HMPV Virus: ಕರ್ನಾಟಕಕ್ಕೂ ಕಾಲಿಟ್ಟ HMPV ವೈರಸ್: ಬೆಂಗಳೂರಿನಲ್ಲಿ 8 ತಿಂಗಳ ಮಗುವಿನಲ್ಲಿ 'HMPV' ಸೋಂಕು ದೃಢ
ಬೆಂಗಳೂರು, ಜನವರಿ 06: ಚೀನಾದಲ್ಲಿ ಅಟ್ಟಹಾಸ ಮೆರೆಯುತ್ತಿರುವ HMPV ವೈರಸ್ ಇದೀಗ ಭಾರತಕ್ಕೂ ಕಾಲಿಟ್ಟಿದೆ. ಕರ್ನಾಟಕದಲ್ಲಿ ಮೊದಲ ಕೇಸ್ ಪತ್ತೆಯಾಗಿದ್ದು, ಕೊರೋನಾ ವೈರಸ್ ಗಿಂತಲೂ ವಿಭಿನ್ನವಾಗಿರುವ HMPV ವೈರಸ್ ಬೆಂಗಳೂರಿನಲ್ಲಿ 8 ತಿಂಗಳ ಮಗುವಿನಲ್ಲಿ ಈ ವೈರಸ್ ಪತ್ತೆಯಾಗಿದೆ ಎಂದು ವರದಿಯಾಗಿದೆ.
ಹೌದು, ಬೆಂಗಳೂರಿನ 8 ತಿಂಗಳ ಮಗುವಿಗೆ HMPV ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದೆ. ಆದರೆ, ಆರೋಗ್ಯ ಇಲಾಖೆ ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದು ಹೇಳಿದೆ. ಈ ವೈರಸ್ ಭಾರತದಲ್ಲಿ ಸಾಮಾನ್ಯವಾಗಿದ್ದು, ಚೀನಾದಲ್ಲಿ ಪತ್ತೆಯಾಗಿರುವ ಮ್ಯುಟೇಟೆಡ್ ವೈರಸ್‌ನೊಂದಿಗೆ ಇದಕ್ಕೆ ಸಂಬಂಧ ಇದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಬೆಂಗಳೂರಿನಲ್ಲಿ 8 ತಿಂಗಳ ಮಗುವಿನಲ್ಲಿ ಎಚ್ಎಂಪಿವಿ ವೈರಸ್ ದೃಢಪಟ್ಟಿದೆ. ಮಗುವಿಗೆ ಜ್ವರ ಬಂದ ಕಾರಣ ನಗರದ ಖಾಸಗಿ ಆಸ್ಪತ್ರೆಯಲ್ಲಿ ಅಡ್ಮಿಟ್ ಮಾಡಲಾಗಿತ್ತು. ರಕ್ತ ಪರೀಕ್ಷೆ ಮಾಡಿಸಿದಾಗ HMPV ವೈರಸ್ ಇರುವುದು ಪತ್ತೆಯಾಗಿದೆ. ಆದರೆ, ಈ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ ಎಂದು ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಹರ್ಷಗುಪ್ತ ಅವರು ಮಾಹಿತಿ ನೀಡಿದ್ದಾರೆ.
ಎಚ್ಎಂಪಿವಿ ವೈರಸ್ ಭಾರತದಲ್ಲೂ ಇದೆ. ಆದರೆ, ಅದು ಮ್ಯೂಟೆಷನ್ ಆಗಿದೆಯಾ ಎಂಬ ಬಗ್ಗೆ ಇನ್ನೂ ಸ್ಪಷ್ಟನೆ ಇಲ್ಲ. ನಮಗೆ ಚೀನಾದಲ್ಲಿ ಮ್ಯುಟೇಟ್ ಆಗಿರುವ ವೈರಸ್ ಹೇಗಿದೆ ಎಂದು ತಿಳಿದಿಲ್ಲ. ಹೀಗಾಗಿ ಇಲ್ಲಿ ಪತ್ತೆಯಾಗಿರುವುದು ಸಾಮಾನ್ಯ HMPV ವೈರಸ್ಸೇ ಅಥವಾ ಚೀನಾದ ತಳಿಯಾ ಎಂಬ ಗೊಂದಲ ಇದೆ. ಭಾರತದಲ್ಲೂ ಸಾಮಾನ್ಯ HMPV ವೈರಸ್ ಶೇ 0.78 ರಷ್ಟು ಕಾಣಿಸುತ್ತದೆ ಎಂದು ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಹರ್ಷಗುಪ್ತ ಅವರು ತಿಳಿಸಿದ್ದಾರೆ.
ಇನ್ನೂ ಬೆಂಗಳೂರಿನಲ್ಲಿ 8 ತಿಂಗಳ ಮಗುವಿನಲ್ಲಿ ಕಾಣಿಸಿಕೊಂಡಿರುವ ಸೋಂಕು ಪತ್ತೆಯಾಗಿರುವ ಮಗುವಿಗೆ ಮತ್ತು ಕುಟುಂಬದವರಿಗೆ ಟ್ರಾವೆಲ್ ಹಿಸ್ಟರಿ ಇಲ್ಲ. ಈ ಹಿನ್ನೆಲೆಯ ಬಗ್ಗೆ ಆರೋಗ್ಯ ಇಲಾಖೆ ಕೂಡಾ ಪರಿಶೀಲನೆ ನಡೆಸುತ್ತಿದೆ. ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದು ಹರ್ಷಗುಪ್ತ ಅವರು ತಿಳಿಸಿದ್ದಾರೆ.
HMPV ಎಂದರೇನು?
ಚೀನಾದಲ್ಲಿ ಆತಂಕಕ್ಕೆ ಕಾರಣವಾಗಿದೆ ಎನ್ನಲಾಗಿರುವ ಹ್ಯೂಮನ್ ಮೆಟಾಪ್ನ್ಯೂಮೋ ವೈರಸ್ ಅಥವಾ ಎಚ್ಎಂಪಿವಿ ಹೊಸದೇನಲ್ಲ. 2001 ರಲ್ಲಿ ಪತ್ತೆಯಾದ ಹ್ಯೂಮನ್ ಮೆಟಾಪ್ನ್ಯೂಮೊವೈರಸ್ (HMPV), ನ್ಯುಮೊವಿರಿಡೆ ಕುಟುಂಬಕ್ಕೆ ಸೇರಿದ್ದು, ಇದು ಪ್ರಸಿದ್ಧವಾದ ಉಸಿರಾಟದ ಸಿನ್ಸಿಟಿಯಲ್ ವೈರಸ್ (RSV) ಅನ್ನು ಸಹ ಒಳಗೊಂಡಿದೆ.
2001 ರಲ್ಲಿ ಅಧಿಕೃತವಾಗಿ ಗುರುತಿಸಲ್ಪಟ್ಟಿದ್ದರೂ ಸಹ, HMPV ಮಾನವರಲ್ಲಿ 60 ವರ್ಷಗಳಿಂದ ಅಸ್ತಿತ್ವದಲ್ಲಿದೆ ಮತ್ತು ಪ್ರಪಂಚದಾದ್ಯಂತ ಕಂಡುಬರುತ್ತದೆ ಎಂದು ಅಧ್ಯಯನಗಳು ತೋರಿಸಿವೆ. ವೈರಸ್ ಎಲ್ಲಾ ವಯಸ್ಸಿನ ವ್ಯಕ್ತಿಗಳಲ್ಲಿ ಮೇಲಿನ ಮತ್ತು ಕೆಳಗಿನ ಉಸಿರಾಟದ ಕಾಯಿಲೆಗಳನ್ನು ಉಂಟುಮಾಡಬಹುದು, ಆದರೂ ಚಿಕ್ಕ ಮಕ್ಕಳು, ಹಿರಿಯ ವಯಸ್ಕರು ಮತ್ತು ದುರ್ಬಲಗೊಂಡ ರೋಗನಿರೋಧಕ ಶಕ್ತಿ ಹೊಂದಿರುವವರು ಹೆಚ್ಚು ದುರ್ಬಲರಾಗಿದ್ದಾರೆ.
HMPV ವೈರಸ್‌ನ ಲಕ್ಷಣಗಳೇನು?
* ಕೆಮ್ಮು
* ಜ್ವರ
* ಮೂಗು ಸೋರುವಿಕೆ ಅಥವಾ ಉಸಿರುಗಟ್ಟುವಿಕೆ
* ಗಂಟಲು ಕೆರತ
* ಉಬ್ಬಸ
* ಉಸಿರಾಟದ ತೊಂದರೆ
* ನಿಮ್ಮ ದೇಹದಾದ್ಯಂತ ದದ್ದುಗಳು
ಎಚ್ ಎಂಪಿವಿ ಹೇಗೆ ಹರಡುತ್ತದೆ?
ತಜ್ಞರ ಪ್ರಕಾರ, ಎಚ್ಎಂಪಿವಿ ಹೊಂದಿರುವವರೊಂದಿಗೆ ನೇರ ಸಂಪರ್ಕದಿಂದ ಅಥವಾ ವೈರಸ್ನಿಂದ ಕಲುಷಿತಗೊಂಡ ವಸ್ತುಗಳನ್ನು ಸ್ಪರ್ಶಿಸುವ ಮೂಲಕ ಹರಡುತ್ತದೆ. ಉದಾಹರಣೆಗೆ, ಈ ಮೂಲಕ:
ಕೆಮ್ಮು ಮತ್ತು ಸೀನುವಿಕೆ ಕೈಕುಲುಕುವುದು, ತಬ್ಬಿಕೊಳ್ಳುವುದು ಅಥವಾ ಚುಂಬಿಸುವುದು. ಫೋನ್ ಗಳು, ಡೋರ್ ಹ್ಯಾಂಡಲ್ ಗಳು, ಕೀಬೋರ್ಡ್ ಗಳು ಅಥವಾ ಆಟಿಕೆಗಳಂತಹ ಮೇಲ್ಮೈಗಳು ಅಥವಾ ವಸ್ತುಗಳನ್ನು ಸ್ಪರ್ಶಿಸುವುದು ಸೇರಿದೆ.
HMPV ವೈರಸ್ ತಡೆಯುವುದು ಹೇಗೆ?
HMPV ಹರಡುವುದನ್ನು ತಡೆಯಲು ಮುಖವಾಡಗಳನ್ನು ಧರಿಸುವುದು, ಆಗಾಗ್ಗೆ ಕೈ ತೊಳೆಯುವುದು ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದು. ಸೋಂಕಿನ ಅಪಾಯವನ್ನು ಕಡಿಮೆ ಮಾಡಲು ಸೋಂಕಿತ ವ್ಯಕ್ತಿಗಳೊಂದಿಗೆ ನಿಕಟ ಸಂಪರ್ಕವನ್ನು ತಪ್ಪಿಸುವುದು ಸಹ ಮುಖ್ಯವಾಗಿದೆ.
HMPV ಚಿಕಿತ್ಸೆಗಾಗಿ ಆಂಟಿವೈರಲ್ ಔಷಧಿಗಳ ಬಳಕೆಯ ವಿರುದ್ಧ ತಜ್ಞರು ಸಲಹೆ ನೀಡುತ್ತಿದ್ದಾರೆ. ಶಾಂಘೈ ಆಸ್ಪತ್ರೆಯ ಉಸಿರಾಟದ ತಜ್ಞರ ಪ್ರಕಾರ, HMPV ಗೆ ಯಾವುದೇ ಲಸಿಕೆ ಇಲ್ಲ, ಮತ್ತು ಅದರ ಲಕ್ಷಣಗಳು ಸಾಮಾನ್ಯ ಶೀತವನ್ನು ಹೋಲುತ್ತವೆ. ಸರಿಯಾದ ಮಾರ್ಗದರ್ಶನವಿಲ್ಲದೆ ಆಂಟಿವೈರಲ್ ಚಿಕಿತ್ಸೆಗಳನ್ನು ಆಶ್ರಯಿಸದಂತೆ ತಜ್ಞರು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದರು.












Click it and Unblock the Notifications