Haveri: ಹೊಸರಿತ್ತಿ ಲಾಕಪ್ ಡೆತ್ ಪ್ರಕರಣ: ಸಿಐಡಿ ತನಿಖೆಗೆ ಆಗ್ರಹಿಸಿ ಬಸವರಾಜ ಬೊಮ್ಮಾಯಿ ಡಿಜಿಗೆ ಪತ್ರ
ಬೆಂಗಳೂರು, ಸೆಪ್ಟಂಬರ್ 13: ಇತ್ತೀಚೆಗೆ ಜಿಲ್ಲೆಯ ಹೊಸರಿತ್ತಿ (Hosaritti) ಪೊಲಿಸ್ ಠಾಣೆಯಲ್ಲಿ ನಡೆದಿದೆ ಎನ್ನಲಾದ ಲಾಕಪ್ ಡೆತ್ ವಿಚಾರ ಭಾರೀ ಸುದ್ದಿಯಾಗಿತ್ತು. ಈ ಬಗ್ಗೆ ಮಾಹಿತಿ ಪಡೆಯುವುದಾಗಿ ಹೇಳಿದ್ದ ಬಸವರಾಜ ಬೊಮ್ಮಾಯಿ ಅವರು ಇದೀಗ ಲಾಕಪ್ ಡೆತ್ ಪ್ರಕರಣವನ್ನು ಸಿಐಡಿ ತನಿಖೆ ನಡೆಸಬೇಕು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ.
ಬುಧವಾರ ಹಾವೇರಿ ಜಿಲ್ಲೆಯ ಸವಣೂರು ಪಟ್ಟಣದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಗೋವಿಂದಪ್ಪ ಪೂಜಾರ್ ಎನ್ನುವ ವ್ಯಕ್ತಿ ಹೊಸರಿತ್ತಿ ಪೊಲೀಸ್ ಠಾಣೆಯಲ್ಲಿ ಲಾಕಪ್ ಡೆತ್ ಆಗಿರುವ ಬಗ್ಗೆ ಸಾಕಷ್ಟು ಅನುಮಾನಗಳು ಮೂಡುತ್ತಿವೆ. ಈ ಪ್ರಕರಣ ಸ್ಥಳೀಯ ಪೊಲೀಸರಿಂದ ವಿಚಾರಣೆ ಸಾಧ್ಯವಿಲ್ಲ. ಸಿಐಡಿ ಯಿಂದ ವಿಚಾರಣೆ ಆಗಬೇಕು ಎಂದು ಈಗಾಗಲೇ ಡಿಜಿಯವರಿಗೆ ಪತ್ರ ಬರೆದಿದ್ದೇನೆ ಎಂದು ಹೇಳಿದರು.

ಗೋವಿಂದಪ್ಪ ಸಾವಿನಲಾ ಪ್ರಕರಣದಲ್ಲಿ ಬಹಳಷ್ಟು ಸಂಶಯಗಳಿವೆ. ಮೇಲ್ನೋಟಕ್ಕೆ ಪೊಲೀಸರ ಹಲ್ಲೆಯಿಂದ ವ್ಯಕ್ತಿ ಅಸ್ತವ್ಯಸ್ತವಾಗಿ ಸತ್ತಿದ್ದಾನೆಂದು ಅನಿಸುತ್ತಿದೆ. ಸ್ಪಷ್ಟವಾಗಿ ಏನೇನು ನಡೆದಿದೆ ಎಂದು ಸಮಗ್ರ ತನಿಖೆ ಆಗಬೇಕು ಎಂದು ಅವರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಪೊಲೀಸರ ವಶದಲ್ಲಿದ್ದಾಗ ವ್ಯಕ್ತಿ ಸಾವು?: ಸಂಶಯ
ಲಕ್ಷ್ಮೇಶ್ವರ ತಾಲೂಕಿನ ಬಾಲೆಹೊಸೂರು ಮೂಲದ ವ್ಯಕ್ತಿ ಗೊಂವಿಂದಪ್ಪ ಪೂಜಾರ (35) ಸೆಪ್ಟಂಬರ್ 7ರಂದು ಹಾವೇರಿ ತಾಲೂಕಿನ ಹೊಸರಿತ್ತಿ ಪೊಲೀಸ್ ಠಾಣೆಯಲ್ಲಿ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ವಶದಲ್ಲಿದ್ದಾಗಲೇ ವ್ಯಕ್ತಿಯ ಅಸಹಜ ಸಾವು ಸಂಭವಿಸಿತ್ತು ಎನ್ನಲಾಗಿದೆ. ಈ ವಿಚಾರ ಇದೀಗ ಭಾರಿ ಚರ್ಚೆ, ಅನುಮಾನಕ್ಕೆ ಕಾರಣವಾಗಿದೆ.
ಗೋಂವಿಂದಪ್ಪನನ್ನು ನಾವು ಬಂಧಿಸಿಲ್ಲ. ಆತ ವಾಂತಿ ಮಾಡಿಕೊಂಡು ಸತ್ತಿದ್ದಾನೆ. ನಾವು ಆತನನ್ನು ವಿಚಾರಣೆ ಸಹ ಮಾಡಿಲ್ಲ ಎಂದು ಠಾಣೆ ಪೊಲೀಸರು ಹೇಳುತ್ತಿದ್ದಾರೆ. ಆದರೆ ಪೊಲೀಸರು ಬಂಧಿಸಿದ್ದು, ಅವರ ವಶದಲ್ಲಿದ್ದಾಗಲೇ ಆತ ಮೃತಪಟ್ಟಿದ್ದಾನೆ. ಇದಕ್ಕೆ ಪೊಲೀಸರೇ ಕಾರಣ ಎಂದು ಮೃತರ ಕುಟುಂಬಸ್ಥರು ಆರೋಪಿಸಿದ್ದಾರೆ.

ಗುತ್ತಲ ಠಾಣೆಯಲ್ಲಿ ಪ್ರಕರಣ ದಾಖಲು
ಸೆಪ್ಟಂಬರ್ 6ರಂದು ರಾತ್ರಿ ಆತ ವಾಂತಿ ಮಾಡಿಕೊಂಡಿದ್ದರಿಂದ ಹೊಸರಿತ್ತಿ ಠಾಣೆಯ ಹತ್ತಿರದಲ್ಲಿದ್ದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿನ ವೈದ್ಯರು ಆತನನ್ನು ಉಪಚಾರ ಮಾಡಿದ್ದರು. ಹೆಚ್ಚಿನ ಚಿಕಿತ್ಸೆಗೆ ಗುತ್ತಲಕ್ಕೆ ಕರೆದುಕೊಂಡು ಹೋಗುವಂತೆ ಹೊಸರಿತ್ತಿ ವೈದ್ಯರು ತಿಳಿಸಿದ್ದಾರೆ ಎನ್ನಲಾಗಿದೆ. ಆದರೆ ಬೆಳಗಿನ ಜಾವ ಗೋವಿಂದಪ್ಪ ಉಸಿರು ಚೆಲ್ಲಿದ್ದಾನೆ ಎಂದು ಗುತ್ತಲ ಠಾಣೆಯಲ್ಲಿ ದಾಖಲಾದ ಪ್ರಕರಣದಲ್ಲಿ ಉಲ್ಲೇಖಿಸಲಾಗಿದೆ.
ಸದ್ಯ ಈ ಪ್ರಕರಣ ಮಾಜಿ ಮುಖ್ಯಮಂತ್ರಿ ತವರು ಜಿಲ್ಲೆ ಹಾವೇರಿಯಲ್ಲಿ ನಡೆದಿದೆ. ಈ ಸಂಬಂಧ ಸೂಕ್ತ ಮಾಹಿತಿ ಪಡೆದ ಬಸವರಾಜ ಬೊಮ್ಮಾಯಿ ಅವರು ಸರ್ಕಾರಕ್ಕೆ ಪ್ರಕರಣವನ್ನು ಸಿಐಡಿಗೆ ವಹಿಸುವಂತೆ ಆಗ್ರಹಿಸಿದ್ದಾರೆ.












Click it and Unblock the Notifications