನೆ ನಡೆಸಿ, 55 ಆಕ್ಸಿಡೆಂಟ್ ಝೋನ್ ಗುರುತಿಸಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು. ಬಳಿಕ ವೇಗದ ಮಿತಿ, ಸೀಡ್ ಬ್ರೇಕರ್‌ಗಳನ್ನು ಅಳವಡಿಸಿದ್ದರು.
ಹೆದ್ದಾರಿ ಪ್ರಾಧಿಕಾರದ (NHIA) ಅಧಿಕಾರಿಗಳು ಸಹ ರಸ್ತೆ ಪರಿಶೀಲಿಸಿದ್ದಾರೆ. ನಂತರ ವೇಗದ ಮಿತಿ ಇಳಿಕೆಗೆ ಅವರು ಸಹಮತಿಸಿದರು. ಸ್ಪೀಡ್ ಲಿಮಿಟ್, ಲೇನ್ ಡಿಸಿಪ್ಲೀನ್, ಸೀಟ್ ಬೆಲ್ಟ್, ಹೆಲ್ಮೆಟ್ ಗೆ ಫೈನ್ ಹಾಕಲು ಕಳೆದ 15 ದಿನಗಳಿಂದ ಕಾರ್ಯಾಚರಣೆ ಆರಂಭಿಸಲಾಯಿತು.
ಉಲ್ಲಂಘನೆಯ 2000ಕ್ಕೂ ಅಧಿಕ ಪ್ರಕರಣಗಳು ಬೆಳಕಿಗೆ
ಕಳೆದ ಎರಡೇ ವಾರಗಳಲ್ಲಿ ಸಂಚಾರ ನಿಯಮ ಉಲ್ಲಂಘಿಸಿದ ಒಟ್ಟು 2000ಕ್ಕೂ ಅಧಿಕ ಪ್ರಕರಣಗಳು ಬೆಳಕಿಗೆ ಬಂದಿವೆ. ಇದರಲ್ಲಿ ವೇಗ ಮೀತಿ ಮೀರಿ ಚಾಲನೆ 877 ಪ್ರಕರಣ, ಲೇನ್ ಡಿಸಿಪ್ಲೀನ್ ಇಲ್ಲದ್ದಕ್ಕೆ 580, ಸೀಟ್ ಬೆಲ್ಟ್ ಧರಿಸದೇ ಚಾಲನೆ 189, ಹೆಲ್ಮೆಟ್ ಇಲ್ಲದೇ ಚಾಲನೆ ಸಂಬಂಧ 274 ಪ್ರಕರಣ ದಾಖಲಾಗಿದೆ. ಇದರಿಂದ ಒಟ್ಟು 16 ಲಕ್ಷಕ್ಕೂ ಅಧಿಕ ಹಣ ಸಂಗ್ರವಾಗಿದೆ.
ಇನ್ನು ಈ ಎಕ್ಸ್‌ಪ್ರೆಸ್ ವೇ ನಲ್ಲಿ ಎರಡು ಕಡೆ ಟೋಲ್ ಶುಲ್ಕ ವಸೂಲಿ ಮಾಡಲಾಗುತ್ತಿದೆ. ಜೊತೆಗೆ ನಿಯಮಗಳು ಹೇರಲಾಗಿದೆ. ಇಷ್ಟಿದ್ದರೂ ಈ ಹೆದ್ದಾರಿಗೆ ಸೂಕ್ತ ಮೂಲಭೂತ ಸೌಕರ್ಯವಿಲ್ಲದಾಗಿದೆ. ಪ್ರಯಾಣಿಕರಿಗೆ ಶೌಚಾಲಯದ ವ್ಯವಸ್ಥೆ ಜೊತೆಗೆ ಮೊಬೈಲ್ ಆಂಬುಲೆನ್ಸ್ ವ್ಯವಸ್ಥೆಯೂ ಮಾಡಿಲ್ಲ. ಟೋಲ್ ದರದಲ್ಲಿಯೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಯಾವುದೇ ರಾಜಿ ಆಗಿಲ್ಲ ಈ ಸಂಬಂಧ ಸಾರ್ವಜನಿಕರು ಮತ್ತು ವಾಹನ ಸವಾರರು ಬೇಸರ ವ್ಯಕ್ತಪಡಿಸಿದ್ದಾರೆ.
ಒಂದು ವೇಳೆ ಕಾರು ಇಲ್ಲವೇ ಬೇರೆ ಯಾವುದಾದರೂ ವಾಹನ ಕೆಟ್ಟರೆ ಯಾವುದೇ ಸೌಲಭ್ಯಗಳು ಇಲ್ಲದಾಗಿದೆ. ರಾತ್ರಿ ಸಮಯದಲ್ಲಿ ವಾಹನ ಕೆಟ್ಟರೆ, ನಿದ್ದೆ ಮಂಪರಿನಿಂದ ವಾಹನ ರಸ್ತೆ ಬದಿ ನಿಲ್ಲಿಸಿದರೆ ಸೂಕ್ತ ರಕ್ಷಣೆ ಇಲ್ಲದಾಗಿದೆ ಎಂದು ಸಾರ್ವಜನಿಕ ವಲಯದಲ್ಲಿ ಬೇಸರ ವ್ಯಕ್ತವಾಗಿದೆ.












Click it and Unblock the Notifications