ಬಳ್ಳಾರಿ ಪ್ರಕರಣ: 2 ಬಾರಿ ಮರಣೋತ್ತರ ಪರೀಕ್ಷೆ: ಎಚ್‌ಡಿಕೆ ಹೇಳಿಕೆಗೆ ಜಿ.ಪರಮೇಶ್ವರ್ ಟಾಂಗ್
ಬೆಂಗಳೂರು: ಬಳ್ಳಾರಿ ಘಟನೆಯಲ್ಲಿ ಎರಡು ಸಲ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ ಎನ್ನುವ ಆರೋಪಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಜಿ. ಪರಮೇಶ್ವರ್ ಅವರು ರಿಯಾಕ್ಟ್ ಮಾಡಿದ್ದಾರೆ. ಬಳ್ಳಾರಿ ಘಟನೆಯ ಕುರಿತು ಪ್ರತಿಕ್ರಿಯಿಸಿದ ಅವರು, ಯಾವುದೇ ವಿಚಾರವಾಗಲಿ ತಿಳಿದುಕೊಂಡು ಮಾತನಾಡಬೇಕು. ಇಲ್ಲವಾದರೆ ಬೇರೆ ರೀತಿಯ ಪರಿಣಾಮ ಆಗುತ್ತದೆ. ನನ್ನನ್ನು ಸೇರಿದಂತೆ ರಾಜಕೀಯ ನಾಯಕರುಗಳು ಮಾತನಾಡುವಾಗ ಹೇಳಿಕೆಗಳು ಸಮಾಜದಲ್ಲಿ ಏನಾಗಬಹುದು ಎಂಬುದನ್ನು ಅರಿತುಕೊಂಡು ಮಾತನಾಡಬೇಕು ಎಂದಿದ್ದಾರೆ.
ಬಳ್ಳಾರಿ ಘಟನೆಯಲ್ಲಿ ಸಾವನ್ನಪ್ಪಿದ ವ್ಯಕ್ತಿಯ ಎರಡು ಸಲ ಮರಣೋತ್ತರ ಪರೀಕ್ಷೆ ನಡೆಸಿಲ್ಲ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ. ಎರಡು ಸಲ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ ಎಂಬುದಾಗಿ ಹೇಳಿಕೆ ನೀಡಿರುವ ನಾಯಕರುಗಳು ನೋಡಿದ್ದಾರೆಯೇ ಎಂದು ಪ್ರಶ್ನಿಸಿದ್ದು, ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು ಹೇಳಿಕೆ ನೀಡಿದ್ದಾರೆ. ಇನ್ನು ಯಾರ ಮಾತನ್ನು ನಂಬಬೇಕು. ಎರಡು ಸಲ ಮರಣೋತ್ತರ ಪರೀಕ್ಷೆ ನಡೆಸಿಲ್ಲ ಎಂದಿರುವ ವೈದ್ಯರ ಮಾತನ್ನು ನಾನು ಕೂಡ ಒಪ್ಪುತ್ತೇನೆ ಎಂದಿದ್ದಾರೆ.

ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರ ಹೇಳಿಕೆಯ ಕುರಿತು ಪ್ರತಿಕ್ರಿಯಿಸಿ, ನಾನು ಮೂರನೇ ಸಲ ಗೃಹ ಸಚಿವನಾಗಿ ಕೆಲಸ ಮಾಡುತ್ತಿದ್ದೇನೆ. ಯಾವ ಸಂದರ್ಭದಲ್ಲಿ ಏನು ತೀರ್ಮಾನ ತೆಗೆದುಕೊಳ್ಳಬೇಕು. ನಮ್ಮ ರಾಜ್ಯದ ಕಾನೂನು ವ್ಯವಸ್ಥೆಯ ದೃಷ್ಟಿಯಿಂದ ಏನೆಲ್ಲ ತೀರ್ಮಾನ ತೆಗೆದುಕೊಳ್ಳಬೇಕು ಎಂಬ ಅರಿವು ನನಗಿದೆ. 38 ವರ್ಷ ರಾಜಕಾರಣ ಮಾಡಿದ್ದೇನೆ. ಪಕ್ಷದಲ್ಲಿ ಮತ್ತು ಸರ್ಕಾರದಲ್ಲಿ ಅನೇಕ ಜವಾಬ್ದಾರಿಗಳನ್ನು ನಿಭಾಯಿಸಿದ್ದೇನೆ. ನನಗೂ ಕೂಡ ಅಪಾರವಾದ ಅನುಭವ ಇದೆ. ರಾಜ್ಯದ ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ಏನು ಕ್ರಮ, ಯಾವ ಸಂದರ್ಭದಲ್ಲಿ ತೆಗೆದುಕೊಳ್ಳಬೇಕು, ಕಠಿಣವಾದ ನಿರ್ಧಾರಗಳನ್ನು ಯಾವಾಗ ತೆಗೆದುಕೊಳ್ಳಬೇಕು ತೆಗೆದುಕೊಂಡಿದ್ದೇನೆ ಎಂದರು.
ಹೆಚ್.ಡಿ.ಕುಮಾರಸ್ವಾಮಿ ಅವರು ಕೇಂದ್ರದ ಸಚಿವರಿದ್ದಾರೆ. ಇಡೀ ರಾಷ್ಟ್ರದ ಮಾಹಿತಿ ಅವರ ಬಳಿ ಇದೆ. ಯಾವ ರಾಜ್ಯದಲ್ಲಿ ಏನೇನು ಅಗುತ್ತಿದೆ ಎಂಬುದು ಅವರಿಗೆ ಗೊತ್ತಿದೆ. ಒಂದು ಘಟನೆಯನ್ನು ಆಧರಿಸಿ ವ್ಯವಸ್ಥೆಯನ್ನು ಅಳತೆ ಮಾಡಲು, ಸರ್ಟಿಫಿಕೇಟ್ ಕೊಡಲು ಆಗುವುದಿಲ್ಲ. ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಕೆಲಸವನ್ನು ಪೊಲೀಸ್ ಇಲಾಖೆಯು ಅವರ ಹಂತದಲ್ಲಿ ತೀರ್ಮಾನ ತೆಗೆದುಕೊಳ್ಳುತ್ತಾರೆ. ಇಂತಹ ಘಟನೆಗಳಾದ ಸಂದರ್ಭದಲ್ಲಿ ಸರ್ಕಾರ ಕೆಲವು ಕ್ರಮ ಕೈಗೊಳ್ಳಲು ಸೂಚನೆಗಳನ್ನು ನೀಡುತ್ತದೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಅಭಿನಂದನೆ
ಮಾಜಿ ಮುಖ್ಯಮಂತ್ರಿ ದಿವಂಗತ ಡಿ.ದೇವರಾಜು ಅರಸು ಅವರ 2792 ದಿನಗಳನ್ನು ಸರಿಗಟ್ಟಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು ಅಭಿನಂದನೆ ಸಲ್ಲಿಸಿದ್ದಾರೆ. ಈ ದಾಖಲೆ ಮುರಿಯಲು ಸಿದ್ದರಾಮಯ್ಯನವರಿಗೆ ಅವಕಾಶ ಮಾಡಿಕೊಟ್ಟ ಕಾಂಗ್ರೆಸ್ ಪಕ್ಷದ ವರಿಷ್ಠರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮಲ್ಲಿಕಾರ್ಜುನ್ ಖರ್ಗೆ, ಕೆ.ಸಿ.ವೇಣುಗೋಪಾಲ್, ಸುರ್ಜೇವಾಲಾ ಅವರಿಗೂ ಅಭಿನಂದನೆ ಸಲ್ಲಿಸುವೆ ಎಂದಿದ್ದಾರೆ.
ಕಾಂಗ್ರೆಸ್ ಪಕ್ಷದಲ್ಲಿ ಮಾತ್ರ ಇಂತಹ ಅವಕಾಶಗಳು ಸಾಧ್ಯ. ದೇವರಾಜ ಅರಸು ಅವರಿಗೂ ಅವಕಾಶ ನೀಡಲಾಗಿತ್ತು. ಈಗ ಸಿದ್ದರಾಮಯ್ಯ ಅವರಿಗೂ ಅವಕಾಶ ಕೊಟ್ಟಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಮಾತ್ರ ಇಂತಹ ಬೆಳವಣಿಗೆಗಳನ್ನು ನೋಡಬಹುದು. ಬಡವರು ಮತ್ತು ಅಭಿವೃದ್ಧಿಯ ಬಗ್ಗೆ ಕಾಂಗ್ರೆಸ್ ಪಕ್ಷಕ್ಕೆ ಇರುವ ದೂರದೃಷ್ಟಿಯ ಬದ್ಧತೆ ಮತ್ತು ಸಿದ್ಧಾಂತದಿಂದ ಇದೆಲ್ಲ ಸಾಧ್ಯವಾಗಿದೆ ಎಂದು ಹೇಳಿದರು.












Click it and Unblock the Notifications