ಬೆಳ್ತಂಗಡಿ ಬಳಿ ಆಗಿದ್ದು ಅಪಘಾತವೋ, ಕೊಲೆಯೋ?
ಬೆಂಗಳೂರು, ನ. 21: ಧರ್ಮಸ್ಥಳ ಸಮೀಪದ ಕೊಯ್ಯೂರು ಬಳಿ ಬೊಲೆರೊ ವಾಹನ ಬೈಕಿಗೆ ಢಿಕ್ಕಿ ಹೊಡೆದು ಯುವಕ ಮೃತ ಪಟ್ಟ ಘಟನೆ ಬುಧವಾರ ಬೆಳಗ್ಗೆ ಸಂಭವಿಸಿತ್ತು. ಈ ಪ್ರಕರಣ ರಾಜಕೀಯ ತಿರುವು ಪಡೆದುಕೊಂಡು ಗುರುವಾರ ಬೆಳಗ್ಗೆ ಕೂಡಾ ಪ್ರತಿಭಟನೆ ನಡೆದಿದೆ. ಆರೋಪಿಯನ್ನು ಪೊಲೀಸರು ಬಂಧಿಸಿ ವಿಚಾರಣೆ ಕೈಗೊಂಡಿದ್ದಾರೆ.
'ಇದು ಅಪಘಾತವಲ್ಲ ಉದ್ದೇಶಪೂರ್ವಕವಾಗಿ ನಡೆಸಿರುವ ಕೊಲೆ' ಎಂದು ಮೃತ ಯುವಕ ದಿನೇಶ್ ಗೌಡನ ಮನೆಯವರು ಕೊಟ್ಟಿರುವ ದೂರನ್ನು ಸ್ವೀಕರಿಸಿರುವ ಬೆಳ್ತಂಗಡಿ ಪೊಲೀಸರು ಭಾರತೀಯ ದಂಡ ಸಂಹಿತೆ 279, 302ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. ಮೃತ ಯುವಕ ದಿನೇಶ್ ಅವರು ಪ್ರಜಾಪ್ರಭುತ್ವ ವೇದಿಕೆಯ ಮಹೇಶ್ ಶೆಟ್ಟಿ ತಿಮರೋಡಿ ಅವರ ಆಪ್ತ ಬಳಗದ ಸದಸ್ಯ ಎಂದು ತಿಳಿದು ಬಂದಿದೆ.
ಆದರೆ, ಘಟನಾ ಸ್ಥಳಕ್ಕೆ ಆಗಮಿಸಿದ ಬಿಜೆಪಿ ಮುಖಂಡ ಪ್ರಭಾಕರ ಗೌಡರ ಮೇಲೆ ಪ್ರಜಾಪ್ರಭುತ್ವ ವೇದಿಕೆಯ ಮಹೇಶ್ ಶೆಟ್ಟಿ ತಿಮರೋಡಿ ಬೆಂಬಲಿಗರ ತಂಡ ಹಲ್ಲೆ ನಡೆಸಿದ್ದು ಈಗ ಮತ್ತೊಂದು ಪ್ರಕರಣಕ್ಕೆ ನಾಂದಿ ಹಾಕಿದೆ. ಬೆಳ್ತಂಗಡಿ ಪೊಲೀಸರು ಹಲ್ಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಎಸ್ ಡಿಎಂ ಆಸ್ಪತ್ರೆ ಆಂಬುಲೆನ್ಸ್ ಮೇಲೆ ಉದ್ದೇಶ ಪೂರ್ವಕವಾಗಿ ಕಿಡಿಗೇಡಿಗಳು ಕಲ್ಲು ಎಸೆದು ಹಾನಿಗೊಳಿಸಿದ್ದಾರೆ ಎಂದು ಚಾಲಕ ಪ್ರಕಾಶ್ ಬೆಳ್ತಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ.

ಕೊಯ್ಯೂರು ಗ್ರಾಮದ ನಿವಾಸಿ ಬಾಲಕೃಷ್ಣ ಪೂಜಾರಿ ಎಂಬವರು ಚಲಾಯಿಸುತ್ತಿದ್ದ ಬೊಲೆರೊ ವಾಹನ ಬೈಕ್ ಸವಾರ ಕೊಯ್ಯೂರು ಗ್ರಾಮದ ಕಂಗಿತ್ತಿಲು ಬಾಬಿ ಗೌಡ ಎಂಬುವರ ಪುತ್ರ ದಿನೇಶ್ ಗೌಡ (23) ರನ್ನು ಬಲಿ ತೆಗೆದುಕೊಂಡಿತ್ತು. ಬಾಲಕೃಷ್ಣ ಪೂಜಾರಿಯವರ ಮೇಲೆ ಇದೀಗ ಕೊಲೆ ಪ್ರಕರಣ ದಾಖಲಾಗಿದೆ. ದಿನೇಶ್ ಗೌಡ ತಮ್ಮ ಮನೆಯಿಂದ ಗೇರುಕಟ್ಟೆ ಸನಿಹದ ನಾಳ ಎಂಬಲ್ಲಿಗೆ ಬೈಕ್ ನಲ್ಲಿ ಬರುತ್ತಿದ್ದಾಗ ಕೊಯ್ಯೂರಿನಿಂದ ಬೆಳಾಲು ಕಡೆಗೆ ಹೋಗುತ್ತಿದ್ದ ಬೊಲೆರೊ ವಾಹನ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಉದ್ರಿಕ್ತ ಗುಂಪು ಘಟನೆಗೆ ಕಾರಣವಾದ ಬೊಲೆರೊದ ಮೇಲೆ ದಾಳಿ ನಡೆಸಿದ್ದು, ಅದು ಸಂಪೂರ್ಣ ನುಜ್ಜುಗುಜ್ಜಾಗಿದೆ. ಪ್ರಕರಣದ ತನಿಖೆ ಮುಂದುವರಿಯುತ್ತಿದ್ದು ತನಿಖೆಯ ಬಳಿಕವಷ್ಟೇ ಘಟನೆಯ ಬಗ್ಗೆ ಹೆಚ್ಚಿನ ಮಾಹಿತಿಗಳು ಸ್ಪಷ್ಟಗೊಳ್ಳಲಿದೆ. ದಿನೇಶ್ ಗೌಡ ಕಡೆಯವರು ಪೊಲೀಸ್ ಠಾಣೆ ಬಳಿ ಸೇರಿ ಬಾಲಕೃಷ್ಣ ಪೂಜಾರಿ ಬಂಧನವಷ್ಟೇ ಸಾಲದು, ಕೂಡಲೇ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದ್ದಾರೆ.
ಘಟನೆಯ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ನೂರಾರು ಮಂದಿ ಸ್ಥಳೀಯರು ಇದೊಂದು ಉದ್ದೇಶ ಪೂರ್ವಕ ಕೊಲೆಯಾಗಿದೆ ಎಂದು ಆರೋಪ ಹೊರಿಸಿದರು. ಬೆಳ್ತಂಗಡಿ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿದರೂ ವಾಹನ ಹಾಗೂ ಮೃತ ದೇಹವನ್ನು ಅಲ್ಲಿಂದ ತೆರವು ಗೊಳಿಸಲು ಜನ ಅವಕಾಶ ನೀಡರಲಿಲ್ಲ. ಉದ್ರಿಕ್ತ ಗುಂಪು ಘಟನೆಗೆ ಕಾರಣವಾದ ಬೊಲೆರೊದ ಮೇಲೆ ದಾಳಿ ನಡೆಸಿದ್ದು, ಅದು ಸಂಪೂರ್ಣ ನುಜ್ಜುಗುಜ್ಜಾಗಿದೆ. ಪ್ರಕರಣದ ತನಿಖೆ ಮುಂದುವರಿಯುತ್ತಿದ್ದು ತನಿಖೆಯ ಬಳಿಕವಷ್ಟೇ ಘಟನೆಯ ಬಗ್ಗೆ ಹೆಚ್ಚಿನ ಮಾಹಿತಿಗಳು ಸ್ಪಷ್ಟಗೊಳ್ಳಲಿದೆ.
ಘಟನಾ ಸ್ಥಳಕ್ಕೆ ಬೆಳ್ತಂಗಡಿ ಶಾಸಕ ಕೆ. ವಸಂತ ಬಂಗೇರ ಆಗಮಿಸಿ ಪ್ರತಿಭಟನಕಾರರೊಂದಿಗೆ ಮಾತುಕತೆ ನಡೆಸಿ ಪ್ರಕರಣದ ಸಮಗ್ರ ತನಿಖೆ ನಡೆಸಿ ನ್ಯಾಯ ಒದಗಿಸುವ ಭರವಸೆ ನೀಡಿದ್ದಾರೆ.












Click it and Unblock the Notifications