ಬೆಂಗಳೂರಲ್ಲಿ ಕಾಲರಾ ಪ್ರಕರಣಗಳ ಸಂಖ್ಯೆ ಹೆಚ್ಚಳ : ಮಾರ್ಗಸೂಚಿ ಬಿಡುಗಡೆ ಮಾಡಿದ BBMP - ಇಲ್ಲಿದೆ ಸಂಪೂರ್ಣ ವಿವರ
ಬೆಂಗಳೂರು,ಏಪ್ರಿಲ್ 08: ಉರಿವ ಬಿಸಿಲಿನ ತಾಪಮಾನ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗಿದೆ. ಇತ್ತ ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ವಿವಿಧೆಡೆ ನೀರನ ಸಮಸ್ಯೆ ಎದುರಾಗಿದ್ದು, ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಂದು ಸಾಂಕ್ರಾಮಿಕ ರೋಗದಿಂದ ಬೆಂಗಳೂರು ಜನತೆ ಭಯಬೀತರಾಗಿದ್ದಾರೆ.
ಹೌದು, ಬೆಂಗಳೂರಿನಲ್ಲಿ 'ಕಾಲರಾ' ಉಲ್ಬಣಗೊಂಡಿದೆ. ಕಾಲರಾವನ್ನ ತಡೆಗಟ್ಟುವ ನಿಟ್ಟಿನಲ್ಲಿ ಬಿಬಿಎಂಪಿ ಮುಂದಾಗಿದ್ದು, ಬಿಬಿಎಂಪಿ ಮಾರ್ಗಸೂಚಿ ಪ್ರಕಟಿಸಿದೆ. ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಕಾಲರಾ ಪ್ರಕರಣಗಳು ಹೆಚ್ಚುತ್ತಿವೆ. ಈವರೆಗೆ 14 ಪ್ರಕರಣಗಳು ದಾಖಲಾಗಿದ್ದು, ವಾಂತಿ-ಭೇದಿ, ನಿರ್ಜಲೀಕರಣ, ಅತಿಸಾರದಿಂದಾಗಿ ಜನರು ಬಳಲುತ್ತಿದ್ದಾರೆ ಬಿಬಿಎಂಪಿ ವ್ಯಾಪ್ತಿಯಲ್ಲಿ 8 ಕಾಲರಾ ಪ್ರಕರಣಗಳು ದಾಖಲಾಗಿವೆ. ಕಾಲರಾ ಖಾಯಿಲೆ ಒಂದು ಸಾಂಕ್ರಾಮಿಕ ರೋಗವಾಗಿದ್ದು ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿದ್ದಲ್ಲಿ ಈ ಖಾಯಿಲೆಯನ್ನು ತಡೆಗಟ್ಟಬಹುದು. ವಾಂತಿ, ಭೇದಿ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣವೇ ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಂಪರ್ಕಿಸಿ ಎಂದು ಬಿಬಿಎಂಪಿ ಸೂಚನೆ ನೀಡಿದೆ.

ಬಿಬಿಎಂಪಿ ಕೊಟ್ಟ ಮಾರ್ಗಸೂಚಿಯಲ್ಲೇನಿದೆ
* ಕುಡಿಯಲು ಬಿಸಿ ನೀರು ವ್ಯವಸ್ಥೆ ಮಾಡುವ ಜತೆಗೆ ಹೋಟೆಲ್ ಆವರಣದ ಸ್ವಚ್ಚತೆಯನ್ನು ನಿರ್ವಹಿಸಲು ಮಾಲೀಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು.
* ಹಿರಿಯ ಆರೋಗ್ಯ ಪರೀವೀಕ್ಷಕರು ಸ್ಥಳೀಯ ಹೋಟೆಲ್ ಮತ್ತು ಅಂಗಡಿಗಳನ್ನು ತಪಾಸಣೆ ನಡೆಸಬೇಕು.
* ಆಹಾರ ಮತ್ತು ನೀರಿನ ಗುಣಮಟ್ಟದ ಬಗ್ಗೆ ಗಮನ ಹರಿಸಬೇಕು.
* ಸಾರ್ವಜನಿಕರಲ್ಲಿ ಸಾಂಕ್ರಾಮಿಕ ರೋಗಗಳ ಬಗ್ಗೆ ಅರಿವು ಮೂಡಿಸಲು ಆರೋಗ್ಯ ಕೇಂದ್ರಗಳ ವೈದ್ಯಾಧಿಕಾರಿಗಳು ಆರೋಗ್ಯ ಪರಿವೀಕ್ಷಕರು ಕ್ರಮವಹಿಸಬೇಕು.
* ರಸ್ತೆ ಬದಿಗಳಲ್ಲಿ ಕತ್ತರಿಸಿದ ಹಣ್ಣು ಮತ್ತು ತೆರೆದಿಟ್ಟ ಆಹಾರ ಪದಾರ್ಥಗಳನ್ನು ಮಾರಾಟ ಮಾಡದಂತೆ ಕ್ರಮವಹಿಸಬೇಕು.
* ತಮ್ಮ ವ್ಯಾಪ್ತಿಗೆ ಒಳಪಡುವ ಎಲ್ಲ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಂದ ಸಾಂಕ್ರಾಮಿಕ ರೋಗಗಳ ವರದಿಯನ್ನು ಪ್ರತಿನಿತ್ಯ ಪಡೆಯಬೇಕು.
* ಕುಡಿಯುವ ನೀರಿನ ಮೂಲಗಳಿಂದ ಕಾಲಕಾಲಕ್ಕೆ ನೀರಿನ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಬೇಕು.
* ಕುಡಿಯಲು ಯೋಗ್ಯವಿರುವುದರ ಬಗ್ಗೆ ಖಾತ್ರಿಪಡಿಸಿಕೊಳ್ಳಲು ಹಿರಿಯ ಆರೋಗ್ಯ ಪರಿವೀಕ್ಷಕರ ಮುಖಾಂತರ ಆರೋಗ್ಯ ವೈದ್ಯಾಧಿಕಾರಿಗಳು ಕ್ರಮವಹಿಸಬೇಕು.
ರೋಗ ತಡೆಗಟ್ಟಲು ಏನು ಮಾಡಬೇಕಾಗಿದೆ
* ಕುದಿಸಿ, ಆರಿಸಿದ ನೀರನ್ನು ಕುಡಿಯುವುದು
* ಸಾರ್ವಜನಿಕ ನೀರಿನ ಕೊಳಾಯಿ ಮತ್ತು ಸ್ಥಳವನ್ನು ಸ್ವಚ್ಛವಾಗಿಡುವುದು
* ತಾಜಾ ಆಹಾರವನ್ನು ಸೇವಿಸಬೇಕು
* ತಾಜಾ ಹಣ್ಣು, ತರಕಾರಿ ಮತ್ತು ಆಹಾರ ಪದಾರ್ಥಗಳನ್ನೇ ಉಪಯೋಗಿಸಬೇಕು
* ಊಟ ಮಾಡುವ ಮುನ್ನ ಕೈಗಳನ್ನು ಸಾಬೂನು ಮತ್ತು ನೀರಿನಿಂದ ಸ್ವಚ್ಛ ಗೊಳಿಸಬೇಕು
* ಶೌಚಾಲಯವನ್ನು ಉಪಯೋಗಿಸುವ ಮುಂಚೆ ಮತ್ತು ನಂತರ ಕೈಗಳನ್ನು ಸಾಬೂನಿನಿಂದ ಸ್ವಚ್ಛ ಗೊಳಿಸಬೇಕು
* ಸಿದ್ಧಪಡಿಸಿದ ಆಹಾರ ಪದಾರ್ಥಗಳ ಮೇಲೆ S ಕ್ರಿಮಿಕೀಟಗಳು ಕುಳಿತುಕೊಳ್ಳದಂತೆ ಸದಾ ಮುಚ್ಚಳದಿಂದ ಮುಚ್ಚಿಡುವುದು.
* ನಿಮ್ಮ ಮನೆ ಮತ್ತು ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಡುವುದು
* 15 ದಿನಕೊಮ್ಮೆ ಕುಡಿಯುವ ನೀರಿನ ತೊಟ್ಟಿಯನ್ನು ಕೀಚಿಂಗ್ ಪೌಡರ್‌ನಿಂದ ಸ್ವಚ್ಛಗೊಳಿಸುವುದು
ಏನು ಮಾಡಬಾರದು
* ಸೋರಿಕೆ ಇರುವ ಕೊಳಾಯಿ ನೀರನ್ನು ಕುಡಿಯಬಾರದು.
* ಪಾದಚಾರಿ ರಸ್ತೆಗಳಲ್ಲಿ, ರಸ್ತೆ ಬದಿಗಳಲ್ಲಿ ಮಾರಾಟ ಮಾಡುವ ತಿನಿಸುಗಳು ಹಾಗೂ ತಳ್ಳುಗಾಡಿಗಳಲ್ಲಿ ಮಾರುವ, ಕತ್ತರಿಸಿದ ಹಣ್ಣು ಪದಾರ್ಥಗಳನ್ನು ತಿನ್ನಬಾರದು.
* ಧೂಳು, ನೊಣ, ಜಿರಲೆಗಳು ಇತರ ಕೀಟಗಳು ಮುತ್ತುವಂತೆ ತೆರೆದಿಟ್ಟಿರುವ ಆಹಾರ ಪದಾರ್ಥಗಳನ್ನು ಸೇವಿಸಬಾರದು.
* ಕಸ ಮತ್ತು ಇತರೆ ತ್ಯಾಜ್ಯ ವಸ್ತುಗಳನ್ನು ರಸ್ತೆಬದಿ, ಪಾದಚಾರಿ ರಸ್ತೆ ಮೋರಿಯಲ್ಲಿ ಹಾಕಬಾರದು. ಹಾಕಿದಲ್ಲಿ ಕ್ರೀಮಿಕೀಟಗಳು ಆಕರ್ಷಿಸಿ ಕರುಳು ಬೇನೆ/ಕಾಲರ ಬರುವ ಸಂಭವವಿರುತ್ತದೆ.












Click it and Unblock the Notifications