ಬೆಂಗಳೂರು-ಹೈದರಾಬಾದ್ ಹೈ-ಸ್ಪೀಡ್ ರೈಲ್ವೆ ಕಾರಿಡಾರ್: ಬೀದರ್‌ವರೆಗೆ ವಿಸ್ತರಿಸುವಂತೆ ಮಾಜಿ ಪ್ರಧಾನಿ ದೇವೇಗೌಡ ಮನವಿ
Bengaluru-Hyderabad High-Speed Railway Corridor: ಇತ್ತೀಚೆಗಷ್ಟೇ ಕೇಂದ್ರ ಬಜೆಟ್ ಮಂಡನೆಯಾಗಿದ್ದು, ಈ ವೇಳೆ ರಾಷ್ಟ್ರದ ಅಗತ್ಯಗಳಿಗೆ ಮೀರಿ ರೈಲ್ವೆ ವಲಯಕ್ಕೆ ಹೆಚ್ಚು ಅನುದಾನ ಘೋಷಣೆ ಮಾಡಲಾಗಿದೆ. ಅದರಲ್ಲೂ ಬೆಂಗಳೂರು-ಹೈದರಾಬಾದ್ ಮತ್ತು ಬೆಂಗಳೂರು-ಚೆನ್ನೈ ಸೇರಿದಂತೆ 7 ಹೈಸ್ಪೀಡ್ ರೈಲು ಕಾರಿಡಾರ್ ಘೋಷಿಸಲಾಗಿದ್ದು, ಈ ಯೋಜನೆಯನ್ನು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಸಹ ಅಭಿನಂದಿದ್ದಾರೆ. ಜೊತೆಗೆ ಇದನ್ನು ಬೀದರ್‌ವರೆಗೆ ವಿಸ್ತರಣೆ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ.
ಈ ಯೋಜನೆಗಳನ್ನು ನೀಡಿರುವ ಬಗ್ಗೆ ಮಾಜಿ ಪ್ರಧಾನಿಗಳಾದ ಹೆಚ್.ಡಿ. ದೇವೇಗೌಡರು ಕೇಂದ್ರದ ರೈಲ್ವೆ ಸಚಿವ ಅಶ್ವಿನಿ ವೈಷ್ಣವ ಅವರನ್ನು ಅಭಿನಂದಿಸಿದ್ದಾರೆ. ಈ ಬಗ್ಗೆ ರೈಲ್ವೆ ಸಚಿವರಿಗೆ ಪತ್ರ ಬರೆದಿರುವ ಅವರು, 2026ರ ಬಜೆಟ್‌ನಲ್ಲಿ ಸುಸ್ಥಿರ ಸಾರಿಗೆ ಮತ್ತು ಆರ್ಥಿಕ ಬೆಳವಣಿಗೆಗಾಗಿ ಬೆಳವಣಿಗೆಯ ಕನೆಕ್ಟರ್‌ಗಳಾಗಿ ಸುಮಾರು 4,000 ಕಿಲೋ ಮೀಟರ್ ಉದ್ದದ ಏಳು ಹೊಸ ಹೈ-ಸ್ಪೀಡ್ ರೈಲು ಕಾರಿಡಾರ್‌ಗಳನ್ನು ಘೋಷಿಸಿದ್ದಕ್ಕಾಗಿ ಅಭಿನಂದನೆ ಸಲ್ಲಿಸಿದ್ದಾರೆ.

ದೇವೇಗೌಡರು ಹೇಳಿದ್ದೇನು?: ಈ ಪೈಕಿ ಚೆನ್ನೈ-ಬೆಂಗಳೂರು-ಹೈದರಾಬಾದ್ (ಹೈದರಾಬಾದ್-ಚೆನ್ನೈ ಮತ್ತು ಚೆನ್ನೈ-ಬೆಂಗಳೂರು ವಿಭಾಗಗಳೊಂದಿಗೆ) ದಕ್ಷಿಣ ಭಾಗದಲ್ಲಿ ಹೈ-ಸ್ಪೀಡ್ ತ್ರಿಕೋನವನ್ನು ಸೃಷ್ಟಿಸಲಾಗುತ್ತಿದೆ. ಇದು ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು ಮತ್ತು ಕರ್ನಾಟಕದ ಜನರ ಆಕಾಂಕ್ಷೆಗಳು ಮತ್ತು ಅವರ ಚಲನಶೀಲತೆಯ ಅಗತ್ಯಗಳನ್ನು ನೇರವಾಗಿ ಪೂರೈಸುತ್ತದೆ ಮತ್ತು ಕೇರಳ ಮತ್ತು ಪುದುಚೇರಿಗೆ ಪ್ರಯೋಜನವನ್ನು ನೀಡುತ್ತದೆ ಎಂದು ಮಾಜಿ ಪ್ರಧಾನಿಗಳು ಹೇಳಿದ್ದಾರೆ.
ಮುಂಬೈ-ಪುಣೆ, ಪುಣೆ-ಹೈದರಾಬಾದ್, ದೆಹಲಿ-ವಾರಣಾಸಿ ಮತ್ತು ವಾರಣಾಸಿ-ಸಿಲಿಗುರಿಯಂತಹ ಇತರ ಕಾರಿಡಾರ್‌ಗಳು ದೇಶಾದ್ಯಂತದ ಪ್ರಮುಖ ನಗರ, ಕೈಗಾರಿಕಾ ಮತ್ತು ಆಧ್ಯಾತ್ಮಿಕ ಕೇಂದ್ರಗಳನ್ನು ಸಂಪರ್ಕಿಸುತ್ತವೆ. ಪ್ರಯಾಣದ ಸಮಯವನ್ನು ಕಡಿಮೆ ಮಾಡುತ್ತದೆ ಮತ್ತು 16 ಲಕ್ಷ ಕೋಟಿ ರೂಪಾಯಿ ಹೂಡಿಕೆಗಳನ್ನು ಆಕರ್ಷಿಸುತ್ತವೆ. ಈ ದೂರದೃಷ್ಟಿಯ ಉಪಕ್ರಮವು ವಿಕಸಿತ ಭಾರತ 2047ರ ಉದಾತ್ತ ಕನಸಿನೊಂದಿಗೆ ಸರಾಗವಾಗಿ ಹೊಂದಿಕೆಯಾಗುತ್ತದೆ. ಜಾಗತಿಕ ದರ್ಜೆಯ ಮೂಲಸೌಕರ್ಯದಿಂದ ನಡೆಸಲ್ಪಡುವ ಅಭಿವೃದ್ಧಿ ಹೊಂದಿದ, ಆಧುನಿಕ ಆರ್ಥಿಕತೆಯತ್ತ ನಮ್ಮ ರಾಷ್ಟ್ರದ ಪ್ರಯಾಣವನ್ನು ವೇಗಗೊಳಿಸುತ್ತದೆ ಎಂದು ಅವರು ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಬೀದರ್‌ವರೆಗೆ ವಿಸ್ತರಿಸುವಂತೆ ಮನವಿ: ಬೆಂಗಳೂರು-ಹೈದರಾಬಾದ್ ಹೈ-ಸ್ಪೀಡ್ ರೈಲ್ವೆ ಕಾರಿಡಾರ್ ಅನ್ನು ಬೀದರ್‌ವರೆಗೆ ವಿಸ್ತರಿಸಬೇಕು. ಇದು ಉತ್ತರ ಕರ್ನಾಟಕ ಮತ್ತು ತೆಲಂಗಾಣ ಪ್ರದೇಶಗಳಿಗೆ ಹೆಚ್ಚು ಅನುಕೂಲ ಆಗುತ್ತದೆ. ಬೀದರ್ ಭಾಗದ ಅಗತ್ಯಗಳಿಗೆ ಅನುಕೂಲ ಆಗುತ್ತದೆ ಎಂದು ತಿಳಿಸಿದ್ದಾರೆ.
ಅಪಾರ ಪ್ರಯೋಜನಕಾರಿಯಾಗಲಿದೆ: ಕರ್ನಾಟಕ ರಾಜ್ಯದೊಳಗೆ ಸುಧಾರಿತ ಆಂತರಿಕ ಸಂಪರ್ಕದ ಅಗತ್ಯವಾಗಿದೆ. ಬೆಂಗಳೂರು ಮತ್ತು ಬೆಳಗಾವಿ ನಡುವಿನ ಅಂತರವು ಸುಮಾರು 600 ಕಿಲೋ ಮೀಟರ್ ಮತ್ತು ಪ್ರಸ್ತುತ ಪ್ರಯಾಣದ ಸಮಯ - ಸಾಮಾನ್ಯವಾಗಿ ರಸ್ತೆ ಅಥವಾ ರೈಲು ಮೂಲಕ 8-10 ಗಂಟೆಗಳು ಆಗುತ್ತದೆ. ಈ ದೀರ್ಘ ಪ್ರಯಾಣವು ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕ ಪ್ರದೇಶಗಳಿಗೆ ಪ್ರಗತಿಗೆ ತೀವ್ರವಾಗಿ ಅಡ್ಡಿಯಾಗುತ್ತದೆ. ಬೆಂಗಳೂರು - ಬೆಳಗಾವಿ - ಪುಣೆ - ಮುಂಬೈ ಅನ್ನು ಸಂಪರ್ಕಿಸುವ ವೇಗದ ಹೈ-ಸ್ಪೀಡ್ ರೈಲು ಕಾರಿಡಾರ್ ಅಪಾರ ಪ್ರಯೋಜನಕಾರಿ ಆಗಲಿದೆ ಎಂದು ಅವರು ಹೇಳಿದ್ದಾರೆ.
ಒಟ್ಟಿನಲ್ಲಿ ಹೇಳುವುದಾದರೆ, ಕರ್ನಾಟಕ ಮತ್ತು ತೆಲಂಗಾಣ ರಾಜ್ಯಗಳನ್ನು ಸಂಪರ್ಕಿಸುವ ಬೆಂಗಳೂರು-ಹೈದರಾಬಾದ್ ಹೈ-ಸ್ಪೀಡ್ ರೈಲ್ವೇ ಕಾರಿಡಾರ್ ಯೋಜನೆಯಿಂದ ಸಾರಿಗೆ ಕ್ಷೇತ್ರದಲ್ಲಿ ದೊಡ್ಡ ಮಟ್ಟದ ಅಭಿವೃದ್ಧಿ ಕ್ರಾಂತಿ ಆಗಲಿದೆ. ಈ ಹೊಸ ರೈಲ್ವೇ ಮಾರ್ಗವು ಪ್ರಯಾಣಿಕರಿಗೆ ಕಡಿಮೆ ಸಮಯದಲ್ಲಿ ಸುರಕ್ಷಿತ ಪ್ರಯಾಣವನ್ನು ಒದಗಿಸುವುದು ಉದ್ದೇಶವಾಗಿದೆ. ಯೋಜನೆಯಡಿ ರೈಲುಗಳು ಗರಿಷ್ಠ ವೇಗದಲ್ಲಿ ಓಡಲಿದ್ದು, ಇದರಿಂದ ಪ್ರಯಾಣ ಸಮಯ ಗಮನಾರ್ಹವಾಗಿ ಇಳಿಕೆಯಾಗಲಿದೆ.












Click it and Unblock the Notifications