ಕೋಟಿ ಕಂಠ ಗಾಯನ: ಅಮೃತ ಗಳಿಗೆಗೆ ನಾಡು ಸಾಕ್ಷಿ, ಹೊಸ ಸಂಕಲ್ಪಕ್ಕೆ ಸ್ಪೂರ್ತಿ: ಸಿಎಂ ಬೊಮ್ಮಾಯಿ ಬಣ್ಣನೆ
ಬೆಂಗಳೂರು, ಅಕ್ಟೋಬರ್, 28: ಕನ್ನಡ ರಾಜ್ಯೋತ್ಸವ ಅಂಗವಾಗಿ ಇದೇ ಮೊದಲ ಬಾರಿಗೆ 50 ಸಾವಿರಕ್ಕೂ ಹೆಚ್ಚು ಮಂದಿ ಏಕಕಾಲಕ್ಕೆ ಆಯ್ದ 6 ಕನ್ನಡ ಹಾಡುಗಳನ್ನು ಹಾಡುವ ಮೂಲಕ ಇತಿಹಾಸ ಸೃಷ್ಟಿಸಿದರು. ಬೆಂಗಳೂರು ಮಾತ್ರವಲ್ಲದೇ ರಾಜ್ಯದ ವಿವಿಧೆಡೆಯಿಂದ ಲಕ್ಷಾಂತರ ಕನ್ನಡಿಗರು ಈ ನನ್ನ ನಾಡು- ನನ್ನ ಹಾಡು 'ಕೋಟಿ ಕಂಠ ಗಾಯನ' ಅವಿಸ್ಮರಣೀಯ ಘಳಿಗೆಗೆ ಸಾಕ್ಷಿಯಾದರು.
ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ 67ನೇ ಕನ್ನಡ ರಾಜ್ಯೋತ್ಸವ ಅಂಗವಾಗಿ ಬೆಳಗ್ಗೆ 11ಕ್ಕೆ ಹಮ್ಮಿಕೊಂಡಿದ್ದ 'ಕೋಟಿ ಕಂಠ ಗಾಯನ' ಅದ್ಧೂರಿ ಸಮಾರಂಭಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚಾಲನೆ ನೀಡಿದರು.
ನಾಡಗೀತೆಯೊಂದಿಗೆ ಆರಂಭವಾದ ಸಮಾರಂಭದಲ್ಲಿ ನೆರೆದಿದ್ದ ಸಚಿವರು, ಸಂಸದರು, ಬಿಜೆಪಿ ನಾಯಕರು, ಇಲಾಖೆ ಅಧಿಕಾರಿಗಳು, ನಾಗರಿಕರು, ಸಾಹಿತಿಗಳು, ಗಾಯಕರು ಹಾಗೂ ವಿದ್ಯಾರ್ಥಿ ಸಮೂಹ ಸೇರಿ ಸುಮಾರು 50ಸಾವಿರಕ್ಕೂ ಅಧಿಕ ಮಂದಿ ಆಯ್ದ 6ಕನ್ನಡ ಗೀತೆಗಳನ್ನು ಏಕಕಾಲಕ್ಕೆ ಹಾಡಿದರು. ಈ ಮೂಲಕ ಕನ್ನಡ ನಾಡು-ನುಡಿಗೆ ಕಂಪನ್ನು ರಾಜ್ಯೋತ್ಸವಕ್ಕೂ ಮೂರು ದಿನ ಮೊದಲೇ ಪಸರಿಸಿದರು.

ಏಕಕಾಲಕ್ಕೆ ಮೊಳಗಿದ 6 ಕನ್ನಡದ ಹಾಡು
'ಕೋಟಿ ಕಂಠ ಗಾಯನ' ದಲ್ಲಿ ಮೊದಲು ನಾಡಗೀತೆಯಾದ 'ಜಯ ಭಾರತ ಜನನೀಯ ತನುಜಾತೆ', ನಂತರ ಕ್ರಮವಾಗಿ 'ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು', 'ಬಾರಿಸು ಕನ್ನಡ ಡಿಂಡಿಮವ', 'ಹೆಚ್ಚೇವು ಕನ್ನಡದ ದೀಪ', 'ವಿಶ್ವವಿನೂತನ ವಿದ್ಯಾಚೇತನ' ಹಾಗೂ 'ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು' ಎಂಬ ಒಟ್ಟು ಆರು ಕನ್ನಡದ ಗೀತೆಗಳು ಸಾವಿರಾರು ಕನ್ನಡದ ಕಂಠಗಳಿಂದ ಏಕಕಾಲಕ್ಕೆ ಮೊಳಗಿದವು. ಇಡೀ ಕ್ರೀಡಾಂಗಣವೇ ಕನ್ನಡಮಯವಾಗಿತ್ತು. ಎಲ್ಲೆಲ್ಲಿಯೂ ಕನ್ನಡದ ಭಾವುಟಗಳು ರಾರಾಜಿಸುತ್ತಿದ್ದವು.

'ಅಮೃತ ಘಳಿಗೆ'ಗೆ ಸಾಕ್ಷಿಯಾದ ಕನ್ನಡ ನಾಡು: ಸಿಎಂ ಬಣ್ಣನೆ
ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಕನ್ನಡ ರಾಜ್ಯೋತ್ಸವ ಪ್ರಯುಕ್ತ ಕಲಾವಿದರು, ಯುವ ಸಮೂಹ, ರೈತರು, ಕಾರ್ಮಿಕರು ಸೇರಿದಂತೆ ಎಲ್ಲ ವಲಯದ ಶ್ರಮಿಕರು, ನಾಯಕರು ಏಕಕಾಲಕ್ಕೆ ಆರು ಹಾಡುಗಳನ್ನು ಹಾಡುವ ಮೂಲಕ ನಾವೆಲ್ಲರು ಒಂದು ಎಂದು ತೋರಿಸಿದ್ದಾರೆ ಎಂದು ಅವರು ಸಂತಸ ವ್ಯಕ್ತಪಡಿಸಿದರು.
ಕನ್ನಡಕ್ಕಾಗಿ ಎಲ್ಲ ಮನಸುಗಳು ಒಂದಾಗಿ ಇಲ್ಲಿರುವ ಸೇರುವ ಮೂಲಕ ನಾವು 'ಅಮೃತ ಘಳಿಗೆ'ಗೆ ಸಾಕ್ಷಿಯಾಗಿದ್ದೇವೆ. ಒಂದು ಕೋಟಿಗೂ ಹೆಚ್ಚು ಮಂದಿ ಕವಿ, ಸಾಹಿತಿಗಳು ಇನ್ನಿತರ ಖ್ಯಾತನಾಮರು ಬರೆದ ಕನ್ನಡ ನಾಡು-ನುಡಿ ಸೊಗಡಿನ ಆರು ಹಾಡುಗಳನ್ನು ಏಕಕಲಾಕ್ಕೆ ಹಾಡಲಾಗಿದೆ. ಈ ಮೂಲಕ ಜಾಗತಿಕವಾಗಿ ದಾಖಲೆ ಬರೆಯಲಾಗಿದೆ. 'ಕೋಟಿ ಕಂಠ ಗಾಯನ' ಸಮಾರಂಭದಲ್ಲಿ ಲಕ್ಷಾಂತರ ಕನ್ನಡಿಗರ ಮನಸುಗಳು, ಭಾವನೆಗಳು, ಶಕ್ತಿಗಳು ಒಂದಾಗಿವೆ. Y

ಹೊಸ ಸಂಕಲ್ಪಕ್ಕೆ 'ಕೋಟಿ ಕಂಠ ಗಾಯನ' ಪ್ರೇರಣೆ
ಹಳ್ಳಿಗಳಲ್ಲಿ, ಶಾಲೆಗಳಲ್ಲಿ, ಕಚೇರಿಗಳು ಸೇರಿದಂತೆ ನಾಡಿನಾದ್ಯಂತ ಎಲ್ಲೆಡೆ ಸಹಸ್ರಾರು ಕಂಠಗಳಿಂದ ಕನ್ನಡ ಹಾಡು ಡಿಂಡಿಮಿಸಿದೆ. ಕನ್ನಡಕ್ಕಾಗಿ ನಾವೆಲ್ಲ ಒಂದಾಗಿದ್ದು, ಈ ಮೂಲಕ ಕರ್ನಾಟಕದ ಭವಿಷ್ಯದ ಒಳಿಗೆ ಸಂಕಲ್ಪ ಮಾಡಲು ಪ್ರೇರಣೆ ನೀಡಿದೆ. ಈ ನಿಟ್ಟಿನಲ್ಲಿ ನಮ್ಮ ಭಾಷೆಯನ್ನು ಉತ್ತುಂಗಕ್ಕೆ ಏರಿಸಲು, ನವ ಕರ್ನಾಟಕ ನಿರ್ಮಾಣ ಮಾಡಲಾಗುವುದು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಶ್ರಮ ಸಾರ್ಥಕವಾಗಿದೆ ಎಂದು ಬೊಮ್ಮಾಯಿ ಅವರು ಭಾವನಾತ್ಮಕವಾಗಿ ಬಣ್ಣಿಸಿದರು.

ರತ್ನಗೆ 'ಕರ್ನಾಟಕ ರತ್ನ' ಪ್ರದಾನ: ಸಿಎಂ
ಕನ್ನಡದ ಅಚ್ಚು ಮೆಚ್ಚಿನ ನಟ ದಿ.ಡಾ.ಪುನೀತ್ ರಾಜಕುಮಾರ್ ಅವರ ಸಾಧನೆ ಗಮನಿಸಿ, ಜನಮಾನಸದಲ್ಲಿ ಅವರಿಗೆ ಇರುವ ಸ್ಥಾನಮಾನ ಗಮನಿಸಿ ಅವರಿಗೆ ಸರ್ಕಾರದಿಂದ 'ಕರ್ನಾಟಕ ರತ್ನ' ಪ್ರಶಸ್ತಿ ನೀಡಲಾಗುತ್ತಿದೆ. ಅತ್ಯಂತ ಸಣ್ಣ ವಯಸ್ಸಿನಲ್ಲಿ ಅತ್ಯಂತ ದೊಡ್ಡ ಪ್ರಶಸ್ತಿಯು ಅಪ್ಪು ಅವರಿಗೆ ನೀಡಲಾಗುತ್ತಿದೆ. ಪುನೀತ್ ರಾಜಕುಮಾರ್ ಅವರು ಒಂದು ಕನ್ನಡದ ರತ್ನ ಹೀಗಾಗಿ ಅವರಿಗೆ ನವೆಂಬರ್ 1ರಂದು 'ಕರ್ನಾಟಕ ರತ್ನ' ಪ್ರದಾನ ಮಾಡಲಾಗುವುದು. ವಿಧಾನಸೌಧದ ಮುಂದೆ ನಡೆಯಲಿರುವ ಕಾರ್ಯಕ್ರಮಕ್ಕೆ ಡಾ.ರಾಜ್ ಕುಟುಂಬಸ್ಥರು ಆಗಮಿಸಲಿದ್ದಾರೆ ಎಂದರು.

'ಗಂಧದಗುಡಿ' ನೋಡಿ, ಅರಣ್ಯ ಸಂಪತ್ತು ಉಳಿಸಿ; ಸಿಎಂ ಕರೆ
ಡಾ. ಪುನೀತ್ ರಾಜ್ ಕುಮಾರ್ ಅವರ 'ಗಂಧದಗುಡಿ' ಒಂದು ಅದ್ಭುತ ಚಿತ್ರ. ಕಾಡು-ನಾಡು, ಅರಣ್ಯ ಸಂಪತ್ತು, ನಿಸರ್ಗ ಉಳಿಸುವ ಚಿತ್ರ. ಅಪ್ಪು ಅವರ ಮನೋಜ್ಞ ಅಭಿನಯ ಅದರಲ್ಲಿದೆ. ನಾಡಿನ ಮನೆ ಮಂದಿ ಎಲ್ಲರೂ ಚಿತ್ರ ನೋಡಬೇಕು. ಅರಣ್ಯ ಸಂಪತ್ತನ್ನು ಉಳಿಸಬೇಕು ಎಂದು ಅವರು ಮನವಿ ಮಾಡಿದರು.
ಕೇವಲ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಮಾತ್ರವಲ್ಲದೇ ನಗರದ ಬಿಬಿಎಂಪಿ ಕೇಂದ್ರ ಕಚೇರಿ ಆವರಣ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC)ದ ವಿವಿಧ ಘಟಕಗಳಲ್ಲಿ ಸಿಬ್ಬಂದಿ ಹಾಗೂ ಎಲ್ಲ ಸರ್ಕಾರಿ ಕಚೇರಿಗಳು, ಶಾಲಾ ಕಾಲೇಜುಗಳಲ್ಲಿ, ಸಂಘ-ಸಂಸ್ಥೆಗಳಲ್ಲಿ, ಹಳ್ಳಿ-ಪಟ್ಟಣಗಳು ಸೇರಿದಂತೆ ನಾಡಿನಾದ್ಯಂತ ಲಕ್ಷಾಂತರ ಮಂದಿ ತಾವಿದ್ದ ಸ್ಥಳದಿಂದಲೇ ಕನ್ನಡದ ಆರು ಹಾಡು ಹಾಡಿ 'ಕೋಟಿ ಕಂಠ ಗಾಯನ' ಸಮಾರಂಭಕ್ಕೆ ಕೈ ಜೋಡಿಸಿದರು.
ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ ಮತ್ತು ಡಿ.ವಿ. ಸದಾನಂದಗೌಡ, ಸಚಿವರಾದ ಆರ್. ಅಶೋಕ, ವಿ. ಸುನಿಲ್ ಕುಮಾರ್, ಸಂಸದರಾದ ಪಿ.ಸಿ. ಮೋಹನ್, ತೇಜಸ್ವಿ ಸೂರ್ಯ, ರಾಜ್ಯಸಭಾ ಸದಸ್ಯ ಜಗ್ಗೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಗಳು, ಅನೇಕ ಕಲಾವಿದರು, ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.












Click it and Unblock the Notifications