'ಸಿದ್ದರಾಮಯ್ಯ ಸಿಎಂ ದಾಖಲೆಯ ಅವಧಿ ನನಪಿಗಾಗಿ ಈ ಜಿಲ್ಲೆಗೆ 'ಸೂಪರ್ ಸ್ಪೆಷಾಲಿಟಿ ಆಸತ್ರೆ ಘೋಷಿಸಿ'
ಹಾವೇರಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ಸುದೀರ್ಘ ಅವಧಿಯ ಮುಖ್ಯಮಂತ್ರಿಗಳಾಗಿ ದಾಖಲೆ ಮಾಡಿದ್ದಾರೆ. ಅದರ ನೆನಪಿನಲ್ಲಿ ಅವರು ಹಾವೇರಿ ಜಿಲ್ಲೆಗೊಂದು 'ಸೂಪರ್ ಸ್ಪೆಷಾಲಿಟಿ ಆಸತ್ರೆ' ಸ್ಥಾಪನೆಗೆ ಘೋಷಿಸಬೇಕು. ಜಿಲ್ಲೆ ಜನರಿಗೆ ಇಂಥದ್ದೊಂದು ಕೊಡುಗೆ ನೀಡಬೇಕೆಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಒತ್ತಾಯಿಸಿದರು.
ಜಿಲ್ಲೆಯ ದೇವಗಿರಿ - ಯಲ್ಲಾಪುರ ಬಳಿ ನೂತನವಾಗಿ ನಿರ್ಮಿಸಲಾದ ಹಾವೇರಿಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಈ ವೇಳೆ ವೇದಿಕೆ ಮೇಲೆ ಸಿದ್ದರಾಮಯ್ಯನವರು, ಉಪ ಮುಖ್ಯಮಂತ್ರಿಗಳಾದ ಡಿ.ಕೆ ಶಿವಕುಮಾರ, ಸಚಿವರುಗಳಾದ ಶಿವಾನಂದ ಪಾಟೀಲ್, ಡಾ.ಶರಣಪ್ರಕಾಶ ಪಾಟೀಲ್ ಸಹ ಪಾಲ್ಗೊಂಡಿದ್ದರು. ಅವರ ಸಮ್ಮುಖದಲ್ಲಿ ಜಿಲ್ಲೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಆಗಬೇಕು ಎಂದು ಕೋರಿದರು. ಜಿಲ್ಲೆಯ ಜನರ ಬಹುಬೇಡಿಕೆಯ ವೈದ್ಯಕೀಯ ಕಾಲೇಜು ಉದ್ಘಾಟನೆ ಇಂದು ಆಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.

2017 ರಲ್ಲಿ ಜಿಲ್ಲೆಗೆ ವೈದ್ಯಕೀಯ ಕಾಲೇಜು ಘೋಷಣೆ ಆದರೂ ಚುನಾವಣೆ ಎದುರಾದ ಹಿನ್ನೆಲೆಯಲ್ಲಿ ನಂತರ ಸರ್ಕಾರಗಳು ಇದಕ್ಕೆ ಮುತುವರ್ಜಿ ವಹಿಸಲಿಲ್ಲ. ಕೇಂದ್ರ ಸರ್ಕಾರ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಎಲ್ಲೆಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ಇಲ್ಲ ಅಲ್ಲಿ ಮೆಡಿಕಲ್ ಕಾಲೇಜು ಮಾಡಬೇಕೆಂದು ನಿರ್ಧರಿಸಿತು. ಅದರನ್ವಯ ಕಳೆದ 11 ವರ್ಷದಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು 60/40 ಅನುಪಾತದಲ್ಲಿ ರಾಜ್ಯದ ಹಾವೇರಿ, ಚಿಕ್ಕಮಗಳೂರು, ಚಿಕ್ಕಬಳ್ಳಾಪುರ ಸೇರಿ ನಾಲ್ಕು ಮೆಡಿಕಲ್ ಕಾಲೇಜು ಕೊಟ್ಟಿವೆ.
ಕಾಲೇಜು ಸ್ಥಾಪನೆಗಾಗಿ ಕೇಂದ್ರ ಸರ್ಕಾರ 194 ಕೋಟಿ ರೂ. ಒದಗಿಸಿದೆ. ಅಲ್ಲದೇ ಕ್ರಿಟಿಕಲ್ ಕೇರ್ ಸೆಂಟರ್ ಗೆ 50 ಕೋಟಿ ರೂ.ನೀಡಲಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನುದಾನದಲ್ಲಿ ಕಟ್ಟಡ ಉದ್ಘಾಟನೆ ಆಗಿದೆ. 2023 ರಲ್ಲಿಯೇ ಕಾಲೇಜು ಆರಂಭವಾಗಿದೆ. ಈಗಾಗಲೇ ಮೂರು ವರ್ಷ ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡಿದ್ದಾರೆ. ನಮ್ಮ ಭಾಗದಲ್ಲಿ ಈ ಕೆಲಸ ಆಗಬೇಕಾದರೆ ನಾವೆಲ್ಲರೂ ಕೂಡ ಜನರ ಕೇಂದ್ರ ಬಿಂದುವಾಗಿ ನಮ್ಮ ಕೆಲಸ ಮಾಡಿದಾಗ ಸಾಧ್ಯ ಎನ್ನುವುದಕ್ಕೆ ಇದು ಸಾಕ್ಷಿ ಎಂದರು.
ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ವ್ಯವಸ್ಥೆ ಸರಿ ಇಲ್ಲ
ಮೆಡಿಕಲ್ ಕಾಲೇಜನ್ನು ಹಾವೇರಿ ಜಿಲ್ಲಾ ಆಸ್ಪತ್ರೆಗೆ ಜೋಡಿಸಿದ್ದೇವೆ. ಅದರ ವ್ಯವಸ್ಥೆ ಸರಿ ಇಲ್ಲ. ಒಂದು ಸೂಪರ್ ಸ್ಪೆಷಾಲಿಟಿ ಆಸತ್ರೆಯನ್ನು ಘೋಷಣೆ ಮಾಡಬೇಕು ಎಂದು ಕೇಳಿಕೊಳ್ಳುತ್ತೇನೆ. ಅದು ಬಹಳ ಅವಶ್ಯಕತೆ ಇದೆ. ನಮಗೆ ಏನಾದರೂ ತೊಂದರೆ ಆದರೆ ಹುಬ್ಬಳ್ಳಿ ಅಥವಾ ದಾವಣಗೆರೆಗೆ ಹೋಗಬೇಕಿದೆ ಎಂದು ಜಿಲ್ಲೆಯ ವೈದ್ಯಕೀಯ ಪರಿಸ್ಥಿತಿಯನ್ನು ಅವರು ವಿವರಸಿದರು.

ಸಿದ್ದರಾಮಯ್ಯ ಅವರು ಸಿಎಂ ಆಗಿ ಹೆಚ್ಚು ದಿನ ಅಧಿಕಾರ ಮಾಡಿದ್ದಕ್ಕಾಗಿ ನಮಗೆ ಸಂತೋಷವಾಗಿದೆ. ಇವತ್ತು ಅವರ ದಾಖಲೆಯ ದಿನ ಇದು ಚಿರಸ್ಮರಣೀಯ ಆಗಬೇಕು. ಸಿದ್ದರಾಮಯ್ಯ ದಾಖಲೆ ಮಾಡಿದ ದಿನ ನಮ್ಮ ಹಾವೇರಿಗೆ ಕೊಡುಗೆ ಕೊಟ್ಟಿದ್ದಾರೆ ಎಂದು ನೆನಪು ಉಳಿಯಲು ಸೂಪರ್ ಸಷಾಲಿಟಿ ಆಸತ್ರೆ ಘೋಷಣೆ ಮಾಡುವಂತೆ ಅವರು ಪುನರುಚ್ಚರಿಸಿದರು.
ಅಭಿವೃದ್ಧಿ ವಿಚಾರದಲ್ಲಿ ರಾಜಕಾರಣದ ಅವಶ್ಯಕತೆ ಇಲ್ಲ. ಪೈಪೋಟಿ ಇರಲಿ ನಮ್ಮ ಆಯ್ಕೆ ಪೀಪಲ್ ಓರಿಯಂಟಲ್ ಪೊಲಿಟಿಕ್ಸ್, ಸಿದ್ದರಾಮಯ್ಯ ಅವರ ದಾಖಲೆಯನ್ನು ಮುರಿದಿದ್ದಾರೆ. ದೇವರಾಜ ಅರಸು ಅವರ ದಾಖಲೆ ಇನ್ನೂ ನೆನಪಿದೆ. ಅದನ್ನು ಸಿಎಂ ಅವರಿಂದ ನಾವು ಬಯಸುತ್ತೇವೆ ಎಂದು ಹೇಳಿದರು.
ಬೆಡ್ತಿ-ವರದಾ ನದಿ ಜೋಡಣೆ ಸಾಕಾರಗೊಳ್ಳಲಿ
ಉಪ ಮುಖ್ಯಮಂತಿಗಳು ಬೆಡ್ತಿ ವರದಾ ಯೋಜನೆಗೆ ಚಾಲನೆ ಕೊಟ್ಟಿದ್ದಾರೆ. ಇದರಿಂದ ಬರಗಾಲದ ಜಿಲ್ಲೆಗಳ ಜನರಿಗೆ ಅನುಕೂಲವಾಗುತ್ತದೆ. ವರದಾ ನದಿ ಮಳೆಗಾಲದಲ್ಲಿ ಮಾತ್ರ ಹರಿಯುತ್ತದೆ. ಬೆಡ್ತಿಯಿಂದ ಸಮುದ್ರಕ್ಕೆ ಹರಿದು ಹೋಗುವ ನೀರನ್ನು ಕೇವಲ ಶೇಕಡಾ 8 ರಿಂದ 10 ರಷ್ಟು ನೀರನ್ನು ತುಂಗಭದ್ರಾ ನದಿಗೆ ಜೋಡಿಸಿದರೆ ಗದಗ, ಹಾವೇರಿ ಜಿಲ್ಲೆಗೆ ಅನುಕೂಲವಾಗುತ್ತದೆ. ಇದು 1994 ರಿಂದ ಇರುವ ಯೋಜನೆ ಕೇಂದ್ರದ ಮೂರು ನದಿ ಜೋಡಣೆ ಯೋಜನೆಗಳಲ್ಲಿ ಇದು ಒಂದು. ಕೇಂದ್ರ ಸರ್ಕಾರ ಕೈಗೆತ್ತಿಕೊಳ್ಳುತ್ತಿದೆ. ರಾಜ್ಯ ಸರ್ಕಾರ ಡಿಪಿಆರ್ ಮಾಡಲು ಒಪ್ಪಿಕೊಂಡಿದೆ. ಯೋಜನೆ ಸಾಕಾರಕ್ಕೆ ಈ ಭಾಗದಲ್ಲಿ ಹಸಿರು ಕ್ರಾಂತಿಯಾಗುತ್ತದೆ. ಒಳ್ಳೆಯ ದಿನ ಶುಭಾರಂಭವಾಗಿದ್ದು, ಜಿಲ್ಲೆ ಭವಿಷ್ಯದಲ್ಲಿ ನ್ನಷ್ಟು ಅಭಿವೃದ್ಧಿ ಆಗಲಿದೆ ಎಂದು ತಿಳಿಸಿದರು.












Click it and Unblock the Notifications