Bengaluru Couple: ಮದುವೆಗೆಂದು ಗೋವಾಗೆ ಯುವತಿ ಕರೆದೊಯ್ದ ಪ್ರೇಮಿ, ಅಲ್ಲಿ ಮಾಡಿದ್ದೇ ಬೇರೆ..!
ಬೆಂಗಳೂರು, ಜೂನ್ 18: ಕರ್ನಾಟಕ ಸೇರಿದಂತೆ ದೇಶದ ಬೇರೆ ಬೇರೆ ಕಡೆಗಳಲ್ಲಿ ದಂಪತಿ ಕಲಹ, ಮದುವೆ ಆಗುವುದಾಗಿ ನಂಬಿಸಿ ಮೋಸ, ಪ್ರೇಮಿಯ ಕೊಲೆ, ಪತಿ ಹತ್ಯೆಗೆ ಸಂಚು ಹೀಗೆ ಸಾಲು ಸಾಲು ಘಟನೆಗಳ ವರದಿಯನ್ನು ಇತ್ತೀಚೆಗೆ ನೋಡಿದ್ದೇವೆ. ಇಂದೋರ್ ದಂಪತಿ ಮೇಘಾಲಯಕ್ಕೆ ಹನಿಮೂನ್‌ಗೆ ಹೋಗಿ, ಪತಿಯನ್ನು ಪತ್ನಿಯೇ ಸಂಚು ರೂಪಿಸಿ ಕೊಂದ ಘಟನೆ ಇನ್ನೂ ಮಾಸಿಲ್ಲ. ಇದರ ಬೆನ್ನಲ್ಲೆ ಪ್ರೇಮಿಯನ್ನು ಮದುವೆ ಆಗಲು ಬೆಂಗಳೂರಿನಿಂದ ಗೋವಾಗೆ ಹೋದ ಯುವತಿ ಹೆಣವಾದ ಪ್ರಕರಣ ಬೆಳಕಿಗೆ ಬಂದಿದೆ. ಹಾಗಾದ್ರೆ ಏನಾಯ್ತು ಆಕೆಗೆ?
ಸೋಮವಾರ ಬೆಳಗ್ಗೆ ದಕ್ಷಿಣ ಗೋವಾದ ಪ್ರತಾಪ್ ನಗರ ಅರಣ್ಯ ಪ್ರದೇಶದಲ್ಲಿ ಯುವತಿಯ ಶವವೊಂದು ಅಲ್ಲಿನ ಪೊಲೀಸರಿಗೆ ಸಿಕ್ಕಿತ್ತು. ಕತ್ತು ಸೀಳಿದ್ದ ಹಿನ್ನೆಲೆಯಲ್ಲಿ ಶವ ಗುರುತೇ ಸಿಗದಂತಾಗಿತ್ತು. ಕೊನೆಗೆ ಪೊಲೀಸರ ತನಿಖೆಯಲ್ಲಿ ಆಕೆ 22 ವರ್ಷದ ರೋಶ್ನಿ ಎಂದು ತಿಳಿಯಿತು. ಈಕೆಯ ಪ್ರೇಮಿ ಬೆಂಗಳೂರು ಮೂಲದ ಸಂಜಯ್ ಕೆವಿನ್ ಎಂಬುದನ್ನು ಖಾಕಿ ಪತ್ತೆ ಮಾಡಿತು.

ಇವರಿಬ್ಬರು ಕಳೆದ ಐದು ವರ್ಷಗಳಿಂದ ಪ್ರೀತಿಸುತ್ತಿದ್ದರು. ಇಬ್ಬರು ಸೇರಿ ವಿವಾಹವಾಗಲು ನಿರ್ಧರಿಸಿ ರಾಜಧಾನಿ ಬೆಂಗಳೂರಿನಿಂದ ಹುಬ್ಬಳ್ಳಿ ಮಾರ್ಗವಾಗಿ ಈ ಪ್ರೇಮಿಗಳು ಗೋವಾಗೆ ತೆರಳಿದ್ದರು. ಮಾರ್ಗ ಮಧ್ಯವೇ ಇವರಿಬ್ಬರ ಮಧ್ಯೆ ಜಗಳ ನಡೆದಿದೆ. ಮಾತಿಗೆ ಮಾತು ಬೆಳೆದಿದೆ. ಈ ಮೊದಲೇ ನಿರ್ಧರಿಸಿಯೇ ಬಂದಿದ್ದ ಮೃತ ಯುವತಿಯ ಪ್ರೇಮಿ ಸಂಜಯ್ ಆಕೆಯನ್ನು ಗೋವಾದ ಅರಣ್ಯ ಪ್ರದೇಶಕ್ಕೆ ಕರೆದೊಯ್ದು ಕತ್ತು ಸೀಳಿ ಕೊಲೆ ಮಾಡಿದ್ದಾನೆ. ಇದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ.
ಹುಬ್ಬಳ್ಳಿಯಲ್ಲಿ ರೋಶ್ನಿ ಪ್ರೇಮಿ ಸಂಜಯ್ ಬಂಧನ
ರೋಶ್ನಿಯನ್ನು ಹತ್ಯೆಗೈದು ಶವವನ್ನು ಅರಣ್ಯ ಪ್ರದೇಶದಲ್ಲಿಯೇ ಬಿಟ್ಟು ಆರೋಪಿ ಸಂಜಯ್ ಕೊಲೆಯಾಗಿದ್ದ. ಶವ ಸಿಕ್ಕ ಜಾಗದಲ್ಲಿ ದೊರೆತ ಸಾಕ್ಷಗಳು, ಪ್ರಯಾಣದ ಟಿಕೆಟ್ ನೋಡಿದ ಪೊಲೀಸರಿಗೆ ಇವರು ಹುಬ್ಬಳ್ಳಿಯಿಂದ ಗೋವಾಗೆ ಬಂದಿರುವುದಾಗಿ ಗೊತ್ತಾಗಿದೆ. ಆ ಜಾಡು ಹಿಡುದ ತನಿಖೆ ಆರಂಭಿಸಿದ್ದಾರೆ. ಆಗ ಯುವತಿ ರೋಶ್ನಿ, ವಿವಾಹವಾಗುವುದಾಗಿ ಗೋವಾಗೆ ಬಂದಿದ್ದಾರೆ ಎಂದು ತಿಳಿದು ಬಸ್ ನಿಲ್ದಾಣ ಸೇರಿದಂತೆ ವಿವಿಧೆಡೆ ಸಿಸಿಟಿವಿಗಳನ್ನು ಪರಿಶೀಲಿಸಿದ್ದಾರೆ. ಸಾಕ್ಷ್ಯಗಳನ್ನು ತಡಕಾಡಿದ್ದಾರೆ.
ಒಂದಷ್ಟು ಸಾಕ್ಷ್ಯಗಳು ಲಭ್ಯವಾಗುತ್ತಿದ್ದಂತೆ ಕಾರ್ಯಪ್ರವೃತ್ತರಾದ ಪೊಲೀಸರು ಗೋವಾ ಪೊಲೀಸರು ಆರೋಪಿ ಸುಳಿವು ಬೆನ್ನಟ್ಟಿದ್ದಾರೆ. ಆರೋಪಿ ಸಂಜಯ್ ಹುಬ್ಬಳ್ಳಿಯಲ್ಲಿರುವುದು ಗೊತ್ತಾಗಿದೆ. ಅಲ್ಲಿಗೇ ಬಂದ ಪೊಲೀಸರು ಸೋಮವಾರವೇ ಆತನನ್ನು ಬಂಧಿಸಿದ್ದಾರೆ. ಈ ವೇಳೆ ಪ್ರಕರಣ ಸಂಪೂರ್ಣವಾಗಿ ಬೆಳಕಿಗೆ ಬಂದಿದೆ. ಶವ ಸಿಕ್ಕು 24ಗಂಟೆಯೊಳಗೆ ಗೋವಾ ಪೊಲೀಸರು ಆರೋಪಿ ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಕ್ಕೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.
ಕಳೆದ ಕೆಲವು ದಿನಗಳಿಂದ ಹೆಣ್ಣುಮಕ್ಕಳಿಂದ ಮೋಸ ಹೋದ ಪತಿ, ಯುವತಿಯಿಂದ ಪ್ರೇಮಿಗೆ ಮೋಸ ಎಂಬ ಸುದ್ದಿಗಳಿಗೆ ಈ ಪ್ರಕರಣ ತದ್ವಿರುದ್ಧವಾಗಿದೆ. ಯುವಕನೇ ತನ್ನ ಪ್ರೀತಿಯನ್ನು ಕೊಲೆ ಮಾಡಿ ಪರಾರಿಯಾದ ದುಷ್ಕೃತ್ಯ ಬಯಲಾಗಿದೆ. ಸದ್ಯ ತನಿಖೆ ಮುಂದುವರಿದಿದೆ.












Click it and Unblock the Notifications