Belagavi Session: 'ಉತ್ತರ ಕರ್ನಾಟಕ' ಸಮಸ್ಯೆಗಳ ಚರ್ಚೆಗೆ ಆದ್ಯತೆ ಸಿಗಲಿದೆಯೇ: ಏನಂದ್ರು ಸಭಾಪತಿ?
ಹುಬ್ಬಳ್ಳಿ, ನವೆಂಬರ್ 27: ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಡಿಸೆಂಬರ್ 4ರಿಂದ ಹತ್ತು ದಿನಗಳ ಕಾಲ ಚಳಿಗಾಲದ ಅಧಿವೇಶನ ನಡೆಯಲಿದೆ. ಇತ್ತೀಚಿನ ವರ್ಷಗಳಲ್ಲಿ ಯಾವುದೇ ಸರ್ಕಾರಗಳು ಅಧಿಕಾರದಲ್ಲಿದ್ದಾಗಲೂ ಸಹಿತ ಸಮರ್ಪಕವಾಗಿ ಉತ್ತರ ಕರ್ನಾಟಕದ ಸಮಸ್ಯೆಗಳ ಕುರಿತು ಅಧಿವೇಶನದಲ್ಲಿ ಚರ್ಚೆಗಳು ಆಗಿಲ್ಲ. ಒಮ್ಮೊಮ್ಮೆ ಪೂರ್ಣ ಹತ್ತು ದಿನ ಅಧಿವೇಶನವೇ ನಡೆಸದೇ ಈ ಭಾಗವನ್ನು ನಿರ್ಲಕ್ಷಿಸಲಾಗುತ್ತದೆ.
ಇದೀಗ ಪ್ರಚಂಡ ಬಹುಮತದಿಂದ ಅಧಿಕಾರ ಗದ್ದುಗೆ ಏರಿರುವ ಕಾಂಗ್ರೆಸ್ ಸರ್ಕಾರದ ಈ ಅವಧಿಯ ಮೊದಲ ಚಳಿಗಾಲ ಅಧಿವೇಶನ ಇದಾಗಿದೆ. ರಾಜ್ಯಾದ್ಯಂತ ಬರಗಾಲ ಆವರಿಸಿದೆ, ಪರಿಹಾರ ನೀಡುವಲ್ಲಿ ವಿಳಂಬವಾಗಿದೆ. ಮುಂದೆ ಲೋಕಸಭಾ ಚುನಾವಣೆ ಇದೆ. ಇದೆಲ್ಲ ಕಾರಣಗಳಿಂದ ಅಧಿವೇಶನ ಮಹತ್ವ ಪಡೆಯಲಿದೆ. ಈ ಬಾರಿಯಾದರೂ ಸಮಪರ್ಕವಾಗಿ ಚರ್ಚೆ ಆಗಬೇಕು ಎಂಬ ಆಶಯ ಉತ್ತರ ಕರ್ನಾಟಕದವರದ್ದು.

ಅಧಿವೇಶನ ಕುರಿತು ಹುಬ್ಬಳ್ಳಿಯಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿರುವ ಉತ್ತರ ಕರ್ನಾಟಕದವರೇ ಆದ ಸಭಾಪತಿ ಬಸವರಾಜ ಹೊರಟ್ಟಿ ಅವರು, ಅಧಿವೇಶನದಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿನ ಸಮಸ್ಯೆ, ಅಭಿವೃದ್ಧಿ ಹಾಗೂ ಇನ್ನಿತರ ಪ್ರಶ್ನೆ ಕೇಳುವ ಶಾಸಕರಿಗೆ ಸಚಿವರಿಗೆ ಆದ್ಯತೆ ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ.
ಹೊರಟ್ಟಿ ನೀಡಿರುವ ಸಲಹೆ, ಮನವಿಗಳ ಮಾಹಿತಿ
ಉತ್ತರ ಕರ್ನಾಟಕ ಭಾಗದಲ್ಲಿ ಅನೇಕ ಸಮಸ್ಯೆಗಳು ಇವೆ. ಕಿತ್ತೂರು ಕರ್ನಾಟಕ ಭಾಗದಲ್ಲಿ ಚಳಿಗಾಲ ಅಧಿವೇಶನ ನಡೆಯುವುದರಿಂದ ಈ ಭಾಗದಲ್ಲಿರುವ ಅಭಿವೃದ್ಧಿ ಕಾಮಗಾರಿಗಳು ಬಗ್ಗೆ ಹೆಚ್ಚು ಹೆಚ್ಚು ಚರ್ಚೆ ಆಗಬೇಕು. ಆದ್ದರಿಂದ ನಾನು ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಸಚಿವರ, ಮುಖ್ಯಮಂತ್ರಿಗಳ ಗಮನಕ್ಕೆ ಸಹ ತರಲಾಗಿದೆ. ಪ್ರಶ್ನೋತ್ತರ ವೇಳೆ ನಂತರ ವಿಶೇಷ ಸಮಯ ನಿಗದಿ ಮಾಡಲಾಗುವುದು ಎಂದು ತಿಳಿಸಿದರು.

ಅನಗತ್ಯವಾಗಿ ಬೆಳಗಾವಿ ಅಧಿವೇಶನ ಸಂದರ್ಭದಲ್ಲಿ ಪ್ರತಿಭಟನೆ, ಮನವಿ ಮಾಡಿ ಕಾಲಹರಣ ಮಾಡದೇ ಅಧಿವೇಶನ ಉಪಯೋಗ ಆಗುವ ನಿಟ್ಟಿನಲ್ಲಿ ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ, ಕಂದಾಯ ಸಚಿವ ಕೃಷ್ಣ ಬೈರೇಗೌಡ ಹಾಗೂ ಶಿಕ್ಷಣ ಸಚಿವ ಎಸ್. ಮಧು ಬಂಗಾರಪ್ಪ ಅವರಿಗೆ ಪ್ರತ್ಯೇಕವಾಗಿ ಪತ್ರ ಬರೆದಿದ್ದೇನೆ.
ಅರ್ಥಪೂರ್ಣ ಅಧಿವೇಶನ ನಡೆಸಲು ಸಲಹೆ
ಈ ಭಾಗದ ಸಮಸ್ಯೆಗಳ ಪರಿಹಾರಕ್ಕೆ ನಡೆಯಲಿರುವ ಅಧಿವೇಶನದ ಅತ್ಯಮೂಲ್ಯವಾದ ಸಮಯ ಹಾಳಾಗಬಾರದು. ಈ ಹಿನ್ನೆಲೆ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುವ ಅಧಿವೇಶನ ವ್ಯವಸ್ಥಿತ ಹಾಗೂ ಅರ್ಥಪೂರ್ಣವಾಗಿ ನಡೆಸಲು ಸಲಹೆ ನೀಡಿದ್ದೇನೆ ಎಂದರು.
ಕೃಷಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕಂದಾಯ ಸೇರಿದಂತೆ ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಹಲವಾರು ಸಂಘಟನೆಗಳು ಧರಣಿ, ಸತ್ಯಾಗ್ರಹ ನಡೆಸುವುದು ಸಾಮಾನ್ಯವಾಗಿವೆ. ಈ ಹಿನ್ನಲೆಯಲ್ಲಿ ಅಧಿವೇಶನ ಆರಂಭಗೊಳ್ಳುವ ಮುಂಚೆಯೇ ಸಂಬಂಧಪಟ್ಟ ಸಂಘಟನೆಗಳ ಪ್ರಮುಖರ ಸಭೆ ಕರೆದು ಅವರ ಬೇಡಿಕೆ ಕುರಿತು ಸವಿಸ್ತಾರವಾಗಿ ಚರ್ಚೆ ನಡೆಸಿ ಅವುಗಳ ಪರಿಹಾರಕ್ಕೆ ಪ್ರಯತ್ನಿಸಲಾಗಿದೆ.
ಪ್ರತಿಭಟನೆ ನಡೆಸದಂತೆ ಸಚಿವರಿಗೆ ಸೂಚಿಸಲು ಮನವಿ
ವಿವಿಧ ಸಂಘಟನೆಗಳು ಅಧಿವೇಶನದ ಸಂದರ್ಭದಲ್ಲಿ ಸುವರ್ಣ ವಿಧಾನಸೌಧದ ಹೊರಗಡೆ ಧರಣಿ ಸತ್ಯಾಗ್ರಹ ನಡೆಸದಂತೆ ಸಂಘಟನೆಗಳ ಮುಖಂಡರಲ್ಲಿ ಮನವಿ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸಚಿವ ಸಂಪುಟದ ಸಂಬಂಧಪಟ್ಟ ಸಚಿವರಿಗೆ ಸೂಚಿಸಬೇಕು. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಹೊರಟ್ಟಿ ಮನವಿ ಮಾಡಿದರು.
ಉತ್ತರ ಕರ್ನಾಟಕಕ್ಕೆ ಸಂಬಂಧಿಸಿದ ಯಾವುದೇ ಮಹತ್ವದ ಬಿಲ್ ಈ ಸಲ ಅನುಮೋದನೆ ಆಗುವುದಿಲ್ಲ. ಬರಗಾಲ ಸೇರಿದಂತೆ ಇತರ ಸಮಸ್ಯೆ ಹಾಗೂ ಏನಾದರೂ ರಾಜ್ಯಕ್ಕೆ ಸಂಬಂಧಿಸಿದ ಬಿಲ್ ಬರಬಹುದು. ಆ ಬಗ್ಗೆ ಸದನದಲ್ಲಿ ಚರ್ಚೆ ಮಾಡಲಾಗುವುದು. ಶಾಸಕರು ಕಡ್ಡಾಯವಾಗಿ ಅಧಿವೇಶನದಲ್ಲಿ ಭಾಗವಹಿಸಬೇಕೆಂದು ಅವರು ತಿಳಿಸಿದ್ದಾರೆ.
ಅನುದಾನ ಹಾಗೂ ಅನುದಾನ ರಹಿತ ಶಾಲೆಗಳ ಶಿಕ್ಷಕರ ನೇಮಕಾತಿ ಅಧಿವೇಶನದಲ್ಲಿ ಒಪ್ಪಿಗೆ ಸಿಗಬಹುದು ಈಗಾಗಲೇ ನಾನು ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದೇನೆ ಎಂದರು.












Click it and Unblock the Notifications