ಪರಿಷತ್ ಸಭಾಪತಿ ಚುನಾವಣೆ; ಬಿಜೆಪಿ ಅಭ್ಯರ್ಥಿಯಾಗಿ ಹೊರಟ್ಟಿ ನಾಮಪತ್ರ ಸಲ್ಲಿಕೆ
ಬೆಳಗಾವಿ,ಡಿಸೆಂಬರ್ 20: ಇತ್ತೀಚೆಗಷ್ಟೇ ಜೆಡಿಎಸ್ ಪಕ್ಷವನ್ನ ತೊರೆದು ಬಿಜೆಪಿ ಪಕ್ಷವನ್ನ ಸೇರ್ಪಡೆಯಾದ ಹಿರಿಯ ರಾಜಕಾರಣಿ ಬಸವರಾಜ ಹೊರಟ್ಟಿ ಅವರು ಮಂಗಳವಾರ(ಡಿಸೆಂಬರ್ 21) ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದಾರೆ.
ಬೆಳಗಾವಿ ಸುವರ್ಣ ಸೌಧದಲ್ಲಿ ಎಂಎಲ್‌ಸಿ ಬಸವರಾಜ ಹೊರಟ್ಟಿ ಅವರು ವಿಧಾನ ಪರಿಷತ್ ಕಾರ್ಯದರ್ಶಿಗಳಿಗೆ ನಾಮಪತ್ರ ಸಲ್ಲಿಸಿದರು. ಈ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಸಚಿವರಾದ ಮಾಧುಸ್ವಾಮಿ, ಗೋವಿಂದ ಕಾರಜೋಳ ಸೇರಿದಂತೆ ಹಿರಿಯ ಮುಖಂಡರು ಉಪಸ್ಥಿತರಿದ್ದರು.
ಇನ್ನೂ ನಾಳೆ (ಡಿಸೆಂಬರ್ 21) ಪರಿಷತ್ ಸಭಾಪತಿ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಅಲ್ಲದೇ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಸಭೆಯಲ್ಲಿ ಆಡಳಿತಾರೂಢ ಬಿಜೆಪಿ ಸಭಾಪತಿ ಸ್ಥಾನಕ್ಕೆ ಬಸವರಾಜ ಹೊರಟ್ಟಿ ಅವರ ಹೆಸರನ್ನು ಅಂತಿಮಗೊಳಿಸಿತ್ತು. ಇದೀಗ ಹಂಗಾಮಿ ಸಭಾಪತಿಯಾಗಿರುವ ಬಿಜೆಪಿ ಎಂಎಲ್‌ಸಿ ರಘುನಾಥ ಮಲ್ಕಾಪುರೆ ಅವರು ಸಭಾಪತಿ ಸ್ಥಾನದ ಆಕಾಂಕ್ಷಿಯಾಗಿದ್ದರು. ಇನ್ನೂ ಸಾಕಷ್ಟು ಕುರುಬ ಸಮುದಾಯದ ಸ್ವಾಮೀಜಿಗಳು ಸಹ ರಘುನಾಥ ಮಲ್ಕಾಪುರೆ ಅವರನ್ನ ಸಭಾಪತಿಯಾಗಿ ಮುಂದುವರೆಸುವಂತೆ ಸರ್ಕಾರಕ್ಕೆ ಆಗ್ರಹಿಸಿದ್ದರು. ಇನ್ನು ಕಳೆದ ವಾರವಷ್ಟೇ ಹೈಕಮಾಂಡ್ ನಾಯಕ ಬುಲಾವ್ ಮೇರೆಗೆ ರಘುನಾಥ ಮಲ್ಕಾಪುರೆ ದೆಹಲಿ ನಾಯಕರನ್ನ ಭೇಟಿ ಮಾಡಿದ್ದರು ಎನ್ನಲಾಗಿದೆ.

ಈ ಹಿಂದೆ ಪರಿಷತ್ತಿನ ಸಭಾಪತಿಯಾಗಿದ್ದ ಹೊರಟ್ಟಿ ಅವರಿಗೆ ಅದೇ ಹುದ್ದೆ ನೀಡಲಾಗುವುದು ಎಂದು ಪಕ್ಷವು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಾಗ ಭರವಸೆ ನೀಡಿತ್ತು. ಒಂದು ಕಾಲದಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ಆಪ್ತರಾಗಿದ್ದ ಬಸವರಾಜ ಹೊರಟ್ಟಿ ಅವರು, ಹಿಂದಿನ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಸಂಪುಟದಲ್ಲಿ ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಬಿಜೆಪಿ ಸೇರಲು ನಿರ್ಧರಿಸಿದರು.
ಬಿಜೆಪಿಯಲ್ಲಿ 2 ಬಾರಿ ಪ್ರಧಾನ ಕಾರ್ಯದರ್ಶಿ, ಯುವಮೋರ್ಚಾ ರಾಜ್ಯಾಧ್ಯಕ್ಷ ಆಗಿಯೂ ಕಾರ್ಯನಿರ್ವಹಿಸಿರುವ ಮಲ್ಕಾಪುರೆ ಪಕ್ಷದ ಹಿರಿಯ ಸದಸ್ಯರಾಗಿದ್ದಾರೆ. ಸದ್ಯ ಹಂಗಾಮಿ ಸಭಾಪತಿಯಾಗಿ ಜವಾಬ್ದಾರಿ ನಿರ್ವಹಣೆ ಮಾಡುತ್ತಿದ್ದಾರೆ. ಆದರೆ ಮತ್ತೊಂದು ಕಡೆ ಮಾತುಕೊಟ್ಟು ಬಸವರಾಜ ಹೊರಟ್ಟಿ ಅವರನ್ನು ಜೆಡಿಎಸ್ ನಿಂದ ಬಿಜೆಪಿಗೆ ಕರೆತರಲಾಗಿದ್ದು, ಬಿಜೆಪಿಗೆ ಬರುವ ಕಾರಣದಿಂದಲೇ ಸಭಾಪತಿ ಸ್ಥಾನಕ್ಕೆ ಹೊರಟ್ಟಿ ರಾಜೀನಾಮೆ ನೀಡಿದ್ದರು.
ಹೊರಟ್ಟಿ ಸ್ಥಾನಕ್ಕೆ ಹಂಗಾಮಿಯಾಗಿ ಮಲ್ಕಾಪುರೆ ಅವರನ್ನು ನೇಮಿಸಲಾಗಿದೆ. ಈಗ ಕೊಟ್ಟ ಮಾತಿನಂತೆ ಹೊರಟ್ಟಿಗೆ ಸಭಾಪತಿ ಸ್ಥಾನ ನೀಡಿ ಮಾತು ಉಳಿಸಿಕೊಳ್ಳುವ ಜವಾಬ್ದಾರಿ ರಾಜ್ಯ ಬಿಜೆಪಿ ನಾಯಕರ ಮೇಲಿದೆ. ಹಾಗಾಗಿ ಈ ವಿಚಾರದಲ್ಲಿ ಹೈಕಮಾಂಡ್ ಮಧ್ಯಪ್ರವೇಶ ಮಾಡಿದ್ದು, ರಘುನಾಥ್ ರಾವ್ ಮಲ್ಕಾಪುರೆ ಜೊತೆ ಮಹತ್ವದ ಮಾತುಕತೆ ನಡೆಸಿ ಮನವೊಲಿಸುವ ಮೂಲಕ ಹೈಕಮಾಂಡ್ ಯಶಸ್ವಿಯಾಗಿದೆ ಎನ್ನಲಾಗಿದೆ.

ಪರಿಷತ್ತಿನಲ್ಲಿ ಒಟ್ಟು 75 ಸದಸ್ಯರ ಬಲವಿದೆ. ಬಿಜೆಪಿ 39, ಕಾಂಗ್ರೆಸ್ 26 ಮತ್ತು ಜೆಡಿಎಸ್ 8 ಸ್ಥಾನಗಳನ್ನು ಹೊಂದಿದೆ. ಅಗತ್ಯವಿರುವ ಸಂಖ್ಯೆ 38 ಆಗಿರುವುದರಿಂದ ಬಿಜೆಪಿ ತನ್ನ ಅಭ್ಯರ್ಥಿಯನ್ನು ಸುಲಭವಾಗಿ ಆಯ್ಕೆ ಮಾಡಬಹುದಾಗಿದೆ. ಆಡಳಿತ ಪಕ್ಷದ ಜತೆಗೆ ಹೊರಟ್ಟಿ ಅವರು ವಿರೋಧ ಪಕ್ಷಗಳ ಕೆಲ ಸದಸ್ಯರ ಬೆಂಬಲವನ್ನೂ ಪಡೆಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.












Click it and Unblock the Notifications