Superfast train: 'ಹುಬ್ಬಳ್ಳಿ-ಬೆಂಗಳೂರು' ಸೂಪರ್ ಫಾಸ್ಟ್ ರೈಲು ಪುನಾರಂಭಕ್ಕೆ ಆಗ್ರಹ
ಹುಬ್ಬಳ್ಳಿ, ನವೆಂಬರ್ 23: ಸಾವಿರಾರು ಪ್ರಯಾಣಿಕರಿಗೆ ಅನುಕೂಲವಾಗಿದ್ದ ಹುಬ್ಬಳ್ಳಿ-ಬೆಂಗಳೂರು ಸೂಪರ್ ಫಾಸ್ಟ್ ರೈಲು ಸಂಚಾರ ರದ್ದು ಮಾಡಿದ್ದಕ್ಕೆ ಸಾರ್ವಜನಿಕರ ವಲಯದಲ್ಲಿ ತೀವ್ರ ಖಂಡನೆ ವ್ಯಕ್ತವಾಗಿದೆ. ಈ ಸೂಪರ್ ಪಾಸ್ಟ್ ರೈಲಿಗೆ ಮರುಚಾಲನೆ ನೀಡುವಂತೆ ರೈಲ್ವೆ ಅಧಿಕಾರಿಗಳನ್ನು ಆಗ್ರಹಿಸಲಾಗಿದೆ.
ಹೌದು, ಉತ್ತರ ಕರ್ನಾಟಕ ಮಂದಿಯ ಅಚ್ಚು ಮೆಚ್ಚಿನ ರೈಲಾದ ಹುಬ್ಬಳ್ಳಿ-ಬೆಂಗಳೂರು ಸೂಪರ್ ಫಾಸ್ಟ್ ರೈಲು ಈ ಭಾಗಕ್ಕೆ ಬರಲು ಮತ್ತು ಭಾಗದಿಂದ ಹೊರಡು ಸಾಕಷ್ಟು ಅನುಕೂಲವಾಗಿತ್ತು. ಈ ವೇಗದ ರೈಲಿಗೆ ರೈಲ್ವೆ ಇಲಾಖೆ ಬ್ರೇಕ್ ಹಾಕಿದೆ. ಇದೀಗ ಪುನಃ ಸೂಪರ್ ಫಾಸ್ಟ್ ರೈಲು ಆರಂಭಿಸುವಂತೆ ಹುಬ್ಬಳ್ಳಿ-ಧಾರವಾಡ ಪಾಲಿಕೆ ವಿರೋಧ ಪಕ್ಷದ ನಾಯಕಿ ರೈಲ್ವೆ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

ಬೆಂಗಳೂರು-ಹುಬ್ಬಳಿ ಸೂಪರ್ ಫಾಸ್ಟ್ ರೈಲು ಉತ್ತರ ಕರ್ನಾಟಕ ಮಂದಿಗೆ ಅತೀ ವೇಗದ ರೈಲಾಗಿತ್ತು. ಈ 07340/07339 ಸಂಖ್ಯೆಯ ರೈಲು ಇನ್ನು ಮುಂದೆ ಪ್ರಯಾಣಿಕರಿಗೆ ಅಲಭ್ಯ ಎಂದು ರೈಲು ಸಂಚಾರವನ್ನು ರದ್ದು ಮಾಡಿ ಎಸ್.ಡಬ್ಲೂ.ಆರ್ ಆದೇಶ ಹೊರಡಿಸಿದೆ.
ಮಾರ್ಚ್‌ನಲ್ಲಿ ಆರಂಭವಾದ ರೈಲು
ಪ್ರಯಾಣಿಕರ ಬೇಡಿಕೆ ಮೇರೆಗೆ ಈ ವರ್ಷದ ಮಾರ್ಚ್ ನಿಂದ ಹುಬ್ಬಳ್ಳಿ-ಬೆಂಗಳೂರು, ಬೆಂಗಳೂರು- ಹುಬ್ಬಳ್ಳಿ ಮಾರ್ಗವಾಗಿ ಸುಪರ್ ಫಾಸ್ಟ್ ರೈಲು ಸಂಚಾರವನ್ನು ಆರಂಭಿಸಲಾಗಿತ್ತು. ಅದರಂತೆ ಮಧ್ಯ ರಾತ್ರಿ 11.55 ಬಿಟ್ಟು ಮರು ದಿನ ಬೆಳಗ್ಗೆ 7.30 ಕ್ಕೆ ಹುಬ್ಬಳ್ಳಿ ತಲುಪುತಿತ್ತು.
ರಾಜಧಾನಿಯಲ್ಲಿ ಕೆಲಸ ಮುಗಿಸಿ ಜನ ಬೆಳಗ್ಗೆ ಬೇಗ ಹುಬ್ಬಳ್ಳಿಗೆ ಬಂದು ಸೇರಲು ಈ ಟ್ರೈನ್ ಬಹಳಷ್ಟು ಸಹಾಯವಾಗಿತ್ತು. ಆದರೆ ಪ್ರಯಾಣಿಕರ ಕೊರತೆ ನೆಪಯೊಡ್ಡಿ ನೈರುತ್ಯ ರೈಲ್ವೆ ವಿಭಾಗ ಈಗ ಈ ರೈಲು ಸಂಚಾರ ಸೇವೆಯನ್ನು ರದ್ದು ಮಾಡಿದೆ. ಇದಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.

ಶೀಘ್ರವೇ ಆರಂಭಿಸುವಂತೆ ಸುವರ್ಣ ಕಲ್ಲಕುಂಟಲಾ ಆಗ್ರಹ
ರೈಲು ಚಾಲನೆ ನೀಡಬೇಕು ಎಂದು ಒತ್ತಾಯಿಸಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕಿ ಸುವರ್ಣ ಕಲ್ಲಕುಂಟಲಾ ನೇತೃತ್ವದ ನಿಯೋಗ ಶ್ರೀ ಸಿದ್ದಾರೂಢ ರೈಲ್ವೆ ನಿಲ್ದಾಣದ ಪ್ರಧಾನ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದೆ. ಸದ್ಯ ರೈಲ್ವೆ ಅಧಿಕಾರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ತಿಳಿದು ಬಂದಿದೆ.
ವಿರೋಧ ಪಕ್ಷದ ನಾಯಕಿ ಸುವರ್ಣ ಕಲ್ಲಕುಂಟಲಾ ಮನವಿ ಪತ್ರದಲ್ಲಿ, ಸಂಚಾರ ರದ್ದು ಮಾಡಿರುವ ಕೂಡಲೇ ರೈಲು ಮರು ಓಡಾಟಕ್ಕೆ ಅವಕಾಶ ನೀಡಬೇಕು ಎಂದು ಒತ್ತಾಯಿಸಲಾಗಿದೆ. ಪ್ರಯಾಣಿಕರ ನಿರಾಸಕ್ತಿ ಕಾರಣ ನೀಡಿ ಸಂಚಾರ ರದ್ದು ಮಾಡಿದ್ದು ಸತ್ಯಕ್ಕೆ ದೂರವಾದದ್ದು, ರೈಲು ಪ್ರಯಾಣಿಕರು ವೆಟಿಂಗ್ ಲಿಸ್ಟ್ ನಲ್ಲಿ ಪ್ರಯಾಣ ಉಳಿಯುತ್ತಿದ್ದರು. ಯಾವಾಗಲೂ ಈ ರೈಲಿಗೆ ಪ್ರಯಾಣಿಕರ ಕೊರತೆಯಾಗಿಲ್ಲ. ಸಮಂಜಸವಲ್ಲದ ಕಾರಣ ನೀಡಿ ರದ್ದು ಮಾಡಿದ ಆದೇಶ ಹಿಂದಕ್ಕೆ ಪಡೆಯಬೇಕು. ರದ್ದಾದ ರೈಲು ಎಂದಿನಂತೆ ಓಡಾಟ ಆರಂಭಿಸಬೇಕು ಎಂದು ಒತ್ತಾಯಿಸಿದರು.












Click it and Unblock the Notifications