ಬೇಲೇಕೇರಿ ಪ್ರಕರಣ, ಶಾಸಕ ಆನಂದ್ ಸಿಂಗ್ ಬಂಧನ
ಬೆಂಗಳೂರು, ಅ.17: ಬೇಲೇಕೇರಿ ಅದಿರು ನಾಪತ್ತೆ ಪ್ರಕರಣದ ಆರೋಪಿ ಶಾಸಕ ಆನಂದ್ ಸಿಂಗ್ ಅವರನ್ನು ಗುರುವಾರ ಸಿಬಿಐ ತಂಡ ವಶಕ್ಕೆ ತೆಗೆದುಕೊಂಡಿದೆ. ಕಳೆದೊಂದು ವಾರದಿಂದ ಆನಂದ್ ಸಿಂಗ್ ಗಾಗಿ ಸಿಬಿಐ ಹುಡುಕಾಟ ನಡೆಸುತ್ತಲೇ ಇತ್ತು.
ಗುರುವಾರ ಬೆಳಗ್ಗೆ ದೇವನಹಳ್ಳಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. ಸಿಂಗಪುರದಿಂದ ಬೆಂಗಳೂರಿಗೆ ವಾಪಾಸ್ ಆಗುತ್ತಿದ್ದರು ಎಂದು ತಿಳಿದು ಬಂದಿದೆ. ಆನಂದ್ ಸಿಂಗ್ ಅವರನ್ನು ಇಂದೇ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.. ಅಕ್ಟೋಬರ್ 26ರ ತನಕ ವಿಚಾರಣೆಗಾಗಿ ಸಿಬಿಐ ವಶಕ್ಕೆ ಆನಂದ್ ಸಿಂಗ್ ಅವರನ್ನು ಒಪ್ಪಿಸಲಾಗಿದೆ.
ಬೇಲೇಕೇರಿ ಅದಿರು ನಾಪತ್ತೆ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ನೀಡುವಂತೆ ಕೋರಿ ಬಳ್ಳಾರಿ ವಿಜಯನಗರ ಬಿಜೆಪಿ ಶಾಸಕ ಆನಂದ್ ಸಿಂಗ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಅ.7ರಂದು ಸಿಬಿಐ ವಿಶೇಷ ನ್ಯಾಯಾಲಯ ತಿರಸ್ಕರಿಸಿದೆ.ತಾವು ಅನಾರೋಗ್ಯದ ಕಾರಣ ಸಿಂಗಾಪುರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಜಾಮೀನು ನೀಡಬೇಕೆಂದು ಸಿಂಗ್ ಮನವಿ ಮಾಡಿದ್ದರು.
ಎರಡು ದಿನದಲ್ಲಿ ಆನಂದ್ ಸಿಂಗ್ ಅವರ ವಿರುದ್ಧ ಲುಕ್ ಔಟ್ ನೋಟಿಸ್ ಜಾರಿಯಾಗಿತ್ತು.ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸಲು ಸಿಬಿಐ ಅಧಿಕಾರಿಗಳು ಚಿಂತನೆ ನಡೆಸಿದ್ದರು. ಹೀಗಾಗಿ ವಿದೇಶದಿಂದ ವಿಮಾನ ನಿಲ್ದಾಣಕ್ಕೆ ಬಂದ ತಕ್ಷಣ ಆನಂದ್ ಸಿಂಗ್ ಬಂಧನವಾಗುವುದು ಖಚಿತವಾಗಿತ್ತು.
ಈಗಾಗಲೇ ಈ ಪ್ರಕರಣದಲ್ಲಿ ಕಂಪ್ಲಿ ಶಾಸಕ ಸುರೇಶ್ ಬಾಬು, ಕೂಡ್ಲಗಿ ಶಾಸಕ ನಾಗೇಂದ್ರ, ಕಾರವಾರದ ಶಾಸಕ ಸತೀಶ್ ಸೈಲ್ ಬೇಲೇಕೇರಿ ಪ್ರಕರಣದಲ್ಲಿ ಬಂಧನವಾಗಿದ್ದಾರೆ. ಸದ್ಯ ಸತೀಶ್ ಸೈಲ್ ಪೆರೋಲ್ ಪಡೆದು ಹೊರಗೆ ಬಂದಿದ್ದಾರೆ.

ಆನಂದ್ ಸಿಂಗ್ ಆರೋಪಗಳು
ಆನಂದ್ ಸಿಂಗ್ ಒಡೆತನದ ವೈಷ್ಣವಿ ಮಿನರಲ್ಸ್ ಅಕ್ರಮವಾಗಿ ಬೇಲೇಕೇರಿ ಬಂದರಿನಿಂದ ಅದಿರು ಸಾಗಣೆ ಮಾಡಿದ ಆರೋಪವಿದೆ. ಜನವರಿ 2009 ರಿಂದ ಮೇ 2010ರ ಅವಧಿಯಲ್ಲಿ ಬೆಲೇಕೇರಿ ಬಂದರಿನಿಂದ ಮುಖ್ಯವಾಗಿ ಚೀನಾ, ಸಿಂಗಪುರ ಸೇರಿದಂತೆ ವಿದೇಶಕ್ಕೆ ಕಬ್ಬಿಣದ ಅದಿರನ್ನು ಸಾಗಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು ಎನ್ನಲಾಗಿದೆ.

ಎಲ್ಲಿದ್ದರು ಆನಂದ್ ಸಿಂಗ್
ಆನಂದ್ ಸಿಂಗ್ ಸಿಂಗಾಪುರಕ್ಕೆ ಚಿಕಿತ್ಸೆಗಾಗಿ ತೆರಳಿಲ್ಲ. ಕರ್ನಾಟಕದಲ್ಲೇ ಇದ್ದಾರೆ. ಬೆಂಗಳೂರಿನಲ್ಲಿ ತಲೆ ಮರೆಸಿಕೊಂಡಿದ್ದಾರೆ ಎಂಬ ಸುದ್ದಿಯಿತ್ತು. ಆರಂಭದಲ್ಲಿ ಲಂಡನ್ನಿಗೆ ತೆರಳಿದ್ದಾರೆ ಎನ್ನಲಾಗಿತ್ತು. ನ್ಯಾಯಾಲಯದ ಮುಂದೆ ಶರಣಾಗಲಿದ್ದಾರೆ ಎಂಬ ಹಲವಾರು ಸುದ್ದಿಗಳು ಹರಿದಾಡುತ್ತಲೇ ಇವೆ. ಆದರೂ ಆನಂದ್ ಸಿಂಗ್ ಮಾತ್ರ ಸಿಬಿಐ ಕೈಗೆ ಸಿಕ್ಕಿರಲಿಲ್ಲ. ಎಲ್ಲಿದ್ದರು ಎಂಬುದು ಕೂಡಾ ನಿಗೂಢವಾಗಿ ಉಳಿದಿದೆ.
ಸಿಂಗಪುರಕ್ಕೆ ತೆರಳಲು ಸಾಧ್ಯವಿಲ್ಲ ಆನಂದ್ ಸಿಂಗ್ ಪಾಸ್ ಪೋರ್ಟ್ ನಮ್ಮ ಬಳಿ ಇದೆ ಎಂದು ಸಿಬಿಐ ತಂಡ ಹೇಳಿಕೆ ನಂಬುವುದಾದರೆ, ಈಗ ಯಾವ ಊರಿನಿಂದ ಬಂದು ವಿಮಾನ ನಿಲ್ದಾಣದಲ್ಲಿ ಸೆರೆ ಸಿಕ್ಕರು ಎಂಬುದು ಕುತೂಹಲಕಾರಿಯಾಗಿದೆ.

ಶರಣಾಗತಿ ಏಕೆ
ಎರಡು ದಿನದಲ್ಲಿ ಆನಂದ್ ಸಿಂಗ್ ದೊರೆಯದಿದ್ದರೆ ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸಲು ಸಿಬಿಐ ಅಧಿಕಾರಿಗಳು ಚಿಂತನೆ ನಡೆಸಿದ್ದರು.ಆದರೆ, ಲುಕ್ ಔಟ್ ನೋಟಿಸ್ ಜೊತೆಗೆ ರೆಡ್ ಕಾರ್ನರ್ ನೋಟಿಸ್ ಕೂಡಾ ನೀಡಲಾಗಿದೆ ಎಂಬ ಸುದ್ದಿಯೂ ಇದೆ. ಈ ಹಿನ್ನೆಲೆಯಲ್ಲಿ ವಿದೇಶದಿಂದ ವಿಮಾನ ನಿಲ್ದಾಣಕ್ಕೆ ಬಂದ ತಕ್ಷಣ ಆನಂದ್ ಸಿಂಗ್ ಬಂಧನವಾಗುವುದು ಖಚಿತವಾಗಿತ್ತು. ಇಲ್ಲದಿದ್ದರೆ ವಿದೇಶದಲ್ಲೇ (ಸಿಂಗಪುರ ಎಂದು ಓದಿಕೊಳ್ಳಿ) ಅವರನ್ನು ಇಂಟರ್ ಪೋಲ್ ಸಹಾಯದಿಂದ ಬಂಧಿಸಲಾಗುತ್ತಿತ್ತು.
ಹೀಗಾಗಿ ಆನಂದ್ ಸಿಂಗ್ ಅವರು ಭಾರತಕ್ಕೆ ಹಿಂತಿರುಗಿ ಶರಣಾಗತರಾಗಿದ್ದಾರೆ ಎನ್ನಲಾಗಿದೆ.ಆದರೆ, ವಿಳಂಬ ಏಕೆ ಎಂಬುದು ಇನ್ನೂ ಸ್ಪಷ್ಟವಾಗಬೇಕಿದೆ

ಯಾರಿಗೆ ಭೀತಿ
* M/s ಡ್ರೀಮ್ ಲಾಜಿಸ್ಟಿಕ್ಸ್ ಪೈ ಲಿ ಮಾಲೀಕರಾದ ಯಲ್ಲಾಪುರ ಕಾಂಗ್ರೆಸ್ ಶಾಸಕ ಶಿವರಾಮ್ ಹೆಬ್ಬಾರ್ ಹಾಗೂ ಅವರ ಪುತ್ರ ವಿವೇಕ್ ಹೆಬ್ಬಾರ್.
* ಆನಂದ್ ಸಿಂಗ್ ಅವರ ವೈಷ್ಣವಿ ಮಿನಿರಲ್ಸ್ , ನಾಗೇಂದ್ರ ಅವರ ಈಗಲ್ ಟ್ರೇಡರ್ಸ್ ಅಂಡ್ ಲಾಜಿಸ್ಟಿಕ್ಸ್, ಸುರೇಶ್ ಬಾಬು ಅವರ ಜನಾದೇವಿ ಮಿನರಲ್ಸ್, ಕೆ ಸೋಮಶೇಖರ್ ಅವರ ಐಎಲ್ ಸಿ ಇಂಡಸ್ಟ್ರೀಸ್ ಪೈ.ಲಿ. ಸಿಬ್ಬಂದಿಗಳು
* ಅರಣ್ಯ ಇಲಾಖೆ ಅಧಿಕಾರಿಗಳು, ಬಂದರಿನ ಸಿಬ್ಬಂದಿಗಳು * ಪವನ್ ಕುಮಾರ್ ಜೈನ್ ಅವರ ಪಿಜೆಎಸ್ ಓವರ್ಸೀಸ್ ಲಿ.

ಸತೀಶ್ ಸೈಲ್
2009-10ರ ಅವಧಿಯಲ್ಲಿ ನಡೆದಿದೆ ಎನ್ನಲಾದ ಬೇಲೇಕೇರಿ ಅದಿರು ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲ್ಲಿಕಾರ್ಜುನ ಶಿಪ್ಪಿಂಗ್ ಕಂಪನಿ(SMSC Pvt Ltd)ಯ ಮಾಲೀಕರಾದ ಸತೀಶ್ ಅವರನ್ನು ಸಿಬಿಐ ತಂಡ ಸೆ.20ರಂದು ಬಂಧಿಸಿ ವಿಚಾರಣೆ ನಡೆಸುತ್ತಿದೆ. ಸತೀಶ್ ಸೈಲ್ ಸದ್ಯ ಪೆರೊಲ್ ಮೇಲೆ ಜೈಲಿನಿಂದ ಹೊರಗಿದ್ದಾರೆ
ಜನವರಿ 2009 ರಿಂದ ಮೇ 2010ರ ಅವಧಿಯಲ್ಲಿ ಸುಮಾರು 7.23 ಲಕ್ಷ ಮೆಟ್ರಿಕ್ ಟನ್ ಕಬ್ಬಿಣ ಅದಿರನ್ನು ಮಲ್ಲಿಕಾರ್ಜುನ ಶಿಪ್ಪಿಂಗ್ ಕಂಪನಿ ಅಕ್ರಮವಾಗಿ ಸಾಗಿಸಿದೆ ಎಂಬ ಆರೋಪವಿದೆ. ಕಾಂಗ್ರೆಸ್ ರೆಬೆಲ್ ಅಭ್ಯರ್ಥಿಯಾಗಿ 2013ರ ಅಸೆಂಬ್ಲಿ ಎಲೆಕ್ಷನ್ ನಲ್ಲಿ ನಿಂತು ಚುನಾವಣೆ ಗೆದ್ದ ಸತೀಶ್ ಸೈಲ್ ನಂತರ ಕಾಂಗ್ರೆಸ್ ಮತ್ತೆ ಸೇರಿಕೊಂಡಿದ್ದರು.
ಹಿರೇಮಠ್, ಅಬ್ರಹಾಂ ಪ್ರತಿಕ್ರಿಯೆ
ಸಮಾಜ ಪರಿವರ್ತನಾ ಸಮುದಾಯದ ಎಸ್ ಆರ್ ಹಿರೇಮಠ್: ನ್ಯಾಯಾಂಗದ ಜತೆಗೆ ಕಾರ್ಯಾಂಗ ಕೂಡಾ ಬಲಗೊಳ್ಳಬೇಕು. ಸಿದ್ದರಾಮಯ್ಯ ಅವರು ಒಳ್ಳೆ ರಾಜಕಾರಣಿ ಅವರು ಸಮಾಜ ಸುಧಾರಣೆಗೆ ಒತ್ತು ನೀಡುತ್ತಿದ್ದಾರೆ ರೆಡ್ಡಿ ಅಂಡ್ ಗ್ಯಾಂಗ್ ಮೇಲೆ 29ಕ್ಕೂ ಅಧಿಕ ಪ್ರಕರಣಗಳಿವೆ.
ಬೆಲೇಕೇರಿ ಪ್ರಕರಣದಲ್ಲಿ ಐದು ಎಫ್ ಐಆರ್ ಹಾಕಲಾಗಿದೆ. ಇನ್ನೂ 22ಕ್ಕೂ ಅಧಿಕ ಎಫ್ ಐಆರ್ ದಾಖಲಾಗುವ ಸಾಧ್ಯತೆಯಿದೆ. ಲೋಕಾಯುಕ್ತ ಕೋರ್ಟ್ ನಲ್ಲಿ ವಿಚಾರಣೆ ಜಾರಿಯಲ್ಲಿದೆ ಎಂದು ಹೇಳಿದ್ದಾರೆ.
ಟಿಜೆ ಅಬ್ರಹಾಂ: ಅವರು ಶರಣಾಗತರಾಗಿರುವುದು ಸಂತೋಷ. ಇನ್ನೂ ಮಿಕ್ಕ ಆರೋಪಿಗಳ ಮೇಲೂ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಪ್ರಕರಣದ ತನಿಖೆ, ವಿಚಾರಣೆ ಆದಷ್ಟು ಬೇಗ ಆದರೆ ಒಳ್ಳೆಯದು ಎಂದಿದ್ದಾರೆ.

ಶ್ರೀರಾಮುಲುಗೆ ಸಂಕಟ?
ಬೇಲೇಕೇರಿ ಅದಿರು ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕರಾದ ಸುರೇಶ್ ಬಾಬು, ಸತೀಶ್ ಸೈಲ್, ನಾಗೇಂದ್ರ, ಆನಂದ ಸಿಂಗ್ ಅವರು ಬಂಧನವಾಗಿದ್ದಾರೆ. ಬಂಧಿತ ಆರೋಪಿಗಳು ವಿಚಾರಣೆ ಸಂದರ್ಭದಲ್ಲಿ ಜನಾರ್ದನ ರೆಡ್ಡಿ ವಿದೇಶಗಳಲ್ಲಿ ಆರಂಭಿಸಿದ್ದ 19 ಬೇನಾಮಿ ಕಂಪನಿಗಳಿಗೆ ಬಿಎಸ್ಸಾರ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಶ್ರೀರಾಮುಲುವೇ ಸೂತ್ರಧಾರ. ಜನಾರ್ದನ ರೆಡ್ಡಿ ಹಾಗೂ ಶ್ರೀರಾಮುಲು ಹೇಳಿದಂತೆ ಕೇಳಿದೆವು ಅಷ್ಟೇ ಎಂದಿದ್ದಾರಂತೆ. ವಿಚಾರಣೆ ವಿವರ ಇನ್ನೂ ಸಿಬಿಐ ಹೊರಹಾಕಿಲ್ಲ.
ಪ್ರಕರಣದಲ್ಲಿ ಇನ್ನಷ್ಟು ಶಾಸಕರು, ಸಂಸದರು ಮಾಜಿ ರಾಜಕೀಯ ಮುಖಂಡರನ್ನು ವಿಚಾರಣೆ ಒಳಪಡಿಸಲು ಸಿಬಿಐ ಬಲೆ ಹೆಣೆದಿದೆ.












Click it and Unblock the Notifications